24*7 ಕರ್ತವ್ಯದೊಂದಿಗೆ ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸಿ-ಅಧಿಕಾರಿಗಳಿಗೆ ಎಸಿ ನಿರ್ದೇಶನ
ಉಪ್ಪಿನಂಗಡಿ: ಎರಡು ನದಿಗಳ ಸಂಗಮ ತಾಣವಾಗಿರುವ ಉಪ್ಪಿನಂಗಡಿಯಲ್ಲಿ ಮಳೆಗಾಲದಲ್ಲಿ ಪ್ರವಾಹದ ಭೀತಿಯೂ ಇದ್ದು, ಮುಂಬರುವ ಮಳೆಗಾಲವನ್ನು ಸಮರ್ಥವಾಗಿ ಎದುರಿಸಲು ಅಧಿಕಾರಿಗಳ ತಂಡ ಸನ್ನದ್ಧರಾಗಬೇಕು. ಪ್ರಾಕೃತಿಕ ವಿಕೋಪಗಳು ಹೇಳಿ ಬರುವಂತದ್ದಲ್ಲ. ಅನಿರೀಕ್ಷಿತವಾಗಿ ಬಂದೊದಗುತ್ತವೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು 24*7 ನಂತೆ ಕೆಲಸ ಮಾಡುವ ಮೂಲಕ ಸಾರ್ವಜನಿಕರ ನೆರವಿಗೆ ತಕ್ಷಣ ಧಾವಿಸಿ ಬರಬೇಕು ಎಂದು ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮೊಹಾಪಾತ್ರ ತಿಳಿಸಿದರು.
ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಸಭಾಂಗಣದಲ್ಲಿ ಮೇ.18ರಂದು ಪುತ್ತೂರು ತಾಲೂಕು ಮಟ್ಟದ ಪ್ರಾಕೃತಿಕ ವಿಕೋಪದ ಬಗ್ಗೆ ಅಧಿಕಾರಿಗಳೊಂದಿಗೆ ನಡೆಸಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಳೆಗಾಲವನ್ನೆದುರಿಸಲು ಸಜ್ಜಾಗಿರುವ ಬಗ್ಗೆ ವಿವಿಧ ಇಲಾಖೆಗಳ ಅಧಿಕಾರಿಗಳಲ್ಲಿ ಮಾಹಿತಿ ಪಡೆದ ಅವರು, ಮರಗಳು ಬಿದ್ದು ರಸ್ತೆ ಸಂಚಾರಕ್ಕೆ ತೊಡಕಾಗುವ ಸಂದರ್ಭ ಸಂಚಾರಿ ಪೊಲೀಸರು ತಕ್ಷಣವೇ ಅಲ್ಲಿಗೆ ತೆರಳಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಮೆಸ್ಕಾಂ ಇಲಾಖೆಯವರು ವಿದ್ಯುತ್ ತಂತಿಗಳಿಗೆ ತಾಗುವ ಮರದ ಗೆಲ್ಲುಗಳನ್ನು ತೆರವುಗೊಳಿಸಬೇಕು. ಅರಣ್ಯ ಇಲಾಖೆಯವರು ಅಪಾಯಕಾರಿ ಮರಗಳನ್ನು ಗುರುತಿಸಿ ಅವುಗಳನ್ನು ತೆರವುಗೊಳಿಸಬೇಕು. ಹೂಳು ತುಂಬಿದ ಎಲ್ಲಾ ರಾಜಕಾಲುವೆಗಳು, ರಸ್ತೆ ಬದಿಯ ಚರಂಡಿಗಳನ್ನು ಸರಾಗವಾಗಿ ಮಳೆ ನೀರು ಹರಿದುಹೋಗುವ ಹಾಗೆ ಮಾಡಲು ಪಿಡಬ್ಲ್ಯೂಡಿ ಇಲಾಖೆಗೆ, ಗ್ರಾ.ಪಂ.ಗಳಿಗೆ ಈಗಾಗಲೇ ಸೂಚನೆಯನ್ನು ನೀಡಲಾಗಿದೆ. ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಆರೋಗ್ಯ ಇಲಾಖೆಯವರು ಸೊಳ್ಳೆ ಉತ್ಪತ್ತಿಯಾಗುವ ಜಾಗಗಳನ್ನು ಗುರುತಿಸಿ ಅಲ್ಲಿ ಸೊಳ್ಳೆಗಳ ಲಾರ್ವಗಳ ನಾಶಕ್ಕೆ ಕ್ರಮ ಕೈಗೊಳ್ಳಬೇಕು. ನೀರಿನ ಟ್ಯಾಂಕ್ಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಸಿಗುವಂತೆ ಗ್ರಾ.ಪಂ.ಗಳು ಕ್ರಮ ಕೈಗೊಳ್ಳಬೇಕು. ಅಂಗನವಾಡಿಗಳ ಬಳಿ ಅಪಾಯಕಾರಿ ಮರಗಳಿದ್ದರೆ ಅವುಗಳನ್ನು ತೆರವು ಮಾಡಲು ಕ್ರಮ ಕೈಗೊಳ್ಳಬೇಕು. ಗೃಹ ರಕ್ಷಕರನ್ನೊಳಗೊಂಡ ಉಪ್ಪಿನಂಗಡಿಯ ಪ್ರವಾಹ ರಕ್ಷಣಾ ತಂಡವೂ ಮಳೆಗಾಲದಲ್ಲಿ ದಿನದ 24 ಗಂಟೆಯೂ ಇಲ್ಲಿ ಸನ್ನದ್ಧ ಸ್ಥಿತಿಯಲ್ಲಿರಬೇಕು. ಪೊಲೀಸರು ಬೀಟ್ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಬೇಕು ಎಂದರು.
