ಮುದ್ಯ ಶ್ರೀ ಪಾರ್ವತಿ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಲುವಾಗಿ ಸಮಾಲೋಚನಾ ಸಭೆ

0

ನೆಲ್ಯಾಡಿ: ಬಜತ್ತೂರು ಗ್ರಾಮದ ಮುದ್ಯ ಪಾರಂತಿ ಕ್ಷೇತ್ರ ಶ್ರೀ ಪಾರ್ವತಿ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರದ ಸಲುವಾಗಿ ಭಕ್ತರ ಸಮಾಲೋಚನಾ ಸಭೆ ಮೇ.2ರಂದು ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.


ದೇವಸ್ಥಾನದ ಪ್ರಧಾನ ಅರ್ಚಕರಾದ ಕೃಷ್ಣಪ್ರಸಾದ್ ಉಡುಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, 2015-16ರಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಆಗಿ ಬ್ರಹ್ಮಕಲಶೋತ್ಸವ ನಡೆದಿದೆ. ಇದೀಗ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಂತೆ ಕೆಲವೊಂದು ಬದಲಾವಣೆಗಳು ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಭಕ್ತರ ಸಭೆ ಕರೆಯಲಾಗಿದ್ದು ಜೀರ್ಣೋದ್ದಾರ ಸಮಿತಿ ರಚಿಸಿಕೊಂಡು ಕೆಲಸ ಆರಂಭಿಸಲಾಗುವುದು. ಇದಕ್ಕೆ ಭಕ್ತರು ಸಹಕರಿಸಬೇಕೆಂದು ಹೇಳಿದರು.


ಸಭೆಯ ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ಆಡಳಿತಾಧಿಕಾರಿ, ಬಜತ್ತೂರು ಗ್ರಾಮ ಆಡಳಿತಾಧಿಕಾರಿಯೂ ಆದ ನರಿಯಪ್ಪ ಅವರು ಮಾತನಾಡಿ, ದೇವಸ್ಥಾನದ ಜೀರ್ಣೋದ್ದಾರದ ಮಹತ್ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕೆಂಬ ಉದ್ದೇಶದಿಂದ ಸಮಾಲೋಚನಾ ಸಭೆ ಕರೆಯಲಾಗಿದೆ. ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಂತೆ ವಾಸ್ತುಪ್ರಕಾರವಾಗಿ ಪ್ರತಿಷ್ಠೆ ನಡೆಯಬೇಕಿದೆ. ಇದಕ್ಕಾಗಿ ಜೀರ್ಣೋದ್ಧಾರ ಸಮಿತಿ ರಚಿಸಿಕೊಂಡು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಬೇಕಾಗಿದೆ. ಭಕ್ತರು ತನು ಮನ ಧನದ ಸಹಕಾರ ನೀಡಬೇಕು. ಶಾಸಕರ ಬಳಿಗೆ ನಿಯೋಗ ತೆರಳಿ ಸರಕಾರದಿಂದ ಸಿಗುವ ಸಹಾಯಧನ ಪಡೆಯಲು ಪ್ರಯತ್ನಿಸಲಾಗುವುದು ಎಂದು ಹೇಳಿದ ಅವರು, ಭಕ್ತರು ಪ್ರತಿ ಸೋಮವಾರ ದೇವಸ್ಥಾನದಲ್ಲಿ ನಡೆಯಲಿರುವ ಬೆಳಗ್ಗಿನ ಪೂಜೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಇದರಿಂದ ಮಾನಸಿಕ, ದೈಹಿಕವಾಗಿ ಆರೋಗ್ಯ ವೃದ್ಧಿಸುತ್ತದೆ. ಮನ: ಪರಿವರ್ತನೆಯೂ ಆಗಲಿದೆ ಎಂದರು.


ಅತಿಥಿಯಾಗಿದ್ದ ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮೊಕ್ತೇಸರರಾದ ಎಂ.ಬಿ.ಸದಾಶಿವ ಅವರು ಮಾತನಾಡಿ, ಊರಿಗೊಂದು ದೇವಸ್ಥಾನ ಮುಖ್ಯ. ದೇವಸ್ಥಾನದ ಪಾವಿತ್ರ್ಯತೆ ಕಾಪಾಡಿಕೊಳ್ಳುವುದು ಅತೀ ಮುಖ್ಯವಾಗಿದೆ. ದೇವಸ್ಥಾನದ ಜೀರ್ಣೋದ್ಧಾರ ಕೆಲಸಗಳು ಶಾಸ್ತ್ರೋಕ್ತವಾಗಿ ನಡೆಯಲಿ ಎಂದು ಹೇಳಿದರು. ಬಜತ್ತೂರು ಗ್ರಾ.ಪಂ.ಅಧ್ಯಕ್ಷ ಗಂಗಾಧರ ಗೌಡ ನೆಕ್ಕರಾಜೆ ಅವರು ಮಾತನಾಡಿ, ದೈವರಾಧನೆ, ದೇವತಾರಾಧನೆ ನಮ್ಮ ಸಂಸ್ಕೃತಿಯಾಗಿದೆ. ಜನರ ಭಾವನೆಗಳಿಗೆ ಘಾಸಿಯಾಗುವಂತಹ ಕೆಲಸ ಆಗಬಾರದು. ದೇವಸ್ಥಾನದ ಜೀರ್ಣೋದ್ಧಾರ ಕೆಲಸಗಳಿಗೆ ಸಹಕಾರ ನೀಡುವುದಾಗಿ ಹೇಳಿದರು. ಅರಿಕೆಗುಡ್ಡೆ ಶ್ರೀ ವನದುರ್ಗಾ ದೇವಸ್ಥಾನದ ಅಧ್ಯಕ್ಷ ಪ್ರಕಾಶ್ ತೋಟಂತಿಲ ಅವರು ಮಾತನಾಡಿ, ದೇವಸ್ಥಾನದ ಜೀರ್ಣೋದ್ದಾರ, ಬ್ರಹ್ಮಕಲಶದಿಂದ ಊರಿಗೆ ಸುಭಿಕ್ಷೆಯಾಗಲಿದೆ. ಶ್ರಮದಾನದಿಂದ ದೇವಸ್ಥಾನದ ಮೇಲೆ ಅಭಿಮಾನ ಬರಲಿದೆ. ಮಕ್ಕಳನ್ನು ಇದರಲ್ಲಿ ತೊಡಗಿಸಿಕೊಳ್ಳಬೇಕೆಂದು ಹೇಳಿದರು. ದಾಮೋದರ ಗೌಡ ಶೇಡಿಗುತ್ತು ಅವರು ಸಂದರ್ಭೋಚಿತವಾಗಿ ಮಾತನಾಡಿದರು.


