ಸುನೀತಾರವರ ಸೇವಾ ಕಾರ್‍ಯ, ವ್ಯಕ್ತಿತ್ವ ಶಿಕ್ಷಣ ಕ್ಷೇತ್ರಕ್ಕೆ ಮಾದರಿ- ಕಾವು ಹೇಮನಾಥ ಶೆಟ್ಟಿ
ಪುತ್ತೂರು: ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಸುನೀತಾ ಎಂರವರ ವಿದಾಯ ಸಮಾರಂಭ ಅದ್ದೂರಿಯಾಗಿ ಮೇ 31 ರಂದು ಪುತ್ತೂರು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಿತು.
ಸುನೀತಾರವರ ಸೇವಾ ಕಾರ್‍ಯ, ವ್ಯಕ್ತಿತ್ವ ಶಿಕ್ಷಣ ಕ್ಷೇತ್ರಕ್ಕೆ ಮಾದರಿ- ಕಾವು ಹೇಮನಾಥ ಶೆಟ್ಟಿ
ಸಭಾಧ್ಯಕ್ಷತೆ ವಹಿಸಿದ್ದ ಶ್ರೀ ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ ನಮ್ಮ ಸಂಸ್ಥೆಯಲ್ಲಿ 39 ವರ್ಷಗಳ ಕಾಲ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಸೇವೆಗೈದ ಸುನೀತಾರವರು ಸಲ್ಲಿಸಿದ ಅಪ್ರತಿಮಾ ಸೇವಾ ಕಾರ್‍ಯ ಮತ್ತು ಅವರ ವ್ಯಕ್ತಿತ್ವ ಶಿಕ್ಷಣ ಕ್ಷೇತ್ರಕ್ಕೆ ಮಾದರಿ ಯಾಗಿದ್ದು, ಒರ್ವ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಶಾಲೆಯ ವಿದ್ಯಾರ್ಥಿಗಳನ್ನು ಕ್ರೀಡಾ ಕ್ಷೇತ್ರದಲ್ಲಿ ಮುಂದೆ ಬರುವಂತೆ ಮಾಡಿದ ಕೀರ್ತಿಯೊಂದಿಗೆ, ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆಗೆ ಬೆಳಕು ಚೆಲ್ಲಿದವರು ಸುನೀತಾರವರು, ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲೂ ಅಪ್ರತಿಮಾ ಸಾಧನೆಗೈದ ಸುನೀತಾರವರು ಶಾಲೆಯನ್ನು ಮನೆಗಿಂತ ಹೆಚ್ಚು ಪ್ರೀತಿ ಮಾಡಿದ್ದಾರೆ. ಕರ್ತವ್ಯವನ್ನು ದೇವರು ಎಂದು ನಂಬಿ, ತನ್ನ ಶಿಕ್ಷಣ ವೃತ್ತಿಯ ಸಮಯದಲ್ಲಿ ನಮ್ಮ ಸಂಸ್ಥೆಯ ವತಿಯಿಂದ ನಡೆದ ರಾಜ್ಯ ಮತ್ತು ಜಿಲ್ಲಾ ಮಟ್ಟದ ಕ್ರೀಡಾಕೂಟದ ಯಶಸ್ಸಿನಲ್ಲಿ ಅರ್ಹನಶಿಯಾಗಿ ದುಡಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕಿಯಾಗಿದ್ದರೂ, ಪ್ರತಿಯೊಂದು ವಿಷಯದಲ್ಲೂ ಪರಿಣಿತಿಯನ್ನು ಹೊಂದಿದ್ದರು, ಅವರ ಸೇವೆಯನ್ನು ಸಂಸ್ಥೆಯು ಸದಾ ಗೌರವಿಸುತ್ತಿದೆ. ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಯ ಅಭಿವೃದ್ಧಿಯಲ್ಲಿ ಸುನೀತಾರವರ ಸಹಕಾರ ಸದಾ ಬೇಕು ಎಂದು ಹೇಳಿ, ಅವರ ನಿವೃತ್ತಿ ಜೀವನಕ್ಕೆ ಶುಭಕೋರಿದರು.
