ಸವಣೂರು- ಬೆಳ್ಳಾರೆ ರಸ್ತೆಯ ಕಾಪು ಎಂಬಲ್ಲಿ ರಸ್ತೆ ಕೆಸರುಮಯ – ಕೆಸರು ತುಂಬಿದ ರಸ್ತೆಯಲ್ಲಿ ಅನಿವಾರ್ಯ ಸಂಚಾರ ಹಲವು ವಾಹನ ಸ್ಕಿಡ್..!

0

ಪುತ್ತೂರು: ಪ್ರಸಿದ್ಧ ಯಾತ್ರಾಸ್ಥಳ ಧರ್ಮಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಸವಣೂರು – ಬೆಳ್ಳಾರೆ ರಸ್ತೆಯ ಮುಕ್ಕೂರು ಸಮೀಪದ ಕಾಪು ಬಳಿ ಕಾಮಗಾರಿ ನೆಪದಲ್ಲಿ ರಸ್ತೆ ಅಗೆದು ಹಾಕಿದ ಪರಿಣಾಮ ಮಳೆಗಾಲದಲ್ಲಿ ರಸ್ತೆ ಕೆಸರುಮಯವಾಗಿದೆ.
ಲೋಕೋಪಯೋಗಿ ಇಲಾಖೆಯ ಪುತ್ತೂರು ಉಪವಿಭಾಗ ವ್ಯಾಪ್ತಿಗೆ ಒಳಪಟ್ಟಿರುವ ರಸ್ತೆ ಇದಾಗಿದ್ದು ಕೆಲ ತಿಂಗಳ ಹಿಂದೆ ರಸ್ತೆ ಅಭಿವೃದ್ಧಿಗೋಸ್ಕರ ಅಗೆದು ಹಾಕಿದ್ದು ಮಳೆಗಾಲದ ಮೊದಲ ಪೂರ್ಣಗೊಳ್ಳದ ಕಾರಣ ವಾಹನ ಸವಾರರು ಸಂಚಾರಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಕೆಸರಲ್ಲಿ ಹಲವು ದ್ವಿಚಕ್ರ ವಾಹನಗಳು ಸ್ಕಿಡ್
ಮುಕ್ಕೂರಿನಿಂದ ಕಾಪುಕಾಡು ತನಕ 10 ಕೋ.ರೂ.ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಕೆಲ ತಿಂಗಳ ಹಿಂದೆ ಗುದ್ದಲಿ ಪೂಜೆ ನಡೆಸಲಾಗಿತ್ತು. ಈ ರಸ್ತೆಯ ಕಾಯರ್ ಮಾರ್, ಚಾಮುಂಡಿಮೂಲೆ, ಕಾಪು ಬಳಿ ರಸ್ತೆ ಅಗೆದು ಹಾಕಲಾಗಿತ್ತು. ಕಾಪು ಬಳಿ ರಸ್ತೆ ಇಕ್ಕೆಲಗಳಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ಚಾಮುಂಡಿಮೂಲೆ, ಕಾಯರ್ ಮಾರ್ ಬಳಿ ರಸ್ತೆ ಅಗೆದು ಹಾಗೆಯೇ ಬಿಟ್ಟ ಪರಿಣಾಮ ಮಳೆಗಾಲದಲ್ಲಿ ಹೊಂಡ ಸೃಷ್ಟಿಯಾಗಿದೆ. ಕಾಪು ಬಳಿ ರಸ್ತೆಗೆ ಮಣ್ಣು ಹಾಕಿದ ಪರಿಣಾಮ ಮೊಣಕಾಲು ತನಕ ಕೆಸರು ತುಂಬಿದ್ದು ಹಲವಾರು ದ್ವಿಚಕ್ರ ವಾಹನಗಳು ಸ್ಕಿಡ್ ಆಗಿವೆ. ಎರಡು ದಿನಗಳ ಹಿಂದೆ ಕೆಎಸ್ ಆರ್ ಟಿಸಿ ಬಸ್ ಕೆಲ ಹೊತ್ತು ಬಾಕಿ ಆಗಿದೆ. ಮಂಗಳವಾರವಂತೂ ವಾಹನ ಸವಾರರು ರಸ್ತೆ ದಾಟಲು ಪರದಾಟವೇ ನಡೆಸುವ ಸ್ಥಿತಿ ಉಂಟಾಗಿತ್ತು.

ಶಾಲಾ ವಿದ್ಯಾರ್ಥಿಗಳಿಗೆ ತೊಂದರೆ
ದಿನಂಪ್ರತಿ ಈ ರಸ್ತೆಯಲ್ಲಿ ನೂರಾರು ವಿದ್ಯಾರ್ಥಿಗಳು ಸಂಚರಿಸುತ್ತಿದ್ದು ರಸ್ತೆ ಸ್ಥಿತಿಯಿಂದ ಸಂಚಾರವೇ ಕಷ್ಟವಾಗಿದೆ. ಪರಿಸ್ಥಿತಿ ಇದೇ ತೆರನಾದರೇ ಬಸ್ ಓಡಾಟವೂ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ. ಹೀಗಾಗಿ ಸವಣೂರು, ಬೆಳ್ಳಾರೆ ಭಾಗಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಇಲ್ಲದ ಸ್ಥಿತಿ ಉಂಟಾಗಲಿದೆ.

LEAVE A REPLY

Please enter your comment!
Please enter your name here