ಒಂದು ಸಾವಿರ ಅರ್ಜಿದಾರರಿಗೂ ಮನೆ ನಿವೇಶನ ಕೊಡಲೇಬೇಕು- ಬಂಟ್ವಾಳ ವ್ಯಾಪ್ತಿಯ ಕಂದಾಯ ಇಲಾಖಾ ಅಧಿಕಾರಿಗಳ ಸಭೆಯಲ್ಲಿ ಶಾಸಕ ಅಶೋಕ್‌ ರೈ ಸೂಚನೆ

0

ವಿಟ್ಲ: ಬಂಟ್ವಾಳ ವ್ಯಾಪ್ತಿಯ ಕಂದಾಯ ಇಲಾಖಾ ಅಧಿಕಾರಿಗಳ ಸಭೆ ಜೂ.19ರಂದು ವಿಟ್ಲದ ಗಜಾನನ ಸಭಾಂಗಣದಲ್ಲಿ ಶಾಸಕ ಅಶೋಕ್ ರೈ ನೇತೃತ್ವದಲ್ಲಿ ನಡೆಯಿತು.ಸಭೆಯಲ್ಲಿ ಮಾತನಾಡಿದ ಶಾಸಕರು ನಮ್ಮೊಳಗೆ ಮನೆ ಇಲ್ಲದವರಿದ್ದಾರೆ, ಮೂರು ಹೊತ್ತಿನ ಊಟ ಕ್ಕೆ ತೊಂದರೆ ಇದ್ದವರಿದ್ದಾರೆ, ಅನಾರೋಗ್ಯದಿಂದ ಇದ್ದವರು ಇದ್ದಾರೆ ಅವರು ಏನು ಮಾಡಬೇಕು. ಅವರಿಗೆ ಅನ್ಯಾಯವಾಗಬಾರದು. ಅವರಿಗೆ ಸ್ವಂತ ಮನೆಯಾಗಬೇಕೆಂಬ ಆಸೆಯಿಲ್ಲವೇ ಮಾಡಿಕೊಳ್ಳಲಿ ಸೈಟ್ ಕೊಡಿ ಅದು ಇದೂ ಹೇಳಿ ಯಾವುದೇ ಕಾರಣಕ್ಕೂ ಸತಾಯಿಸಬೇಡಿ ,ಸೈಟ್ ಇಲ್ಲದವರಿಗೆ ಸೈಟ್ ಕೊಡಿ ಗ್ರಾಮ ನೋಡಬೇಡಿ, ಮನೆ ಇಲ್ಲದವರು ಮಾತ್ರ ಸೈಟ್ ಗೆ ಅರ್ಜಿ ಹಾಕ್ತಾರೆ ಅವರಿಗೆ ನಿರ್ದಿಷ್ಟ ಗ್ರಾಮವೇ ಇಲ್ಲದ ಕಾರಣ ಯಾವ ಗ್ರಾಮವಾದರೂ ನಡೆಯುತ್ತದೆ. ಗ್ರಾಮದಲ್ಲಿ ಸೈಟ್ ಇದೆ ಅರ್ಜಿ ಇಲ್ಲಾಂದ್ರೆ ಬೇರೆ ಗ್ರಾಮದವರಿಗೆ ಆ ಸೈಟನ್ನು ಕೊಡಿ ಎಲ್ಲರೂ ನಮ್ಮವರೇ ಆಗಿದ್ದಾರೆ ಎಂದು ಶಾಸಕರು ಸೂಚಿಸಿದರು.

ಕೆದಿಲದಲ್ಲಿ‌ ಗೋಮಾಳ ಜಾಗ ಇಲ್ಲವೇ?
ಕೆದಿಲ ಗ್ರಾಮದಲ್ಲಿ 20 ಎಕ್ರೆ ಗೋಮಾಳ ಜಾಗ ಇತ್ತಲ್ವ ಅದು ಈಗ ಇದೆಯಾ? ಯಾರ ವಶದಲ್ಲಿದೆ ಎಂಬುದನ್ನು ಪರಿಶೀಲಿಸಿ ವರದಿ ಸಲ್ಲಿಸಿ ಎಂದು ಶಾಸಕರು ಸೂಚನೆ ನೀಡಿದರು.

94 ಸಿ ಎಷ್ಟು ಪೆಂಡಿಂಗ್ ಇದೆ?
ಬಂಟ್ವಾಳ ತಾಲೂಕು ವ್ಯಾಪ್ತಿಯ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ 94 ಸಿ ಫೈಲ್ ಎಷ್ಟು ಪೆಂಡಿಂಗ್ ಇದೆ, ಎಷ್ಟು ವಿಲೇವಾರಿಯಾಗಿದೆ. 42 ಕಡತ ಬಾಕಿ ಇದೆ ಎಂದು ಕಂದಾಯ ನಿರೀಕ್ಷಕರು‌ ಮಾಹಿತಿ‌ ನೀಡಿದರು.

