ಪುತ್ತೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮೇ.21ರಂದು ಪಿಯು ಪರೀಕ್ಷೆ 2ರ ಫಲಿತಾಂಶವನ್ನು ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದು, ಪುತ್ತೂರಿನಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿನಿಯೊಬ್ಬಳು ಗೊಂದಲದಲ್ಲಿ ಸಿಲುಕಿದ್ದಾಳೆ. ಮಂಡಳಿಯ 2 ವೆಬ್ ಸೈಟ್ ಗಳಲ್ಲಿ ವ್ಯತಿರಿಕ್ತವಾದ ಫಲಿತಾಂಶ ಪ್ರಕಟಗೊಂಡಿರುವುದೇ ಇದಕ್ಕೆ ಕಾರಣ.
ಚಿಕ್ಕಮಗಳೂರು ಮೂಲದ ವಿದ್ಯಾರ್ಥಿನಿಯೊಬ್ಬಳು ಪುತ್ತೂರಿನ ಪ್ರಗತಿ ಸ್ಟಡಿ ಸೆಂಟರ್ ನಲ್ಲಿ ತರಬೇತಿ ಪಡೆದು ಖಾಸಗಿ ಅಭ್ಯರ್ಥಿಯಾಗಿ ನಗರದ ಜ್ಯೂನಿಯರ್ ಕಾಲೇಜಿನಲ್ಲಿ ಹೆಸರು ನೋಂದಾಯಿಸಿ ಪರೀಕ್ಷೆ ಬರೆದಿದ್ದಳು. ಮಾರ್ಚ್ ನಲ್ಲಿ ನಡೆದ ಪಿಯುಸಿ ಪರೀಕ್ಷೆ 1ರಲ್ಲಿ 3 ವಿಷಯಗಳಲ್ಲಿ ಅನುತ್ತೀರ್ಣಗೊಂಡಿದ್ದ ಕಾರಣ ಏಪ್ರಿಲ್ ನಲ್ಲಿ ನಡೆದ ಪಿಯುಸಿ ಪರೀಕ್ಷೆ 2ರಲ್ಲಿ ಮತ್ತೆ ಪರೀಕ್ಷೆ ಬರೆದಿದ್ದಳು. ಮೇ.21ರಂದು ಮಂಡಳಿಯ ವೆಬ್ ಸೈಟ್ ನಲ್ಲಿ ಒಂದು ವಿಷಯದಲ್ಲಿ ತೇರ್ಗಡೆಗೊಂಡು 2 ವಿಷಯದಲ್ಲಿ ಅನುತ್ತೀರ್ಣವಾಗಿರುವ ಫಲಿತಾಂಶ ಪ್ರಕಟಗೊಂಡಿತ್ತು. ಮೇ.25ರಂದು ಅನುತ್ತೀರ್ಣಗೊಂಡ 2 ವಿಷಯಗಳಲ್ಲಿ ಮತ್ತೆ ಪರೀಕ್ಷೆ ಬರೆಯಲು ಮಂಡಳಿಯ ವೆಬ್ ಸೈಟ್ ನಲ್ಲಿ ಅರ್ಜಿ ನೋಂದಾಯಿಸುವ ಸಂದರ್ಭದಲ್ಲಿ ಅನುತ್ತೀರ್ಣಗೊಂಡ 2 ವಿಷಯಗಳಲ್ಲಿ ಉತ್ತೀರ್ಣಳಾಗಿರುವುದಾಗಿ ಕಂಡುಬಂದಿದೆ. ಈ ಕುರಿತು ಪಿಯುಸಿ ಬೋರ್ಡ್ ಕಚೇರಿಯನ್ನು ಸಂಪರ್ಕಿಸಿದಾಗ ಸಂಬಂಧಪಟ್ಟ ವಿದ್ಯಾರ್ಥಿನಿ ಉತ್ತೀರ್ಣಳಾಗಿದ್ದಾಳೆ ಮತ್ತೆ ಪರೀಕ್ಷೆ ಬರೆಯುವ ಅಗತ್ಯ ಇಲ್ಲ ಎಂದು ತಿಳಿಸಿದ್ದಾರೆ. ಆದರೆ ಪರೀಕ್ಷಾ ನೋಂದಣಿ ವೆಬ್ ಸೈಟ್ ನಲ್ಲಿ ಅನುತ್ತೀರ್ಣಗೊಂಡಿರುವುದಾಗಿ ಹೇಳಲಾಗಿದ್ದು, ಇನ್ನೂ ಅಪ್‌ಡೇಟ್ ಆಗಿಲ್ಲ.
ಎಕನಾಮಿಕ್ಸ್ ವಿಷಯದಲ್ಲಿ 32 ಅಂಕ, ಬಿಸಿನೆಸ್ ಸ್ಟಡೀಸ್ ವಿಷಯದಲ್ಲಿ 20 ಅಂಕ ಪಡೆದು ನಾಟ್ ಕಂಪ್ಲೀಟೆಡ್ ಎಂದು ಫಲಿತಾಂಶ ಪ್ರಕಟಗೊಂಡ ವೆಬ್ ಸೈಟ್ ನಲ್ಲಿ ಹೇಳಲಾಗಿದ್ದರೆ, ಮರುಪರೀಕ್ಷೆಗೆ ಅರ್ಜಿ ನೋಂದಾಯಿಸುವ ವೆಬ್ ಸೈಟ್ ನಲ್ಲಿ ಎಕನಾಮಿಕ್ಸ್ ವಿಷಯದಲ್ಲಿ 32 ಅಂಕ ಮತ್ತು ಬಿಸಿನೆಸ್ ಸ್ಟಡೀಸ್ ವಿಷಯದಲ್ಲಿ 30 ಅಂಕದೊಂದಿಗೆ exempted ಎಂಬುವುದಾಗಿ ನಮೂದಿಸಿ ಪಾಸ್ ಎಂದು ತೋರಿಸಲಾಗಿದೆ. 2 ವೆಬ್ ಸೈಟ್ ಗಳಲ್ಲಿ ಒಂದು ವಿದ್ಯಾರ್ಥಿಯ ಫಲಿತಾಂಶ ಎರಡು ರೀತಿಯಲ್ಲಿ ಪ್ರಕಟಗೊಂಡಿರುವುದು ಗೊಂದಲಕ್ಕೆ ಕಾರಣವಾಗಿದೆ. ಪ್ರಗತಿ ಸ್ಟಡಿ ಸೆಂಟರ್ ಆಡಳಿತ ವರ್ಗ ಪಿಯು ಮಂಡಳಿ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಖೇದ ವ್ಯಕ್ತಪಡಿಸಿದ್ದು, ಗೊಂದಲ ನಿವಾರಣೆಯ ಪ್ರಯತ್ನದೊಂದಿಗೆ ಪರೀಕ್ಷೆ 3ಕ್ಕೆ ತಯಾರಿ ನಡೆಸಿದ್ದಾರೆ.