ನೆಲ್ಯಾಡಿ: ನೆಲ್ಯಾಡಿ ಗ್ರಾಮದ ಶಾಂತಿಬೆಟ್ಟು ನಿವಾಸಿ, ನೆಲ್ಯಾಡಿ ಬದ್ರಿಯಾ ಜುಮಾ ಮಸೀದಿ ಮಾಜಿ ಅಧ್ಯಕ್ಷರಾದ ಸಿ.ಕೆ.ಅಬ್ದುರ್ರಹ್ಮಾನ್ ಮುಸ್ಲಿಯಾರ್ ಮೇ.7ರಂದು ಸಂಜೆ ಹೃದಯಾಘಾತಕ್ಕೆ ಒಳಗಾಗಿ ನಿಧನರಾದರು.
ಸಿ.ಕೆ.ಅಬ್ದುರ್ರಹ್ಮಾನ್ ಅವರಿಗೆ ಮನೆಯಲ್ಲಿ ಎದೆನೋವು ಕಾಣಿಸಿಕೊಂಡಿದ್ದು ಮನೆಯವರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಂತೆ ದಾರಿಮಧ್ಯೆ ಅವರು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟರು ಎಂದು ವರದಿಯಾಗಿದೆ. ಅಬ್ದುರ್ರಹ್ಮಾನ್ ಅವರು ದ.ಕ.ಜಿಲ್ಲೆಯ ಹಲವಾರು ಮಸೀದಿಗಳಲ್ಲಿ ಖತೀಬರಾಗಿ ಹಾಗೂ ಮದ್ರಸ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. 20 ವರ್ಷ ವಿದೇಶದಲ್ಲಿಯೂ ಉದ್ಯೋಗಿಯಾಗಿದ್ದರು. ಇತ್ತೀಚಿನ 5 ವರ್ಷಗಳಿಂದ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದರು. ಇವರು ಕರ್ನಾಟಕ ಮುಸ್ಲಿಂ ಜಮಾಅತ್ ನೆಲ್ಯಾಡಿ ಯುನಿಟ್ನ ಪ್ರಧಾನ ಕಾರ್ಯದರ್ಶಿಯಾಗಿ, ಹಲವಾರು ಸುನ್ನಿ ಸಂಘಟನೆಗಳಲ್ಲೂ ತೊಡಗಿಕೊಂಡಿದ್ದರು. ಮೃತರು ಪತ್ನಿ ಅಮೀನಾ, ಪುತ್ರರಾದ ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಟಿ.ಕೆ.ಫಿರ್ದೋಸ್, ದುಬೈಯಲ್ಲಿ ಉದ್ಯಮಿಯಾಗಿರುವ ಟಿ.ಕೆ.ಮದನಿ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.
ಮೃತರ ಮನೆಗೆ ನೆಲ್ಯಾಡಿ ಬಿಜೆಎಂ ಅಧ್ಯಕ್ಷ ಮಹಮ್ಮದ್ ಹನೀಫ್, ಕಾರ್ಯದರ್ಶಿ ರಫೀಕ್ ಎನ್., ಕೋಲ್ಪೆ ಬಿಜೆಎಂ ಅಧ್ಯಕ್ಷ ಕೆ.ಕೆ.ಅಬೂಬಕ್ಕರ್, ಹೊಸಮಜಲು ಮಸೀದಿ ಅಧ್ಯಕ್ಷ ಅಬ್ದುರ್ರಹ್ಮಾನ್, ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ.ಜಿಲ್ಲಾ ಈಸ್ಟ್ ಕಾರ್ಯದರ್ಶಿ ಕೆ.ಇ.ಅಬೂಬಕ್ಕರ್ ನೆಲ್ಯಾಡಿ, ಎಸ್ವೈಎಸ್ ಜಿಲ್ಲಾ ಸದಸ್ಯ ಶಾಫಿ ಸಖಾಫಿ, ನೆಲ್ಯಾಡಿ ವರ್ತಕ ಸಂಘದ ಮಾಜಿ ಅಧ್ಯಕ್ಷ ರಫೀಕ್ ಸೀಗಲ್, ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷ ಲೋಕೇಶ್ ಬಾಣಜಾಲು, ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್, ಕೆಸಿಎಫ್ ಮುಖಂಡ ಶಾಕೀರ್, ಕೆಎಂಜೆ ನಾಯಕ ಉಮ್ಮರ್ ತಾಜ್, ಎಸ್ಎಂಎ ನಾಯಕ ಎನ್.ಎಸ್.ಸುಲೈಮಾನ್, ವಳಾಲು ಮಸೀದಿ ಅಧ್ಯಕ್ಷರಾದ ಹಂಝ ಮುಸ್ಲಿಯಾರ್ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.