ಶ್ರೀ ರಾಮಕುಂಜೇಶ್ವರ ವಿದ್ಯಾಲಯ ’ಸಿಬಿಎಸ್‌ಇ’ ಉದ್ಘಾಟನೆ

0

ಅಧ್ಯಯನಕ್ಕೆ ಹೊರದೇಶದ ವಿದ್ಯಾರ್ಥಿಗಳೂ ರಾಮಕುಂಜಕ್ಕೆ ಬರುವಂತಾಗಲಿ: ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ರಾಮಕುಂಜ: ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಅಧೀನ ಸಂಸ್ಥೆ ಉಡುಪಿ ಪೇಜಾವರ ಮಠಾಧೀಶರಾಗಿದ್ದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಹುಟ್ಟೂರು ರಾಮಕುಂಜದಲ್ಲಿ ನೂತನವಾಗಿ ಪ್ರಾರಂಭಿಸುತ್ತಿರುವ ಶ್ರೀ ರಾಮಕುಂಜೇಶ್ವರ ವಿದ್ಯಾಲಯ ’ಸಿಬಿಎಸ್‌ಇ’ಶಾಲೆ ಜೂ.3ರಂದು ಬೆಳಿಗ್ಗೆ ಉದ್ಘಾಟನೆಗೊಂಡಿತು.


ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ದೀಪ ಬೆಳಗಿಸಿ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು. ಬಳಿಕ ನಡೆದ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಗುರುಗಳಾಗಿದ್ದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹುಟ್ಟು ಹಾಕಿರುವ ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆ ದಾಪುಗಾಲಲ್ಲಿ ಬೆಳೆಯುತ್ತಿದೆ. ಶ್ರೀ ವಿಶ್ವೇಶತೀರ್ಥರು ನೋಡಲು ವಾಮನ ಮೂರ್ತಿಯಾಗಿದ್ದರೂ ಅವರು ಬೆಳೆದದ್ದು ತ್ರಿವಿಕ್ರಮನಂತೆ. ಅದೇ ರೀತಿ ಅವರು ಹುಟ್ಟುಹಾಕಿರುವ ಇಲ್ಲಿನ ವಿದ್ಯಾಸಂಸ್ಥೆಯೂ ಸಮಾಜದ ನಾಗರಿಕರ ಅವಶ್ಯಕತೆಗೆ ಅನುಗುಣವಾಗಿ ಬೃಹತ್ ಆಗಿ ಬೆಳೆಯುತ್ತಿರುವುದು ಸಂತಸ ತಂದಿದೆ ಎಂದರು.

