ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂಬ್ರದಿಂದ 1 ಕಿ ಮೀ ದೂರದಲ್ಲಿ ಶೇಖಮಲೆ ಎಂಬಲ್ಲಿ ರಸ್ತೆ ಬದಿಯಲ್ಲಿ ಅಪಾಯಕಾರಿ ಮರವೊಂದಿದ್ದು ಇದರ ತೆರವಿಗೆ ಸ್ಥಳೀಯರು ಆಗ್ರಹಿಸಿದ್ದಾರೆ. ಬಹಳ ವರ್ಷಗಳ ಹಳೇಯ ಹಾಲೆ ಮರ ಇದಾಗಿದ್ದು ಬೀಳುವ ಸ್ಥಿತಿಯಲ್ಲಿದೆ. ಮರದ ಬುಡ ಭಾಗ ಟೊಳ್ಳು ಬಿದ್ದಿದ್ದು ಬಲವಾದ ಗಾಳಿ ಬೀಸಿದರೆ ಮರ ಮುರಿದು ಬೀಳುವ ಅಪಾಯವಿದೆ. ಈಗಾಗಲೇ ಈ ಮರವನ್ನು ತೆರವುಗೊಳಿಸುವಂತೆ ಸ್ಥಳೀಯರು ಗ್ರಾಪಂಗೆ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆಯವರು ಬಂದು ಮರವನ್ನು ಪರಿಶೀಲನೆ ಮಾಡಿದ್ದಾರೆ ಆದರೆ ಮರ ತೆರವುಗೊಳಿಸಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಹತ್ತಿರದಲ್ಲೇ ಸರ್ಕಾರಿ ಶಾಲೆ ಇದೆ ಅಲ್ಲದೆ ಮರದ ಸಮೀಪವೇ ಹೈ ಟೆಕ್ಷನ್ ವಿದ್ಯುತ್ ತಂತಿ ಕೂಡ ಹಾದು ಹೋಗಿದೆ. ಒಂದು ವೇಳೆ ಮರ ಮುರಿದು ಬಿದ್ದರೆ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿದೆ.
ಅಪಾಯ ಸಂಭವಿಸುವ ಮುನ್ನ ಅರಣ್ಯ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ಏಕೆಂದರೆ ಮರ ಇಂದಲ್ಲ ನಾಳೆ ಬೀಳುವ ಸ್ಥಿತಿಯಲ್ಲಿದೆ. ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ವಾಹನಗಳ ಸಂಚಾರ ಕೂಡ ಜಾಸ್ತಿ ಆಗಿರುತ್ತದೆ.ಮರ ಮುರಿದು ವಾಹನಗಳ ಮೇಲೆ ಬಿದ್ದರೆ ಪ್ರಾಣ ಹಾನಿ ಸಂಭವಿಸುವ ಸಾಧ್ಯತೆಯೂ ಇದೆ. ಆದ್ದರಿಂದ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.