ರಾಜ್ಯ ಸರಕಾರಿ ನೌಕರರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾ|ಸರಕಾರಿ ನೌಕರರ ಸಂಘದಿಂದ ಶಾಸಕರಿಗೆ ಮನವಿ

0

ಪುತ್ತೂರು:ರಾಜ್ಯ ಸರಕಾರಿ ನೌಕರರ 7ನೇ ವೇತನ ಆಯೋಗದ ಅನುಷ್ಠಾನ, ಎನ್.ಪಿ.ಎಸ್ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಮರು ಜಾರಿ, ಆರೋಗ್ಯ ಸಂಜೀವಿನಿ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಸರಕಾರದ ಗಮನ ಸೆಳೆಯಲು ರಾಜ್ಯ ಸರಕಾರಿ ನೌಕರರ ಸಂಘದ ನಿರ್ದೇಶನದಂತೆ ಸರಕಾರದ ಗಮನ ಸೆಳೆಯಲು ಪುತ್ತೂರು ತಾಲೂಕು ಸರಕಾರಿ ನೌಕರರ ಸಂಘದಿಂದ ಅಧ್ಯಕ್ಷ ಶಿವಾನಂದ ಆಚಾರ್ಯರವರ ನೇತೃತ್ವದಲ್ಲಿ ಶಾಸಕರಾದ ಅಶೋಕ್ ಕುಮಾರ್ ರೈಯವರಿಗೆ ಶಾಸಕರ ಕಛೇರಿಯಲ್ಲಿ ಜು.8 ರಂದು ಮನವಿ ನೀಡಲಾಯಿತು.


