ದೈವವನ್ನು ತೆರೆಯ ಮೇಲೆ ತೋರಿಸದೆಯೂ ದೈವದ ಕಾರ್ಣಿಕ ತೋರಿಸಿ ಪ್ರೇಕ್ಷಕರ ಮನಗೆದ್ದ…’ ಧರ್ಮದೈವ’ -ಸಿನಿ ಕ್ಷೇತ್ರದಲ್ಲೊಂದು ವಿಭಿನ್ನ ಪ್ರಯತ್ನ

0

@ ಸಿಶೇ ಕಜೆಮಾರ್


ಇದು ‘ಕಾಂತಾರ’ ಅಲ್ಲ, ಆದರೆ ಅದಕ್ಕಿಂತಲೂ ಏನೋ ಒಂದು ವಿಭಿನ್ನತೆ ಇದರಲ್ಲಿದೆ. ಕಾಂತಾರ ಸಿನಿಮಾ ಬರುವ ಮೊದಲೇ ನಿತಿನ್ ರೈ ಕುಕ್ಕುವಳ್ಳಿ ನಿರ್ದೇಶನದ ‘ಧರ್ಮದೈವ’ ಕಿರುಚಿತ್ರ ಬಿಡುಗಡೆಯಾಗಿತ್ತು ಹಾಗೂ ಕಿರುತೆರೆಯಲ್ಲಿ ಬಹಳಷ್ಟು ಸದ್ದು ಮಾಡಿತ್ತು. ಇದೇ ಕಿರುಚಿತ್ರದ ಹೆಸರನ್ನೇ ಇಟ್ಟುಕೊಂಡು ಬೆಳ್ಳಿತೆರೆಯ ಮೇಲೆ ತರಲು ಹೊರಟ ‘ಧರ್ಮದೈವ’ ಮಾಯೊದ ಬೊಲ್ಪು…ಸಿನಿ ಪ್ರೇಕ್ಷಕರ ಮನಸ್ಸು ಗೆದ್ದಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಇಡೀ ಚಿತ್ರವನ್ನು ಗಮನಿಸುತ್ತಾ ಹೋದರೆ ನಮಗೆ ಎಲ್ಲಿಯೂ ದೈವದ ಪಾತ್ರದ ದರ್ಶನ ಆಗುವುದಿಲ್ಲ ಅರ್ಥಾತ್ ದೈವವನ್ನು ತೆರೆಯ ಮೇಲೆ ಕಾಣಿಸುವ, ಕುಣಿಸುವ ಪ್ರಯತ್ನವನ್ನು ಇಲ್ಲಿ ನಿರ್ದೇಶಕರು ಮಾಡಿಲ್ಲ ಅದರ ಬದಲಾಗಿ ಬಹಳ ಸೊಗಸಾಗಿ ದೈವ ದರ್ಶನ ಮಾಡಿಸಿದ್ದಾರೆ. ಅದು ಹೇಗೆ ಸಾಧ್ಯವಾಗಿದೆ ಎಂಬುದನ್ನು ನೋಡಬೇಕಾದರೆ ನೀವು ಸಿನಿಮಾ ನೋಡಲೇಬೇಕು.


