ಪಾಣಾಜೆ: ಇತ್ತೀಚೆಗೆ ನಿಧನರಾದ ಬಿಜೆಪಿಯ ಹಿರಿಯ ಧುರೀಣ, ಸಹಕಾರಿ ಧುರೀಣ ಬಾಲಕೃಷ್ಣ ಭಟ್ ಭರಣ್ಯರವರಿಗೆ ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮತ್ತು ಪಾಣಾಜೆ ಬಿಜೆಪಿ ಶಕ್ತಿ ಕೇಂದ್ರ ವತಿಯಿಂದ ನುಡಿನಮನ ಕಾರ್ಯಕ್ರಮ ಜು. 6 ರಂದು ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯಿತು.
ತತ್ವ ಸಿದ್ದಾಂತದಲ್ಲಿ ಯಾವತ್ತೂ ರಾಜಿ ಮಾಡಿದವರಲ್ಲ – ಮಠಂದೂರು
ಮಾಜಿ ಶಾಸಕ ಸಂಜೀವ ಮಠಂದೂರುರವರು ಮಾತನಾಡಿ ‘ಸಹಕಾರಿ ಕ್ಷೇತ್ರ, ರಾಜಕೀಯ ಕ್ಷೇತ್ರದಲ್ಲಿ ಬಾಲಕೃಷ್ಣ ಭಟ್ ರವರು ರಾಮ ಭಟ್ ರವರ ಒಡನಾಡಿಯಾಗಿದ್ದರು. ಅವರ ಆದರ್ಶ, ಕೆಲಸ ಕಾರ್ಯಗಳು ಇಡೀ ಪುತ್ತೂರಿಗೆ ನೆನಪಿಸುವಂತಹ ಕೆಲಸಗಳಾಗಿವೆ. ಸಮಾಜದ ಉನ್ನತಿಗಾಗಿ ಅವರ ತತ್ವ ಸಿದ್ದಾಂತಗಳಲ್ಲಿ ಅವರ ಯಾವುದೇ ರಾಜೀ ಇರಲಿಲ್ಲ. ವ್ಯವಸ್ತೆಯಲ್ಲಿ ವ್ಯತ್ಯಾಸ ಆಗದಂತೆ ನಿಷ್ಟುರವಾದಿಯಾಗಿದ್ದರು. ಪಕ್ಷದ ಎಲ್ಲಾ ಜವಾಬ್ದಾರಿಗಳನ್ನೂ ಸಮರ್ಥವಾಗಿ ನಿರ್ವಹಿಸಿದವರು. ಓರ್ವ ಸಹಕಾರಿಯಾಗಿ ಇಡೀ ಜಿಲ್ಲೆಯಲ್ಲಿ ಛಾಪು ಮೂಡಿಸಿದವರು. ಊರಿನ ಸರ್ವಾಂಗೀಣ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡು ಎಲ್ಲರ ಹಿತ ಕಾಪಾಡಿಕೊಂಡು ಬಂದ ಮಹಾನುಭಾವರಾಗಿದ್ದಾರೆ’ ಎಂದರು.
ಕಟ್ಟಕಡೆಯ ವ್ಯಕ್ತಿಯೂ ಒಪ್ಪುವ ಕಾರ್ಯ – ಶಶಿಕುಮಾರ್ ರೈ
ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ರವರು ಮಾತನಾಡಿ ‘ಬಾಲಕೃಷ್ಣ ಭಟ್ ರವರು ಎಲ್ಲರನ್ನು ಹುರಿದುಂಬಿಸುವಂತಹ ವ್ಯಕ್ತಿತ್ವ. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವಾಗಿ ಕೆಲಸ ಕಾರ್ಯ ಮಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಒಪ್ಪುವ ಕಾರ್ಯ ಅವರಿಂದಾಗಿದೆ. ಈ ಭಾಗದಲ್ಲಿ ಪ್ರಭಾವಿ ವ್ಯಕ್ತಿಯಾಗಿ ಎಲ್ಲರ ಪ್ರೀತಿ ಪಾತ್ರರಾಗಿ ಬದುಕು ಸಾಗಿಸಿದವರು’ ಎಂದರು.
