ನೆಲ್ಯಾಡಿ: ಭಾರೀ ಮಳೆಗೆ ರಸ್ತೆಯಲ್ಲೇ ಹರಿದ ನೀರು-ವಾಹನ ಸವಾರರ ಪರದಾಟ

0

ನೆಲ್ಯಾಡಿ: ನೆಲ್ಯಾಡಿ ಭಾಗದಲ್ಲಿ ಮೇ.18ರಂದು ಸಂಜೆ ಭಾರೀ ಮಳೆಯಾಗಿದ್ದು ನೆಲ್ಯಾಡಿ ಪೇಟೆಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೇ ಮಳೆ ನೀರು ರಸ್ತೆಯಲ್ಲೇ ಹರಿದ ಪರಿಣಾಮ ವಾಹನ ಸವಾರರು, ಸಾರ್ವಜನಿಕರು ಪರದಾಟ ನಡೆಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 75ರ ಅಡ್ಡಹೊಳೆ-ಬಿ.ಸಿ.ರೋಡ್ ನಡುವೆ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ನೆಲ್ಯಾಡಿ ಪೇಟೆಯಲ್ಲಿ ಎತ್ತರಿಸಿದ ರಸ್ತೆ ನಿರ್ಮಾಣದ ಕಾಮಗಾರಿ ಅರ್ಧದಲ್ಲೇ ಮೊಟಕುಗೊಂಡಿದೆ. ಪೇಟೆಯ ಎರಡೂ ಬದಿ ಸರ್ವೀಸ್ ರಸ್ತೆ ಮಾಡಲಾಗಿದ್ದರೂ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆಯಾಗಿಲ್ಲ. ಇದರಿಂದಾಗಿ ಧಾರಾಕಾರವಾಗಿ ಸುರಿದ ಮಳೆಯ ನೀರು ರಸ್ತೆಯಲ್ಲೇ ಹರಿದು ಹೋಗಿದೆ. ಮಳೆ ಬರುವ ಮುನ್ಸೂಚನೆ ಇದ್ದರೂ ಗುತ್ತಿಗೆದಾರರು ಯಾವುದೇ ಪರ್ಯಾಯ ವ್ಯವಸ್ಥೆಯನ್ನು ಮಾಡದೆ ಇರುವುದು ಹಾಗೂ ಸರ್ವಿಸ್ ರೋಡ್ ನಿರ್ಮಾಣ ಮಾಡುವಾಗ ರಸ್ತೆಗಿಂತ ಎತ್ತರವಾಗಿ ಚರಂಡಿಯನ್ನು ನಿರ್ಮಿಸಿರುವುದರಿಂದ ನೀರು ರಸ್ತೆಯಲ್ಲಿಯೇ ಹರಿಯಲು ಕಾರಣವಾಗಿದೆ ಎಂಬ ಆರೋಪ ಕೇಳಿಬಂದಿದೆ. ಪೇಟೆಯ ಎರಡು ಕಡೆಯಲ್ಲಿ ಅಂಡರ್ ಪಾಸ್ ನಿರ್ಮಾಣವಾಗಿದ್ದು ಇದರ ಮಧ್ಯೆ ಹೊಂಡ ಗುಂಡಿಗಳಿದ್ದು ಇಲ್ಲಿ ನೀರು ನಿಂತು ಜನರ ಓಡಾಟಕ್ಕೆ ತೊಂದರೆಯಾಗುತ್ತಿದೆ. ಈ ಬಗ್ಗೆ ಹೆದ್ದಾರಿ ಇಲಾಖೆಯವರು ಹಾಗೂ ಗುತ್ತಿಗೆದಾರರು ಗಮನಹರಿಸಿ ಮಳೆಗಾಲದಲ್ಲಿ ಆಗಬಹುದಾದ ಸಂಭಾವ್ಯ ಅನಾಹುತ ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಾಹನ ಸವಾರರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.


ಚರಂಡಿ ನಿರ್ಮಾಣದ ಆರಂಭದಲ್ಲಿ ಕಾಮಗಾರಿ ಗುತ್ತಿಗೆದಾರರಿಗೆ ನೀರಿನ ಹರಿವಿನ ಬಗ್ಗೆ ತಿಳಿಸಲಾಗಿತ್ತು. ಆದರೂ ಯಾವುದೇ ರೀತಿಯ ಸ್ಪಂದನೆ ನೀಡದೆ ಅವೈಜ್ಞಾನಿಕ ರೀತಿಯಲ್ಲಿ ಚರಂಡಿ ನಿರ್ಮಿಸಿದರಿಂದ ಈಗ ಪ್ರತಿ ವರ್ಷ ಮಳೆಗಾಲದಲ್ಲಿ ತೊಂದರೆ ಅನುಭವಿಸಬೇಕಾಗಿದೆ.
-ಗಣೇಶ್ ರಶ್ಮಿ, ಉಪಾಧ್ಯಕ್ಷರು
ವರ್ತಕ ಸಂಘ ನೆಲ್ಯಾಡಿ-ಕೌಕ್ರಾಡಿ

LEAVE A REPLY

Please enter your comment!
Please enter your name here