ನೆಲ್ಯಾಡಿ: ಬಾರ್ಗೆ ಒಳಪ್ರವೇಶಿಸುವ ವೇಳೆ ಕೈ ತಾಗಿದ ವಿಚಾರದಲ್ಲಿ ಕೋಪಗೊಂಡು ವ್ಯಕ್ತಿಯೊಬ್ಬರ ಮೇಲೆ ಮೂವರ ತಂಡ ಬಿಯರ್ ಬಾಟ್ಲಿಯಿಂದ ಹಲ್ಲೆ ನಡೆಸಿರುವ ಘಟನೆ ಮೇ 26ರಂದು ಮಧ್ಯಾಹ್ನ ನೆಲ್ಯಾಡಿಯಲ್ಲಿ ನಡೆದಿದೆ.
ನೆಲ್ಯಾಡಿ ನಿವಾಸಿ ಜೋಳಿ ಜೋಸೆಫ್(61ವ.)ಎಂಬವರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಕುಲದೀಪ್, ಬಿಪಿನ್ ಹಾಗೂ ಅಜೇಯ ಎಂಬವರ ಮೇಲೆ ಉಪ್ಪಿನಂಗಡಿ ಠಾಣೆಯಲ್ಲಿ ಕೇಸು ದಾಖಲಾಗಿದೆ. ಜೋಳಿ ಜೋಸೆಫ್ ಅವರು ಮೇ 26ರಂದು ಮಧ್ಯಾಹ್ನ ಕಡಬ ತಾಲೂಕು ಕೌಕ್ರಾಡಿ ಗ್ರಾಮದ ನೆಲ್ಯಾಡಿ ಕ್ಲಾಸಿಕ್ ಬಾರ್ಗೆ ಮದ್ಯಪಾನ ಖರೀದಿ ಮಾಡಲು ತೆರಳಿದ್ದು ಈ ವೇಳೆ ಆರೋಪಿಗಳಾದ ಕುಲದೀಪ್, ಬಿಪಿನ್ ಹಾಗೂ ಅಜೇಯ ಎಂಬವರು ಅಡ್ಡವಾಗಿ ನಿಂತಿದ್ದರು. ಒಳಪ್ರವೇಶಿಸುವಾಗ ಜೋಳಿ ಜೋಸೆಫ್ ಅವರ ಕೈ ಅವರಿಗೆ ತಾಗಿದೆ. ಇದರಿಂದ ಕೋಪಗೊಂಡ ಬಿಪಿನ್ ಎಂಬವರು ಜೋಳಿ ಜೋಸೆಫ್ ಅವರನ್ನು ದೂಡಿ ಹಾಕಿ ಅವಾಚ್ಯ ಶಬ್ದಗಳಿಂದ ಬೈದು, ಬಿಯರ್ ಬಾಟ್ಲಿಯಿಂದ ಕೊಲ್ಲುವ ಉದ್ದೇಶದಿಂದ ತಲೆಗೆ ಹೊಡೆದಿದ್ದಾರೆ. ಉಳಿದ ಆರೋಪಿಗಳಾದ ಕುಲದೀಪ್ ಮತ್ತು ಅಜೇಯರವರು ಸಹ ಹಲ್ಲೆಗೆ ಯತ್ನಿಸಿದ್ದಾರೆ. ಹಲ್ಲೆಯಿಂದ ಜೋಳಿ ಜೋಸೆಫ್ ಅವರಿಗೆ ರಕ್ತಗಾಯವಾಗಿದ್ದು ಅವರ ಬೊಬ್ಬೆ ಕೇಳಿ ಬಾರ್ನಲ್ಲಿದ್ದ ಸಿಬ್ಬಂದಿಗಳು ಹಾಗೂ ಜನರು ಓಡಿ ಬರುವುದನ್ನು ನೋಡಿ ಆರೋಪಿಗಳು ಜೀವಬೆದರಿಕೆ ಒಡ್ಡಿ ಹೋಗಿರುತ್ತಾರೆ ಎಂದು ವರದಿಯಾಗಿದೆ. ಗಾಯಾಳು ಜೋಳಿ ಜೋಸೆಫ್ ಅವರು ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜೋಳಿ ಜೋಸೆಫ್ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಅ.ಕ್ರ: 64/2024 ಕಲಂ:504,307,324,506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.