ಪರಿಪೂರ್ಣ ನಾಯಕರೆನಿಸಿಕೊಂಡವರು – ರಂಗನಾಥ ರೈ
ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಂಗನಾಥ ರೈ ಗುತ್ತು ರವರು ಮಾತನಾಡಿ ‘ಬಿಜೆಪಿ ಶಕ್ತಿ ಕೇಂದ್ರಕ್ಕೆ ಶಕ್ತಿ ಕೊಟ್ಟವರು ಬಾಲಕೃಷ್ಣ ಭಟ್ ರವರು. ಕಾರ್ಯಕರ್ತರನ್ನು ಒಟ್ಟು ಸೇರಿಸುತ್ತಿದ್ದರು. ಸಂಘರ್ಷಕ್ಕಾಗಿ ಅವರು ರಾಜಕೀಯ ಮಾಡಿರಲಿಲ್ಲ. ಸಂಘ ಪರಿವಾರದ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದು, ಪರಿಪೂರ್ಣ ನಾಯಕ ಎಂದೆನಿಸಿಕೊಂಡವರು’ ಎಂದರು.
ಅವರ ಮಾರ್ಗದರ್ಶನದಿಂದ ಸಂಘ ಮೇಲೆ ಬಂತು – ಪದ್ಮನಾಭ ಬೋರ್ಕರ್
ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಬೋರ್ಕರ್ ರವರು ಮಾತನಾಡಿ, ‘ಬಾಲಕೃಷ್ಣ ಭಟ್ ರವರು ನಮ್ಮ ಸಂಘದ ಏಳುಬೀಳಿನ ಅವಧಿಯಲ್ಲಿ ಬೆನ್ನೆಲುಬಾಗಿ ನಿಂತವರು. ಅವರ ಸಂಪೂರ್ಣ ಮಾರ್ಗದರ್ಶನದಲ್ಲಿ ಸಂಘದ ಉನ್ನತಿ ಸಾಧ್ಯವಾಯಿತು. ಸಂಘವು ತೊಂದರೆಗೊಳಗಾದಾಗ ಅವರು ತುಂಬಾ ನೊಂದುಕೊಂಡಿದ್ದರು. ಎಲ್ಲಿಯೂ ಅಪವಾದಕ್ಕೆ ಒಳಗಾದವರಲ್ಲ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಲಾಠಿ ಚಾರ್ಜ್ ಗೂ ಒಳಗಾಗಿದ್ದರೆಂಬುದನ್ನು ಕೇಳಿ ತಿಳಿದುಕೊಂಡಿದ್ದೇನೆ’ ಎಂದ ಅವರು ‘ನಿಷ್ಟುರವಾದಿ, ಸರಳ ಮತ್ತು ಸಜ್ಜನ ವ್ಯಕ್ತಿಯಾಗಿ ಬಾಲಕೃಷ್ಣ ಭಟ್ ರವರು ಓರ್ವ ಆದರ್ಶ ಜೀವನ ನಡೆಸಿದವರು’ ಎಂದರು.
ಜಿಲ್ಲೆಯ ಸಭೆಯಲ್ಲೂ ಶ್ರದ್ಧಾಂಜಲಿ ಸಲ್ಲಿಸಿದ್ದೇವೆ – ಸಾಜ
ಬಿಜೆಪಿ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವರವರು ಮಾತನಾಡಿ, ‘ಬಿಜೆಪಿಯಲ್ಲಿ ಕಾರ್ಯಕರ್ತರ ಸಂಘಟನೆ ಮಾಡಿ ಪಕ್ಷಕ್ಕೆ ಶಕ್ತಿ ತುಂಬಿದ ಬಾಲಕೃಷ್ಣ ಭಟ್ ರವರು ನಮಗೆಲ್ಲಾ ಆದರ್ಶ ವ್ಯಕ್ತಿ. ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಯಲ್ಲಿ ಅವರ ಸೇವೆ ಅನನ್ಯವಾದುದು. ಪಕ್ಷದ ಜಿಲ್ಲೆಯ ಕಾರ್ಯಕಾರಿಣಿ ಸಭೆಯಲ್ಲಿಯೂ ಬಾಲಕೃಷ್ಣ ಭಟ್ ರವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕೆಲಸ ಮಾಡಿದ್ದೇವೆ’ ಎಂದರು.