ಯಾವುದೇ ಸಂಸ್ಥೆಯನ್ನು ಹುಟ್ಟುಹಾಕುವುದು ದೊಡ್ಡದಲ್ಲ. ಸಮರ್ಥವಾಗಿ ಮುನ್ನಡೆಸುವ ಆಡಳಿತ ಮಂಡಳಿ ಇದ್ದಲ್ಲಿ ಮಾತ್ರ ಸಂಸ್ಥೆ ಬೆಳವಣಿಗೆ ಕಾಣುತ್ತದೆ. ಗುರುಗಳ ಆದೇಶವನ್ನು ಪಾಲಿಸಿಕೊಂಡು ಇಲ್ಲಿನ ಆಡಳಿತ ಮಂಡಳಿ ಮುಂದುವರಿದಿದೆ. ಸಂಸ್ಥೆ, ಸಂಘಟನೆ ಎಷ್ಟೂ ಬೇಕಾದರೂ ಬೆಳೆಯಬಹುದು. 1919ರಲ್ಲಿ ಇಲ್ಲಿ ಆರಂಭಗೊಂಡ ಸಂಸ್ಕೃತ ಶಾಲೆ ಬೇಡಿಕೆಗೆ ಅನುಗುಣವಾಗಿ ಕನ್ನಡ ಶಾಲೆಯಾಗಿ ಪರಿವರ್ತನೆಗೊಂಡಿತು. ಪ್ರೌಢಶಾಲೆ, ಪ.ಪೂ.ಕಾಲೇಜು, ಪದವಿ ಕಾಲೇಜು ಆರಂಭಗೊಂಡಿತು. ಬಳಿಕ ರಾಜ್ಯ ಪಠ್ಯಕ್ರಮದಲ್ಲಿ ಆಂಗ್ಲಮಾಧ್ಯಮ ಶಾಲೆಯೂ ಹುಟ್ಟುಕೊಂಡಿತು. ಇದೀಗ ಕೇಂದ್ರ ಪಠ್ಯಕ್ರಮದ ಇನ್ನೊಂದು ಸಂಸ್ಥೆ ಹುಟ್ಟಿದೆ. ಈಗ ಈ ವಿದ್ಯಾಸಂಸ್ಥೆ ರಾಮಕುಂಜಕ್ಕೆ ಸೀಮಿತವಾಗಿಲ್ಲ. ರಾಜ್ಯ, ಹೊರ ರಾಜ್ಯದ ವ್ಯಾಪ್ತಿಗೂ ಬೆಳೆಯುತ್ತಿದೆ. ಮುಂದೆ ಸಂಸ್ಕೃತ ಅಧ್ಯಯನಕ್ಕೆ ಹೊರ ದೇಶದ ವಿದ್ಯಾರ್ಥಿಗಳೂ ರಾಮಕುಂಜಕ್ಕೆ ಬರುವಂತಾಗಲಿ ಎಂದು ಹೇಳಿದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಹಿರಿಯ ವಿದ್ಯಾರ್ಥಿಗಳ ಸಾಧನೆ ಕಿರಿಯ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಲಿ ಎಂದು ಹೇಳಿದರು.


ಮುಖ್ಯ ಅತಿಥಿಯಾಗಿದ್ದ ಪುತ್ತೂರು ಜಿ.ಎಲ್.ಆಚಾರ್ಯ ಜ್ಯುವೆಲ್ಲರ‍್ಸ್‌ನ ಮಾಲಕ ಬಲರಾಮ ಆಚಾರ್ಯ ಅವರು ಮಾತನಾಡಿ, ಈ ದಿನ ರಾಮಕುಂಜದ ಚರಿತ್ರೆಯಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನವಾಗಿದೆ. ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾವೂ ರಾಮಕುಂಜದಲ್ಲಿ ಶಿಕ್ಷಣ ಕ್ರಾಂತಿಯನ್ನೇ ಮಾಡಿದೆ. ಹಿಂದೆ ಹಳ್ಳಿ ಹಾಗೂ ನಗರ ಪ್ರದೇಶಗಳ ನಡುವಿನ ವಿದ್ಯಾಭ್ಯಾಸದಲ್ಲಿ ದೊಡ್ಡ ಕಂದಕವೇ ಇತ್ತು. ಇದು ಕಾಲಕ್ರಮೇಣ ಬದಲಾಗಿದೆ. ಮುಂದೆ ರಾಮಕುಂಜದಲ್ಲಿ ಪಾಲಿಟೆಕ್ನಿಕ್, ವೈದ್ಯಕೀಯ ಸೇರಿದಂತೆ ಉದ್ಯೋಗ ಸೃಷ್ಟಿಸುವಂತಹ ಶಿಕ್ಷಣ ಸಂಸ್ಥೆಗಳು ಆರಂಭಗೊಳ್ಳಲಿ. ಇದಕ್ಕೆ ಸ್ವಾಮೀಜಿಯವರ ಪ್ರೇರಣೆಯೂ ಸಿಗಲಿ ಎಂದರು.


ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸಂಚಾಲಕ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಟಿ.ನಾರಾಯಣ ಭಟ್ ಅವರು ಮಾತನಾಡಿ, ರಾಮಕುಂಜ ಗ್ರಾಮ ಇತಿಹಾಸ, ಪುರಾಣದಲ್ಲಿ ಪ್ರಸಿದ್ಧಿ ಪಡೆದುಕೊಂಡಿದೆ. 1919ರಲ್ಲಿ ಇಲ್ಲಿ ಆರಂಭಗೊಂಡ ಸಂಸ್ಕೃತ ಪಾಠಶಾಲೆ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ಗೋಪುರದಲ್ಲಿ 40 ವರ್ಷ ನಡೆದಿದೆ. ಪರಿಸರದ ಮುಸ್ಲಿಂ ಬಾಂಧವರೂ ಇಲ್ಲಿ ಬಂದು ವ್ಯಾಸಂಗ ಮಾಡಿರುವುದು ದಾಖಲೆಗಳಲ್ಲಿ ಇದೆ. ಜನರ ಬೇಡಿಕೆಯಂತೆ ಸಂಸ್ಕೃತ ಪಾಠಶಾಲೆ ಮುಂದೆ ಕನ್ನಡ ಮಾಧ್ಯಮ ಶಾಲೆಯಾಗಿ ಪರಿವರ್ತನೆಗೊಂಡು ದೊಡ್ಡದಾಗಿ ಬೆಳೆದಿದೆ. ಇದೀಗ ಸಮಾಜದ ಆಶಯದಂತೆ ಸಿಬಿಎಸ್‌ಇ ಶಾಲೆ ಆರಂಭಗೊಂಡಿದೆ. 2007ರಲ್ಲಿ ರಾಮಕುಂಜದಲ್ಲಿ ನಡೆದ ಶ್ರೀ ವಿಶ್ವೇಶತೀರ್ಥರ ಪೀಠಾರೋಹಣದ ಅಮೃತ ಮಹೋತ್ಸವದ ಸವಿನೆನಪಿಗಾಗಿ ಆರಂಭಗೊಂಡ ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ಕಟ್ಟಡದಲ್ಲಿ ಶ್ರೀ ರಾಮಕುಂಜೇಶ್ವರ ವಿದ್ಯಾಲಯ ಸಿಬಿಎಸ್‌ಇ ಶಾಲೆ ನಡೆಯಲಿದೆ ಎಂದು ಹೇಳಿದರು.


ಸ್ವಾಗತಿಸಿ ಮಾತನಾಡಿದ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲಾ ಕಾರ್ಯದರ್ಶಿ ಕೆ.ಸೇಸಪ್ಪ ರೈ ಅವರು, ಶ್ರೀ ವಿಶ್ವೇಶತೀರ್ಥರು ಹುಟ್ಟಿ ಬೆಳೆದ ರಾಮಕುಂಜ ಮುಂದೆ ಪುಣ್ಯಕ್ಷೇತ್ರವಾಗಿ ಪರಿವರ್ತನೆಯಾಗಲಿದೆ ಎಂಬ ಧ್ಯೇಯವಿಟ್ಟುಕೊಂಡು ಕೆಲಸ ಮಾಡಲಾಗುತ್ತಿದೆ. 2002ರಲ್ಲಿ ಆರಂಭಗೊಂಡ ಆಂಗ್ಲಮಾಧ್ಯಮ ಶಾಲೆಯಲ್ಲಿ ಈಗ 1100 ಮಕ್ಕಳು ಕಲಿಯುತ್ತಿದ್ದಾರೆ. ಹಳ್ಳಿಯ ಮಕ್ಕಳಿಗೂ ಆಂಗ್ಲಮಾಧ್ಯಮದಲ್ಲಿ ಶಿಕ್ಷಣ ಲಭಿಸುತ್ತಿದೆ. ಕೇಂದ್ರ ಪಠ್ಯಕ್ರಮದ ಶಿಕ್ಷಣ ಸಂಸ್ಥೆಯ ಅವಶ್ಯಕತೆ ಮನಗಂಡು ಸಿಬಿಎಸ್‌ಇ ಶಾಲೆ ಆರಂಭಿಸಲಾಗಿದೆ. ಊರಿನ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಇಲ್ಲಿ ನುರಿತ ಶಿಕ್ಷಕರ ತಂಡವಿದ್ದು ನೂತನ ತಂತ್ರಜ್ಞಾನ ಉಪಯೋಗಿಸಿಕೊಂಡು ತರಗತಿಗಳು ನಡೆಯಲಿದೆ. ರಾಜ್ಯದಲ್ಲೇ ಅತ್ಯುತ್ತಮ ಶಾಲೆಯಾಗಿ ಪರಿವರ್ತನೆಯಾಗಲಿದೆ ಎಂದರು.


ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಸುಚೇತಾ, ಕಾರ್ಯದರ್ಶಿ ಲಲಿತಾ, ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ಕೆ.ಎಸ್.ರಾಧಾಕೃಷ್ಣ, ಸದಸ್ಯರಾದ ಮಾಧವ ಆಚಾರ್ ಇಜ್ಜಾವು, ಸತೀಶ್ ಭಟ್, ಬಾಲಚಂದ್ರ ಮುಚ್ಚಿಂತಾಯ, ಹರಿನಾರಾಯಣ ಆಚಾರ್, ಲಿಂಗಪ್ಪ ಗೌಡ ಕಡೆಂಬ್ಯಾಲ್, ಶಿವಪ್ರಸಾದ್ ಇಜ್ಜಾವು, ಮಾರ್ಗದರ್ಶಕರಾದ ವಿಕ್ರಮ್, ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲ ಗಣರಾಜ್ ಕುಂಬ್ಳೆ, ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಕೆ., ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲಾ ಮುಖ್ಯಶಿಕ್ಷಕಿ ಗಾಯತ್ರಿ ಯು.ಎನ್., ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಲೋಹಿತ, ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಉಮೇಶ್ ಸಾಯಿರಾಂ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ಸಿಆರ್‌ಪಿ ಮಹೇಶ್, ಶಾಲಾ ಪೋಷಕರು,ವಿದ್ಯಾರ್ಥಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಶ್ರೀ ರಾಮಕುಂಜೇಶ್ವರ ವಿದ್ಯಾಲಯದ ಪ್ರಾಂಶುಪಾಲ ಪ್ರವೀದ್ ಪಿ.ವಂದಿಸಿದರು. ಶಿಕ್ಷಕಿಯರಾದ ಪ್ರತೀಕ್ಷಾ ಆಳ್ವ, ಪಾರ್ವತಿ ಜಿ.ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶ್ರೀಲಕ್ಷ್ಮೀ ಪ್ರಾರ್ಥಿಸಿದರು.

ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ:
2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ 500ಕ್ಕಿಂತ ಹೆಚ್ಚು ಅಂಕ ಪಡೆದುಕೊಂಡ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳನ್ನು ಸ್ವಾಮೀಜಿ ಗೌರವಿಸಿದರು. ಶಿಕ್ಷಕ ರಾಧಾಕೃಷ್ಣ ಅವರು ವಿದ್ಯಾರ್ಥಿಗಳ ಹೆಸರು ವಾಚಿಸಿದರು. ಪದವಿ ಕಾಲೇಜಿನ ಸಾಧಕ ವಿದ್ಯಾರ್ಥಿಗಳನ್ನೂ ಈ ಸಂದರ್ಭದಲ್ಲಿ ಸ್ವಾಮೀಜಿ ಗೌರವಿಸಿದರು. ಉಪನ್ಯಾಸಕಿ ಸವಿತಾ ವಿದ್ಯಾರ್ಥಿಗಳ ಹೆಸರು ವಾಚಿಸಿದರು. ಶ್ರೀ ರಾಮಕುಂಜೇಶ್ವರ ವಿದ್ಯಾಲಯದ ಲೋಗೋ ರಚಿಸಿದ ಶಶಿಧರ ಗೌಡ ಅವರನ್ನು ಸ್ವಾಮೀಜಿ ಗೌರವಿಸಿದರು.

LEAVE A REPLY

Please enter your comment!
Please enter your name here