7ನೇ ವೇತನ ಆಯೋಗದ ಅನುಷ್ಠಾನಗೊಳಿಸಿ:
ಈ ಹಿಂದಿನ 6ನೇ ವೇತನ ಆಯೋಗವು 2017, ಜುಲೈ ಒಂದರಂದು ರಚನೆಯಾಗಿ 2018, ಜನವರಿ 31ರಂದು ವರದಿ ಸಲ್ಲಿಸಿ ಸರ್ಕಾರವು 2018, ಮಾರ್ಚ್ ಒಂದರAದು ಸರ್ಕಾರಿ ಆದೇಶ ಹೊರಡಿಸಿ ಕೇವಲ 9 ತಿಂಗಳಲ್ಲೇ 6ನೇ ವೇತನ ಆಯೋಗ ಜಾರಿಗೊಳಿಸಲಾಗಿತ್ತು. ಸಂಪ್ರದಾಯದಂತೆ ರಾಜ್ಯ 6ನೇ ವೇತನ ಆಯೋಗದ ವರದಿಯು ಅನುಷ್ಟಾನಗೊಂಡು 2022, ಜೂನ್ 31ಕ್ಕೆ 5 ವರ್ಷ ಪೂರ್ಣಗೊಂಡಿರುವುದರಿಂದ ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳನ್ನು 2022, ಜುಲೈ ಒಂದರಿಂದ ಪರಿಷ್ಕರಣೆಗೊಳಿಸಬೇಕಾಗಿತ್ತು. ಸಂಘದ ಒತ್ತಡದ ಹಿನ್ನೆಲೆಯಲ್ಲಿ ಈ ಹಿಂದಿನ ಸರ್ಕಾರವು 2022, ನವೆಂಬರ್ 19 ರಂದು ನಿವೃತ್ತ ಮುಖ್ಯ ಕಾರ್ಯದರ್ಶಿಗಳಾದ ಕೆ.ಸುಧಾಕರ್ ರಾವ್‌ರವರ ಅಧ್ಯಕ್ಷತೆಯಲ್ಲಿ ರಾಜ್ಯ 7ನೇ ವೇತನ ಆಯೋಗವನ್ನು ರಚಿಸಿ, ಆರು ತಿಂಗಳೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲು ಆದೇಶಿಸಿತ್ತು. ಕರ್ನಾಟಕ ಸರ್ಕಾರವು ರಾಜ್ಯ 7ನೇ ವೇತನ ಆಯೋಗಕ್ಕೆ ನಿಗದಿಪಡಿಸಿದ್ದ ಆರು ತಿಂಗಳ ಅವಧಿಯೊಳಗೆ ವರದಿಯನ್ನು ಪಡೆಯದೇ 2023, ಮೇ 19ರಿಂದ 6 ತಿಂಗಳು ಮತ್ತು 2023, ನವೆಂಬರ್ 6ರಿಂದ 6 ತಿಂಗಳು ಸೇರಿದಂತೆ ಎರಡು ಭಾರಿ ಅವಧಿಯನ್ನು ವಿಸ್ತರಿಸಿರುತ್ತದೆ. ತದನಂತರ ವೇತನ ಆಯೋಗವು 2024, ಮಾರ್ಚ್ ತಿಂಗಳಲ್ಲಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದ್ದು, ವೇತನ ಆಯೋಗ ರಚನೆಯಾಗಿ ಈಗಾಗಲೇ 19 ತಿಂಗಳು ಕಳೆದಿರುತ್ತದೆ. ವೇತನ ಆಯೋಗದ ಮುಂದೆ ಸಂಘವು ರಾಜ್ಯ ಸರ್ಕಾರಿ ನೌಕರರ ವೇತನ-ಭತ್ಯೆಗಳ ಸಂಬಂಧ ಸಮಗ್ರ ವರದಿಯನ್ನು ಸಿದ್ದಪಡಿಸಿ ಶೇ.40% ಫಿಟ್‌ಮೆಂಟ್ ಸೌಲಭ್ಯ ನೀಡಲು ಮನವಿಯನ್ನು ಸಲ್ಲಿಸಲಾಗಿತ್ತು. ಈ ಮಧ್ಯೆ ಸಂಘವು 2023, ಮಾರ್ಚ್ ತಿಂಗಳಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಂಡ ಪರಿಣಾಮ ಸರ್ಕಾರವು 2023, ಏಪ್ರಿಲ್ ತಿಂಗಳಿಗೆ ಅನ್ವಯವಾಗುವಂತೆ ಶೇ.17% ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಿ ಆದೇಶ ಹೊರಡಿಸಿತ್ತು. ರಾಜ್ಯ 7ನೇ ವೇತನ ಆಯೋಗವು ಅಂತಿಮವಾಗಿ 2024, ಮಾರ್ಚ್ ತಿಂಗಳಿನಲ್ಲಿ ಶೇ.27.5 ಫಿಟ್‌ಮೆಂಟ್ ಸೌಲಭ್ಯದೊಂದಿಗೆ ವೇತನ ಪರಿಷ್ಕರಣೆ ಮಾಡಲು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿರುತ್ತದೆ.