ಅದ್ದೂರಿ ಸನ್ಮಾನ
ದೈಹಿಕ ಶಿಕ್ಷಣ ಶಿಕ್ಷಕಿ ಸುನೀತಾ ಮತ್ತು ಅವರ ಪತಿ ನಿತ್ಸಾನಂದರವರನ್ನು ಸಂಸ್ಥೆಯ ವತಿಯಿಂದ ಅದ್ದೂರಿಯಾಗಿ ಗೌರವಿಸಿ, ಸನ್ಮಾನಿಸಲಾಯಿತು.
ಉದ್ಘಾಟನೆ.ಪುತ್ತೂರು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ವೇದಾವ್ಯಾಸ್‌ರವರು ಕಾರ್‍ಯಕ್ರಮ ಉದ್ಘಾಟಿಸಿ, ಶುಭಹಾರೈಸಿದರು.
ಪೂರ್ಣ ಸಹಕಾರ ದೊರೆತಿದೆ- ಸುನೀತಾ
ಸನ್ಮಾನ ಸ್ವೀಕರಿಸಿ, ಮಾತನಾಡಿದ ದೈಹಿಕ ಶಿಕ್ಷಣ ಶಿಕ್ಷಕಿ ಸುನೀತಾರವರು ಮಾತನಾಡಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ೩೯ ವರ್ಷಗಳ ಕಾಲ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಸೇವೆ ಸಲ್ಲಿಸುವ ಅವಕಾಶ ನನ್ನ ಪಾಲಿಗೆ ಬಂದದ್ದು ತುಂಬಾ ಸಂತೋಷ ತಂದಿದೆ. ಶಾಲೆಯ ಆಡಳಿತ ಮಂಡಳಿ ಮತ್ತು ಸಹೋದ್ಯೋಗಿಗಳು ಹಾಗೂ ವಿದ್ಯಾರ್ಥಿಗಳ ಪೂರ್ಣ ಸಹಕಾರ ವೃತ್ತಿ ಸಮಯದಲ್ಲಿ ದೊರೆತಿದೆ. ನಮ್ಮ ಸಂಸ್ಥೆಯ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿಯವರು ಸಂಸ್ಥೆಯ ಪ್ರಗತಿಗೆ ಅಭೂತಪೂರ್ವ ಕೊಡುಗೆಯನ್ನು ನೀಡಿದ್ದಾರೆ. ಅವರ ಪ್ರೋತ್ಸಾಹ ಮತ್ತು ಸಹಕಾರದಿಂದ ಸಂಸ್ಥೆಯು ರಾಜ್ಯ ಮಟ್ಟದ ಕ್ರೀಡಾ ಕೂಟದ ಆಯೋಜನೆಯನ್ನು ಪುತ್ತೂರಿನಲ್ಲಿ ಮಾಡಿ ಅದ್ಭುತವಾದ ಹೆಸರನ್ನು ದಾಖಲಿಸಿದೆ. ನನ್ನ ಸೇವಾವಧಿಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯವರು ಪೂರ್ಣ ಸಹಕಾರವನ್ನು ನೀಡಿದ್ದಾರೆ ಎಂದು ಕೃತಜ್ಞತೆಯನ್ನು ಸಲ್ಲಿಸಿದರು.