ಪುತ್ತೂರು ತಹಶೀಲ್ದಾರ್ ಕುಂಞಿ ಅಹ್ಮದ್ ಮಾತನಾಡಿ, ಸಾರ್ವಜನಿಕರ ರಕ್ಷಣೆಯ ಹೊಣೆ ನಮ್ಮ ಮೇಲಿದೆ. ಆದ್ದರಿಂದ ಮಳೆಗಾಲದಲ್ಲಿ ಸಾರ್ವಜನಿಕರಿಗೆ ಯಾವುದೇ ಸಮಸ್ಯೆಯಾಗದಂತೆ ನಾವು ನೋಡಿಕೊಳ್ಳಬೇಕು. ಸೈನಿಕರಂತೆ ಕರ್ತವ್ಯ ನಿರ್ವಹಿಸುವ ಮೂಲಕ ಅವರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಕೆಲಸ ಮಾಡಬೇಕು. ಭೂಕುಸಿತವಾಗಬಹುದಾದಂತ ಜಾಗಗಳನ್ನು, ಅಪಾಯಕಾರಿ ಮರಗಳನ್ನು, ಪ್ರವಾಹಕ್ಕೆ ತುತ್ತಾಗುವ ಪ್ರದೇಶಗಳನ್ನು ಈಗಲೇ ಗುರುತಿಸಿಡಬೇಕು. ಅದರೊಂದಿಗೆ ಕಾಳಜಿ ಕೇಂದ್ರಗಳನ್ನು ಈಗಲೇ ಗುರುತಿಸಿಡಬೇಕು ಎಂದರು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಹನುಮ ರೆಡ್ಡಿ ಮಾತನಾಡಿ, ಮಳೆಗಾಲದ ಸಂದರ್ಭದಲ್ಲಿ ಅಧಿಕಾರಿಗಳು ಕೇಂದ್ರ ಸ್ಥಾನವನ್ನು ಬಿಡಬಾರದು. ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಕೆಲಸ ಮಾಡಬೇಕು ಎಂದರು.
