ನಿಲ್ಲಿಸಿದ ಓಮ್ನಿ ಕಾರನ್ನು ಚಲಾಯಿಸಿಕೊಂಡು ಬಂದ ಬುದ್ದಿಮಾಂದ್ಯ ಯುವಕ-ನಾಲ್ಕೈದು ವಾಹನಗಳಿಗೆ ಡಿಕ್ಕಿ – ಕುಂಬ್ರದಲ್ಲಿ ಅಡ್ಡಗಟ್ಟಿ ನಿಲ್ಲಿಸಿದ ಸಾರ್ವಜನಿಕರು- ಪೊಲೀಸರ ಆಗಮನ- ಆರೋಪಿ ವಶಕ್ಕೆ

0

ಪುತ್ತೂರು: ಬುದ್ದಿಮಾಂದ್ಯನೆನ್ನಲಾದ ಯುವಕನೋರ್ವ ಸಂಪ್ಯದಲ್ಲಿ ನಿಲ್ಲಿಸಿದ್ದ ಓಮ್ನಿ ಕಾರೊಂದನ್ನು ಚಲಾಯಿಸಿಕೊಂಡು ಬಂದು ರಸ್ತೆ ಮಧ್ಯೆ ನಾಲ್ಕೈದು ವಾಹನಗಳಿಗೆ ಡಿಕ್ಕಿ ಹೊಡೆದಿದ್ದು ಕೊನೆಗೆ ಕುಂಬ್ರ ಸೇತುವೆಯ ಬಳಿ ವಾಹನ ಚಾಲಕರು ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಶನಿವಾರ ಸಂಜೆ ನಡೆದಿದೆ.

ಎಲ್ಲಿಂದಲೋ ಬಂದ ಯುವಕನೋರ್ವ ಕೈಯ್ಯಲ್ಲಿ ಕೋಲು ಹಿಡಿದು ಮಧ್ಯಾಹ್ನದ ವೇಳೆ ಸಂಪ್ಯದಲ್ಲಿ ರಸ್ತೆ ಬದಿಯಲ್ಲಿ ಸುತ್ತಾಡುತ್ತಿದ್ದ. ಸಂಜೆ ವೇಳೆ ಈತ ಯಾರೋ ಅಲ್ಲಿ ನಿಲ್ಲಿಸಿದ್ದ ಕಾರನ್ನು ಚಲಾಯಿಸಿಕೊಂಡು ಬಂದಿದ್ದಾರೆ. ಬರುವಾಗಲೇ ಅಡ್ಡಾದಿಡ್ಡಿ ವಾಹನ ಚಲಾಯಿಸಿದ ಪರಿಣಾಮ ನಾಲ್ಕೈದು ಕಾರುಗಳಿಗೆ ಗುದ್ದಿದ್ದಾನೆ. ಕೊನೆಗೂ ಆತನನ್ನು ಅಟ್ಟಾಡಿಸಿಕೊಂಡು ಬಂದ ವಾಹನ ಚಾಲಕರು ಕುಂಬ್ರ ಸೇತುವೆಯ ಬಳಿ ಆತ ಚಲಾಯಿಸುತ್ತಿದ್ದ ಒಮ್ನಿಯನ್ನು ಅಡ್ಡಗಟ್ಟಿ ಹಿಡಿದಿದ್ದಾರೆ. ಬಳಿಕ ಪೊಲೀಸರಿಗೆ ಕರೆ ಮಾಡಿದ್ದು ಪೊಲೀಸರು ಬಂದು ಆತನನ್ನು ವಶಕ್ಕೆ ಪಡೆದಿದ್ದಾರೆ. ಅಪಘಾತದಿಂದ ವಾಹನಗಳು ಜಖಂಗೊಂಡಿದೆ.

ಬೆಳಿಗ್ಗೆ ಪೊಲೀಸರು ಕರೆದುಕೊಂಡು ಹೋಗಿದ್ದರು!: ಇದೇ ಯುವಕ ಬೆಳಿಗ್ಗೆ ಕುಂಬ್ರದಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಮಾಡುತ್ತಿದ್ದುದಲ್ಲದೆ ಕೈಯ್ಯಲ್ಲಿ ಕೋಲು ಹಿಡಿದು ರಸ್ತೆಯಲ್ಲಿ ತೆರಳುತ್ತಿದ್ದ ಸಾರ್ವಜನಿಕರನ್ನು ಬೆದರಿಸುತ್ತಿದ್ದ. ಬಳಿಕ ಸಾರ್ವಜನಿಕರು 112ಕ್ಕೆ ಕರೆ ಮಾಡಿದ್ದು ತಕ್ಷಣ ಆಗಮಿಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದು ಕಾರಲ್ಲಿ ಕೂರಿಸಿ ಕರೆದುಕೊಂಡು ಹೋಗಿದ್ದರು. ಪೊಲೀಸರು ಸಂಟ್ಯಾರ್ ಬಳಿ ಕಾರಿನಿಂದ ಇಳಿಸಿದ್ದರು. ಆ ಬಳಿಕ ಅಲ್ಲಿಂದ ದೊಣ್ಣೆಯೊಂದನ್ನು ತೆಗೆದುಕೊಂಡು ಆತ ಮತ್ತೆ ಅದೇ ರೀತಿ ವರ್ತಿಸುತ್ತಿದ್ದ. ಪೊಲೀಸರು ಯಾಕೆ ಅತನನ್ನು ಸಂಟ್ಯಾರಿನಲ್ಲಿ ಬಿಟ್ಟು ಹೋಗಿದ್ದರು ಎಂಬುದು ಗೊತ್ತಾಗಿಲ್ಲ.

ಕಾರಿನಲ್ಲಿತ್ತು ಕೋವಿ: ಈತ ಚಲಾಯಿಸಿಕೊಂಡು ಬಂದ ಕಾರಿನಲ್ಲಿ ಕೋವಿ ಇತ್ತು. ಕೃಷಿಕರು ಉಪಯೋಗಿಸುವ ಕೋವಿ ಅದರಲ್ಲಿದ್ದು ಮೊದಲಿಗೆ ಅದನ್ನು ಹಿಡಿದು ಆತ ಬೆದರಿಸಿದ್ದ. ಗಾಂಜಾ ವ್ಯಸನಿಯಂತೆ ಕಾಣುತ್ತಿದ್ದ ಈತ ಎಲ್ಲಿಯವರು ಎಂಬುದು ಗೊತ್ತಾಗಿಲ್ಲ. ಹಿಂದಿ ಮತ್ತು ಕೇರಳ ಮಲೆಯಾಳಂ ಭಾಷೆ ಮಾತನಾಡುವ ಈತನ ರಾದ್ದಾಂತಕ್ಕೆ ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ. ಪೊಲೀಸರು ಕುಂಬ್ರದಿಂದ ಈತನನ್ನು ವಶಕ್ಕೆ ಪಡೆದುಕೊಂಡು ಕರೆದೊಯ್ದರೂ ಸಂಟ್ಯಾರ್‌ನಲ್ಲಿ ಬಿಟ್ಟು ಹೋದದ್ದು ಯಾಕೆ? ಸಂಟ್ಯಾರಿನಲ್ಲಿ ಬಿಡದೆ ಆತನ ಪೂರ್ವಾಪರ ವಿಚಾರ ಮಾಡುತ್ತಿದ್ದರೆ ಸಂಜೆಯ ಘಟನೆ ನಡೆಯುತ್ತಿರಲಿಲ್ಲ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಘಟನೆಯ ಸುದ್ದಿ ತಿಳಿದು ಸ್ಥಳದಲ್ಲಿ ನೂರಾರು ಮಂದಿ ನೆರೆದಿದ್ದು, ಮಾತ್ರವಲ್ಲದೆ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಕ್ಕಾಲು ಗಂಟೆ ಟ್ರಾಫಿಕ್ ಜಾಮ್ ಆಗಿತ್ತು. ಸಂಪ್ಯ ಪೊಲೀಸರು ಸಂಚಾರ ಸುಗಮಗೊಳಿಸಿ ಆರೋಪಿಯನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಓಮ್ನಿ ಕಾರು ಗೋವರ್ಧನ ಹೆಗ್ಡೆ ಎಂಬವರಿಗೆ ಸೇರಿದ್ದಾಗಿದೆ ಆರೋಪಿ ಯುವಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here