ರಾಜಕಾರಣದಲ್ಲಿ ಕಪ್ಪುಚುಕ್ಕೆ ಹೊಂದಿದವರಲ್ಲ – ನಾರಾಯಣ ಪ್ರಕಾಶ್
ಕೆಎಂಎಫ್ ನಿರ್ದೇಶಕ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರ್ ರವರು ಮತನಾಡಿ, ‘ಬಾಲಕೃಷ್ಣ ಭಟ್ ರವರು ಪ್ರಾಮಾಣಿಕ ಬದುಕು ಕಟ್ಟಿಕೊಳ್ಳುವ ಸ್ವಭಾವದ ಮೂಲಕ ತನ್ನಂತಹ ಅನೇಕರನ್ನು ಸಮಾಜಕ್ಕೆ ನೀಡಿದವರು. ರಾಜಕಾರಣದಲ್ಲಿ ಎಂದಿಗೂ ಕಪ್ಪುಚುಕ್ಕೆ ಹೊಂದಿದವರಲ್ಲ. ಪಾಣಾಜೆಯಲ್ಲಿ ಅವರು ಬೆಳಯಬೇಕಾದಷ್ಟು ಬೆಳೆಯಲು ಸಾಧ್ಯವಾಗಲಿಲ್ಲ ಎಂಬ ನೋವು ಅವರಲ್ಲಿತ್ತು. ಅವರಲ್ಲಿದ್ದ ಸರ್ವ ಕೌಶಲ್ಯತೆ ಅವರನ್ನು ಉನ್ನತ ಸ್ಥಾನಮಾನಕ್ಕೆ ಕೊಂಡೊಯ್ಯಬೇಕಿತ್ತು. ಸಹಕಾರಿ ರಂಗದಲ್ಲಿಯೂ ಅನೇಕ ಯೋಚನೆ ಯೋಜನೆಗಳು ಅವರಲ್ಲಿತ್ತು.ಮಾತಿನಲ್ಲಿ ಸೌಮ್ಯ, ಕೆಲಸದಲ್ಲಿ ಉಗ್ರವಾದಿಯಾಗಿದ್ದರು. ಜನಸಂಘ ಮತ್ತು ಭಾಜಪದಲ್ಲಿ ಪಾಣಾಜೆಯ ಎರಡು ಕಣ್ಣುಗಳಾಗಿದ್ದದ್ದು ಬಾಲಕೃಷ್ಣ ಭಟ್ ಮತ್ತು ರಾಮ ಭಂಡಾರಿಯವರು. ಪ್ರತಿಯೊಬ್ಬ ಮನೆಯವರ ನೋವಿಗೆ ಸ್ಪಂದಿಸುವ ಗುಣ ಅವರಲ್ಲಿತ್ತು. ಅವರ ಪುಣ್ಯದ ಕೆಲಸಗಳ ಅನುಗ್ರಹ ಅವರ ಮನೆಯವರಿಗೆ ಸಿಗಲಿ’ ಎಂದರು.
ಸಾರ್ವಜನಿಕ ರಸ್ತೆಗಾಗಿ ಪಟ್ಟಾ ಜಾಗವನ್ನೇ ಬಿಟ್ಟುಕೊಟ್ಟಿದ್ದರು – ರವೀಂದ್ರ ಭಂಡಾರಿ
ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ರವೀಂದ್ರ ಭಂಡಾರಿಯವರು ಮಾತನಾಡಿ, ‘ಚುನಾವಣೆಯ ಸಂದರ್ಭದಲ್ಲಿ ನಮ್ಮಂತಹ ಕಾರ್ಯಕರ್ತರಿಗೆ ಊಟ ಚಹಾ, ದೋಸೆ ಎಲ್ಲವೂ ಭರಣ್ಯ ಮನೆಯಲ್ಲಿ ಆಗುತ್ತಿತ್ತು. ಪಾಣಾಜೆಯಲ್ಲಿ ಬಿಜೆಪಿ ಅಂದರೆ ಬಾಲಕೃಷ್ಣ ಭಟ್ ರಾಗಿದ್ದರು. ಸಾಮಾನ್ಯ ಪ್ರಾಮಾಣಿಕ ಕಾರ್ಯಕರ್ತನನ್ನು ಗುರುತಿಸಿ ಅವರಿಗೆ ಪಾರ್ಟಿ, ಪಂಚಾಯತ್ ನಲ್ಲಿ ಸ್ಥಾನಮಾನ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಿದವರು. ಸಾರ್ವಜನಿಕ ರಸ್ತೆಗೆ ಬೇಕಾಗಿ ತಮ್ಮ ಪಟ್ಟಾ ಜಾಗವನ್ನೇ ಬಿಟ್ಟುಕೊಟ್ಟಂತಹ ಮಹಾನುಭಾವ ಅವರು’ ಎಂದರು.