ಸಿನಿಮಾದ ಮೊದಲರ್ಧ ಕೊಂಚ ಬೋರ್ ಹೊಡೆಸಿದರೂ ಇಂಟರ್‌ವಲ್ ಬಳಿಕ ನಮ್ಮಲ್ಲಿ ಏನೋ ಕಾತುರತೆ ಮೂಡಿಸುತ್ತದೆ. ಮುಂದೆನಾಬಹುದು ಎಂಬ ಕುತೂಹಲವನ್ನು ಸಿನಿಮಾ ಆರಂಭದಿಂದಲೇ ಉಳಿಸಿಕೊಂಡು ಹೋಗುತ್ತದೆ. ತುಳುನಾಡಿನ ಜನರು ಆರಾಧನೆ ಮಾಡುವ ಧರ್ಮದೈವ ಜುಮಾದಿ ಹಾಗೂ ಅದರ ಬಂಟ ದೈವದ ಕಾರ್ಣಿಕ ಎಂತಹುದು ಎಂಬುದನ್ನು ತಿಳಿಸುವ ಪ್ರಯತ್ನವನ್ನು ನಿರ್ದೇಶಕರು ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇಲ್ಲಿ ದೈವಕ್ಕೆ ಅಪಚಾರವಾಗುವ ಯಾವುದೇ ದೃಶ್ಯಗಳಿಲ್ಲ, ನೀವು ಕಾಂತಾರದಲ್ಲಿ ಪಂಜುರ್ಲಿ ದೈವವನ್ನು ಬಹಳ ವೈಭವೀಕರಿಸಿ ತೋರಿಸಿದ್ದನ್ನು ಕಾಣಬಹುದು ಆದರೆ ಧರ್ಮದೈವದಲ್ಲಿ ಅದ್ಯಾವುದೂ ಇಲ್ಲ ಆದರೆ ಎಲ್ಲವೂ ಇದೆ ಹಾಗಾದರೆ ಏನಿದೆ? ಆರಂಭದಿಂದ ಕೊನೆಯವರೇಗೂ ಸಿನಿ ರಸಿಕರನ್ನು ಈ ಸಿನಿಮಾ ಹೇಗೆ ಹಿಡಿದಿಟ್ಟುಕೊಂಡಿದೆ. ಇವೆಲ್ಲವನ್ನು ತಿಳಿಯಬೇಕಾದರೆ ನೀವೂ ಸಿನಿಮಾ ನೋಡಬೇಕು.


ಮನೆಯ ಯಜಮಾನ ರಾಮಣ್ಣನ ತರವಾಡು ಮನೆಯೊಳಗೆ ನಡೆಯುವ ಒಂದು ಪುಟ್ಟ ಕಥೆ. ಕಥೆಯ ಬಗ್ಗೆ ಹೇಳಬೇಕಾದರೆ ಕೂಡು ಕುಟುಂಬದೊಳಗೆ ಹಣ, ಆಸ್ತಿಯ ಆಸೆಗಾಗಿ ನಡೆಯುವ ಗಲಾಟೆ, ರಂಪಾಟ, ಕೊಲೆ ಎನ್ನುವ ಮಾಮುಲು ಕಥೆ ಅಂತ ಅನ್ನಿಸಿದರು ಅಲ್ಲಲ್ಲಿ ಕಥೆ ತಿರುವು ಪಡೆದುಕೊಳ್ಳುತ್ತಾ ಸಾಗುತ್ತದೆ. ರಾಮಣ್ಣನನ್ನು ಮುಗಿಸಿ ಆತನ ಆಸ್ತಿ, ಹಣವನ್ನು ಪಡೆಯಬೇಕು ಎಂದು ಕಾತರಿಸುವ ಆತನ ತಮ್ಮ ಒಂದು ಕಡೆಯಾದರೆ, ಇಡೀ ಆಸ್ತಿ ನನಗೆ ಸೇರಬೇಕು ನನ್ನ ಮಗನೇ ಈ ತರವಾಡು ಮನೆಗೆ ವಾರೀಸುದಾರನಾಗಬೇಕು ಎಂದು ಕಾತರಿಸುವ ರಾಮಣ್ಣನ ತಮ್ಮನ ಹೆಂಡತಿ ಮತ್ತು ಮಗ ಇನ್ನೊಂದು ಕಡೆ. ಇದು ಒಂದು ಮನೆಯೊಳಗೆ ನಡೆಯುವ ಕಥೆಯಾದರೆ ಹೊರಗಿನಿಂದ ರಾಮಣ್ಣ, ಆತನ ತಮ್ಮನನ್ನು ಮುಗಿಸಿ ಇಡೀ ಆಸ್ತಿಯನ್ನು ಕಬಲಿಸಬೇಕೆನ್ನುವ ದುಗ್ಗಪ್ಪಣ್ಣ. ಈ ನಡುವೆ ರಾಮಣ್ಣನ ಹೆಂಡತಿಯ ತಮ್ಮನದ್ದು ಇನ್ನೊಂದು ಸೇಡು. ಈ ಎಲ್ಲದರ ನಡುವೆ ರಾಮಣ್ಣನ ತಮ್ಮ ಕೊಗ್ಗಪ್ಪಣ್ಣ ಕೊಲೆಯಾಗುತ್ತದೆ. ಇಲ್ಲೇ ಕಥೆ ತಿರುವು ಪಡೆದುಕೊಳ್ಳುತ್ತದೆ. ಈ ಕೊಲೆ ಮಾಡಿದವರು ಯಾರು? ಎನ್ನುವುದು ಇಲ್ಲಿ ಯಕ್ಷಪ್ರಶ್ನೆಯಾಗುತ್ತದೆ. ಕೊಗ್ಗಪ್ಪಣ್ಣನ ಕೊಲೆಯಿಂದ ರಾಮಣ್ಣ ಬಹಳಷ್ಟು ದುಃಖಿತರಾಗುತ್ತಾರೆ. ಪೊಲೀಸರಿಗೂ ಈ ಕೊಲೆ ಒಂದು ಸವಾಲು ಆಗುತ್ತದೆ. ಕೊನೆಯಲ್ಲಿ ರಾಮಣ್ಣ ನಂಬಿದ ಧರ್ಮದೈವವೇ ಈ ಕೊಲೆಗೆ ನ್ಯಾಯ ಕೊಡಿಸುತ್ತದೆ. ಅದು ಹೇಗೆ ಸಾಧ್ಯವಾಗುತ್ತದೆ ಎಂಬುದನ್ನು ತಿಳಿಯಬೇಕಾದರೆ ನೀವು ಚಿತ್ರ ನೋಡಲೇಬೇಕು.


