ಕಥೋಲಿಕ್ ಸಭಾ ಪುತ್ತೂರು ಘಟಕದ ಪದ ಪ್ರದಾನ 

0

ಸೇವೆ, ತ್ಯಾಗ, ಒಗ್ಗಟ್ಟು ಸಂಘಟನೆಯ ಧ್ಯೇಯ-ಆಲ್ವಿನ್ ಡಿ’ಸೋಜ

ಪುತ್ತೂರು: ಕಥೋಲಿಕ್ ಸಭಾ ಎನ್ನುವುದು ಕ್ರೈಸ್ತ ಧರ್ಮದ ಬಲಿಷ್ಟ ಸಂಘಟನೆಯಾಗಿದೆ. ಸೇವೆ, ತ್ಯಾಗ ಮತ್ತು ಒಗ್ಗಟ್ಟು ಕಥೋಲಿಕ್ ಸಭೆಯ ಧ್ಯೇಯವಾಗಿದ್ದು, ಎಲ್ಲರನ್ನು ಪ್ರೀತಿಯಿಂದ ಕಾಣುತ್ತಾ, ವಿಶ್ವಾಸದಿಂದ ಸಂಘಟನೆಯನ್ನು ಮುನ್ನೆಡೆಸಬೇಕು ಎಂದು ಕಥೋಲಿಕ್ ಸಭಾ ಕೇಂದ್ರೀಯ(ಮಂಗಳೂರು) ಘಟಕದ ಅಧ್ಯಕ್ಷ ಆಲ್ವಿನ್ ಡಿ’ಸೋಜರವರು ಹೇಳಿದರು.

ಕ್ರೈಸ್ತ ಧರ್ಮದ ನಾಗರಿಕ ಸಂಘಟನೆಯಾಗಿರುವ ಮಾಯಿದೆ ದೇವುಸ್ ಚರ್ಚ್ ವ್ಯಾಪ್ತಿಯ ಕಥೋಲಿಕ್ ಸಭಾ ಪುತ್ತೂರು ಘಟಕದ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭವು ಮೇ 15 ರಂದು ಮಾಯಿದೆ ದೇವುಸ್ ಚರ್ಚ್ ಕ್ಯಾಂಪಸ್ಸಿನಲ್ಲಿ ಜರಗಿದ್ದು, ಇದರ ನೂತನ ಪದಾಧಿಕಾರಿಗಳ ಪದ ಪ್ರದಾನವನ್ನು ನೆರವೇರಿಸುವ ಮೂಲಕ ಅವರು ಮಾತನಾಡಿದರು. ಚರ್ಚ್ ಮೇಲೆ ಹಾಗೂ ಕ್ರೈಸ್ತ ಧರ್ಮದ ನಾಗರಿಕರ ಮೇಲೆ ನಡೆಯುವ ದೌರ್ಜನ್ಯ, ದಬ್ಬಾಳಿಕೆಯನ್ನು ಖಂಡಿಸಿ, ಇದರ ವಿರುದ್ಧ ಹೋರಾಡಲು ಇರುವ ಸಂಘಟನೆಯಾಗಿದೆ. ಚರ್ಚ್ ಬೇರೆ ಅಲ್ಲ, ಕಥೋಲಿಕ್ ಸಭಾ ಬೇರೆ ಅಲ್ಲ. ಎಲ್ಲರೂ ಜೊತೆಯಾಗಿ, ಒಗ್ಗಟ್ಟಿನಿಂದ ಅಭಿವೃದ್ಧಿಯತ್ತ ಕೈಜೋಡಿಸುವುದು ಮುಖ್ಯವಾಗಿದೆ ಎಂದರು.

ವರ್ಷದ ಯೋಜನೆಯನ್ನು ಆರಂಭದಲ್ಲಿಯೇ ನಿರ್ಣಯಿಸಿ-ಲವೀನಾ ಪಿಂಟೊ:
ಕಥೋಲಿಕ್ ಸಭಾ ಪುತ್ತೂರು ವಲಯದ ಅಧ್ಯಕ್ಷೆ ಶ್ರೀಮತಿ ಲವೀನಾ ಪಿಂಟೊ ಮಾತನಾಡಿ, ಕಥೋಲಿಕ್ ಸಭಾ ಮಂಗಳೂರು ಕೇಂದ್ರದ ಮಾರ್ಗದರ್ಶನದಿಂದ ಎಲ್ಲಾ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರತಿಯೊಂದು ಘಟಕದ ನಿರ್ಮಾಣ ಮಾಡುವಲ್ಲಿ ಕೇಂದ್ರ ಘಟಕವು ಪರಿಶೀಲನೆ ನಡೆಸಿ ಮಾನ್ಯತೆ ನೀಡಲಾಗುತ್ತದೆ. ಪ್ರತಿ ಘಟಕವು ತಾವು ಮಾಡುವ ವರ್ಷದ ಯೋಜನೆಯನ್ನು ಆರಂಭದಲ್ಲಿಯೇ ನಿರ್ಣಯಿಸುವಂತಾಗಬೇಕು ಎಂದರು.