ವೇದಿಕೆಯಲ್ಲಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾಕ್, ಎಸಿಎಫ್ ಸುಬ್ಬಯ್ಯ ನಾಯ್ಕ ಉಪಸ್ಥಿತರಿದ್ದರು. ಪೊಲೀಸ್ ಉಪ ನಿರೀಕ್ಷಕರಾದ ನಂದಕುಮಾರ್ ಎಂ.ಎಂ., ಭರತ್ ಕುಮಾರ್ ವಿ., ಅರಣ್ಯ ಇಲಾಖೆಯ ಸಂದೀಪ್, ಹರ್ಷ ವಿ., ವಿದ್ಯಾರಾಣಿ, ಸಿಡಿಪಿಒ ಮಂಗಳಾ ಕೆ., ಮೀನುಗಾರಿಕಾ ಸಹಾಯಕ ನಿರ್ದೇಶಕಿ ಮಂಜುಳಾಶ್ರೀ ಶೆಣೈ, ಗ್ರಾಮೀಣ ಉದ್ಯೋಗ ಖಾತರಿಯ ತಾ.ಪಂ. ಸಹಾಯಕ ನಿರ್ದೇಶಕಿ ಶೈಲಜಾ ಎ., ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ಸಮಾಜ ಕಲ್ಯಾಣ ಇಲಾಖೆಯ ಕೃಷ್ಣ ಬಿ., ಪಶು ಸಂಗೋಪನಾ ಇಲಾಖೆಯ ಡಾ. ಉಷಾ ಎನ್., ಮೆಸ್ಕಾಂ ಇಲಾಖೆಯ ಎಇಇ ರಾಮಚಂದ್ರ, ಸಹಾಯಕ ಅಭಿಯಂತರರಾದ ನಿತಿನ್ ಕುಮಾರ್, ಪಿಡಬ್ಲ್ಯೂಡಿ ಇಲಾಖೆಯ ಜೂನಿಯರ್ ಎಂಜಿನಿಯರ್ ಎಲ್.ಸಿ. ಸಿಕ್ವೇರಾ, ಉಪ್ಪಿನಂಗಡಿ ಕಂದಾಯ ಹೋಬಳಿಯ ಉಪತಹಶೀಲ್ದಾರ್ ಚೆನ್ನಪ್ಪ ಗೌಡ, ವಿವಿಧ ಗ್ರಾ.ಪಂ. ಪಿಡಿಒಗಳಾದ ಶರೀಫ್, ಚಿತ್ರಾವತಿ, ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್, ಸತೀಶ್ ಬಂಗೇರ, ಗೃಹರಕ್ಷಕದಳದ ದಿನೇಶ್ ಬಿ., ಜನಾರ್ದನ, ವಿಎಗಳಾದ ಶರಣ್ಯ, ಕವಿತಾ, ನರಿಯಪ್ಪ, ಗ್ರಾಮ ಸಹಾಯಕರಾದ ಯತೀಶ್, ಬಾಲಕೃಷ್ಣ ಗೌಡ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ದೇವಿದಾಸ ರೈ ಅಡೆಕ್ಕಲ್, ಜಿ. ಕೃಷ್ಣರಾವ್ ಆರ್ತಿಲ, ವೆಂಕಪ್ಪ ಪೂಜಾರಿ ಮರುವೇಲು, ರೈತ ಸಂಘದ ಜಿಲ್ಲಾಧ್ಯಕ್ಷ ರೂಪೇಶ್ ರೈ ಅಲಿಮಾರ್, ಉಪ್ಪಿನಂಗಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ತ, ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಯುನಿಕ್, ಪ್ರಮುಖರಾದ ಕೈಲಾರು ರಾಜಗೋಪಾಲ ಭಟ್, ಯು.ಟಿ. ಫಯಾಝ್, ನಾಗೇಶ್ ಪ್ರಭು, ರಶೀದ್ ಮತ್ತಿತರರು ಉಪಸ್ಥಿತರಿದ್ದರು.ಉಪ್ಪಿನಂಗಡಿ ಹೋಬಳಿಯ ಕಂದಾಯ ನಿರೀಕ್ಷಕ ಚಂದ್ರ ನಾಯ್ಕ ಸ್ವಾಗತಿಸಿ, ವಂದಿಸಿದರು.
ನಿರ್ಲಕ್ಷ್ಯ ವಹಿಸಿದರೆ ಸಸ್ಪೆಂಡ್
ತಾಲೂಕು ಮಟ್ಟದಲ್ಲಿ ಈಗಾಗಲೇ ಸಹಾಯವಾಣಿಯನ್ನು ತೆರೆಯಲಾಗಿದೆ. ಉಪ್ಪಿನಂಗಡಿಯಲ್ಲಿಯೂ ಸಹಾಯವಾಣಿ ತೆರೆಯಲಾಗುವುದು. ಏನಾದರೂ ಸಮಸ್ಯೆಗಳಿದ್ದಲ್ಲಿ ಸಾರ್ವಜನಿಕರು ಸಹಾಯವಾಣಿ ಸಂಖ್ಯೆಯಾದ 08251230349ಗೆ ಕರೆ ಮಾಡಬಹುದು. ಇಲ್ಲಿ ಕರೆ ತೆಗೆಯದೇ ನಿರ್ಲಕ್ಷ್ಯ ಮಾಡಿದರೆ, ಸಾರ್ವಜನಿಕರ ಸಮಸ್ಯೆಗಳನ್ನು ಕಡೆಗಣಿಸಿದರೆ ಅಂತಹ ಅಧಿಕಾರಿಗಳನ್ನು ಕರ್ತವ್ಯದಿಂದಲೇ ವಜಾ ಮಾಡಲಾಗುವುದು ಎಂದು ಎಚ್ಚರಿಸಿದ ಎಸಿಯವರು, ಪ್ರತಿ ಗ್ರಾ.