1.38 ಸೆಂಟ್ ಜಾಗದಲ್ಲಿ ಏನು‌ಮಾಡುವುದು?
ವಿಟ್ಲ‌ನಗರದಲ್ಲಿ 94 ಸಿ ಗೆ ಜಾಗವನ್ನು ನೀಡಬೇಕಿದೆ.‌ 1.38 ಸೆಂಟ್ಸ್ ಜಾಗ ಕೊಟ್ಟರೆ ಅದರಲ್ಲಿ ಹೇಗೆ ಮನೆ ಕಟ್ಟುವುದು, ಅದಕ್ಕೆ ಬ್ಯಾಂಕಿನವರು ಲೋನ್ ಕೊಡ್ತಾರ? ಎಲ್ಲಿಯೂ ಇಲ್ಲದ ಕಾನೂನು ಇಲ್ಲಿ ಜಾರಿ ಮಾಡಿದವರು ಯಾರು? 144 ಅರ್ಜಿಗಳು ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಪೆಂಡಿಂಗ್ ಇದೆ ಎಂದು ಕಂದಾಯ ನಿರೀಕ್ಷಕರು‌ ಮಾಹಿತಿ‌ ನೀಡಿದರು.

ಅಕ್ರಮ ಸಕ್ರಮ ಫೈಲುಗಳನ್ನು ಶೀಘ್ರವೇ ವಿಲೇವಾರಿ ಮಾಡಬೇಕು. ಪುತ್ತೂರು ನಗರಸಭಾ ವ್ಯಾಪ್ತಿಯಿಂದ 5 ಕಿ ಮೀ ವ್ಯಾಪ್ತಿಯಲ್ಲಿ ಅಕ್ರಮ ಸಕ್ರಮ ಮಾಡುವಂತಿಲ್ಲ ಎಂಬ ಸರ್ಕ್ಯೂಲರ್ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. 5 ಕಿ ಮಿ ಏರ್ ವೇ ಯ ಪ್ರಕಾರ ನಾವು ಹೋದರೆ ಎಲ್ಲಿಯೂ ಅಕ್ರಮ ಸಕ್ರಮ ಮಾಡುವಂತಿಲ್ಲ. ಕೆದಿಲ ಗ್ರಾಮ ಈ ಏರ್ ವೇಸ್ ಅಳತೆಯಿಂದ ಹೊರಗಿದೆ. ಆರ್ಯಾಪು, ಬಲ್ನಾಡು, ಕೆಮ್ಮಿಂಜೆ, ಚಿಕ್ಕ‌ಮುಡ್ನೂರು, ಬನ್ನೂರು ಗ್ರಾಮಗಳನ್ನು ಬಾಗಶಃ ಎಂದು ಗುರುತಿಸಲಾಗಿದೆ.‌ರೂಟ್ ವೇ ಪ್ರಕಾರ 5 ಕಿ‌ಮೀ ವ್ಯಾಪ್ತಿ ಮಾನ್ಯ ಮಾಡಬೇಕಿದೆ. ಅದು ಏನೇ ಇರಲಿ ನೀವು ಅಕ್ರಮ ಸಕ್ರಮ ಫೈಲನ್ನು ಪುಟಪ್ ಮಾಡಿ ಪೆಂಡಿಂಗ್ ಮಾಡಬೇಡಿ ಎಂದು ಶಾಸಕರು ಸೂಚಿಸಿದರು.

ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನಿವೇಶನಕ್ಕೆ 1000 ಅರ್ಜಿಗಳು ಬಂದಿದೆ. ನೆಲ್ಲಿಗುಡ್ಡೆಯಲ್ಲಿ 7 ಎಕ್ರೆ ಜಾಗ ಗುರುತಿಸಲಾಗಿದೆ. ಇನ್ನೂ ಹೆಚ್ಚಿನ‌ ಜಾಗ ಹುಡುಕಿಡಿ. ಒಂದು ಸಾವಿರ ಅರ್ಜಿದಾರರಿಗೂ ಮನೆ ನಿವೇಶನ ಕೊಡಲೇಬೇಕು ಎಂದು ಶಾಸಕರು‌ ಸೂಚಿಸಿದರು.ಇಂದಿರಾ ಕ್ಯಾಂಟೀನ್ ಕಾಮಗಾರಿ ಶೀಘ್ರ ಮುಗಿಸಬೇಕು ಎಂದು ಸೂಚಿಸಿದರು.