ಎನ್.ಪಿ.ಎಸ್. ರದ್ದುಗೊಳಿಸಿ, ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಿ:
ಸಂಘದ ಮತ್ತೊಂದು ಪ್ರಮುಖ ಬೇಡಿಕೆಯಾದ ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಮರು ಸ್ಥಾಪಿಸುವ ಸಲುವಾಗಿ ಈ ಹಿಂದಿನ ಸರ್ಕಾರ ಇತರೆ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ವರದಿ ನೀಡಲು ಸರ್ಕಾರ 2023, ಮಾರ್ಚ್ ತಿಂಗಳಿನಲ್ಲಿ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿತ್ತು. ಸಮಿತಿಯು ಇದುವರೆಗೂ ಒಂದೂ ಸಭೆಯನ್ನು ನಡೆಸಿಲ್ಲ ಹಾಗೂ ಹಳೆ ಪಿಂಚಣಿ ಯೋಜನೆಯನ್ನು ಮರು ಸ್ಥಾಪಿಸಿರುವ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನವನ್ನು ಸಹ ನಡೆಸಿರುವುದಿಲ್ಲ. ಅಲ್ಲದೆ ಈ ಸಂಬಂಧ ಸರ್ಕಾರಕ್ಕೆ ಯಾವುದೇ ವರದಿಯನ್ನು ಇಲ್ಲಿಯವರೆಗೂ ನೀಡಿರುವುದಿಲ್ಲ. ಕೇವಲ ಚುನಾವಣಾ ಪ್ರಣಾಳಿಕೆಯಲ್ಲಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವ ಭರವಸೆಯನ್ನು ನೀಡಿರುತ್ತದೆ. ಸರ್ಕಾರವಿರುವ ಕೆಲವು ರಾಜ್ಯಗಳಲ್ಲಿ ಎನ್.ಪಿ.ಎಸ್. ರದ್ದುಪಡಿಸಿ ಓ.ಪಿ.ಎಸ್. ಜಾರಿಗೊಳಿಸಲು ಆದೇಶ ಹೊರಡಿಸಿವೆ. ಎನ್.ಪಿ.ಎಸ್. ಯೋಜನೆಯಲ್ಲಿ ನೇಮಕಗೊಂಡು ನಿವೃತ್ತಿಯಾಗಿರುವ ಸರ್ಕಾರಿ ನೌಕರರಿಗೆ ಮಾಸಿಕ ಕೇವಲ ರೂ.1500 ಪಿಂಚಣಿ ಲಭ್ಯವಾಗುತ್ತಿದ್ದು, ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 2.50 ಲಕ್ಷ ಎನ್.ಪಿ.ಎಸ್ ಯೋಜನೆ ವ್ಯಾಪ್ತಿಯ ನೌಕರರ ಸಂಧ್ಯಾ ಕಾಲದ ಬದುಕು ಆರ್ಥಿಕ ಭದ್ರತೆಯಿಲ್ಲದೆ ದುಸ್ತರಗೊಳ್ಳುತ್ತಿದೆ. ಈಗಾಗಲೇ ಪಂಜಾಬ್, ರಾಜಸ್ಥಾನ, ಛತ್ತಿಸ್‌ಘಡ, ಜಾರ್ಖಂಡ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿರುವಂತೆ ಹಾಗೂ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಕರ್ನಾಟಕದಲ್ಲೂ ಸಹ ಎನ್.ಪಿ.ಎಸ್. ಯೋಜನೆಯನ್ನು ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವುದು.


ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸಿ:
ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ನಗದು ರಹಿತ ಚಿಕಿತ್ಸೆ ನೀಡುವ “ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ”(ಕೆ.ಎ.ಎಸ್.ಎಸ್)ಗೆ ಈ ಹಿಂದಿನ ರಾಜ್ಯ ಸರ್ಕಾರವು 2021-22ರ ಆಯವ್ಯದಲ್ಲಿ ಘೋಷಿಸಿತ್ತು. ಸಚಿವ ಸಂಪುಟದ ಅನುಮೋದನೆ ಪಡೆದು ಈ ಯೋಜನೆಯ ರೂಪು-ರೇಷೆಗಳನ್ನು ಸಿದ್ಧಪಡಿಸಿ ನಿರ್ವಹಣೆ ಮಾಡಲು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ಗೆ ಜವಾಬ್ದಾರಿಯನ್ನು ನೀಡಿ 2022, ಸೆಪ್ಟೆಂಬರ್ ತಿಂಗಳಿನಲ್ಲಿ ಸರ್ಕಾರಿ ಆದೇಶ ಹೊರಡಿಸಿರುತ್ತದೆ. ಹಿಂದಿನ ಸರ್ಕಾರದ ಮುಖ್ಯಮಂತ್ರಿಗಳು ಈ ಯೋಜನೆಯನ್ನು 2023, ಮಾರ್ಚ್ ತಿಂಗಳಿನಲ್ಲಿ ಸಾಂಕೇತಿಕವಾಗಿ ಲೋಕಾರ್ಪಣೆ ಮಾಡಿರುತ್ತಾರೆ. ಈ ಯೋಜನೆಗೆ ರಾಜ್ಯ ಸರ್ಕಾರಿ ನೌಕರರ ವೇತನದಿಂದ ಪ್ರತಿ ತಿಂಗಳು ವೃಂದವಾರು ವಂತಿಗೆ ಕಟಾವಣೆಯಾಗಲಿದ್ದು, ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊರೆಯಾಗುವುದಿಲ್ಲ. ರಾಜ್ಯದಲ್ಲಿ 2.60 ಲಕ್ಷ ಖಾಲಿ ಹುದ್ದೆಗಳಿದ್ದು, ಹಾಲಿ ನೌಕರರು ಖಾಲಿ ಹುದ್ದೆಗಳ ಕಾರ್ಯಭಾರವನ್ನೂ ಸಹ ನಿರ್ವಹಿಸುತ್ತಿರುವುದರಿಂದ ನೌಕರರು ಒತ್ತಡಕ್ಕೆ ಸಿಲುಕಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು, ಅವಶ್ಯವಿರುವ ಚಿಕತ್ಸೆ ಪಡೆಯುವಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಅನುಷ್ಟಾನಾಧಿಕಾರಿಗಳೂ ತಾಂತ್ರಿಕ ಹಾಗೂ ಇನ್ನಿತರ ಕಾರಣಗಳನ್ನು ನೀಡಿ ಈ ಯೋಜನೆಯನ್ನು ಜಾರಿಗೊಳಿಸಲು ಅನಗತ್ಯ ವಿಳಂಬ ಮಾಡುತ್ತಿದ್ದಾರೆ ಎಂಬುದಾಗಿ ಮನವಿಯಲ್ಲಿ ಉಲ್ಲೇಖಿಸಲಾಗಿದೆ.


