ಪುತ್ತೂರು: ಇತ್ತೀಚೆಗೆ ಸುರಿದ ಭಾರೀ ಮಳೆ, ಗಾಳಿಗೆ ಮರವೊಂದು ಉರುಳಿ ಬಿದ್ದ ಪರಿಣಾಮ ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆವರಣ ಗೋಡೆಗೆ ಹಾನಿಯುಂಟಾಗಿದೆ. ದೇವಳದ ಈಶಾನ್ಯ ಭಾಗದಲ್ಲಿದ್ದ ಬೃಹತ್ ಗಾತ್ರದ ಪಾಲಾಷ ಮರವೊಂದು ಜೂ.3 ರಂದು ಸಂಜೆ ಉರುಳಿ ಬಿದ್ದಿದೆ.
ಇದರ ಪರಿಣಾಮ ದೇವಳದ ಈಶಾನ್ಯ ಭಾಗದ ಆವರಣ ಗೋಡೆಗೆ ಸಂಪೂರ್ಣ ಹಾನಿಯಾಗಿದೆ. ಕೊಳವೆ ಬಾವಿಯಿಂದ ದೇವಳದ ನೀರಿನ ಟ್ಯಾಂಕ್ಗೆ ಹೋಗುವ ನೀರಿನ ಪೈಪುಗಳು ತುಂಡಾಗಿವೆ. ಇದರಿಂದ ನೀರಿನ ಸರಜರಾಜಿಗೆ ತೊಂದರೆಯುಂಟಾಗಿದೆ. ಇದಲ್ಲದೆ ನೀರು ಹರಿದು ಹೋಗುವ ಪೈಪುಗಳು ಕೂಡ ತುಂಡಾಗಿವೆ. ಸುಮಾರು 50 ಸಾವಿರಕ್ಕೂ ಅಧಿಕ ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ.