ವಿದ್ಯಾರ್ಥಿಗಳು ನೈಜ ನಾಯಕರಂತೆ ಮುನ್ನಡೆಯಬೇಕು : ಸುಬೇದಾರ್ ರಮೇಶ್ ಬಾಬು
ಪುತ್ತೂರು: ವಿದ್ಯಾರ್ಥಿಗಳು ನಾಯಕತ್ವ ಬೆಳೆಸಿಕೊಂಡು ತಮ್ಮಿಂದಾದ ಉತ್ಕ್ರಷ್ಟ ಪ್ರಯತ್ನ ಮಾಡುವುದಲ್ಲದೆ ತಾವು ವಿದ್ಯಾಭ್ಯಾಸಗೈಯುವ ವಿದ್ಯಾದೇಗುಲದ ಒಳಿತಿಗಾಗಿಯೂ ಚಿಂತನೆ ನಡೆಸಬೇಕು. ಪ್ರಜಾಪ್ರಭುತ್ವದಲ್ಲಿ ಹೇಗೆ ನಾಯಕರು ಮತ್ತು ಪ್ರಜೆಗಳ ಒಡನಾಟ, ಚರ್ಚೆ, ತೀರ್ಮಾನ ಕೈಗೊಳ್ಳುವ ಪರಿ ನಡೆಯುತ್ತದೆಯೋ ಅದೇ ರೀತಿ ವಿದ್ಯಾರ್ಥಿ ನಾಯಕರೂ ಮುನ್ನಡೆಯಬೇಕು ಎಂದು ಭಾರತೀಯ ಸೇನೆಯ ನಿವೃತ್ತ ಅಧಿಕಾರಿ ಸುಬೇದಾರ್ ರಮೇಶ್ ಬಾಬು ಪಿ. ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಆಯೋಜಿಸಲಾದ ಕಾಲೇಜು ಸಂಸತ್ತಿನ ಪದಗ್ರಹಣ ಕಾರ‍್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ವಿದ್ಯಾರ್ಥಿಗಳು ನೈತಿಕತೆ ಇಟ್ಟುಕೊಳ್ಳಬೇಕು. ತಮ್ಮ ಮುಂದಿರುವ ಜವಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಬೇಕು. ಈ ನಿಟ್ಟಿನಲ್ಲಿ ಆದರ್ಶ ನಾಯಕರುಗಳನ್ನು ಮಾದರಿಯಾಗಿಟ್ಟು ದೇಶವನ್ನು ಕಟ್ಟಿ ಬೆಳೆಸಿ ಕಾಪಾಡಬೇಕು ಎಂದು ಕರೆ ನೀಡಿದರು
ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಿ ಬಿ ಋತ್ವಿಕ್‌ಗೌಡ, ಕಾರ‍್ಯದರ್ಶಿ ತನ್ಮಯ್ ಟಿ ಎಂ ಹಾಗೂ ಎಲ್ಲಾ ತರಗತಿ ನಾಯಕರುಗಳು ಪ್ರಮಾಣ ವಚನ ಸ್ವೀಕರಿಸಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ನಟ್ಟೋಜ ಮತ್ತು ಪ್ರಾಂಶುಪಾಲೆ ಸುಚಿತ್ರಾ ಪ್ರಭು ಕಾರ‍್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ವರ್ಶಿಣಿ ಪಿ ಭಟ್ ಮತ್ತು ಪ್ರಣತಿ ಎ ಪ್ರಾರ್ಥನೆಗೈದರು. ರಸಾಯನಶಾಸ್ತ್ರ ಉಪನ್ಯಾಸಕಿ ಅಪರ್ಣಾ ಉಪಧ್ಯಾಯ ಸ್ವಾಗತಿಸಿದರು. ಜೀವಶಾಸ್ತ್ರ ಉಪನ್ಯಾಸಕಿ ಗೀತಾ ಸಿ ಕೆ ಇವರು ಕಾರ‍್ಯಕ್ರಮವನ್ನು ನಿರೂಪಿಸಿ, ವಂದಿಸಿದರು.