ಧರ್ಮದೈವದಲ್ಲಿ ಬಣ್ಣ ಹಚ್ಚಿದ ಎಲ್ಲಾ ಕಲಾವಿದರು ತಮ್ಮ ಪಾತ್ರಕ್ಕೆ ನ್ಯಾಯ ಕೊಡಿಸಿದ್ದಾರೆ. ಮುಖ್ಯವಾಗಿ ಮನೆಯ ಯಜಮಾನ ರಾಮಣ್ಣನ ಪಾತ್ರ ನಿರ್ವಹಿಸಿದ ರಮೇಶ್ ರೈ ಕುಕ್ಕುವಳ್ಳಿ, ದುಗ್ಗಪ್ಪಣ್ಣ ಪಾತ್ರ ಮಾಡಿದ ಚೇತನ್ ರೈ ಮಾಣಿ, ರಾಮಣ್ಣದ ತೋಟದ ಕೆಲಸದಾಳುವಾಗಿ ದಯಾನಂದ ರೈ ಬೆಟ್ಟಂಪಾಡಿ, ರಾಮಣ್ಣನ ಮಗಳು ಪೂಜಾಳ ಪಾತ್ರ ಮಾಡಿದ ದೀಕ್ಷಾ ಡಿ.ರೈ, ತಮ್ಮ ಕೊಗ್ಗಪ್ಪಣ್ಣನಾಗಿ ದೀಪಕ್ ರೈ ಪಾಣಾಜೆ, ಬೋಜನಾಗಿ ಕೌಶಿಕ್ ರೈ ಕುಂಜಾಡಿ, ಧನುವಾಗಿ ಸಂದೀಪ್ ಪೂಜಾರಿ, ಇನ್ಸ್‌ಪೆಕ್ಟರ್ ಆಗಿ ಭರತ್ ಶೆಟ್ಟಿ, ಸಂಜು ಆಗಿ ರವಿ ಸಾಲಿಯಾನ್, ಮೀನಾಕ್ಷಿಯಮ್ಮನಾಗಿ ರೂಪ ವರ್ಕಾಡಿ ಇವರೆಲ್ಲರೂ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಹಾಗೇ ಬಂದು ಹೋಗುವ ಕೊಡಗಿನ ಗ್ರೇಷಿಯಲ್ ಕಲಿಯಂಡ, ಹಾಸ್ಯ ಪಾತ್ರಗಳಲ್ಲಿ ಮಿಂಚಿದ ರಂಜನ್ ಬೋಳಾರ್, ಪುಷ್ಪರಾಜ್ ಬೊಳ್ಳಾರ್ ನೆನಪಲ್ಲಿ ಉಳಿಯುತ್ತಾರೆ.

