ಕಾವು ಸರಕಾರಿ ಶಾಲೆ ಕೆಪಿಎಸ್ ಶಾಲೆಗಳಿಗೆ ಮಾದರಿಯಾಗಿದೆ: ಶಾಸಕ ಅಶೋಕ್ ರೈ
ಪುತ್ತೂರು: ಒಂದು ಸರಕಾರಿ ಶಾಲೆ ಹೇಗಿರಬೆಕೆಂಬುದಕ್ಕೆ ಕಾವು ಸರಕಾರಿ ಹಿ ಪ್ರಾ ಶಾಲೆಯೇ ಉದಾಹರಣೆಯಾಗಿದೆ, ಸರಕಾರ ಕೆಪಿಎಸ್ ಸ್ಕೂಲ್‌ಗೆ ಕಾವು ಶಾಲೆಯನ್ನೇ ಮಾದರಿಯನ್ನಾಗಿ ಪರಿಗಣಿಸಬಹುದಾಗಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ಕಾವು ಸರಕಾರಿ ಉ ಹಿ ಪ್ರಾ ಶಾಲೆಯಲ್ಲಿ ನಿವೃತ್ತಿ ಹೊಂದಿದ ಶಿಕ್ಷಕ ಭಾಸ್ಕರ ಗೌಡ ನರಿಯೂರು ಅವರ ವಿದಾಯ ಸಮಾರಂಭದಲ್ಲಿ ಸನ್ಮಾನಿಸಿ ಮಾತನಾಡಿದರು.
ಹಾರಾಡಿ ಬಳಿಕ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಈ ಶಾಲೆಯಲ್ಲಿ ಶಿಸ್ತು ಬದ್ದ ಶಿಕ್ಷಣ ದೊರೆಯುತ್ತಿರುವುದು ಅಭಿನಂದನಾರ್ಹವಾಗಿದೆ, ಕೆಪಿಎಸ್ ಸ್ಕೂಲ್‌ಗಳಲ್ಲಿ ಆಂಗ್ಲ ಮಾಧ್ಯಮ ಎಲ್‌ಕೆಜಿ ಯುಕೆಜಿ ತರಗತಿ ಪ್ರಾರಂಭವಾಗುವ ಮುನ್ನವೇ ಕಾವು ಶಾಲೆಯಲ್ಲಿ ಆಂಗ್ಲ ಮಾಧ್ಯಮವನ್ನು ಆರಂಭಿಸಲಾಗಿತ್ತು. ಬಡವರ ಮಕ್ಕಳೂ ಇಂಗ್ಲೀಷ್ ಕಲಿಯಬೇಕು, ಇಂಗ್ಲೀಷ್ ಮಾತನಾಡಬೇಕು ಎಂಬ ಉದ್ದೇಶವೂ ಇದರ ಹಿಂದೆ ಇದೆ. ಸುತ್ತ ಮುತ್ತ ಖಾಸಗಿ ಶಾಲೆಗಳಿದ್ದರೂ, ಖಾಸಗಿ ಶಾಲೆಗಳ ಬಸ್ಸುಗಳು ಈ ಭಾಗದ ಮನೆಯಂಗಳಕ್ಕೆ ಬರುತ್ತಿದ್ದರೂ ಪೋಷಕರು ಸರಕಾರಿ ಶಾಲೆಗೆ ಮಕ್ಕಳನ್ನು ಸೇರಿಸಬೇಕಾದರೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು ಆ ಶಿಕ್ಷಣ ಸರಕಾರಿ ಶಾಲೆಯಲ್ಲಿ ದೊರೆಯುತ್ತಿರುವುದೇ ಇಲ್ಲಿ ಮಕ್ಕಳ ಸಂಖ್ಯೆ ಹೆಚ್ಚಳವಾಗಲು ಕಾರಣವಾಗಿದೆ ಎಂದು ಹೇಳಿದರು. ಈ ಶಾಲೆಯನ್ನು ದತ್ತು ಪಡೆದುಕೊಂಡಿರುವ ಕಾವು ಹೇಮನಾಥ ಶೆಟ್ಟಿಯವರ ಮುತುವರ್ಜಿಯಿಂದ ಇಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳು ನಡೆದಿದೆ ಎಂದು ಹೇಳಿದರು.
