ಕಾರ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವದ ಲೆಕ್ಕಪತ್ರ ಮಂಡನೆ – ರೂ.2.10 ಕೋಟಿ ಸಂಗ್ರಹ, ರೂ.2.06 ಕೋಟಿ ಖರ್ಚು, ರೂ.4.25 ಲಕ್ಷ ಉಳಿಕೆ

0

ಪುತ್ತೂರು: ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಕಾರ್ಯದಲ್ಲಿ ವಿವಿಧ ಮೂಲಗಳಿಂದ ರೂ.2,10,57,709 ಸಂಗ್ರಹವಾಗಿದೆ. ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶ ಎಲ್ಲಾ ವೆಚ್ಚಗಳು ಸೇರಿ ರೂ.2,06,33,427 ಕೋಟಿ ಪಾವತಿಸಲಾಗಿದ್ದು ಎಲ್ಲಾ ವೆಚ್ಚಗಳು ಕಳೆದು ರೂ.4.25ಲಕ್ಷ ಉಳಿತಾಯವಾಗಿದೆ ಎಂದು ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಹೇಳಿದರು.

ದೇವಸ್ಥಾನದಲ್ಲಿ ಜೂ.2ರಂದು ಸಂಜೆ ನಡೆದ ಲೆಕ್ಕಪತ್ರ ಮಂಡನ ಸಭೆಯಲ್ಲಿ ಅವರು ಮಾಹಿತಿ ನೀಡಿದರು. ಜೀರ್ಣೋದ್ಧಾರ, ಬ್ರಹ್ಮಕಲಶ, ವಾರ್ಷಿಕ ಜಾತ್ರೋತ್ಸವ ಹಾಗೂ ಉಳ್ಳಾಲ್ತಿ, ಉಳ್ಳಾಕ್ಲು ದೈವಸ್ಥಾನದ ನೇಮೋತ್ಸವಗಳು ಸೇರಿದಂತೆ ಎಲ್ಲಾ ವೆಚ್ಚಗಳಿಗೆ ರೂ.2.06,33,427 ಪಾವತಿಸಲಾಗಿದೆ. ಜೀರ್ಣೋದ್ಧಾರದ ಜೊತೆಗೆ ದೇವಸ್ಥಾನಕ್ಕೆ ಅಗತ್ಯವಾದ 33 ಸೆಂಟ್ಸ್ ಜಾಗವನ್ನು ರೂ.40ಲಕ್ಷ ವೆಚ್ಚದಲ್ಲಿ ಖರೀದಿ, ಕರಸೇವೆಯ ಮೂಲಕ ನಡೆದ ಕೆಲಸ ಕಾರ್ಯಗಳು, ಮರಮುಟ್ಟು, ಕಲ್ಲು ಮೊದಲಾದ ವಸ್ತುರೂಪದ ಕೊಡುಗೆ, ಗುಡಿ ಗೋಪುರಗಳ ನಿರ್ಮಾಣ ಸೇರಿದಂತೆ ಒಟ್ಟು ಸುಮಾರು ರೂ.3.50ಕೋಟಿ ವೆಚ್ಚದ ಕೆಲಸ ಕಾರ್ಯಗಳು ದೇವಸ್ಥಾನದಲ್ಲಿ ನಡೆದಿದೆ. ದಾನಿಗಳ ಆರ್ಥಿಕ, ವಸ್ತು ರೂಪ ಸೇರಿದಂತೆ ವಿವಿಧ ರೂಪದ ಸಹಕಾರ, ಭಕ್ತಾದಿಗಳು ಶ್ರಮದಾನ ಮೂಲಕ ಕೆಲಸ ಕಾರ್ಯಗಳು ನಡೆದಿದೆ. ಕೆಲವೊಂದು ಬಜೆಟ್ ಗಿಂತ ಹೆಚ್ಚುವರಿಯಾಗಿ ಖರ್ಚಾದ ಮೊತ್ತ ಪಾವತಿಸಲು ಬಾಕಿಯಿದ್ದು ಉಳಿಕೆ ಮೊತ್ತದಲ್ಲಿ ಪಾವತಿಸಲು ಬಾಕಿಯಿದ್ದು ಅದನ್ನು ಉಳಿಕೆ ಮೊತ್ತದಲ್ಲಿ ಭರಿಸಲಾಗುವುದು. ಹೀಗಾಗಿ ಯಾವುದೇ ಸಾಲ ಇಲ್ಲದೆ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಅದ್ದೂರಿಯಾಗಿ ನೆರವೇರಿಸಲಾಗಿದೆ ಎಂದರು.

ಮುಂದಿನ ಯೋಜನೆಗಳು:
ದೇವಸ್ಥಾನದಲ್ಲಿ ಅಡುಗೆ ಕೋಣೆ, ಅನ್ನಛತ್ರ ಹಾಗೂ ದೇವಸ್ಥಾನದ ಜಾಗಕ್ಕೆ ಸುತ್ತ ಆವರಣಗೋಡೆ ಸೇರಿದಂತೆ ಸುಮಾರು ರೂ.50ಲಕ್ಷದ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಬೂಡಿಯಾರ್ ರಾಧಾಕೃಷ್ಣ ರೈ ತಿಳಿಸಿದರು.

ಜೂ.13 ದೃಢಕಲಶ:
ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವಗಳು ನಡೆದು 48 ದಿನಗಳ ಬಳಿಕ ನಡೆಯುವ ದೃಢಕಲಶವು ಜೂ.13ರಂದು ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಎ.ಪಿ ಸತೀಶ್ ರಾವ್, ಸಂಚಾಲಕ ಸುಧಾಕರ ರಾವ್ ಆರ್ಯಾಪು, ಉಪಾಧ್ಯಕ್ಷರಾದ ಸದಾನಂದ ಶೆಟ್ಟಿ ಕೂರೇಲು, ಮಹಾಬಲ ರೈ ವಳತ್ತಡ್ಕ, ಕಾರ್ಯದರ್ಶಿ ಗಿರೀಶ್ ಕಿನ್ನಿಜಾಲು, ವೈದಿಕ ಸಮಿತಿ ಸಂಚಾಲಕ ಸಂದೀಪ ಕಾರಂತ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಗೌಡ ದೇವಸ್ಯ ಸ್ವಾಗತಿಸಿ, ಸಭಾ ಕಾರ್ಯಕ್ರಮ ಸಮಿತಿ ಸಂಚಾಲಕ ಸೀತಾರಾಮ ರೈ ಕೈಕಾರ ವಂದಿಸಿದರು.

LEAVE A REPLY

Please enter your comment!
Please enter your name here