ಸದಸ್ಯರ ಸಹಕಾರದೊಂದಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಸರ್ವರಿಗೂ ಕೃತಜ್ಞತೆಗಳು-ಅರುಣ್ ಪಿಂಟೊ:
ಕಥೋಲಿಕ್ ಸಭಾ ಪುತ್ತೂರು ಘಟಕದ ನಿರ್ಗಮನ ಅಧ್ಯಕ್ಷ ಅರುಣ್ ಪಿಂಟೊ ಸ್ವಾಗತಿಸಿ ಮಾತನಾಡಿ, ಕಳೆದ ಒಂದು ವರ್ಷದ ಅವಧಿಯಲ್ಲಿ ಕೇಂದ್ರದ ಮಾರ್ಗಸೂಚಿಯಂತೆ ಹಾಗೂ ಸದಸ್ಯರ ಸಹಕಾರದೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಸರ್ವರಿಗೂ ಕೃತಜ್ಞತೆಗಳೊಂದಿಗೆ ಮುಂದಿನ ಅವಧಿಯ ನೂತನ ತಂಡಕ್ಕೆ ಶುಭ ಕೋರುತ್ತಿದ್ದೇನೆ ಎಂದರು.

ನೂತನ ಕಾರ್ಯದರ್ಶಿ ಬಬಿತಾ ಡಿಕ್ರೂಜ್ ಪ್ರಾರ್ಥಿಸಿದರು. ಸಭೆಯಲ್ಲಿ ಸದಸ್ಯರಾದ ಜ್ಯೋ ಡಿ’ಸೋಜ, ಹೆರಿ ಡಾಯಸ್, ವಲೇರಿಯನ್ ಡಾಯಸ್, ರೋಶನ್ ಡಾಯಸ್, ಓಸ್ವಾಲ್ಡ್ ಸಲ್ದಾನ್ಹಾ, ಜೋನ್ ಪೀಟರ್ ಡಿ’ಸಿಲ್ವ, ಚಾಲ್ಸ್೯ ಫುಡ್ತಾದೋ, ವಲಯ ನಿಕಟಪೂರ್ವ ಕಾರ್ಯದರ್ಶಿ ಐಡಾ ಶಾಂತಿ ಲೋಬೊ, ಝೀನಾ ಗೋವಿಯಸ್ ಉಪಸ್ಥಿತರಿದ್ದರು. ನಿಕಟಪೂರ್ವ ಕಾರ್ಯದರ್ಶಿ ಪಾವ್ಲ್ ಮೊಂತೇರೊ ವರದಿ ವಾಚಿಸಿದರು. ಈ ಸಂದರ್ಭದಲ್ಲಿ ಆಂತರಿಕ ಲೆಕ್ಕ ಪರಿಶೋಧಕರಾಗಿ ವಿನ್ಸೆಂಟ್ ಮಸ್ಕರೇನ್ಹಸ್ ಹಾಗೂ ಪಾವ್ಲ್ ಮೊಂತೇರೊರವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿನ ಒಮ್ಮತದ ನಿರ್ಣಯದಂತೆ ಕಥೋಲಿಕ್ ಸಭಾ ಪುತ್ತೂರು ಘಟಕದ ನಿಕಟಪೂರ್ವ ಅಧ್ಯಕ್ಷರಾಗಿ ಅರುಣ್ ಪಿಂಟೊರವರನ್ನು ಮುಂದುವರೆಯುವುದು ಎಂದು ತೀರ್ಮಾನಿಸಲಾಯಿತು. ಕಥೋಲಿಕ್ ಸಭಾದ ಪುತ್ತೂರು ವಲಯದ ನಿಕಟಪೂರ್ವ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್ ಕಾರ್ಯಕ್ರಮ ನಿರೂಪಿಸಿದರು.

