ಉಪ್ಪಿನಂಗಡಿ: ಇಲ್ಲಿ ಹರಿಯುತ್ತಿರುವ ಜೀವ ನದಿಗಳಾದ ಕುಮಾರಧಾರಾ ಮತ್ತು ನೇತ್ರಾವತಿ ಜೂ. 26ರ ಸಂಜೆಯ ಬಳಿಕ ತುಂಬಿ ಹರಿಯಲಾರಂಭಿಸಿದೆ. ತುಂಬಿ ಹರಿಯುವ ನದಿಯ ಪ್ರವಾಹದ ನೀರು ನದಿ ಪಾತ್ರದಿಂದ ಹೊರಗೆ ತೋಟಗಳಿಗೆ ನುಗ್ಗಿರುವುದು ಕಂಡು ಬಂದಿದೆ.
ಉಪ್ಪಿನಂಗಡಿಯಲ್ಲಿ ಹವಾಮಾನ ಇಲಾಖೆಯ ಪ್ರಕಾರ ಜೂ. 26ರಂದು 14 ಸೆಂಟಿ ಮೀಟರ್., 25ರಂದು 9 ಸೆ.ಮೀ., 24ರಂದು 5 ಸೆ.ಮೀ. ಮಳೆ ಸುರಿದಿರುವುದು ದಾಖಲಾಗಿದೆ. ಕುಮಾರಧಾರಾ ಮತ್ತು ನೇತ್ರಾವತಿ ಎರಡೂ ನದಿ ಸಂಗಮ ಸ್ಥಾನದ ಬಳಿಯಲ್ಲಿ ಶಂಭೂರು ಡ್ಯಾಂನವರು ಅಳವಡಿಸದಿರುವ ಅಳತೆ ಮಾಪನದಲ್ಲಿ ದಾಖಲಾಗಿರುವ ಪ್ರಕಾರ ನದಿ ಸಮುದ್ರ ಮಟ್ಠದಿಂದ 27 ಮೀಟರ್ ಎತ್ತರದಲ್ಲಿ ಹರಿಯುತ್ತಿರುವುದು ಕಂಡು ಬಂದಿದೆ. ಇಲ್ಲಿನ ಅಪಾಯದ 31 ಮೀಟರ್ ಆಗಿರುತ್ತದೆ.
ನೇತ್ರಾವತಿ ನದಿ ಪಾತ್ರದಲ್ಲಿರುವ ಪಂಜಾಲ, ಮಠ, ಹಳೇಗೇಟು, ಕೂಟೇಲು ಮೊದಲಾದ ತಗ್ಗು ಪ್ರದೇಶದಲ್ಲಿ ಪ್ರವಾಹದ ನೀರು ನದಿ ಪಾತ್ರದಿಂದ ಹೊರಗೆ ಹರಿದು ಬರುತ್ತಿದ್ದುದು ಕಂಡು ಬಂದಿದೆ. ಕೂಟೇಲು ಸೇತುವೆ ಬಳಿಯಿಲ್ಲಿ ಕೆಮ್ಮಾರ ಕಡೆಯಿಂದ ಬರುವ ತೋಡಿನ ನೀರನ್ನು ನೇತ್ರಾವತಿ ನದಿ ತುಂಬಿರುವುದರಿಂದಾಗಿ ಆ ಕಡೆಯಿಂದ ಬಂದ ನೀರನ್ನು ತನ್ನತ್ತ ಸೆಳೆದೆಕೊಳ್ಳದೆ ತಡೆ ಒಡ್ಡಿ ನಿಂತಿರುವುದು ಕಂಡು ಬಂದಿದೆ.
ಕುಮಾರಧಾರಾ ನದಿ ತುಂಬಿ ಹರಿಯುತ್ತಿದ್ದು, ಉಕ್ಕಿ ಹರಿಯುತ್ತಿರುವ ಪ್ರವಾಹದ ನೀರು ಅಡೇಕಲ್, ಕುರ್ಪೇಲು, ನಟ್ಟಿಬೈಲು ಇನ್ನೊಂದು ಭಾಗದಲ್ಲಿ ನೆಕ್ಕಿಲಾಡಿ, ಪಂಪುಹೌಸ್, ದರ್ಬೆ, ಮೈಂದಡ್ಕ ಮೊದಲಾದ ಕಡೆಯಲ್ಲಿ ಕೃಷಿ ತೋಟದೊಳಗೆ ನುಗ್ಗಿ ತೋಟಗಳು ಜಲಾವೃತವಾಗಿರುತ್ತದೆ.
ಜೂ. 26ರ ಮಧ್ಯಾಹ್ನದ ಬಳಿಕ ಎರಡೂ ನದಿಯಲ್ಲಿ ಒಂದೇ ರೀತಿಯಲ್ಲಿ ನೀರು ಏರಿಕೆಯಾಗಿದ್ದು, ಪ್ರವಾಹದ ರೀತಿಯಲ್ಲಿ ಹರಿದು ಬಂದಿತ್ತು. ನೇತ್ರಾವತಿ ನದಿ ಪಾತ್ರದಲ್ಲಿರುವ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಸ್ನಾನಘಟ್ಟದ 36 ಮೆಟ್ಟಿಲುಗಳ ಪೈಕಿ ಸಂಜೆಯ ಹೊತ್ತಿಗೆ 18 ಮೆಟ್ಟಿಲು ಮುಳುಗಡೆಯಾಗಿತ್ತು. ಆ ಬಳಿಕ ಪ್ರವಾಹ ಕಡಿಮೆ ಆಗುತ್ತಾ ಬಂದು ಜೂ. 27ರಂದು ಬೆಳಿಗ್ಗೆ 17 ಮೆಟ್ಟಿಲು ಮುಳುಗಡೆ ಆಗಿತ್ತು. ಆ ಬಳಿಕ ಮಧ್ಯಾಹ್ನ ಹೊತ್ತಿಗೆ ಮತ್ತೆ ನದಿ ನೀರು ಏರಿಕೆಯಾಗಿ 21 ಮೆಟ್ಟಿಲು ಮುಳುಗಡೆಯಾಗಿ 15 ಮೆಟ್ಟಿಲು ಕಾಣುತ್ತಿತ್ತು. ರಾತ್ರಿ 7 ಗಂಟೆಯ ಹೊತ್ತಿಗೆ ನೀರಿನ ಪ್ರವಾಹ ಮತ್ತೆ ಕಡಿಮೆಯಾಗಿದ್ದು, 19 ಮೆಟ್ಟಿಲು ಮುಳುಗಡೆಯಾಗಿ, 17 ಮೆಟ್ಟಿಲು ಕಾಣುವಂತಿತ್ತು.