ಮಜ್ಜಾರಡ್ಕ ಯುವಶಕ್ತಿ ಬಳಗದಿಂದ ರಂಗಭೂಮಿ ನಲಿಕೆ, ಕಲಿಕೆ, ತುಳು ಲಿಪಿ ತರಗತಿ ಉದ್ಘಾಟನೆ

0

ಪುತ್ತೂರು: ಜಿಲ್ಲಾ ಪ್ರಶಸ್ತಿ ಪುರಸ್ಕೃತ ಸಂಘಟನೆಯಾಗಿರುವ ಅರಿಯಡ್ಕ ಗ್ರಾಮದ ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದ ವತಿಯಿಂದ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಜೈ ತುಳುನಾಡ್ ಇದರ ಸಹಯೋಗದೊಂದಿಗೆ ಮಕ್ಕಳಿಗೆ ರಂಗ ಚಾವಡಿಯಲ್ಲಿ ನಲಿಕೆ, ಕಲಿಕೆ ಬೇಸಿಗೆ ಶಿಬಿರ ಹಾಗೂ ತುಳು ಲಿಪಿ ತರಗತಿ ಉದ್ಘಾಟನಾ ಕಾರ್ಯಕ್ರಮ ಮೇ.5 ರಂದು ಮಜ್ಜಾರಡ್ಕದಲ್ಲಿರುವ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆಯಿತು.

ತುಳು ಲಿಪಿ ಶಿಕ್ಷಕಿ ಚಿತ್ರಾಕ್ಷಿ ಟಿ.ರವರು ದೀಪ ಬೆಳಗಿಸಿ ಉದ್ಘಾಟಿಸಿ, ತುಳು ಲಿಪಿ ಕಲಿಕೆಯ ಬಗ್ಗೆ ವಿವರಿಸಿದರು. ರಂಗ ನಿರ್ದೇಶಕ ಕೃಷ್ಣಪ್ಪ ಬಂಬಿಲರವರು ಮಾತನಾಡಿ, ಮಕ್ಕಳ ಪ್ರತಿಭೆಗಳಿಗೆ ಪ್ರೋತ್ಸಾಹ ಕೊಡುವ ಕೆಲಸವನ್ನು ಸಂಘಟನೆ ಮಾಡುತ್ತಿರುವುದು ಒಳ್ಳೆಯ ಕೆಲಸವಾಗಿದೆ. ಮಕ್ಕಳನ್ನು ಮೊಬೈಲ್ ಚಟದಿಂದ ದೂರವಾಗಿಸಲು ಇಂತಹ ಬೇಸಿಗೆ ಶಿಬಿರಗಳು ಪೂರಕವಾಗಿದೆ. ಈ ನಿಟ್ಟಿನಲ್ಲಿ ಹೆತ್ತವರು ಕೂಡ ಪ್ರೋತ್ಸಾಹ ಕೊಡಬೇಕಾದ ಅಗತ್ಯತೆ ಇದೆ ಎಂದರು. ಒಂದು ದಿನಗಳ ಕಾಲ ಮಕ್ಕಳಿಗೆ ರಂಗಭೂಮಿ ಚಟುವಟಿಕೆಯ ಬಗ್ಗೆ ರಂಗ ಚಾವಡಿಯಲ್ಲಿ ನಲಿಕೆ, ಕಲಿಕೆಯ ಮೂಲಕ ಮಕ್ಕಳನ್ನು ರಂಜಿಸಿದರು.


ಪತ್ರಕರ್ತ ಸಿಶೇ ಕಜೆಮಾರ್ ಮಾತನಾಡಿ, ಯುವಶಕ್ತಿ ಬಳಗವು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ರಂಗಭೂಮಿಯಲ್ಲಿ ಮಜ್ಜಾರಡ್ಕದ ಹೆಸರು ಕೂಡ ಪ್ರಜ್ವಲಿಸಲಿ ಎಂದು ಹೇಳಿ ಶುಭ ಹಾರೈಸಿದರು. ಸ್ವಾಮಿನಗರ ಶ್ರೀ ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ಸತೀಶ್ ಎಚ್.ಕೆ ಮಾತನಾಡಿ, ಮಕ್ಕಳ ಪ್ರತಿಭೆಗಳಿಗೆ ಪ್ರೋತ್ಸಾಹ ಕೊಡುವ ಕೆಲಸವನ್ನು ಹೆತ್ತವರು ಮಾಡಬೇಕಾದ ಅಗತ್ಯತೆ ಇದೆ. ಇಂತಹ ಕಾರ್ಯಕ್ರಮಗಳಿಗೆ ಮಕ್ಕಳೊಂದಿಗೆ ಹೆತ್ತವರು ಕೂಡ ಭಾಗವಹಿಸಬೇಕು ಎಂದು ಹೇಳಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ರಂಗಭೂಮಿ ಕಲಾವಿದ, ನಿರ್ದೇಶಕ ಕೃಷ್ಣಪ್ಪ ಬಂಬಿಲರವರನ್ನು ಯುವಶಕ್ತಿ ಬಳಗದ ವತಿಯಿಂದ ಶಾಲು, ಸ್ಮರಣಿಕೆ ನೀಡಿ ಗೌರವಿಸಲಯಿತು. ವೇದಿಕೆಯಲ್ಲಿ ಶ್ರೀ ವಿಷ್ಣು ಯುವಶಕ್ತಿ ಬಳಗದ ಉಪಾಧ್ಯಕ್ಷ ಯತೀಶ್ ಕೋಡಿಯಡ್ಕ, ಸಂಘಟನಾ ಕಾರ್ಯದರ್ಶಿ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ರಾಜೇಶ್ ಕೆ.ಮಯೂರ ಉಪಸ್ಥಿತರಿದ್ದರು. ಆದ್ಯ ಆರ್.ಜೆ ಗೋಳ್ತಿಲ ಪ್ರಾರ್ಥಿಸಿದರು. ಭರತ್ ಓಲ್ತಾಜೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here