ಪುತ್ತೂರು: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಶಾಸಕರ ಕಛೇರಿ ಸಭಾಂಗಣದಲ್ಲಿ ನಡೆಯುತ್ತಿದ್ದ ಜಲಸಿರಿ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಸಭೆಗೆ ವಿಘ್ನ ಎದುರಾಗಿದ್ದು ಸಭೆಯನ್ನು ಮೊಟಕುಗೊಳಿಸಿ ಶಾಸಕರು ಸಭೆಯಿಂದ ವಿರಮಿಸಿದ ಘಟನೆ ನಡೆದಿದೆ.
ಘಟನೆ ವಿವರ: ಪುತ್ತೂರು ನಗರ ಸಭೆ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು ಇಂದು (ಮೇ.13) ಶಾಸಕರ ಕಛೇರಿ ಸಭಾಂಗಣದಲ್ಲಿ ಜಲಸಿರಿ ಅಧಿಕಾರಿಗಳ, ಸಿಬ್ಬಂದಿಗಳ ಸಭೆ ಕರೆಯಲಾಗಿತ್ತು. ಸಭೆ ಆರಂಭಗೊಳ್ಳುತ್ತಿದ್ದಂತೆ ಸಭೆಗೆ ನಗರ ಸಭೆ ಅಧಿಕಾರಿಗಳು ಮತ್ತು ತಾಲೂಕು ಪಂಚಾಯತ್ ಅಧಿಕಾರಿಗಳೊಂದಿಗೆ ಆಗಮಿಸಿದ ತಹಶೀಲ್ದಾರ್ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಸಭೆ ನಡೆಸದಂತೆ ಸೂಚಿಸಿದ್ದಾರೆ.
ಶಾಸಕರು ಹೇಳಿದ್ದೇನು:ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು,ಜನರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆ ಹರಿಸಲು ಅಧಿಕಾರಿಗಳೇ ಮುಂದಾಗಬೇಕಿತ್ತು. ಹಾಗಾಗದ ಕಾರಣ ಜನರ ಸಮಸ್ಯೆಗೆ ಸ್ಪಂಧಿಸಿ ಅದನ್ನು ಪರಿಹರಿಸುವುದು ನನ್ನ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಸಭೆ ನಡೆಸುತ್ತಿದ್ದೇನೆ. ನೀವು ಅಧಿಕಾರಿಗಳು ನಗರದ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವುದಿದ್ದರೆ ಬಹಳ ಸಂತೋಷ. ಆ ಬಗ್ಗೆ ನನ್ನ ಅಭ್ಯಂತರವಿಲ್ಲ. ಎಂದು ಹೇಳಿದ ಶಾಸಕರು ಸಭೆ ಮೊಟಕುಗೊಳಿಸಿ ಸ್ಥಳದಿಂದ ತೆರಳಿದ್ದಾರೆ.ಬಳಿಕ ಅಧಿಕಾರಿಗಳು ಶಾಸಕರ ಕಚೇರಿಯ ಗೇಟು ಮುಚ್ಚಿ ಸ್ಥಳದಿಂದ ತೆರಳಿದ್ದಾರೆ.
ಮೂಲಭೂತ ಸೌಕರ್ಯ ಕಲ್ಪಿಸದೆ ನೀತಿ ಸಂಹಿತೆ ಹೆಸರಿನಲ್ಲಿ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಅಧಿಕಾರಿಗಳ ನಿಲುವನ್ನು ಸಾರ್ವಜನಿಕರು ಖಂಡಿಸಿದ್ದಾರೆ.