ಸಂತೋಷ್‌ಕುಮಾರ್ ಜೈನ್ ಬಾರಿಕೆ, ಮನೋಹರ ಮುಗೇರಡ್ಕ, ಚಂದ್ರಹಾಸ ಮುಗೇರಡ್ಕ, ಶ್ರೀ ಕ್ಷೇ.ಧ.ಗ್ರಾಮಾಭಿವೃದ್ಧಿ ಯೋಜನೆ ಉಪ್ಪಿನಂಗಡಿ ವಲಯ ಮೇಲ್ವಿಚಾರಕ ಶಿವಪ್ಪ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಗೋಪಾಲ ಗೌಡ ದಡ್ಡು, ಭಜನಾ ಮಂಡಳಿ ಅಧ್ಯಕ್ಷ ನಾರಾಯಣ ನೀರಕಟ್ಟೆ, ಶಿವರಾತ್ರಿ ಉತ್ಸವ ಸಮಿತಿ ಅಧ್ಯಕ್ಷ ಜತ್ತಪ್ಪ ಗೌಡ ಪುಯಿಲ, ಮಹಿಳಾ ಭಜನಾ ಮಂಡಳಿ ಅಧ್ಯಕ್ಷೆ ವಸಂತಿ, ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷೆ ಸಾವಿತ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಹೇಂದ್ರ ಪಡ್ಪು ಸ್ವಾಗತಿಸಿದರು. ಗ್ರಾ.ಪಂ.ಸದಸ್ಯ ಉಮೇಶ್ ಓಡ್ರಪಾಲು ವಂದಿಸಿದರು. ಜಗದೀಶ್ ಬಾರಿಕೆ ಕಾರ್ಯಕ್ರಮ ನಿರೂಪಿಸಿದರು. ಸೇಸಪ್ಪ ಉಪಾತಿಪಾಲು ಪ್ರಾರ್ಥಿಸಿದರು. ಸಭೆಯಲ್ಲಿ ಸುಮಾರು 200ಕ್ಕೂ ಹೆಚ್ಚು ಗ್ರಾಮಸ್ಥರು ಪಾಲ್ಗೊಂಡಿದ್ದರು.

ಜೀರ್ಣೋದ್ದಾರ ಸಮಿತಿ ರಚನೆ:
ಸಭೆಯಲ್ಲಿ ಜೀರ್ಣೋದ್ದಾರ ಸಮಿತಿ ರಚಿಸಲಾಯಿತು. ಡಾ|ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಅವರ ಅನುಮತಿ ಪಡೆದು ಸಮಿತಿಯ ಗೌರವಾಧ್ಯಕ್ಷರನ್ನಾಗಿ ನೇಮಕ ಮಾಡಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಗೌರವ ಸಲಹೆಗಾರರಾಗಿ ಎಂ.ಬಿ.ಸದಾಶಿವ, ಪ್ರಕಾಶ್ ತೋಟಂತಿಲ ಅವರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ವೇಣುಗೋಪಾಲ ನಾಯಕ್ ಕುಳ್ಳಾಜೆ, ಸಂಚಾಲಕರಾಗಿ ಜಯರಾಮ ನೆಲ್ಲಿತ್ತಾಯ ಶಿಶಿಲ, ಉಪಾಧ್ಯಕ್ಷರಾಗಿ ಸಂತೋಷ್‌ಕುಮಾರ್ ಜೈನ್ ಬಾರಿಕೆ, ದಾಮೋದರ ಗೌಡ ಶೇಡಿಗುತ್ತು, ಮನೋಹರ ಅಂತರ, ಪ್ರಧಾನ ಕಾರ್ಯದರ್ಶಿಯಾಗಿ ವಸಂತಿ ಬೆದ್ರೋಡಿ, ಜೊತೆ ಕಾರ್ಯದರ್ಶಿಯಾಗಿ ಬೇಬಿ ಬಾರಿಕೆ, ಶ್ರೀಧರ ಬರಮೇಲು ಕಾಂಚನ, ಕೋಶಾಧಿಕಾರಿಯಾಗಿ ನರಿಯಪ್ಪ ಅವರನ್ನು ಆಯ್ಕೆ ಮಾಡಲಾಯಿತು. ಆಯಾ ಬೈಲುಗಳಲ್ಲಿ ಸಭೆ ನಡೆಸಿ ಬೈಲುವಾರು ಸಮಿತಿ ರಚಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.

LEAVE A REPLY

Please enter your comment!
Please enter your name here