ಎಲ್ಲರ ಸಹಕಾರದೊಂದಿಗೆ ಕಾರ್ಯಕ್ರಮಗಳನ್ನು ಒಗ್ಗಟ್ಟಾಗಿ ಯಶಸ್ವಿಗೊಳಿಸೋಣ..
ಕಥೋಲಿಕ್ ಸಭಾದ ಅಧ್ಯಕ್ಷನಾಗಿ ನನ್ನಲ್ಲಿ ವಿಶ್ವಾಸವಿಟ್ಟು ಸರ್ವಾನುಮತದಿಂದ ಆಯ್ಕೆ ಮಾಡಿರುವುದಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಕಥೋಲಿಕ್ ಸಭಾದ ಕಾರ್ಯಕ್ರಮಗಳನ್ನು ತಿಳಿಸಲು ಹಾಗೂ ಯಶಸ್ವಿಗೊಳಿಸಲು ಸದಸ್ಯರ ವಾಟ್ಸಾಪ್ ಗ್ರೂಪ್ ಅನ್ನು ರಚಿಸಲಿದ್ದೇನೆ. ಕೇಂದ್ರದ ಮಾರ್ಗದರ್ಶನದೊಂದಿಗೆ ಹಾಗೂ ಸದಸ್ಯರ ಸಹಕಾರದೊಂದಿಗೆ ಪ್ರತಿಯೊಂದು ಕಾರ್ಯಕ್ರಮವನ್ನು ಒಗ್ಗಟ್ಟಾಗಿ ಯಶಸ್ವಿಗೊಳಿಸೋಣ.
-ಪ್ರೊ|ಝೇವಿಯರ್ ಡಿ’ಸೋಜ, ನೂತನ ಅಧ್ಯಕ್ಷರು, ಕಥೋಲಿಕ್ ಸಭಾ ಪುತ್ತೂರು ಘಟಕ

ಸಂಪೂರ್ಣ ಕ್ರೈಸ್ತ ನಾಗರಿಕರ ಸಂಘಟನೆ..
ಕಥೋಲಿಕ್ ಸಭಾ ಎನ್ನುವುದು ಸಂಪೂರ್ಣ ಕ್ರೈಸ್ತ ನಾಗರಿಕರ ಸಂಘಟನೆಯಾಗಿದೆ. ಕ್ರೈಸ್ತ ನಾಗರಿಕರ ನ್ಯಾಯಯುತ ಬೇಡಿಕೆಗೆ ಕಥೋಲಿಕ್ ಸಭಾ ಕೇಂದ್ರದ ಮಾರ್ಗದರ್ಶನ ಪಡೆದು ಕಾರ್ಯಪ್ರವೃತ್ತರಾಗಬೇಕು. ಸಂಘಟನೆಯಲ್ಲಿನ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನೆಡೆದಾಗ ಸಂಘಟನೆಯು ಬಲಿಷ್ಟಗೊಳ್ಳುವುದು.
-ಮೌರಿಸ್ ಮಸ್ಕರೇನ್ಹಸ್, ಮಾಜಿ ಉಪಾಧ್ಯಕ್ಷರು, ಚರ್ಚ್ ಪಾಲನಾ ಸಮಿತಿ, ಮಾಯಿದೆ ದೇವುಸ್ ಚರ್ಚ್

ಪದ ಪ್ರದಾನ..
ಕಥೋಲಿಕ್ ಸಭಾದ ನೂತನ ಅಧ್ಯಕ್ಷ ಪ್ರೊ|ಝೇವಿಯರ್ ಡಿ’ಸೋಜ, ಕಾರ್ಯದರ್ಶಿ ಬಬಿತಾ ಡಿಕ್ರೂಜ್, ಕೋಶಾಧಿಕಾರಿ ಜೆ.ಪಿ ರೊಡ್ರಿಗಸ್, ಜೊತೆ ಕಾರ್ಯದರ್ಶಿ ವಿ.ಜೆ ಫೆರ್ನಾಂಡೀಸ್, ಆಮ್ಚೊ ಸಂದೇಶ್ ಪ್ರತಿನಿಧಿ ಪ್ಯಾಟ್ರಿಕ್ ಲೋಬೊ, ರಾಜಕೀಯ ಸಂಚಾಲಕ  ಲ್ಯಾನ್ಸಿ ಮಸ್ಕರೇನ್ಹಸ್, ಯುವ ಹಿತ ಸಂಚಾಲಕ ಅರುಣ್ ರೆಬೆಲ್ಲೋರವರುಗಳಿಗೆ ಕಥೋಲಿಕ್ ಸಭಾ ಕೇಂದ್ರೀಯ ಘಟಕದ ಅಧ್ಯಕ್ಷ ಆಲ್ವಿನ್ ಡಿ’ಸೋಜರವರು ಪದ ಪ್ರದಾನ ನೆರವೇರಿಸಿದರು.

LEAVE A REPLY

Please enter your comment!
Please enter your name here