ವಿಟ್ಲದಲ್ಲಿ ಕುಡಿಯುವ ನೀರಿನ‌ ಸಮಸ್ಯೆಯ ಬಗ್ಗೆ ಕರೆಗಳು ಬರುತ್ತಿದೆ ಇದಕ್ಕಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸೇರಿಸಿದ್ದೇನೆ.ಬೇಸಿಗೆಯಲ್ಲಿ ವಾರದಲ್ಲಿ ನಾಲ್ಕು‌ ದಿನಗಳು ನೀರು‌ ಇಲ್ಲದೇ ಇದ್ದ ಘಟನೆಯೂ ನಡೆದಿದೆ. ಪಟ್ಟಣ ಪಂಚಾಯತ್ ವತಿಯಿಂದ ಎಲ್ಲೆಲ್ಲಿ ನೀರಿನ ಟ್ಯಾಂಕ್ ಬೇಕೋ ಅಲ್ಲೆಲ್ಲಾ ಟ್ಯಾಂಕ್ ನಿರ್ಮಾಣ ಮಾಡಬೇಕು ಎಂದು‌ ಶಾಸಕರು ತಿಳಿಸಿದರು.

ಅಧಿಕಾರಿಗಳ ಸಭೆಗೆ ಅಧಿಕಾರಿಗಳೇ ಗೈರಾದರೆ ನಾವು ಸಭೆ ನಡೆಸುವುದು ಹೇಗೆ. ಜನರ ಸಮಸ್ಯೆ ಪರಿಹರಿಸುವುದು ಹೇಗೆ. ಮುಂದೆ ಇದು ಮರುಕಳಿಸಬಾರದು ಎಲ್ಲಾ ಅಧಿಕಾರಿಗಳು ಸಭೆಗೆ ಹಾಜರಾಗಬೇಕು. ಜನರ ಸಮಸ್ಯೆ ಪರಿಹಾರಕ್ಕಾಗಿ ನಾವಿಲ್ಲಿ ಕುಳಿತಿರುವುದು. ಅಧಿಕಾರಿಗಳು ಯಾರದ್ದೋ ಮುಖಸ್ತುತಿ ಮಾಡದೆ ಸಭೆಯಲ್ಲಿ ನನಗೆ ಸರಿಯಾದ ಮಾಹಿತಿಯನ್ನು ನೀಡಬೇಕು ಎಂದು ಅಶೋಕ್ ಕುಮಾರ್ ರೈ ಹೇಳಿದರು.

ಸೈಟ್ ಕೊಡುವಂತದ್ದು ನಮ್ಮ ಪ್ರಥಮ ಆದ್ಯತೆ:
ಸೈಟ್ ಕೊಡುವಂತದ್ದು ನಮ್ಮ ಪ್ರಥಮ ಆದ್ಯತೆಯಾಗಿದೆ. ಅದಕ್ಕಾಗಿ ನಿಮ್ಮಲ್ಲಿರುವ ಸೈಟ್ ಗಳನ್ನು ಕೊಡುವ ವೇಳೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಡಿ. ನಿಮ್ಮಲ್ಲಿ ಹಣದ ಸಮಸ್ಯೆಗಳಿದ್ದರೆ ಅದನ್ನು ನಿಮ್ಮ ಗ್ರಾಮ ಪಂಚಾಯತ್ ಅಧ್ಯಕ್ಷರ ಮುಖಾಂತರ ಅರ್ಜಿ ನೀಡುವ ಕೆಲಸ ಮಾಡಿ.ಸೈಟ್ ಡೆವಲಪ್ ಮೆಂಟ್ ಗೆ ನಾನು ಆದ್ಯತೆ ನೀಡಿ ಶಾಸಕರ ಕೋಟಾದಡಿ ಹಣ ಬಿಡುಗಡೆ ಮಾಡುವ ಕೆಲಸ ಮಾಡುತ್ತೇನೆ ಎಂದರು.

ಈ ಭಾರಿಯ ಮಳೆಯ ಸಂದರ್ಭದಲ್ಲಿ ಪ್ರಕೃತಿ ವಿಕೋಪದಿಂದಾಗಿ ಬಂಟ್ವಾಳ ತಾಲೂಕು ವ್ಯಾಪ್ತಿಯ 9 ಗ್ರಾಮ ಪಂಚಾಯತ್ ನ ಪೈಕಿ ಅಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮೂರು ಮನೆಗಳಿಗೆ ಹಾನಿಯಾಗಿದೆ. ಇಡ್ಕಿದು ಗ್ರಾಮ ಪಂಚಾಯತ್ ವ್ಯಾಪ್ತಿ ಯಲ್ಲಿ ಎರಡು ಮನೆಗಳಿಗೆ ಹಾನಿಯಾಗಿದೆ.ಪೆರ್ನೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೃಷಿ ಹಾನಿಯಾಗಿದೆ. ಪುಣಚ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಂದು ಕೃಷಿ ಹಾನಿ ಹಾಗೂ ಮೂರು ಮನೆಗಳಿಗೆ ಹಾನಿಯಾಗಿದೆ. ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಬಂಟ್ವಾಳ ತಹಶಿಲ್ದಾರ್ ಅರ್ಚನ, ಬಂಟ್ವಾಳ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಮಹೇಶ್ ಹೊಳ್ಳ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್, ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಗೋಪಾಲ ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here