ಕೆಪಿಎಸ್ ಸ್ಕೂಲ್ ಮತ್ತು ಪ್ರೌಢ ಶಾಲೆ ಬೇಡಿಕೆ
ಕಾವಿನಲ್ಲಿ ಈಗ ಎಂಟನೇ ತರಗತಿಯ ತನಕ ತರಗತಿಗಳು ನಡೆಯುತ್ತಿದೆ, ಮುಂದೆ ಇದನ್ನು ಪ್ರೌಢ ಶಾಲೆಯನ್ನಾಗಿ ಪರಿವರ್ತಿಸಬೇಕು ಮತ್ತು ಕೆಪಿಎಸ್ ಸ್ಕೂಲ್ ಆಗಿ ಮಾಡಬೇಕು ಎಂದು ಶಾಲಾ ಅಭಿವೃದ್ದಿ ಸಮಿತಿಯವರ ಮೂಲಕ ಕಾವು ಹೇಮನಾಥ ಶೆಟ್ಟಿಯವರು ಶಾಸಕರಿಗೆ ಮನವಿ ಸಲ್ಲಿಸಿದರು. ಮನವಿಗೆ ಪೂರಕವಾಗಿ ಸ್ಪಂದಿಸಿದ ಶಾಸಕರು ಮೊದಲ ಆಧ್ಯತೆಯಲ್ಲೇ ನಿಮ್ಮ ಬೇಡಿಕೆಯನ್ನು ಈಡೇರಿಸಲಾಗುವುದು ಎಂದು ಹೇಳಿದರು.
ಭಾಸ್ಕರ ಗೌಡ್ರು ಸಾಮಾನ್ಯರಲ್ಲ
ನಿವೃತ್ತಿ ಹೊಂದಿ ಇಂದು ಗ್ರಾಮಸ್ಥರಿಂದ ಸನ್ಮಾನಗೊಂಡ ಶಿಕ್ಷಕ ಭಾಸ್ಕರ ಗೌಡರು ಸಾಮಾನ್ಯರಲ್ಲ , ಒಂದೇ ಶಾಲೆಯಲ್ಲಿ 26 ವರ್ಷಗಳ ಕಾಲ ಸೇವೆ ಸಲ್ಲಿಸಲು ಪೋಷಕರ ಪ್ರೀತಿಯೂ ಬೇಕಾಗುತ್ತದೆ. ಒಂದೇ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಮಾಡಿದ ಇವರು ಸಾಮಾನ್ಯ ವ್ಯಕ್ತಿಯಲ್ಲ ಎಂದು ಶಾಸಕರು ಹೇಳಿದರು. ನಿವೃತ್ತಿ ಹೊಂದಿದ ಬಳಿಕವೂ ಶಾಲೆಯ ಜೊತೆ ನಿಕಟ ಸಂಪರ್ಕ ಇಟ್ಟುಕೊಳ್ಳುವಂತೆ ಶಿಕ್ಷಕರಲ್ಲಿ ಮನವಿ ಮಾಡಿದರು.
480 ಮಕ್ಕಳಿದ್ದಾರೆ, ಎ ಸಿ ಕೊಠಡಿ, ಬಸ್ ಸೌಕರ್ಯವೂ ಇದೆ: ಕಾವು ಹೇಮನಾಥ ಶೆಟ್ಟಿ
ಕಾವು ಶಾಲೆಯಲ್ಲಿ ಪ್ರಸ್ತುತ 480 ಮಕ್ಕಳಿದ್ದಾರೆ. ಎಲ್ ಕೆ ಜಿ ಯುಕೆಜಿ ತರಗತಿಗಳಿಗೆ ಎ ಸಿ ಅಳವಡಿಸಲಾಗಿದೆ, ಎಲ್ಲಾ ಕಠಡಿಗಳಿಗೂ ಫ್ಯಾನ್ ಇದೆ, ಮೈಕ್ ವ್ಯವಸ್ಥೆ ಇದೆ, ಮನೆಯಿಂದ ಶಾಲೆಗೆ ಬರಲು ಬಸ್ ಸೌಕರ್ಯವೂ ಇದೆ, ಒಂದು ಖಾಸಗಿ ಶಾಲೆಯಲ್ಲಿ ಏನೆಲ್ಲಾ ವ್ಯವಸ್ಥೆಗಳು ಕಲಿಕೆಗೆ ಇದೆಯೋ ಅದೆಲ್ಲವೂ ಇಲ್ಲಿದೆ ಎಂದು ಶಾಲೆಯನ್ನು ದತ್ತುಪಡೆದುಕೊಂಡಿರುವ ಕಾವು ಹೇಮನಾಥ ಶೆಟ್ಟಿಯವರು ಹೇಳಿದರು.
