ಪುತ್ತೂರು: ಸಂಪೂರ್ಣವಾಗಿ ಜೀರ್ಣೋದ್ಧಾರಗೊಡು ಅದ್ಧೂರಿಯಾಗಿ ಬ್ರಹ್ಮಕಲಶೋತ್ಸವಗಳು ನೆರವೇರಿದ ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಎಲ್ಲಾ ಕೆಲಸ ಕಾರ್ಯಗಳಲ್ಲಿ ಸಹಕರಿಸಿದ ಕರಸೇವಕರಿಗೆ, ಗ್ರಾಮಸ್ಥರಿಗೆ ಹಾಗೂ ಭಕ್ತಾದಿಗಳಿಗೆ ಕೃತಜ್ಞತೆ ಸಲ್ಲಿಸುವ ‘ಧನ್ಯೋತ್ಸವ’ ಸಭೆಯು ಮೇ.5ರಂದು ದೇವಸ್ಥಾನದ ಆವರಣದಲ್ಲಿ ನಡೆಯಿತು. ದೇವಳದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ನೆರವೇರುವಲ್ಲಿ ಸಹಕರಿಸಿದ ವಿವಿಧ ಉಪ ಸಮಿತಿಗಳ ಸಂಚಾಲಕರು, ಸಹ ಸಂಚಾಲಕರು ಹಾಗೂ ಎಲ್ಲಾ ಸದಸ್ಯರನ್ನು ಶಾಲು ಹಾಕಿ ಸ್ಮರಣಿಕೆ ನೀಡಿ ಕೃತಜ್ಞತೆ ಸಲ್ಲಿಸಲಾಯಿತು.
ಅಶೋಕ್ ಕುಮಾರ್ ರೈ ಮಾತನಾಡಿ, ಜೀರ್ಣೋದ್ಧಾರ, ಬ್ರಹ್ಮಕಲಶಗಳು ಎಲ್ಲಾ ಕಡೆ ನಡೆಯುತ್ತವೆ. ಆದರೆ ದೇವಸ್ಥಾನಕ್ಕೆ ಆವಶ್ಯಕವಾದ ಜಾಗ ಖರೀದಿಸಿ ಬ್ರಹ್ಮಕಲಶ ನಡೆಸಿರುವುದು ಕಾರ್ಪಾಡಿಯ ವಿಶೇಷತೆಯಾಗಿದೆ. ದೇವಸ್ಥಾನದಲ್ಲಿ ರಾಜಕೀಯಕ್ಕೆ ಅವಕಾಶ ಇರಬಾರದು. ಜೀರ್ಣೋದ್ಧಾರ, ಬ್ರಹ್ಮಕಲಶದ ಲೆಕ್ಕಪತ್ರಗಳನ್ನು ಶೀಘ್ರದಲ್ಲಿ ಮುಗಿಸಬೇಕು. ಹಣದ ಕೊರತೆಯಾದರೆ ಅದನ್ನು ಪ್ರಮುಖರು ಸೇರಿಸಿಕೊಂಡು ಸರಿಸಪಡಿಸಿಕೊಳ್ಳಬೇಕು. ಆವಶ್ಯಕವಾದ ಒಂದು ಪಾಲನ್ನು ತಾನು ಕೊಡುವುದಾಗಿ ಶಾಸಕರು ತಿಳಿಸಿದರು. ದೇವಸ್ಥಾನದ ಗೌರವಾಧ್ಯಕ್ಷ ಹಾಗೂ ಶಾಸಕ ನೆಲೆಯಲ್ಲಿ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ರಾಜಕೀಯ, ಪಕ್ಷ ಬೇದ ಮರೆತು ಬರುವಂತೆ ಅವರು ತಿಳಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಬ್ರಹ್ಮಕಲಶೋತ್ಸವಗಳು ಬಹಳಷ್ಟು ಯಶಸ್ವಿಯಾಗಿ ನಡೆದಿದೆ. ದೇವರ ಅನುಗ್ರಹ ಎಲ್ಲರ ನೆರವಿನಿಂದ ವೈಭವದಿಂದ ನಡೆದಿದೆ. ಸುಂದರ ದೇವಾಲಯ ನಿರ್ಮಾಣವು ಎಲ್ಲರ ಮೆಚ್ಚುಗೆ ಪಡೆದಿದೆ. ಕಾರ್ಯಕರ್ತರ ನಿರಂತರ ಪರಿಶ್ರಮದ ಫಲವಾಗಿ ಅದ್ದೂರಿಯಾಗಿ ನಡೆದಿದೆ. ಹಸಿರು ಹೊರಕಾಣಿಕೆಯು ಯಶಸ್ವಿಯಾಗಿ ನಡೆಯಲು ಕಾರಣಕರ್ತರಾದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದ ಅವರು ದೇವಸ್ಥಾನದ ಅಭಿವೃದ್ಧಿಯಲ್ಲಿ ಭಕ್ತಾಧಿಗಳ ಸಹಕಾರ ನಿರಂತರವಾಗಿರಲಿ. ಈ ಕ್ಷೇತ್ರವು ಕಾರಣಿಕ ಕ್ಷೇತ್ರವಾಗಿ ಬೆಳೆಯುವಲ್ಲಿ ಭಕ್ತಾಧಿಗಳ ಸಹಕಾರ ಅಗತ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿ, ಕಾರ್ಪಾಡಿ ಕ್ಷೇತ್ರದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶ ಯಶಸ್ವಿಯಾಗಿ ನೆರವೇರುವಲ್ಲಿ ಸಹಕರಿಸಿದ ಆರ್ಯಾಪು ಜನತೆಗೆ ಕೃತಜ್ಞತೆ ಸಲ್ಲಿಸಿದರು. ಸುಧಾಕರ ರಾವ್ ನೇತೃತ್ವದ ವ್ಯವಸ್ಥಾಪನಾ ಸಮಿತಿಗೆ ದೇವಸ್ಥಾನದ ಜೀರ್ಣೋದ್ಧಾರ ಮಾಡುವ ತುಡಿತ ಇತ್ತು. ಅದು ಹದಿನಾಲ್ಕು ತಿಂಗಳಲ್ಲಿ ಜೀರ್ಣೋದ್ಧಾರ ಪೂರ್ಣಗೊಂಡಿದೆ. ಇದಕ್ಕೆ ಹಲವು ರೀತಿಯಲ್ಲಿ ಭಕ್ತಾದಿಗಳು ಸಹಕಾರ ನೀಡಿದ್ದಾರೆ. ವಿಘ್ನ ಇಲ್ಲದೆ ಎಲ್ಲಾ ಕೆಲಸಗಳು ಪೂರ್ಣಗೊಂಡಿದೆ. ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶ ಅದ್ದೂರಿಯಾಗಿ ನೆರವೇರುವಲ್ಲಿ ಕಾರ್ಯಕರ್ತರ ಶ್ರಮ ಪ್ರಮುಖವಾಗಿದ್ದು ಅವರನ್ನು ಬ್ರಹ್ಮಕಲಶದ ವೇದಿಕೆಯಲ್ಲಿಯೇ ಗೌರವಿಸಲಾಗುತ್ತಿದೆ ಎಂದ ಅವರು ಗ್ರಾಮದಲ್ಲಿ 1500ಕ್ಕೂ ಅಧಿಕ ಮನೆಗಳಿದ್ದು ಎಲ್ಲಾ ಮನೆಯವರು ಒಂದು ದಿನದ ನಿತ್ಯಪೂಜೆ ಮಾಡಿಸುವ ಮೂಲಕ ದೇವಸ್ಥಾನದ ಮುಂದಿನ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕು .ಕಳೆದ ಹದಿನಾಲ್ಕು ತಿಂಗಳು ಕಾಲ ಕಾರ್ಯಕರ್ತರು, ಭಕ್ತಾದಿಗಳ ರಾತ್ರಿ ಹಗಲೆನ್ನದೆ ದುಡಿದ ಶ್ರಮದ ಫಲವಾಗಿ ಸುಂದರ ದೇವಾಲಯ ನಿರ್ಮಾಣಗೊಂಡಿದೆ. ಬ್ರಹ್ಮಕಲಶೋತ್ಸವದಲ್ಲಿ ಆಯಾ ಸಮಿತಿಯವರು ತಮಗೆ ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುವುದರಿಂದ ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ನಡೆದಿದ್ದು ಎಲ್ಲೆಡೆಯಿಂದ ಕಾರ್ಯಕ್ರಮದ ಬಗ್ಗೆ ಪ್ರಸಂಶೆಯ ಮಾತುಗಳು ಕೇಳಿಬರುತ್ತಿದೆ. ಮುಂದಿನ ದಿನಗಳಲ್ಲಿ ದೇವಸ್ಥಾನದ ಸ್ವಚ್ಚತೆ ಕಾಪಾಡುವಲ್ಲಿ ತಂಡವಾಗಿ ತೊಡಗಿಸಿಕೊಳ್ಳುವಂತೆ ವಿನಂತಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಸಂಚಾಲಕ ಸುಧಾಕರ ರಾವ್ ಆರ್ಯಾಪು ಮಾತನಾಡಿ, ಕಾರ್ಪಾಡಿಯಲ್ಲಿ ಮಾದರಿ ಕಾರ್ಯಕ್ರಮವಾಗಿದೆ. ಕ್ಷೇತ್ರದ ಪುನರ್ ನಿರ್ಮಾಣವಾಗಿ ವೈಭವ ಕಾಣುತ್ತಿದ್ದೇವೆ. ದೇವರಿಗೆ ಬ್ರಹ್ಮಕಲಶ ನಡೆದು ಈಗ ಊರಿಗೆ ಜೀವ ಬಂದಿದೆ. ಪ್ರತಿ ಮನೆ ಬೆಳಗಲಿದೆ. ಭಕ್ತರ ಸಹಕಾರ ದೇವಸ್ಥಾನಕ್ಕೆ ನಿರಂತವಾಗಿರಬೇಕು. ಪ್ರತಿ ಮನೆಯಿಂದ ಕ್ಷೇತ್ರಕ್ಕೆ ಬರಬೇಕು. ಇನ್ನಷ್ಟು ಅಭಿವೃದ್ಧಿ ಆಗಬೇಕು. ಮಹಾಕ್ಷೇತ್ರವಾಗಿ ಬೆಳೆಯುವಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು.
