ಪುತ್ತೂರು: ಕೆದಂಬಾಡಿ ಗ್ರಾಮದ ತಿಂಗಳಾಡಿ ದೇವಗಿರಿ ಶ್ರೀ ದೇವತಾ ಭಜನಾ ಮಂದಿರದ ಜೀರ್ಣೋದ್ಧಾರಕ್ಕೆ ಸಂಬಂಧಿಸಿ ಪ್ರಶ್ನಾಚಿಂತನೆ ಮೇ.28 ರಂದು ಮಂದಿರದಲ್ಲಿ ನಡೆಯಿತು. ದೈವಜ್ಞರಾದ ಸದಾನಂದ ಕಾರಂತ ಶಂಭೂರು ಮತ್ತು ನವನೀತ ಪ್ರಿಯ ಕಿನ್ನಿಂಗಾರ್ ಅವರು ಸ್ಥಳ ಪ್ರಶ್ನೆ ನಡೆಸಿಕೊಟ್ಟರು.
ದೇವಗಿರಿಯಲ್ಲಿರುವ ಹಳೆಯ ಭಜನಾ ಮಂದಿರವನ್ನು ಪುನರುತ್ಥಾನಗೊಳಿಸುವ ನಿಟ್ಟಿನಲ್ಲಿ ಪ್ರಶ್ನಾ ಚಿಂತನೆ ನಡೆಸಲಾಯಿತು. ವಾಸ್ತುಶಿಲ್ಪಿ ರಮೇಶ್ ಕಾರಂತ ಬೆದ್ರಡ್ಕ ಅವರ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಸಿ ನೂತನ ಭಜನಾ ಮಂದಿರ ನಿರ್ಮಾಣಕ್ಕೆ ನೀಲ ನಕಾಶೆ ಸಿದ್ಧಪಡಿಸಲಾಗಿದ್ದು, ಇದಕ್ಕೆ ಪ್ರಶ್ನಾ ಚಿಂತನೆಯಲ್ಲಿ ದೈವಾನುಗ್ರಹ ಗೋಚರಿಸಿತು.
ನೂತನ ಭಜನಾ ಮಂದಿರ, ನೂತನ ಸಭಾಭವನ ನಿರ್ಮಾಣ, ಸಂಪರ್ಕ ರಸ್ತೆ ಇತ್ಯಾದಿಗಳ ವಿಚಾರದಲ್ಲಿ ಚಿಂತನೆಯ ಮೂಲಕ ಮಾರ್ಗದರ್ಶನ ಪಡೆಯಲಾಯಿತು. ಭಜನಾ ಮಂದಿರದಲ್ಲಿ ಪ್ರಧಾನ ದೇವರಾಗಿ ಶ್ರೀ ಮಹಾಗಣಪತಿಯನ್ನು ಉಪಾಸನೆ ಮಾಡುವ ವಿಚಾರ, ಉಪಾಸನಾ ವಿಧಾನ, ವಾರ್ಷಿಕ ಶ್ರೀ ಗಣೇಶೋತ್ಸವ ನಡೆಸುವ ಸಂದರ್ಭದಲ್ಲಿನ ಆರಾಧನಾಪದ್ಧತಿಗಳು, ಇತ್ಯಾದಿಗಳ ಬಗ್ಗೆ ದೈವಜ್ಞರು ಸೂಚನೆಗಳನ್ನು ನೀಡಿದರು.
ದೇವತಾ ಭಜನಾ ಮಂದಿರದ ಅಧ್ಯಕ್ಷರು, ಪದಾಧಿಕಾರಿಗಳು, ಪೂರ್ವಾಧ್ಯಕ್ಷರುಗಳು, ದೇವತಾ ಭಜನಾ ಮಂಡಳಿಯ ಅಧ್ಯಕ್ಷರು, ಪದಾಧಿಕಾರಿಗಳು, ಶ್ರೀಕೃಷ್ಣ ಮಿತ್ರವೃಂದದ ಅಧ್ಯಕ್ಷರು, ಪದಾಧಿಕಾರಿಗಳು, ಊರ ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.