ಬಹುಕಾಲದ ಬೇಡಿಕೆ-ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಿಂಚು ಪ್ರತಿಬಂಧಕ ಅಳವಡಿಕೆ-ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ಶಾಸಕ ಅಶೋಕ್‌ ಕುಮಾರ್‌ ರೈ

0

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಳೆಗಾಲದ ವೇಳೆ ಮಿಂಚಿನ ಆಘಾತವನ್ನು ತಪ್ಪಿಸಲು ಮಿಂಚು ಪ್ರತಿಬಂಧಕವನ್ನು ಅಳವಡಿಸುವಂತೆ ಶಾಸಕರು ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದು ಕ್ಷೇತ್ರ ವ್ಯಾಪ್ತಿಯ ನಾಲ್ಕು ದಿಕ್ಕಿನಲ್ಲಿ ನಾಲ್ಕು ಮಿಂಚು ಪ್ರತಿಬಂಧಕ ಟವರ್ ನಿರ್ಮಾಣ ಮಾಡುವಂತೆ ಸರಕಾರಕ್ಕೆ ಪತ್ರವನ್ನು ಬರೆದಿದ್ದಾರೆ.


ಪ್ರತೀ ಮಳೆಗಾಲದ ಆರಂಭದಲ್ಲಿ ಮತ್ತು ಕೊನೆಯಲ್ಲಿ ದ ಕ ಜಿಲ್ಲೆಯಲ್ಲಿ ಸಿಡಿಲು ಮತ್ತು ಮಿಂಚಿನ ಆರ್ಭಟ ಅಧಿಕವಾಗಿರುತ್ತದೆ. ಇದರಿಂದ ಪ್ರತೀವರ್ಷ ಮಳೆಗಾಲದಲ್ಲಿ ಅನೇಕ ಜೀವಗಳು ಬಲಿಯಾಗುತ್ತದೆ. ಇದನ್ನು ತಪ್ಪಿಸಲು ಮಿಂಚು ಪ್ರತಿಬಂಧಕ ಅತೀ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸರಕಾರ ತಕ್ಷಣವೇ ಈ ಬಗ್ಗೆ ತುರ್ತು ಕ್ರಮವಹಿಸಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಿಂಚು ಪ್ರತಿಬಂಧಕವನ್ನು ನಿರ್ಮಾಣ ಮಾಡುವಂತೆ ಪತ್ರದಲ್ಲಿ ತಿಳಿಸಿದ್ದಾರೆ.