ಪಂ.ನಲ್ಲಿ ಪಿಡಿಒ ನೇತೃತ್ವದಲ್ಲಿ ವಿಎ, ಮೆಸ್ಕಾಂ ಇಲಾಖೆ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಆರೋಗ್ಯ ಇಲಾಖೆಯ ಸಿಬ್ಬಂದಿಯವರನ್ನೊಳಗೊಂಡ ಉಪಸಮಿತಿಗಳನ್ನು ರಚಿಸಲು ಈಗಾಗಲೇ ನಿರ್ದೇಶನ ನೀಡಲಾಗಿದೆ. ಈ ತಂಡವು ಪರಸ್ಪರ ಸಂಪರ್ಕದಲ್ಲಿದ್ದು, ಮಳೆಗಾಲದಲ್ಲಿ ಸಾರ್ವಜನಿಕರಿಗೆ ಆಗುವ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಕೆಲಸ ಮಾಡಲಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸದಿದ್ದರೇ, ನನಗೆ ಅಥವಾ ತಹಶೀಲ್ದಾರ್ ಅವರಿಗೆ ನೇರವಾಗಿ ಕರೆ ಮಾಡಿ ತಿಳಿಸಿ, 24*7 ಸೇವೆಗೆ ನಾನು ಸದಾ ಸಿದ್ಧನಿದ್ದೇನೆ ಎಂದರು.
ಹೆದ್ದಾರಿ ಸಮಸ್ಯೆಗೆ 15 ದಿನದಲ್ಲಿ ಪರಿಹಾರ
ಸಭೆಯ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮೊಹಾಪಾತ್ರ, ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಧಿಕಾರಿಗಳ ಸಭೆ ಕರೆಯಲಾಗಿದೆ. ನೀತಿ ಸಂಹಿತೆ ಮುಗಿದ ಬಳಿಕ ಸಾರ್ವಜನಿಕರ ಸಭೆಯನ್ನು ಕರೆದು ಸಲಹೆ- ಸೂಚನೆ ಪಡೆಯಲಾಗುವುದು. ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ಉಪ್ಪಿನಂಗಡಿ ಭಾಗದಲ್ಲಿ ನಡೆಯುತ್ತಿರುವುದರಿಂದ ಇಲ್ಲಿ ಕೆಲವು ಸವಾಲುಗಳಿವೆ. ಜಿಲ್ಲಾಧಿಕಾರಿಯವರೂ ಈ ಮೊದಲು ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದ್ದು, ನಾನು ಕೂಡಾ ಮೂರು ಬಾರಿ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರಿಗೆ ಸೂಕ್ತ ನಿರ್ದೇಶನ ನೀಡಿದ್ದೇನೆ. ಉಪ್ಪಿನಂಗಡಿ ಪೇಟೆಯಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿಯನ್ನು ಪೂರ್ಣಗೊಳಿಸಿ, ಕಾಮಗಾರಿಯಿಂದಾಗಿ ಆಗುತ್ತಿದ್ದ ಎಲ್ಲಾ ಸಮಸ್ಯೆಗಳನ್ನು 15 ದಿನಗಳೊಳಗೆ ಮುಗಿಸಿಕೊಡಬೇಕು ಎಂದು ಗುತ್ತಿಗೆದಾರ ಸಂಸ್ಥೆಯವರಿಗೆ ಸೂಚನೆ ನೀಡಿದ್ದೇನೆ. ಅವರು ಅದಕ್ಕೆ ಒಪ್ಪಿಕೊಂಡಿದ್ದಾರೆ. ಪಾಕೃತಿಕ ವಿಕೋಪಗಳು ಸಂಭವಿಸಿದಾಗ ಅದರಿಂದ ಹೇಗೆ ರಕ್ಷಣೆಯನ್ನು ಪಡೆಯುವ ಬಗ್ಗೆ ಪುತ್ತೂರಿನಲ್ಲಿ ಇಂದು ಅಣಕು ಪ್ರದರ್ಶನ ಏರ್ಪಡಿಸಲಾಗಿದ್ದು, ಮುಂದಿನ ವಾರದಲ್ಲಿ ಉಪ್ಪಿನಂಗಡಿಯಲ್ಲಿಯೂ ಅಣಕು ಪ್ರದರ್ಶನ ನಡೆಸಲಾಗುವುದು ಎಂದು ತಿಳಿಸಿದರು.