ಇಲ್ಲಿ ಅತ್ಯುತ್ತಮ ಶಿಕ್ಷಕರ ತಂಡವೇ ಇದೆ, ಗುಣಮಟ್ಟದ ಶಿಕ್ಷಣ ಕೊಡಬೆಕೆಂಬ ಏಕೈಕ ಉದ್ದೇಶದಿಂದ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಕಾವು ಮಾತ್ರವಲ್ಲದೆ ಅಕ್ಕಪಕ್ಕದ ಗ್ರಾಮಗಳಿಂದಲೂ ಇಲ್ಲಿಗೆ ಮಕ್ಕಳನ್ನು ತಂದು ದಾಖಲಿಸುತ್ತಿರುವುದು ನಮಗೆ ಹೆಮ್ಮೆ ತಂದಿದೆ ಎಂದು ಹೇಳಿದರು. ಇಂದು ನಿವೃತ್ತಗೊಳ್ಳುತ್ತಿರುವ ಶಿಕ್ಷಕ ಭಾಸ್ಕರ ಗೌಡರು ಶಾಲೆಯ ಅಭಿವೃದ್ದಿಗೆ ಸಾಕಷ್ಟು ಸೇವೆಯನ್ನು ಸಲ್ಲಿಸಿದ್ದಾರೆ. ಇವರಂಥ ಶಿಕ್ಷಕರು ಒಂದು ಶಾಲೆಯಲ್ಲಿ ಒಬ್ಬರು ಇದ್ದರೆ ಸಾಕಾಗುತ್ತದೆ ಅಷ್ಟೊಂದು ಪ್ರೀತಿಯನ್ನು ಶಾಲೆಯ ಮೇಲೆ ಇಟ್ಟುಕೊಂಡಿದ್ದರು. ನಿವೃತ್ತರಾಗಿ ತೆರಳಿದರೂ ನಮ್ಮ ಜೊತೆ ಸದಾ ಇರುತ್ತಾರೆ ಎಂದು ಹೇಳಿದರು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಕೊಠಡಿಗಳ ಕೊರತೆ ಇದೆ ಈ ಬಗ್ಗೆ ಶಾಸಕರಲ್ಲಿ ತಿಳಿಸಲಾಗಿದೆ, ಕೊಠಡಿಗಳನ್ನು ನೀಡುವ ಭರವಸೆ ನೀಡಿದ್ದಾರೆ ಅದನ್ನು ಕೊಟ್ಟೇ ಕೊಡುತ್ತಾರೆ ಎಂಬ ಪೂರ್ಣ ನಂಬಿಕೆ ನಮಗಿದೆ ಎಂದು ಹೇಳಿದರು.
ಮೈಸೂರಿನ ಗುರುದೇವ ಲಲಿತಕಲಾ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕರಾದ ಪಿ ಎಂ ರಾಧಾಕೃಷ್ಣ ಮೂರ್ಜೆಯವರಿ ಅಭಿನಂದನಾ ಮಾತುಗಳನ್ನಾಡಿದರು.ಶಾಲಾ ಎಸ್‌ಡಿಎಂಸಿ, ಹಳೆ ವಿದ್ಯಾರ್ಥಿಗಳು, ಅಕ್ಷರದಾಸೋಹ ಸಿಬಂದಿಗಳು, ಪೋಷಕರು ಹಾಗೂ ವಿದ್ಯಾರ್ಥಿಗಳಿಂದ ನಿವೃತ್ತ ಶಿಕ್ಷಕರಿಗೆ ಸನ್ಮಾನ ನಡೆಯಿತು.
ವೇದಿಕೆಯಲ್ಲಿ ಅರಿಯಡ್ಕ ಗ್ರಾಪಂ ಅಧ್ಯಕ್ಷರಾದ ಸಂತೋಷ್ ಮಣಿಯಣಿ, ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಕಾವು ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ನನ್ಯ ಅಚ್ಚುತ್ತಮೂಡೆತ್ತಾಯ, ಕಾವು ಹಾಲು ಉತ್ಪಾದಕ ಸಂಘದ ಮಾಜಿ ಅಧ್ಯಕ್ಷ ಕೃಷ್ಣಪ್ರಸಾದ್ ಕೊಚ್ಚಿ ಗ್ರಾಪಂ ಸದಸ್ಯರುಗಳಾದ ದಿವ್ಯನಾಥ ಶೆಟ್ಟಿ ಕಾವು, ಬಿಕೆ ಅಬ್ದುಲ್ ರಹಿಮಾನ್, ಸಲ್ಮಾ, ಪ್ರವೀಣಾ, ಲಯನ್ಸ್ ಕ್ಲಬ್ ಕೋಶಾಧಿಕಾರಿ ಕೆ ಕೆ ಇಬ್ರಾಹಿಂ ಹಾಜಿ, ಕಾವು ಕ್ಲಸ್ಟರ್ ಸಿಆರ್‌ಪಿ ಕೆವಿಎಲ್‌ಎನ್ ಪ್ರಸಾದ್, ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಯತೀಶಪೂಜಾರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಸಿ ಎಚ್ ಉಪಸ್ಥಿತರಿದ್ದರು.ಪ್ರಭಾರ ಮುಖ್ಯ ಶಿಕ್ಷಕಿ ಪ್ರಮೀಳಾ ಸ್ವಾಗತಿಸಿದರು.