ಟವರ್‌ನಿಂದ ಆಗುವ ಪ್ರಯೋಜನವೇನು?
ಮಿಂಚು ಪ್ರತಿಬಂಧಕ ಟವರ್ ನಿರ್ಮಾಣವಾದರೆ ಮಳೆಗಾಲದಲ್ಲಿ ಅಲ್ಲಲ್ಲಿ ಮಿಂಚಿನಿಂದಾಗುವ ಅನಾಹುತವನ್ನು ತಪ್ಪಿಸಬಹುದಾಗಿದೆ. ಹೆಚ್ಚಾಗಿ ಮರಗಳು, ಮನೆಗಳ ಮೇಲೆ, ಕೃಷಿ ತೋಟಗಳ ಮೇಲೆ ಮಿಂಚು ಅಪ್ಪಳಿಸುತ್ತದೆ. ಮಿಂಚಿನ ಹೊಡೆತದಿಂದಾಗಿ ಜೀವ ಹಾನಿಯಾಗುತ್ತದೆ. ಆದರೆ ಮಿಂಚು ಪ್ರತಿಬಂಧಕ ಟವರ್‌ಗಳಿದ್ದಲ್ಲಿ ಮಿಂಚಿನ ತೀವ್ರತೆಯನ್ನು ಪ್ರತಿಬಂಧಕ ತಡೆಯುವುದರಿಂದ ದೊಡ್ಡ ಮಟ್ಟದ ಹಾನಿಯಾಗುವುದಿಲ್ಲ. ಮಿಂಚಿನ ತೀವ್ರತೆಯಿಂದ ವಿದ್ಯುತ್ ಉಪಕರಣಗಳು ಹೆಚ್ಚಾಗಿ ಕೆಟ್ಟು ಹೋಗುವುದರಿಂದ ವರ್ಷದಿಂದ ವರ್ಷಕ್ಕೆ ಅಪಾರ ನಷ್ಟವುಂಟಾಗುತ್ತದೆ. ಮಿಂಚಿನಿಂದ ವಿದ್ಯುತ್ ಉಪಕರಣಗಳು ಹಾನಿಗೊಳಗಾದರೆ, ಕೆಟ್ಟುಹೋದರೆ, ಸುಟ್ಟುಹೋದರೆ ಸರಕಾರದಿಂದ ಯಾವುದೇ ಪರಿಹಾರ ಕೂಡಾ ದೊರೆಯುವುದಿಲ್ಲ. ಈ ಕಾರಣಕ್ಕೆ ಆಯ್ದ ಸ್ಥಳಗಳಲ್ಲಿ ಟವರ್ ನಿರ್ಮಾಣ ಮಾಡಿದರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ದೊರಕಿದಂತಾಗುತ್ತದೆ. ಒಂದು ಟವರ್ ನಿರ್ಮಾಣ ಮಾಡಿದರೆ ಅನೇಕ ಗ್ರಾಮಗಳು ಅದರ ವ್ಯಾಪ್ತಿಗೆ ಒಳಪಡುತ್ತದೆ. ನಾಲ್ಕೈದು ಗ್ರಾಮಗಳಿಗೆ ಒಂದು ಮಿಂಚು ಪ್ರತಿಬಂಧಕ ಟವರ್ ಇದ್ದರೆ ಅದು ಮಿಂಚಿನಿಂದಾಗುವ ಆಘಾತವನ್ನು ನಿಯಂತ್ರಣ ಮಾಡುತ್ತದೆ.

ಪ್ರತೀ ಮಳೆಗಾಲದಲ್ಲಿ ಮಿಂಚಿನ ತೀವ್ರತೆಯಿಂದಾಗಿ ಜೀವ ಬಲಿ, ವಿದ್ಯುತ್ ಉಪಕರಣಗಳಿಗೆ ಹಾನಿ ಸೇರಿದಂತೆ ಅನೇಕ ನಷ್ಟ ಉಂಟಾಗುತ್ತದೆ. ಇದನ್ನು ತಡೆಯುವಲ್ಲಿ ಮಿಂಚು ಪ್ರತಿಬಂಧಕ ಟವರ್ ಕೆಲಸ ಮಾಡುತ್ತದೆ. ಕರಾವಳಿ ಭಾಗದಲ್ಲಿ ಮಳೆಗಾಲದ ಆರಂಭ ಮತ್ತು ಕೊನೆಯಲ್ಲಿ ಸಿಡಿಲಬ್ಬರ ಜೋರಾಗಿಯೇ ಇರುತ್ತದೆ. ಈ ಕಾರಣಕ್ಕೆ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಕಡೆಗಳಲ್ಲಿ ನಾಲ್ಕು ಮಿಂಚು ಪ್ರತಿಬಂಧಕ ಟವರ್ ನಿರ್ಮಾಣ ಮಾಡುವಂತೆ ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿದ್ದೇನೆ. ಪ್ರಕೃತಿ ವಿಕೋಪ ನಿಧಿಯಿಂದ ಈ ಟವರ್ ನಿರ್ಮಾಣ ಕಾರ್ಯ ಮಾಡಬೇಕಿದೆ. ಸರಕಾರದ ಮೇಲೆ ಒತ್ತಡ ತಂದು ಅತಿ ಶೀಘ್ರವೇ ಮಿಂಚು ಪ್ರತಿಬಂಧಕ ಟವರ್ ನಿರ್ಮಾಣ ಕಾರ್ಯ ನಡೆಯಲಿದೆ. ಮಿಂಚಿನ ಆಘಾತಕ್ಕೆ ಯಾವುದೇ ಜೀವ ಬಲಿ, ಸೊತ್ತು ನಾಶವಾಗದಂತೆ ತಡೆಯಬೇಕಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ‌ ಹೇಳಿದ್ದಾರೆ.

LEAVE A REPLY

Please enter your comment!
Please enter your name here