ಪುತ್ತೂರು: ಕಲ್ಲಡ್ಕದಲ್ಲಿ ಹೈವೇ ಕಾಮಗಾರಿ ಇನ್ನೂ ಮುಗಿದಿಲ್ಲ, ಮಳೆಗಾಲ ಆರಂಭವಾಗಿದೆ ಅಲ್ಲಿನ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ ವೆಟ್ ಮಿಕ್ಸ್ ಹಾಕಿ ಸಂಚಾರ ಸುಗಮವಾಗುವಂತೆ ಮಾಡಿ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಅವರು ಅಧಿಕಾರಿಗಳ ಸಭೆಯಲ್ಲಿ ಆಗ್ರಹಿಸಿದ್ದಾರೆ.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ನಡೆದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಶಾಸಕರು ಭಾಗವಹಿಸಿ ಮಾತನಾಡಿದರು. ಯಾವಾಗಲೋ ಕಾಮಗಾರಿ ಮುಗಿಯಬೇಕಿತ್ತು ಆದರೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ಹಲವು ವರ್ಷಗಳಿಂದ ಪ್ರತೀ ಮಳೆಗಾಲ, ಬೇಸಿಗೆಯಲ್ಲೂ ವಾಹನ ಚಾಲಕರು ಪರದಾಡುವಂತ ಸನ್ನಿವೇಶ ಇದೆ. ಸದ್ಯಕ್ಕೆ ಈ ರಸ್ತೆಯಲ್ಲಿ ತೆರಳುವುದೇ ಸಾಧ್ಯವಿಲ್ಲ ಅನ್ನುವಷ್ಟರ ಮಟ್ಟಿಗೆ ಕೆಟ್ಟು ಹೋಗಿದೆ.ಅಲ್ಲಲ್ಲಿ ಕೆಸರು ನೀರು ತುಂಬಿಕೊಂಡಿದೆ ಎಂದು ಅಧಿಕಾರಿಗಳ ಗಮನ ಸೆಳೆದ ಶಾಸಕರು ತಕ್ಷಣವೇ ಅಲ್ಲಿವೆಟ್ ಮಿಕ್ಸರ್ ಹಾಕಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಹೇಳಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ಉಸ್ತುವಾರಿ ಸಚಿವರು ಕೂಡಲೇ ವೆಟ್ ಮಿಕ್ಸರ್ ಹಾಕಿ ಸಂಚಾರ ಅಡಚಣೆಯನ್ನು ನಿವಾರಿಸಿ ಎಂದು ಸೂಚಿಸಿದರು.
ಬಪ್ಪಳಿಗೆಯಲ್ಲಿ ಅಪಾಯಕಾರಿ ಮರ ತೆರವು ಮಾಡಿ
ಪುತ್ತೂರು ನಗರಸಭಾ ವ್ಯಾಪ್ತಿಯ ಬಪ್ಪಳಿಗೆಯಲ್ಲಿ ಅಪಾಯಕಾರಿ ಮರಗಳು ರಸ್ತೆಗೆ ವಾಲಿಕೊಂಡಿದೆ. ಭಾನುವಾರ ಒಂದು ಮರ ಬಿದ್ದು ಎಂಟು ವಿದ್ಯುತ್ ಕಂಬಗಳು ಒಡೆದಿದೆ. ಇಲ್ಲಿನ ಅಪಾಯಕಾರಿ ಮರಗಳನ್ನು ತಕ್ಷಣವೇ ತೆರವು ಮಾಡಲು ಆದೇಶಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗೆ ಶಾಸಕರು ಸೂಚಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ , ಜಿಪಂ ಸಿಇಒ ಆನಂದ್,ಮೆಸ್ಕಾಂ ಅಧಿಕಾರಿ ಪದ್ಮಾವತಿ , ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ , ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.