ಪುತ್ತೂರು: ಸುಳ್ಯ ಹಾಗೂ ಪುತ್ತೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಡಿಕೆಗೆ ಹಳದಿ ಹಾಗೂ ಕೊಳೆ ರೋಗ ಬಂದಿದೆ, ಯಾವುದೇ ಔಷಧಿ ಸಿಂಪಡನೆ ಮಾಡಿದರೂ ರೋಗ ಕಡಿಮೆಯಾಗಿಲ್ಲ, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳದೇ ಇದ್ದಲ್ಲಿ ಎರಡು ತಾಲೂಕಿನ ಕೃಷಿಕರ ಬದುಕು ಮೂರಾಬಟ್ಟೆಯಾಗಲಿದೆ ಎಂದು ಶಾಸಕ ಅಶೋಕ್ ರೈ ಹೇಳಿದ್ದಾರೆ.
ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆದು ಮಾತನಾಡಿದ ಅವರು, ಕೊಳೆರೋಗ ಅಥವಾ ಹಳದಿ ರೋಗ ಬಂದರೆ ಕೃಷಿಕರಿಗೆ ಪರಿಹಾರ ಕೊಟ್ಟರೆ ಸಾಲದು, ಇದಕ್ಕೆ ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಎಂಬುದರ ಬಗ್ಗೆ ಗಂಭೀರ ಆಲೋಚನೆ ಮಾಡಬೇಕಿದೆ. ಸಾವಿರಾರು ಕೃಷಿಕರು ಅಡಿಕೆಯನ್ನೇ ನಂಬಿ ಜೀವನ ಮಾಡುತ್ತಿದ್ದಾರೆ. ಬೆಳೆ ವಿಮೆಯಲ್ಲಿ ಪರಿಹಾರ ಸರಕಾರ ಕೊಟ್ಡರೆ ಏನೂ ಸಾಲದು. ಜೀವನವೇ ಅಡಿಕೆ ಆಗಿರುವಾಗ ಪರಿಹಾರ ಎಷ್ಟು ಕೊಡಬೇಕಿದೆ? ವಿಜ್ಞಾನಿಗಳನ್ನು ಕರೆಸಿ ಈ ಬಗ್ಗೆ ಸಂಶೋಧನೆ ನಡೆಸಿ ಅದಕ್ಕೊಂದು ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಈ ಬಗ್ಗೆ ನಾನು ಸಿಪಿಸಿಆರ್ ಐ ವಿಜ್ಞಾನಿಗಳ ಜೊತೆ ಮಾತನಾಡಿದ್ದೇನೆ, ಸರಕಾರ ಇದಕ್ಕೆ ವಿಶೇಷ ಅನುದಾನವನ್ನು ಮೀಸಲಿಡುವ ಮೂಲಕ ಅಡಿಕೆ ಕೊಳೆರೋಗ ಮತ್ತು ಹಳದಿ ರೋಗದ ಬಗ್ಗೆ ಸಂಶೋಧನೆ ಮಾಡಿ ಕೃಷಿಕರಿಗೆ ಬದುಕು ನೀಡಬೇಕಿದೆ. ಈಗಾಗಲೇ ಸುಳ್ಯ ತಾಲೂಕಿನ ಆರ್ಧ ಭಾಗ ಹಾಗೂ ಪುತ್ತೂರು ತಾಲೂಕಿನ ಒಂದೆರಡು ಗ್ರಾಮದಲ್ಲಿ ರೋಗ ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಈ ಬಗ್ಗೆ ಸರಕಾರದ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳುವ ಬಗ್ಗೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು.
