ಬೆಳ್ತಂಗಡಿ: ಹೋಲಿ ರಿಡೀಮರ್ ಚರ್ಚ್, ಬೆಳ್ತಂಗಡಿ ಭಾರತೀಯ ಕಥೋಲಿಕ್ ಯುವ ಸಂಚಲನ ಘಟಕ, ಮಂಗಳೂರು ಪರಿಸರ ಆಯೋಗ ಧರ್ಮಪ್ರಾಂತ್ಯ ಮತ್ತು ಬೆಳ್ತಂಗಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಇವುಗಳ ಜಂಟಿ ಆಶ್ರಯದಲ್ಲಿ ಜಲಬಂಧನ-2024 ರಕ್ಷಿಸಿ ಜಲ-ಉಳಿಸಿ ಜೀವ ಸಂಕುಲ ಕಾರ್ಯಕ್ರಮವು ಜೂ.16ರಂದು ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್ ನಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹೋಲಿ ರಿಡೀಮರ್, ಚರ್ಚ್ ನ ಧರ್ಮಗುರು ಫಾ.ವಾಲ್ಟರ್ ಡಿಮೆಲ್ಲೋ, ಎಸ್.ಕೆ.ಡಿ.ಆರ್.ಡಿ.ಪಿ ಯೋಜನಾಧಿಕಾರಿ ಸುರೇಂದ್ರ ಕುಮಾರ್, ತಾಲೂಕು ಕೃಷಿ ಅಧಿಕಾರಿ ರಾಮ್ ಕುಮಾರ್, ಸೆಕ್ರೆಟರಿ ಗಿಲ್ಬರ್ಟ್, ಪಿಂಟೋ, ಸಿರಿ ಡಿಜಿಎಂ ವಿನ್ಸೆಂಟ್ ಲೋಬೋ, ಐಸಿವೈಎಂ, ಆನಿಮೇಟರ್ ಗಳಾದ ವಿಲ್ಸನ್ ಮೋನಿಸ್, ಪ್ಲೇವಿಯಾ ಪೌಲ್, ಆನ್ಸೆಲ್ಮ ಡಿ’ಸೋಜಾ, ಅಜಯ್ ರೋಡ್ರಿಗಸ್ ಉಪಸ್ಥಿತರಿದ್ದರು.
ಜಲಬಂಧನ-2024ರಕ್ಷಿಸಿ ಜಲ-ಉಳಿಸಿ ಜೀವ ಸಂಕುಲ ಕಾರ್ಯಕ್ರಮದ ವಿಶೇಷ ಅಂಗವಾಗಿ ಪುತ್ತೂರು ಅರಿವು ಕೃಷಿ ಕ್ಲೀನಿಕ್ ನಿಂದ ಮಳೆನೀರುಕೊಯ್ಲು ಮಾಹಿತಿ ಹಾಗೂ ಪ್ರಾತ್ಯಾಕ್ಷಿತೆ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಪುತ್ತೂರು ಅರಿವು ಕೃಷಿ ಕ್ಲೀನಿಕ್ ಮುಖ್ಯಸ್ಥ ಹೊನ್ನಪ್ಪ ಗೌಡ ಬನ್ನೂರು ಇವರು ಮಳೆನೀರುಕೊಯ್ಲು ಬಗ್ಗೆ ಮಾತನಾಡಿ, ಕುಡಿಯಲು ಯೋಗ್ಯವಾದ ಮತ್ತು ಶುದ್ಧ ಮಳೆಯ ನೀರನ್ನು ಶೇಖರಿಸುವ ವಿಧಾನಗಳ ಕುರಿತು ಮಾಹಿತಿ ನೀಡಿದರು. ಸಾರ್ವಜನಿಕರು ತಮ್ಮ ತಮ್ಮ ಮನೆಯ ಮಾಡು ಅಥವಾ ಮೇಲ್ಟಾವಣೆಯಿಂದ ಬರುವ ಮಳೆಯ ನೀರನ್ನು ದಂಬೆಗಳ ಮೂಲಕ ಮನೆಯ ನೀರಿನ ಟ್ಯಾಂಕ್, ಬೋರ್ವೆಲ್, ಬಾವಿಗಳಲ್ಲಿ ಸಂಗ್ರಹಿಸುವ ಮೂಲಕ ಶುದ್ಧ ನೀರನ್ನು ಶೇಖರಿಸಲು ಸಾಧ್ಯವಾಗುತ್ತದೆ. ಇದರಿಂದ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ಪ್ರಾತ್ಯಾಕ್ಷಿತೆಯೊಂದಿಗೆ ಮಾಹಿತಿ ನೀಡಿದರು. ಪುತ್ತೂರು ಅರಿವು ಕೃಷಿ ಕ್ಲೀನಿಕ್ ನ ಚೈತ್ರಾ ಮಧುಚಂದ್ರ ಎಲಿಯ, ಕುಶಾಲಪ್ಪ ಗೌಡ, ದಿನೇಶ್ ಕುಲಾಲ್ ಸಹಕರಿಸಿದರು.