ಮನವಿ ನೀಡುವ ಸಂದರ್ಭದಲ್ಲಿ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯ, ರಾಜ್ಯ ಪರಿಷತ್ ಸದಸ್ಯ ಪುರುಷೋತ್ತಮ, ಕಾರ್ಯದರ್ಶಿ ಅಬ್ರಹಾಂ ಎಸ್.ಎ, ಗೌರವಾಧ್ಯಕ್ಷ ರಾಮಚಂದ್ರ, ಉಪಾಧ್ಯಕ್ಷರುಗಳಾದ ಹರಿಪ್ರಕಾಶ್ ಬೈಲಾಡಿ, ವಿಜಯಕುಮಾರ್, ಹೊನ್ನಪ್ಪ ಗೌಡ, ಪದ್ಮಾವತಿ, ಪಿಡಿಒ ಸಂಘದ ಅಧ್ಯಕ್ಷ ನಾಗೇಶ್, ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್, ಡಿ ಗ್ರೂಪ್ ನೌಕರರ ಸಂಘದ ಅಧ್ಯಕ್ಷ ಚಂದ್ರು, ಸರಕಾರಿ ವಾಹನ ಚಾಲಕರ ಸಂಘದ ಮಾಜಿ ಅಧ್ಯಕ್ಷ ಗಿರಿಧರ್ ಗೌಡ, ತೋಟಗಾರಿಕೆ ಇಲಾಖೆಯ ಸುಧೀರ್, ಶಿಕ್ಷಣ ಇಲಾಖೆಯ ಅಶ್ರಫ್, ತನುಜಾ ಝೇವಿಯರ್, ಕಂದಾಯ ಇಲಾಖೆಯ ಸುಲೋಚನಾ, ಚೆನ್ನಪ್ಪ ಗೌಡ, ಆರೋಗ್ಯ ಇಲಾಖೆಯ ದೀಪಿಕಾ ವಾಗ್ಲೆ ಸಹಿತ ತಾಲೂಕಿನ ಎಲ್ಲಾ ಸರಕಾರಿ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ರಾಜ್ಯದಲ್ಲಿಯೇ ಬೃಹತ್ ಸಂಘಟನೆ..
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ರಾಜ್ಯದ 31 ಕಂದಾಯ ಜಿಲ್ಲೆ, 3 ಶೈಕ್ಷಣಿಕ ಜಿಲ್ಲೆ ಹಾಗೂ 183 ತಾಲೂಕುಗಳಲ್ಲಿ ಸಂಘದ ಶಾಖೆಗಳನ್ನು ಹೊಂದಿದ್ದು, 6 ಲಕ್ಷ ರಾಜ್ಯ ಸರ್ಕಾರಿ ನೌಕರರನ್ನು ಪ್ರತಿನಿಧಿಸುವ ಏಕೈಕ ಬೃಹತ್ ಸಂಘಟನೆಯಾಗಿರುತ್ತದೆ. ಸಂಘವು ರಾಷ್ಟ್ರ ಹಾಗೂ ರಾಜ್ಯದಲ್ಲಿ ಸಂಭವಿಸುವ ಪ್ರಕೃತಿ ವಿಕೋಪ, ಉತ್ತರ ಕರ್ನಾಟಕದ ಪ್ರವಾಹ, ಕೋವಿಡ್ ಸಂಕಷ್ಟದಲ್ಲಿ ಸರ್ಕಾರಕ್ಕೆ ಆರ್ಥಿಕ ಸಹಕಾರ ನೀಡಿ ಸೇವಾ ಕಾರ್ಯ ನಿರ್ವಹಿಸುವ ಮೂಲಕ ದೇಶದಲ್ಲಿಯೇ ಮಾದರಿ ಸಂಘಟನೆಯಾಗಿದೆ. ರಾಜ್ಯದಲ್ಲಿ 2.60 ಲಕ್ಷ ಹುದ್ದೆಗಳು ಖಾಲಿಯಿದ್ದರೂ ಸಹ ಸರ್ಕಾರವು ಜನ ಸಾಮಾನ್ಯರ ಕಲ್ಯಾಣ ಹಾಗೂ ರಾಜ್ಯದ ಅಭಿವೃದ್ಧಿಗಾಗಿ ಸರ್ಕಾರ ಜಾರಿಗೊಳಿಸುವ ಯೋಜನೆಗಳನ್ನು ಶ್ರೀಸಾಮಾನ್ಯರಿಗೆ ತಲುಪಿಸುವ ಕಾರ್ಯದ ಜೊತೆ ರಾಜ್ಯದ ಅಭಿವೃದ್ಧಿ ಸೂಚ್ಯಂಕದ ಬೆಳವಣಿಗೆಯಲ್ಲಿ ಹಾಗೂ ಜಿ.ಎಸ್.ಟಿ. ತೆರಿಗೆ ಸಂಗ್ರಹಣೆಯಲ್ಲಿ ಇಡೀ ದೇಶಕ್ಕೆ ಮಾದರಿಯಾಗಲು ಸರ್ಕಾರಿ ನೌಕರರ ಪಾತ್ರ ಪ್ರಮುಖವಾಗಿದೆ. ಇಂತಹ ಕಾರ್ಯಾಂಗದ ನೌಕರರ ಬೇಡಿಕೆಗಳನ್ನು ಈಡೇರಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ.

ತಹಶೀಲ್ದಾರರಿಗೂ ಮನವಿ..
ತಾಲೂಕು ಸರಕಾರಿ ನೌಕರರ ಸಂಘದವರು ಶಾಸಕರಿಗೆ ಮನವಿ ನೀಡಿದ ಬಳಿಕ ಮಿನಿವಿಧಾನ ಸೌಧದಲ್ಲಿರುವ ತಹಶೀಲ್ದಾರ್‌ರವರ ಕಛೇರಿಗೂ ತೆರಳಿ ಸರಕಾರಿ ನೌಕರರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಮನವಿಯನ್ನು ನೀಡಲಾಯಿತು. ಮನವಿ ಸ್ವೀಕರಿಸಿದ ಶಾಸಕ ಅಶೋಕ್ ಕುಮಾರ್ ರೈಯವರು ಈ ಬಗ್ಗೆ ಸರಕಾರದ ಗಮನ ಸೆಳೆಯುತ್ತೇನೆ ಎಂದು ಸರಕಾರಿ ನೌಕರರಿಗೆ ಭರವಸೆಯನ್ನು ನೀಡಿದರು.

LEAVE A REPLY

Please enter your comment!
Please enter your name here