ರಸ್ತೆಯಲ್ಲಿ ನಮಾಜ್ ಮಾಡಿರುವವರ ವಿರುದ್ದ ಕ್ರಮ ಕೈಗೊಳ್ಳಿ – ಭಾಗೀರಥಿ ಮುರುಳ್ಯ

0

ಕಡಬ: ಸಮಾಜದಲ್ಲಿ ಅಶಾಂತಿ ನಿರ್ಮಾಣ ಮಾಡುವ ಉದ್ದೇಶದಿಂದಲೇ ಯಾವುದೇ ಅನುಮತಿ ಪಡೆಯದೆ ರಸ್ತೆಯಲ್ಲಿ ನಮಾಜ್ ಮಾಡಿದ್ದಾರೆ, ಇವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸುಳ್ಯ ಶಾಸಕಿ ಬಾಗೀರಥಿ ಮುರುಳ್ಯ ಅವರು ಹೇಳಿದರು.

ಅವರು ಜೂ.3ರಂದು ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಯಾವುದೇ ಅನುಮತಿಯನ್ನು ಪಡೆಯದೆ ರಸ್ತೆಯಲ್ಲಿಯೇ ನಮಾಜ್ ಮಾಡಿ ರಸ್ತೆ ಬಂದ್ ಮಾಡಿದ್ದಾರೆ. ಈ ಬಗ್ಗೆ ಪೋಲಿಸರು ಸುಮೋಟೋ ಕೇಸು ದಾಖಲಿಸಿಕೊಂಡಿದ್ದರೂ ಅದನ್ನು ಹಿಂತೆಗೆಯುವ ಹುನ್ನಾರ ನಡೆದು ಕೇಸು ದಾಖಲಿಸಿದ ಠಾಣಾಧಿಕಾರಿಯವರನ್ನು ರಜೆಯ ಮೇಲೆ ಕಳಿಸುವ ಈ ಸರಕಾರದ ಬಗ್ಗೆ ಏನು ಹೇಳಬೇಕು. ಯಾರನ್ನೂ ಬೇಕಾದರೂ ಓಲೈಕೆ ಮಾಡಲಿ, ಆದರೆ ಬಹುಸಂಖ್ಯಾತ ಹಿಂದುಗಳಿಗೆ ರಕ್ಷಣೆ ನೀಡದ ಸರಕಾರದ ನಡೆಯನ್ನು ನಾವು ಖಂಡಿಸುತ್ತೇವೆ ಎಂದ ಶಾಸಕಿಯವರು ರಸ್ತೆಯಲ್ಲಿ ನಮಾಜ್ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳಲು ಆಗ್ರಹಿಸಿದ ಹಿಂದೂ ಸಂಘಟನೆಯ ಮುಖಂಡರ ವಿರುದ್ದ ಕೇಸು ದಾಖಲಿಸಿದ ಸರಕಾರದ ಕ್ರಮವನ್ನು ಖಂಡಿಸುತ್ತೇವೆ ಎಂದು ಅವರು ಹೇಳಿದರು.
ಮಾಜಿ ಜಿ.ಪಂ.ಸದಸ್ಯ ಕೃಷ್ಣ ಶೆಟ್ಟಿ ಕಡಬ ಮಾತನಾಡಿ, ಮಂಗಳೂರಿನಲ್ಲಿ ನಡೆದಿರುವಂತ ಘಟನೆ ಖಂಡನೀಯ, ರಸ್ತೆಯಲ್ಲಿಯೇ ನಮಾಜ್ ಮಾಡಿರುವುದು ಅಶಾಂತಿ ಸೃಷ್ಟಿಯ ಒಂದು ಭಾಗವಾಗಿದೆ, ಈ ಹಿಂದೆ ಗುಜರಾತಿನಲ್ಲಿ ಈ ರೀತಿ ಮಾಡಿ ಇಡೀ ರಾಜ್ಯದಲ್ಲಿ ಗಲಭೆ ನಡೆದಿದೆ. ರಸ್ತೆಯಲ್ಲಿ ನಮಾಜ್ ಮಾಡಿರುವುದನ್ನು ಖಂಡಿಸಿದ ಹಿಂದೂ ಮುಖಂಡ ಶರಣ್ ಪಂಪ್‌ವೆಲ್ ಅವರ ವಿರುದ್ದ ಕೇಸು ದಾಖಲಿಸಿ ಅವರನ್ನು ಬಂಧಿಸುವ ಪ್ರಯತ್ನ ನಡೆದಿದೆ ಇದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.

ಈ ಬಗ್ಗೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿಯವರು ಮಾತನಾಡಿ, ಆಡಳಿತ ವ್ಯವಸ್ಥೆಯೇ ನಗೆಪಾಟಾಳಿಗೆ ಈಡಾಗಿದೆ, ಭ್ರಷ್ಟಚಾರ ಮಾಡಿ ದೇಶದಲ್ಲಿಯೇ ಕರ್ನಾಟಕದ ಮಾನ ಹರಾಜು ಹಾಕಿದ್ದಾರೆ, ಈ ಹಿಂದೆ ಭಾಗ್ಯಗಳಿಗೆ ಹಣ ಹೊಂದಿಸಲು ಎಸ್.ಸಿ, ಎಸ್.ಟಿ. ನಿಗಮದ ಹಣವನ್ನೆ ಬಳಕೆ ಮಾಡಿದ್ದಾರೆ, ಇದೀಗ ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಚಾರ ನಡೆದರೂ ಸಚಿವರ ರಾಜಿನಾಮೆಯನ್ನು ಪಡೆದುಕೊಳ್ಳಲು ಇದುವರೆಗೆ ಸಾಧ್ಯವಾಗದ ದುರ್ಬಲ ಮುಖ್ಯಮಂತ್ರಿ ಎಂದ ಅವರು ರಸ್ತೆಯಲ್ಲಿ ನಮಾಜ್ ಮಾಡಿರುವವರ ಪರ, ಅದನ್ನು ವಿರೋಧಿಸುವವರ ವಿರುದ್ದ ಕೇಸು ದಾಖಲಿಸುವ ಕೆಲಸ ಮಾಡುತ್ತಿರುವ ಈ ಕಾಂಗ್ರೆಸ್ ಸರಕಾರದ ಇಬ್ಬಗೆ ನೀತಿಯನ್ನು ಖಂಡಿಸುತ್ತೇವೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ತಾ.ಪಂ. ಮಾಜಿ ಅಧ್ಯಕ್ಷೆ ಪುಲಸ್ತ್ಯ ರೈ, ಮಾಜಿ ತಾ.ಪಂ. ಉಪಾಧ್ಯಕ್ಷೆ ಜಯಂತಿ ಆರ್ ಗೌಡ, ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ, ಕೊಲ ಗ್ರಾ.ಪಂ. ಅಧ್ಯಕ್ಷೆ ಪುಷ್ಪಾ ಸುಭಾಶ್ ಶೆಟ್ಟಿರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here