ಮನೆ ಮಂದಿ ನೋಡಬಹುದಾದ ಸಿನಿಮಾ
ಚಿತ್ರದ ಕಥೆ ಚಿಕ್ಕದಾದರೂ ಅದನ್ನು ನಿರ್ದೇಶಕರು ಹೇಳಿದ ರೀತಿ ಚೆನ್ನಾಗಿದೆ. ದೈವರಾಧನೆಗೆ ಒಂದಿಷ್ಟು ಚ್ಯುತಿ ಬಾರದ ರೀತಿಯಲ್ಲಿ ದೈವದ ಕಾರ್ಣಿಕತೆಯನ್ನು ತೆರೆಯ ಮೇಲೆ ಬಹಳ ಚೆನ್ನಾಗಿ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ತೋರಿಸಿದ್ದಾರೆ. ಚಿತ್ರದ ಛಾಯಾಗ್ರಹಣ ಮತ್ತು ಸಂಕಲನಕ್ಕೆ ಫುಲ್ ಮಾರ್ಕ್ಸ್. ಸಿನಿಮಾದಲ್ಲಿ ಒಂದು ಹಾಡಿದೆ ಇನ್ನೊಂದು ಟೈಟಲ್ ಸಾಂಗಿದೆ. ಸಿನಿಮಾ ನಮ್ಮ ನೆರೆಯ ಕರ್ನೂರು, ಬೆಳ್ಳಾರೆ ಹಾಗೂ ಕಡಬ ಇತ್ಯಾದಿ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿದೆ. ಧರ್ಮದೈವ ಪ್ರೋಡಕ್ಷನ್ ಲಾಂಭನದಲ್ಲಿ ಬಿಳಿಯೂರು ರಾಕೇಶ್ ಭೋಜರಾಜ ಶೆಟ್ಟಿ ನಿರ್ಮಾಪಕರಾಗಿರುವ ಸಿನಿಮಾಕ್ಕೆ ಅರುಣ್ ರೈ ಪುತ್ತೂರು ಛಾಯಾಗ್ರಹಣ, ಹಮೀದ್ ಪುತ್ತೂರು ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ರಾಧೇಶ್ ರೈ ಮೊಡಪ್ಪಾಡಿ ಮತ್ತು ಶ್ರೀನಾಥ್‌ರವರ ಸಂಕಲನ, ನಿಶಾನ್ ರೈ ಮಠಂತಬೆಟ್ಟು ಸಂಗೀತವಿದೆ. ಕುಟುಂಬ ಸಮೇತರಾಗಿ ನೋಡಬಹುದಾದ ಒಂದು ಒಳ್ಳೆಯ ತುಳು ಸಿನಿಮಾ ಎನ್ನುವುದರಲ್ಲಿ ಎರಡು ಮಾತಿಲ್ಲ.

ಪುತ್ತೂರಿನಲ್ಲಿ ಯಶಸ್ವಿ ಪ್ರದರ್ಶನ
ಜು.5 ರಂದು ಸಿನಿಮಾ ತೆರೆಕಂಡಿದ್ದು ಪುತ್ತೂರು ಜಿ.ಎಲ್ ವನ್ ಮಾಲ್‌ನಲ್ಲಿರುವ ಭಾರತ್ ಸಿನಿಮಾಸ್‌ನಲ್ಲಿ ಧರ್ಮದೈವ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ದಿನಂಪ್ರತಿ 6 ದೇಖಾವೆಗಳಲ್ಲಿ ಅಂದರೆ ಬೆಳಿಗ್ಗೆ 11, ಮಧ್ಯಾಹ್ನ1.15, ಸಂಜೆ 3.30 ಮತ್ತು 5.45 ಹಾಗೂ ರಾತ್ರಿ 8 ಮತ್ತು 10.15 ಗಂಟೆಗೆ ಪ್ರದರ್ಶನ ಕಾಣುತ್ತಿದೆ.

LEAVE A REPLY

Please enter your comment!
Please enter your name here