ಯಾವುದೇ ಸಾಲಗಳಿಲ್ಲ:
ದೇವಸ್ಥಾನದ ಜೀರ್ಣೋದ್ಧಾರಕ್ಕೆ ದಾನಿಗಳಿಂದ ರೂ.1.03 ದೇಣಿಗೆ ಬಂದಿದೆ. ಬ್ರಹ್ಮಕಲಶೋತ್ಸವದಲ್ಲಿ ವಿವಿಧ ಸೇವೆ ಹಾಗೂ ದಾನಿಗಳ ಮೂಲಕ ರೂ.53ಲಕ್ಷ ಸಂಗ್ರಹವಾಗಿದೆ. ದೇವಸ್ಥಾನಕ್ಕೆ 21 ಸೆಂಟ್ಸ್ ಜಾಗ ಖರೀದಿಗೆ ಪ್ರತ್ಯೇಕ ರೂ.29ಲಕ್ಷ ಸಂಗ್ರಹವಾಗಿದೆ. ಅಲ್ಲದೆ 12 ಸೆಂಟ್ಸ್ ಜಾಗ ಖರೀದಿ ಹಾಗೂ ನೋಂದಾವಣೆಗೆ ಸಂಬಂಧಿಸಿ ಹಣ ಖಾತೆಯಲ್ಲಿದೆ. ಹೀಗಾಗಿ ಯಾವುದೇ ಸಾಲಗಳು ಇಲ್ಲ. ಇಂಟರ್ ಲಾಕ್ ಅಳವಡಿಸುವ ಸಂದರ್ಭದಲ್ಲಿ ಸುಮಾರು ರೂ.20 ಲಕ್ಷ ಕೊರತೆಯಿತ್ತು. ಎಲ್ಲಾ ಹಣಗಳು ಬಂದರೆ ಯಾವುದೇ ಕೊರತೆಗಳು ಉಂಟಾಗಳು ಸಾಧ್ಯವಿಲ್ಲ. ಕೊರತೆ ಬಂದರೂ ಅದನ್ನು ನೀಗಿಸಲು ದಾನಿಗಳು ಹಾಗೂ ಶಾಸಕರು ಭರವಸೆ ನೀಡಿದ್ದಾರೆ. ಒಂದು ರೂಪಾಯಿ ಸಾಲವಿಲ್ಲದೆ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ನೆರವೇರಿಸಲಾಗಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಹೇಳಿದರು.
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾದ ಡಾ.ಸತೀಶ್ ರಾವ್, ಸಂಜೀವ ಪೂಜಾರಿ ಕೂರೇಲು, ಗೋಪಾಲಕೃಷ್ಣ ಭಟ್ ದ್ವಾರಕಾ, ಮೋಹನ ಗೌಡ ಇಡ್ಯಡ್ಕ, ವೈದಿಕ ಸಮಿತಿ ಸಂಚಾಲಕ ಸಂದೀಪ್ ಕಾರಂತ, ದೇವಸ್ಥಾನದ ಆಡಳಿತಾಧಿಕಾರಿ ಗೋಪಾಲ್, ಸಂದರ್ಭೋಚಿತವಾಗಿ ಮಾತನಾಡಿದರು.
ಕಾರ್ಯಾಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಸ್ವಾಗತಿಸಿದರು. ಸಭಾ ಕಾರ್ಯಕ್ರಮ ಸಮಿತಿ ಸಂಚಾಲಕ ಸೀತಾರಾಮ ರೈ ಕೈಕಾರ ಕಾರ್ಯಕ್ರಮ ನಿರೂಪಿಸಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಗೌಡ ದೇವಸ್ಯ ವಂದಿಸಿದರು.