ರಸ್ತೆ ಬದಿಗಳಲ್ಲಿರುವ ಮಾವು, ಹಲಸು ಹಾಗೂ ಇನ್ನಿತರ ಹಣ್ಣಿನ ಮರಗಳ ಕಾಯಿಗಳನ್ನು ಏಲಂ ಮಾಡುವ ಪ್ರಕ್ರಿಯೆಯನ್ನು ಜಿಲ್ಲಾಡಳಿತ ರದ್ದು ಮಾಡಿದ್ದು ಮುಂದೆ ಸಾರ್ವಜನಿಕ ಸ್ಥಳದಲ್ಲಿರುವ ಮರಗಳ ಹಣ್ಣನ್ನು ಏಲಂ ಮಾಡುವಂತಿಲ್ಲ ಎಂದು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲಾ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಅಶೋಕ್ ರೈ ರಸ್ತೆ ಬದಿಯಲ್ಲಿರುವ ಹಣ್ಣಿನ ಮರಗಳ ಹಣ್ಣುಗಳನ್ನು ಚಿಲ್ಲರೆ ಹಣಕ್ಕಾಗಿ ಏಲಂ ಕರೆಯಲಾಗುತ್ತದೆ. ಏಲಂ ಪಡೆದವರು ಹಣ್ಣು ಕೊಯ್ಯುವ ವೇಳೆಗೆ ಮರಕ್ಕೂ ಹಾನಿ ಮಾಡುತ್ತಾರೆ. ಈ ಹಣ್ಣನ್ನು ಹಾಗೇ ಉಳಿಸಿಕೊಂಡಲ್ಲಿ ಪ್ರಾಣಿ, ಪಕ್ಷಿ ಹಾಗೂ ಮನುಷ್ಯರಿಗೂ ತಿನ್ನಬಹುದು ಯಾವುದೇ ಕಾರಣಕ್ಕೂ ಏಲಂ ಮಾಡದಂತೆ ವ್ಯವಸ್ಥೆ ಆಗಬೇಕು ಎಂದು ಶಾಸಕರು ಮನವಿ ಮಾಡಿದರು.
ಇದಕ್ಕೆ ಉತ್ತರ ನೀಡಿದ ಸಚಿವ ದಿನೇಶ್ ಗುಂಡೂರಾವ್ ಜಿಲ್ಲೆಯಲ್ಲಿ ಇನ್ನು ಮುಂದೆ ಎಲ್ಲಿಯೂ ರಸ್ತೆ ಬದಿಯಲ್ಲಿರುವ ಹಣ್ಣಿನ ಮರಗಳ ಹಣ್ಣನ್ನು ಏಲಂ ನಡೆಸಬಾರದು, ಈ ಬಗ್ಗೆ ಸ್ಥಳೀಯ ಸಂಸ್ಥೆಗೆ ಆದೇಶ ಹೊರಡಿಸಿ ಎಂದು ಜಿಲ್ಲಾಧಿಕಾರಿಗೆ ಸಚಿವರು ಸೂಚನೆ ನೀಡಿದರು. ಮಾವು ಏಲಂ ಮಾಡದಂತೆ ಕಳೆದ ಬಾರಿ ಶಾಸಕ ಅಶೋಕ್ ರೈ ತಡೆದದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಅಶೋಕ್ ರೈಗಳೇ ನೀವು ರಸ್ತೆ ಬದಿಯಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟು ಪರಿಸರ ಪ್ರೇಮ ಮೆರೆದಿದ್ದೀರಿ ಇದು ಭಾರೀ ಸುದ್ದಿಯಾಗಿದೆ, ವೈರಲ್ ಆಗಿದೆ. ಸರಕಾರದ ಗಮನಕ್ಕೂ ಬಂದಿದೆ.ಈ ತರಹ ಎಲ್ಲಾ ಶಾಸಕರು ಮುತುವರ್ಜಿ ವಹಿಸಿದರೆ ಒಂದಷ್ಡು ಗಿಡ ಮರಗಳನ್ನು ಬೆಳೆಯಬಹುದು. ಅಶೋಕ್ ರೈಗಳೇ ಒಳ್ಳೆಯ ಕೆಲಸ ಮಾಡುತ್ತೀರಿ ಎಲ್ಲವನ್ನೂ ಗಮನಿಸುತ್ತಿದ್ದೇವೆ ಎಂದು ಸಚಿವರು ಸಭೆಗೆ ತಿಳಿಸಿದರು.