ಪುತ್ತೂರು: ಇತ್ತೀಚೆಗೆ ಉದ್ಘಾಟನೆಗೊಂಡ ರೆಂಜಲಾಡಿ ಇಸ್ಲಾಮಿಕ್ ಎಜುಕೇಶನ್ ಸೆಂಟರ್‌ನಲ್ಲಿ ತರಗತಿ ಪ್ರಾರಂಭ ಕಾರ್ಯಕ್ರಮ ಜೂ.9ರಂದು ನಡೆಯಿತು. ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ಕುನ್ನುಂಗೈ ಅವರು ವಿದ್ಯಾರ್ಥಿಗಳಿಗೆ ಖುರ್‌ಆನ್ ಹೇಳಿಕೊಡುವ ಮೂಲಕ ತರಗತಿಗೆ ಅಧಿಕೃತ ಚಾಲನೆ ನೀಡಿದರು. ಬಳಿಕ ಮಾತನಾಡಿದ ತಂಙಳ್ ಅವರು ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಮುನ್ನಡೆಸುವುದು ಬಹಳ ಕಷ್ಟ. ಆದರೆ ಹುಸೈನ್ ದಾರಿಮಿಯವರಿಗೆ ಇದು ಕಷ್ಟವಾಗಲಾರದು, ಏಕೆಂದರೆ ಅವರು ಇಂತಹ ಅನೇಕ ಸಂಸ್ಥೆಗಳ ಬೆಳವಣಿಗೆಗೆ ಕಾರಣರಾಗಿದ್ದಾರೆ ಮತ್ತು ಅವರಲ್ಲಿ ಸಂಸ್ಥೆಯನ್ನು ನಡೆಸುವ ಎಲ್ಲಾ ವಿಧದ ಚಾಕಚಕ್ಯತೆ ಇದೆ ಎಂದು ಹೇಳಿದರು. ಇಲ್ಲಿ ಕಲಿತ ಮಕ್ಕಳು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಸಮಾಜದಲ್ಲಿ ಗುರುತಿಸುವಂತಾಗಬೇಕು ಎಂದು ತಂಙಳ್ ಹಾರೈಸಿದರು.
ಎಸ್.ಬಿ ಮಹಮ್ಮದ್ ದಾರಿಮಿ ಮಾತನಾಡಿ ಬಹಳ ಕಷ್ಟಪಟ್ಟು ಈ ಸಂಸ್ಥೆ ಪ್ರಾರಂಭಗೊಂಡಿದ್ದು ಇದು ಯಶಸ್ಸಿನ ಪಥದಲ್ಲಿ ಸಾಗುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.
ಎಂ.ಎಸ್ ಮಹಮ್ಮದ್ ಮಾತನಾಡಿ ರೆಂಜಲಾಡಿಯಲ್ಲಿ ಆರಂಭಗೊಂಡ ಈ ಸಂಸ್ಥೆಗೆ ಎಲ್ಲರೂ ಸಹಕಾರ ನೀಡಬೇಕು. ಭವಿಷ್ಯದಲ್ಲಿ ಇದೊಂದು ಹೆಸರು ಪಡೆದ ವಿದ್ಯಾಕೇಂದ್ರವಾಗಿ ರೂಪುಗೊಳ್ಳಬೇಕು ಎಂದು ಹೇಳಿದರು.
ಸ್ವಾಗತಿಸಿದ ಆರ್‌ಐಸಿ ಮುಖ್ಯಸ್ಥ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ಮಾತನಾಡಿ ರೆಂಜಲಾಡಿ ಎನ್ನುವ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆ ಪ್ರಾರಂಭಿಸಬೇಕೆನ್ನುವ ನನ್ನ ಬಹುಕಾಲದ ಕನಸು ನನಸಾಗಿದೆ. ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಂಡು ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಗುರಿಯಾಗಿದೆ. ಈಗಾಗಲೇ ವಿದ್ಯಾರ್ಥಿಗಳ ದಾಖಲಾತಿ ಆಗಿದೆ. ವಿದ್ಯಾರ್ಥಿಗಳಿಗೆ ಉಳಿದುಕೊಳ್ಳಲು ಮತ್ತು ಶಿಕ್ಷಣಕ್ಕೆ ಬೇಕಾದ ಎಲ್ಲ ಪೂರಕ ವ್ಯವಸ್ಥೆಗಳಿದ್ದು ಇದಕ್ಕೆ ಎಲ್ಲರೂ ಪ್ರೋತ್ಸಾಹ ನೀಡಬೇಕೆಂದು ಅವರು ಹೇಳಿದರು.
ಪ್ರಮುಖರಾದ ಸಯ್ಯದ್ ಯಹ್ಯಾ ತಂಙಳ್ ಪೋಳ್ಯ, ನ್ಯಾಯವಾದಿ ಸಿದ್ದೀಕ್ ಹಾಜಿ, ಅಹ್ಮದ್ ಹಾಜಿ ಆಕರ್ಷಣ್, ಅಬ್ದುಲ್ ರಹಿಮಾನ್ ಆಝಾದ್, ಕೆ.ಎಂ.ಎ ಕೊಡುಂಗಾಯಿ, ಇಕ್ಬಾಲ್ ಬಾಳಿಲ, ನಾಸಿರ್ ಫೈಝಿ, ರಶೀದ್ ಹಾಜಿ ಪರ್ಲಡ್ಕ, ಯೂಸುಫ್ ರೆಂಜಲಾಡಿ ಮೊದಲಾದವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಹಲವಾರು ಮಂದಿ ಉಪಸ್ಥಿತರಿದ್ದರು. ಝೈನುದ್ದೀನ್ ಜೆ.ಎಸ್ ವಂದಿಸಿದರು.