ಸಾರ್ಥಕ ಸೇವೆ- ನಾರಾಯಣ ರೈ
ನಿವೃತ್ತ ಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿರವರು ಅಭಿನಂದನಾ ಭಾಷಣದಲ್ಲಿ ಸುನೀತಾರವರು ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ 39 ವರ್ಷಗಳ ಸಾರ್ಥಕವಾದ ಸೇವೆಯನ್ನು ಸಲ್ಲಿಸಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಶಾಲೆಯ ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆ ವಿಕಸನಕ್ಕೆ ಶ್ರಮಪಟ್ಟು ದುಡಿದ್ದಾರೆ. ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲೂ ಸಾಧನೆಯನ್ನು ಮಾಡಿ, ಪ್ರಶಸ್ತಿ ವಿಜೇತರಾಗಿದ್ದಾರೆ. ಒಟ್ಟಿನಲ್ಲಿ ಸಂಸ್ಥೆಯ ಅಭಿವೃದ್ಧಿಯಲ್ಲಿ ಒರ್ವ ಶಿಕ್ಷಕಿಯಾಗಿ ಪ್ರಾಮಾಣಿಕತೆಯಿಂದ ಕೆಲಸವನ್ನು ಮಾಡಿದ್ದಾರೆ ಎಂಬ ಸಂತೋಷ ಸಮಾಜದ ಎಲ್ಲರಲ್ಲಿ ಇದೆ ಎಂದು ಹೇಳಿದರು
ಮಾನವೀಯ ಗುಣ- ವಿದ್ಯಾ ಆರ್ ಗೌರಿ
ಪುತ್ತೂರು ನಗರ ಸಭೆಯ ಮಾಜಿ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿಯವರು ಮಾತನಾಡಿ ಸುನೀತಾ ಮೇಡಮ್ ರವರು ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ಮಾಡಿದ ಸಾಧನೆಯನ್ನು ನಾವೆಲ್ಲ ಪ್ರಶಂಶಿಸಬೇಕು. ನಾಯಕತ್ವ ಗುಣ- ಬಲವಾದ ಅತ್ಮವಿಶ್ವಾಸಗಳೇ ಸುನೀತಾರವರ ಸಾಧನೆಗೆ ಹೆಜ್ಜೆಯಾಗಿದೆ. ಯಾವುದೇ ಕಠಿಣ ಪರಿಸ್ಥಿತಿ ಇರಲಿ ಅದನ್ನು ಎದುರಿಸಿ, ಮುತುವರ್ಜಿಯಿಂದ ಸುನೀತಾರವರು ಸೇವಾ ಕಾರ್‍ಯವನ್ನು ಮಾಡಿದ್ದಾರೆ. ಅದಕ್ಕಾಗಿ ಅವರು ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಶಿಕ್ಷಕ ವೃತ್ತಿಯೊಂದಿಗೆ ಅವರು ಮಾನವೀಯ ಗುಣವನ್ನು ತೋರಿಸಿದ್ದಾರೆ ಎಂಬುದಕ್ಕೆ ಕರೋನಾ ಸಂದರ್ಭದಲ್ಲಿ ಸುನೀತಾರವರು ತಮ್ಮ ಪತಿಯ ಸಹಕಾರದೊಂದಿಗೆ ಮೂರು ತಿಂಗಳು ಕಾಲ ತಮ್ಮ ಮನೆಯ ಸಮೀಪ ಗಂಜಿ ಕೇಂದ್ರವನ್ನು ಆರಂಭಿಸಿ. ಬಡವರ ಪಾಲಿಗೆ ಅನ್ನದಾತರಾಗಿದ್ದರು. ಆದರೆ ಇದನ್ನು ಅವರು ಎಂದೂ ಪ್ರಚಾರ ಮಾಡಿಲ್ಲ ಮತ್ತು ಪೋಟೋ ತೆಗೆಸಿಲ್ಲ ಎಂದು ಹೇಳಿದರು.
ಸೇವಾ ಕಾರ್‍ಯ ಪ್ರಶಂಶನೀಯ- ದಯಾನಂದ ರೈ
ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತುರವರು ಮಾತನಾಡಿ ನಮ್ಮ ಸಂಸ್ಥೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಸಂಸ್ಥೆಯ ಅಭಿವೃದ್ಧಿಯಲ್ಲಿ ದುಡಿದ ಸುನೀತಾರವರ ಸೇವಾ ಕಾರ್‍ಯ ಪ್ರಶಂಶನೀಯ ಎಂದರು.
ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಜಯಪ್ರಕಾಶ್ ರೈ ನೂಜಿಬೈಲು, ರಮೇಶ್ ರೈ ಸಾಂತ್ಯ, ಕುಂಬ್ರ ದುರ್ಗಾಪ್ರಸಾದ್ ರೈ, ರಾಧಾಕೃಷ್ಣ ಆಳ್ವ ಸಾಜ, ವಾಣಿ ಶೆಟ್ಟಿ ನೆಲ್ಯಾಡಿ, ಪುತ್ತೂರು ಪುಡಾ ಅಧ್ಯಕ್ಷ ಭಾಸ್ಕರ ಗೌಡ ಕೋಡಿಂಬಾಳ, ಸುಳ್ಯದ ನ್ಯಾಯವಾದಿ ವೆಂಕಪ್ಪ ಗೌಡ ಮಾಚಿಲ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಕೃಷ್ಣ ನಾಯ್ಕ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸರ್ವೇಶ್ ರಾಜೇ ಅರಸ್‌ರವರುಗಳು ಉಪಸ್ಥಿತರಿದ್ದರು
ಶಾಲಾ ಪ್ರಾರಂಭೋತ್ಸವ- ಪ್ರತಿಭಾ ಪುರಸ್ಕಾರ
ಪೂರ್ವಾಹ್ನ ಶಾಲಾ ಪ್ರಾರಂಭೋತ್ಸವ ಹಾಗೂ ಎಸ್‌ಎಸ್‌ಎಲ್‌ಸಿ ಸಾಧಕರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ, ಗೌರವಿಸಲಾಯಿತು.ಶಾಲಾ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ಸ್ವಾಗತಿಸಿ, ಶಿಕ್ಷಕಿ ಸಂಧ್ಯಾ ವಂದಿಸಿದರು. ಶಿಕ್ಷಕಿಯರಾದ ಗಾಯತ್ರಿ, ತುಳಸಿ, ಸುಚಿತ್ರಾ, ಹಾಗೂ ಸಂಧ್ಯಾರವರುಗಳು ಕಾರ್‍ಯಕ್ರಮ ನಿರ್ವಹಿಸಿದರು.ಸಮಾರಂಭದಲ್ಲಿ ಸಾಮಾಜಿಕ ಮುಂದಾಳು ರವಿಪ್ರಸಾದ್ ಶೆಟ್ಟಿ ಬನ್ನೂರು, ಶಾಲಾ ಶಿಕ್ಷಕರು, ಸಿಬ್ಬಂಧಿವರ್ಗ, ವಿದ್ಯಾರ್ಥಿಗಳು, ಪೋಷಕರು ಹಾಗೂ ಸುನೀತಾರವರ ಕುಟಉಂಭಸ್ಥರು, ಹಿತೈಷಿಗಳು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದರು.
ಶುಭಹಾರೈಕೆ
ಪೂರ್ವಹ್ನ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಮತ್ತು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ ಶ್ರೀ ರಾಮಕೃಷ್ಣ ಪ್ರೌಢಶಾಲೆಗೆ ಆಗಮಿಸಿ, ದೈಹಿಕ ಶಿಕ್ಷಣ ಶಿಕ್ಷಕಿ ಸುನೀತಾರವರ ನಿವೃತ್ತಿ ಜೀವನಕ್ಕೆ ಶುಭಹಾರೈಸಿದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಸಂಸ್ಥೆ
ಶ್ರೀ ರಾಮಕೃಷ್ಣ ಪ್ರೌಢಶಾಲೆಯು ರಾಷ್ಟ್ರ- ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಸಂಸ್ಥೆಯಾಗಿದ್ದು, ಶ್ರೀ ರಾಮಕೃಷ್ಣ ಪ್ರೌಢಶಾಲೆಗೆ 8 ನೇ ತರಗತಿಗೆ ದಾಖಲಾಗುವ ವಿದ್ಯಾರ್ಥಿಯ ಅಂಕವನ್ನು ನಾವು ಪರಿಗಣಿಸಿದೇ, ಆ ವಿದ್ಯಾರ್ಥಿಯನ್ನು ಮೂರು ವರ್ಷಗಳ ಕಾಲ ಪರಿಪೂರ್ಣ ಶಿಕ್ಷಣವನ್ನು ನೀಡಿ, ವಿದ್ಯಾರ್ಥಿಯನ್ನು ಉತ್ತಮ ಅಂಕದೊಂದಿಗೆ ತೇರ್ಗಡೆ ಮಾಡುವ ಸಂಸ್ಥೆಯಾಗಿ ಸಮಾಜದಲ್ಲಿ ಗುರುತಿಸಿದೆ. ಅದಕ್ಕಾಗಿ ಶ್ರೀ ರಾಮಕೃಷ್ಣ ಸಂಸ್ಥೆಯಲ್ಲಿ ಕಲಿಯುವ ವಿದ್ಯಾರ್ಥಿಗಳಲ್ಲಿ ಧನ್ಯತಾ ಭಾವ ಇದೆ.
-ಕಾವು ಹೇಮನಾಥ ಶೆಟ್ಟಿ ಸಂಚಾಲಕರು
ಶ್ರೀ ರಾಮಕೃಷ್ಣ ಪ್ರೌಢಶಾಲೆ ಪುತ್ತೂರು.