ಉಪ್ಪಿನಂಗಡಿ : ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೋರ್ವರನ್ನು 108 ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗಲೇ ಹೆಣ್ಣು ಮಗುವಿಗೆ ಜನ್ಮವಿತ್ತ ಘಟನೆ ಉಪ್ಪಿನಂಗಡಿಯಿಂದ ವರದಿಯಾಗಿದೆ.
ಬಂಟ್ವಾಳ ತಾಲೂಕು ಕಕ್ಕೆಪದವು ಪರಿಸರದ ಉಮೇಶ್ ಎಂಬವರ ಪತ್ನಿ ಪವಿತ್ರಾ ಎಂಬವರು ಹೆರಿಗೆ ನೋವಿನಿಂದ ಬಳಲುತ್ತಿದ್ದವರು ಆಸ್ಪತ್ರೆಗೆ ಹೋಗಲು 108 ಅಂಬುಲೆನ್ಸ್ ಸೇವೆಯನ್ನು ಬಯಸಿದ್ದರು. ಈ ವೇಳೆ ಪರಿಸರದ ಎರಡೂ ಆಂಬುಲೆನ್ಸ್ ಗಳು ಕರ್ತವ್ಯದಲ್ಲಿ ಬೇರೆಡೆ ಇದ್ದ ಕಾರಣ , ಉಪ್ಪಿನಂಗಡಿಯಲ್ಲಿದ್ದ ಆಂಬುಲೆನ್ಸ್ ನನ್ನು ಸೇವೆಗೆ ಕರೆಸಲಾಗಿತ್ತು. ಉಪ್ಪಿನಂಗಡಿಯಿಂದ ಕಕ್ಕೆಪದವಿಗೆ ಹೋಗಿ ಗರ್ಭಿಣಿಯನ್ನು ಮಂಗಳೂರಿನ ಲೇಡಿಗೋಷನ್ ಗೆ ಕರೆದೊಯ್ಯುತ್ತಿರುವಾಗಲೇ ದಾರಿ ಮಧ್ಯೆ ಬಂಟ್ವಾಳ ಸಮೀಪ ಪವಿತ್ರಾ ರವರು ಹೆಣ್ಣು ಮಗುವಿಗೆ ಜನ್ಮವಿತ್ತರು .
ಆಂಬುಲೆನ್ಸ್ ನಲ್ಲಿದ್ದ ಸಿಬ್ಬಂದಿ ರುಬೆನ್ ಕರ್ಜೆಟ್ಟಿ ಸುರಕ್ಷಿತ ಹೆರಿಗೆಯನ್ನು ಮಾಡಿಸಿದರು. ಆಂಬುಲೆನ್ಸ್ ಚಾಲಕ ವೀರೇಶ್ ಸಹಕರಿಸಿದರು. ತಾಯಿ ಮಗು ಇಬ್ಬರೂ ಆರೋಗ್ಯದಿಂದ ಇದ್ದು, ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಆರೈಕೆಗೆ ಒಳಗಾಗಿದ್ದಾರೆ.