ಫಿಲೋಮಿನಾ ಕಾಲೇಜು ಹಿರಿಯ ವಿದ್ಯಾರ್ಥಿ ಸಂಘದ ಮಹಾಸಭೆ

0


ಪುತ್ತೂರು: ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜು ಹಿರಿಯ ವಿದ್ಯಾರ್ಥಿ ಸಂಘ ಹಾಗೂ ರಕ್ಷಕ ಶಿಕ್ಷಕ ಸಂಘದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆಯು ಮೇ 17 ರಂದು ಸಂಜೆ ಕಾಲೇಜಿನ ಸ್ಪಂದನಾ ಸಭಾಂಗಣದಲ್ಲಿ ಜರಗಿತು.ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲರಾದ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೊರವರು ಮಾತನಾಡಿ, ಹಿರಿಯ ವಿದ್ಯಾರ್ಥಿಗಳು ಸಂಸ್ಥೆಯ ಬೆನ್ನೆಲುಬಾಗಿದ್ದು ಕಾಲೇಜಿನ ಅಭಿವೃದ್ಧಿಯ ನಿಟ್ಟಿನಲ್ಲಿ ಉತ್ತಮ ಕೊಡುಗೆ ನೀಡಿದ್ದಾರೆ. ಪದವಿ ಕಾಲೇಜು ಈಗಾಗಲೇ ಅಟಾನಾಮಸ್ ಕಾಲೇಜು ಆಗಿ ಪರಿವರ್ತನೆಗೊಳ್ಳುತ್ತಿದೆ. ಈಗಾಗಲೇ ಆಯಾ ವರ್ಷಗಳ ಹಿರಿಯ ವಿದ್ಯಾರ್ಥಿ ನೆಟ್ ವರ್ಕ್ ಅನ್ನು ರಚಿಸಿ ಸುಮಾರು ಮೂರು ಸಾವಿರ ಹಿರಿಯ ವಿದ್ಯಾರ್ಥಿಗಳನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾಗಿದ್ದೇವೆ. ನಾವು ನಿಮ್ಮವರು, ನೀವು ನಮ್ಮವರು ಎಂಬಂತೆ ಕಾಲೇಜು ಅಭಿವೃದ್ಧಿಗೆ ಕೈಜೋಡಿಸೋಣ ಎಂದರು.

ಫಿಲೋಮಿನಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎ.ಜೆ ರೈರವರು ಎಲ್ಲರೊಂದಿಗೆ ಒಳ್ಳೆಯ ಬಾಂಧವ್ಯ ಇಟ್ಟುಕೊಂಡು ಉತ್ತಮ ರೀತಿಯಲ್ಲಿ ಸಂಘವನ್ನು ಮುನ್ನೆಡೆಸಿದ್ದಾರೆ. ಇದೀಗ ನೂತನ ಅಧ್ಯಕ್ಷೆಯಾಗಿ ಪ್ರತಿಮಾ ಹೆಗ್ಡೆಯವರು ಹುದ್ದೆಯನ್ನು ಅಲಂಕರಿಸಿದ್ದು ಅವರಿಂದಲೂ ಸಂಸ್ಥೆಗೆ ಉತ್ತಮ ಸೇವೆ ಸಿಗುವಂತಾಗಲಿ ಎಂದರು.ಹಿರಿಯ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷೆ ಪ್ರತಿಮಾ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎ.ಜೆ ಸ್ವಾಗತಿಸಿದರು. ಕೋಶಾಧಿಕಾರಿ ಅಭಿಷೇಕ್ ಸುವರ್ಣ ಲೆಕ್ಕಪತ್ರ ಮಂಡಿಸಿದರು. ಕಾರ್ಯದರ್ಶಿ ತೇಜಸ್ವಿ ಭಟ್ ವರದಿ ಮಂಡಿಸಿ, ವಂದಿಸಿದರು‌. ಮಹಾಸಭೆಯಲ್ಲಿ ಕಾಲೇಜಿನ ಪ್ರಥಮ ಬ್ಯಾಚ್ ವಿದ್ಯಾರ್ಥಿ, ನಿವೃತ್ತ ಡಿ.ವೈ.ಎಸ್.ಪಿ ಜಗನ್ನಾಥ ರೈ ನುಳಿಯಾಲು ಸಹಿತ ಹಲವರು ಉಪಸ್ಥಿತರಿದ್ದರು.

ಡೀಮ್ಡ್ ವಿಶ್ವವಿದ್ಯಾಲಯ ಆಗಲಿ..ಫಿಲೋಮಿನಾ ಕಾಲೇಜು ಸುಮಾರು 15 ಸಾವಿರ ಹಿರಿಯ ವಿದ್ಯಾರ್ಥಿಗಳನ್ನು ಹೊಂದಿದ್ದು ದೇಶದ ವಿವಿಧೆಡೆ ಉತ್ತಮ ಜೀವನವನ್ನು ನಡೆಸುತ್ತಿದ್ದಾರೆ. ಹಿರಿಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಸಂಘವನ್ನು ಸೇರಬೇಕು. ಫಿಲೋಮಿನಾ ವಿದ್ಯಾಸಂಸ್ಥೆಗೆ ಸಮಾಜದಲ್ಲಿ ಉತ್ತಮ ಸ್ಥಾನಮಾನವಿದೆ ಹಾಗೂ ಈ ಕಾಲೇಜಿನ ಹೆಸರು ಎಲ್ಲೆಡೆ ಪಸರಿಸಿದೆ. ಈಗಾಗಲೇ ಫಿಲೋಮಿನಾ ಕಾಲೇಜು ಅಟಾನಾಮಸ್ ಕಾಲೇಜು ಆಗಿ ಪರಿವರ್ತನೆ ಹೊಂದಿದ್ದು, ಪ್ರತಿಷ್ಠಿತ ಐ.ಎಸ್.ಒ-9001:2015 ಮಾನ್ಯತೆಯನ್ನೂ ಪಡೆದಿರುತ್ತದೆ. ಆದಷ್ಟು ಬೇಗ ವಿದ್ಯಾಸಂಸ್ಥೆಯು ಡೀಮ್ಡ್ ವಿಶ್ವವಿದ್ಯಾನಿಲಯ ಆಗಿ ರೂಪುಗೊಳ್ಳಲಿ.
-ಎ.ಜೆ ರೈ, ಅಧ್ಯಕ್ಷರು, ಹಿರಿಯ ವಿದ್ಯಾರ್ಥಿ ಸಂಘ, ಫಿಲೋಮಿನಾ ಕಾಲೇಜು

LEAVE A REPLY

Please enter your comment!
Please enter your name here