ಅಪರೂಪದ ವ್ಯಕ್ತಿತ್ವ – ಶಿವಕುಮಾರ್
ಕಾರ್ಯಕ್ರಮ ನಿರೂಪಿಸಿದ ನಿವೃತ್ತ ಶಿಕ್ಷಕ ಶಿವಕುಮಾರ್ ಕಾಕೆಕೊಚ್ಚಿಯವರು ಮಾತನಾಡಿ ‘ನಿಷ್ಟುರವಾದಿಯಾಗಿ ಅಜಾತಶತ್ರು ಎಂದೆನಿಸಿಕೊಂಡ ಅಪರೂಪದ ವ್ಯಕ್ತಿತ್ವ ಬಾಲಕೃಷ್ಣ ಭಟ್ ರವರದ್ದು. ತುಂಬಾ ಮಂದಿಯನ್ನು ಸಂಘಟನೆಗೆ ಕೊಟ್ಟವರು, ಅವರ ಕೊಡುಗೆ ಅಪಾರ. ಅವರ ಒಳಿತುಗಳು ಎಂದೆಂದಿಗೂ ಶಾಶ್ವತವಾಗಿರಲಿ’ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ರಣಮಂಗಲ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯ, ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಡಾ. ಅಖಿಲೇಶ್ ಪಿ.ಎಂ., ನಿರ್ದೇಶಕರಾದ ರವಿಶಂಕರ ಶರ್ಮ ಬೊಳ್ಳುಕಲ್ಲು, ಕುಮಾರ ನರಸಿಂಹ ಭಟ್ ಬುಳೆನಡ್ಕ, ನಾರಾಯಣ ರೈ ಕೊಪ್ಪಳ, ರಾಮ ನಾಯ್ಕ, ಸಂಜೀವ ಕೀಲಂಪಾಡಿ, ಗುಣಶ್ರೀ ಪರಾರಿ, ಗೀತಾ ರೈ ಪಡ್ಯಂಬೆಟ್ಟು, ಮಾಜಿ ನಿರ್ದೇಶಕ ಮೂಸೆ ಕುಂಞಿ ಕಂಚಿಲ್ಕುಂಜ, ಬಾಲಕೃಷ್ಣ ಭಟ್ ರವರ ಹಿರಿಯ ಪುತ್ರ ಶರತ್ ಕೃಷ್ಣ ಭರಣ್ಯ, ಪಾಣಾಜೆ ಗ್ರಾ.ಪಂ. ಸದಸ್ಯರಾದ ಸುಭಾಸ್ ರೈ ಚಂಬರಕಟ್ಟ, ಮೋಹನ ನಾಯ್ಕ, ಸುಲೋಚನಾ, ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಸದಾಶಿವ ರೈ ಸೂರಂಬೈಲು, ಬೂತ್ ಅಧ್ಯಕ್ಷ ಗಣಪತಿ ಬಲ್ಯಾಯ, ರಘುನಾಥ ಪಾಟಾಳಿ, ತಾ.ಪಂ. ಮಾಜಿ ಅಧ್ಯಕ್ಷೆ ಸವಿತಾ ಎಂ.ಜಿ, ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಿಇಒ ಹರೀಶ್ ಕುಮಾರ್, ಸಿಬಂದಿಗಳು ಹಾಗೂ ಊರಿನ ಸಹಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.