ಪುತ್ತೂರು: ಕುಂಬ್ರ ಮತ್ತು ಪರ್ಪುಂಜ ಪೇಟೆಗೆ ನಿರಂತರವಾಗಿ ವಿದ್ಯುತ್ ಸಮಸ್ಯೆ ಎದುರಾಗುತ್ತಿರುವುದರಿಂದ ಬೇಸತ್ತ ಈ ಭಾಗದ ವರ್ತಕರು ಕುಂಬ್ರ ಮೆಸ್ಕಾಂ ಕಛೇರಿ ತೆರಳಿ ತಮ್ಮ ಅಳಲನ್ನು ತೋಡಿಕೊಂಡರು. ವಿದ್ಯುತ್ ಸಮಸ್ಯೆಯ ಬಗ್ಗೆ ಇದೇ ಸಂದರ್ಭದಲ್ಲಿ ಕುಂಬ್ರ ವರ್ತಕರ ಸಂಘದ ವತಿಯಿಂದ ಮೆಸ್ಕಾಂ ಸಹಾಯಕ ಇಂಜಿನಿಯರ್ ಗುರುದೇವಿ ಮಂತ್ರಣ್ಣನವರ್‌ರವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಕುಂಬ್ರ ಮತ್ತು ಪರ್ಪುಂಜ ಪೇಟೆಗೆ ನಿರಂತರವಾಗಿ ವಿದ್ಯುತ್ ಕೈಕೊಡುತ್ತಿದ್ದು ದಿನದ 12 ಗಂಟೆಯಲ್ಲಿ ಕೇವಲ 4 ಗಂಟೆಗಳು ಮಾತ್ರ ವಿದ್ಯುತ್ ಇರುತ್ತದೆ. ವಿದ್ಯುತ್ತಿನ ಈ ರೀತಿಯ ಕಣ್ಣಮುಚ್ಚಾಲೆಯಿಂದ ವರ್ತಕರು ಬಹಳಷ್ಟು ಸಂಕಷ್ಟ ಪಡುತ್ತಿದ್ದಾರೆ.ಪರ್ಪುಂಜ ಭಾಗದಲ್ಲಿ ಬಾರ್ ಆಂಡ್ ರೆಸ್ಟೋರೆಂಟ್, ತೆಂಗಿನ ಎಣ್ಣೆಯ ಮಿಲ್ ಹಾಗೂ ಗ್ಯಾರೇಜ್ ಹಾಗೇ ಹಲವು ಅಂಗಡಿ, ಹೊಟೇಲ್‌ಗಳಿವೆ ಇದಲ್ಲದೆ ಕುಂಬ್ರ ಪೇಟೆಯಲ್ಲೂ ಬಹಳಷ್ಟು ವಾಣಿಜ್ಯ ಸಂಕೀರ್ಣ, ಮಳಿಗೆಗಳಿವೆ ಎಂದ ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳರವರು, ನಿರಂತರವಾಗಿ ವಿದ್ಯುತ್ ಕೈ ಕೊಡುತ್ತಿರುವುದರಿಂದ ವರ್ತಕರು ಕಂಗಾಲಾಗಿದ್ದಾರೆ ಎಂದು ತಿಳಿಸಿದರು. ಆಯಿಲ್ ಮಿಲ್‌ನ ಮಾಲಕರಾದ ಅಜಿತ್ ಕುಮಾರ್ ರೈ ಮಾತನಾಡಿ, ನಿರಂತರವಾಗಿ ವಿದ್ಯುತ್ ಕೈ ಕೊಡುವುದರಿಂದ ನಮಗೆ ಮಿಲ್ ನಡೆಸಲು ಕಷ್ಟವಾಗುತ್ತಿದೆ. ಫ್ಯಾಕ್ಟರಿಯನ್ನೇ ಬಂದ್ ಮಾಡಬೇಕಾಗುತ್ತದೋ ಏನೋ ಎಂಬ ಭಯ ಕಾಡುತ್ತಿದೆ. ಸರಿಯಾದ ರೀತಿಯಲ್ಲಿ ವಿದ್ಯುತ್ ಸರಬರಾಜು ಆದರೆ ಮಾತ್ರ ಫ್ಯಾಕ್ಟರಿ ನಡೆಸಲು ಸಾಧ್ಯ ಎಂದು ತಿಳಿಸಿದರು. ಗ್ಯಾರೇಜ್ ಮಾಲಕರಾದ ಸಂತೋಷ್ ಆಚಾರ್ಯರವರು ತಮ್ಮ ಅಳಲನ್ನು ತೋಡಿಕೊಂಡರು. ಹಾಗೇ ವರ್ತಕರ ಸಂಘದ ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ, ಮೂಕಾಂಬಿಕ ಫ್ರಿಂಟರ‍್ಸ್‌ನ ದಿವಾಕರ ಶೆಟ್ಟಿಯವರು ಕೂಡ ವಿದ್ಯುತ್ ಸಮಸ್ಯೆಯ ಬಗ್ಗೆ ತಿಳಿಸಿದರು.
ಸಮಸ್ಯೆ ಇರೋದು ಎಲ್ಲಿ..?
ಕುಂಬ್ರ, ಪರ್ಪುಂಜ ಪೇಟೆಗೆ ಪಾಣಾಜೆ ಫೀಡರ್‌ನಿಂದ ವಿದ್ಯುತ್ ಸರಬರಾಜು ಆಗುತ್ತಿದ್ದು ಪಾಣಾಜೆ, ಆರ್ಲಪದವು ಈ ಭಾಗದಲ್ಲಿ ಲೈನ್‌ನಲ್ಲಿ ಯಾವುದೇ ಸಮಸ್ಯೆ ಬಂದರೂ ಕುಂಬ್ರ, ಪರ್ಪುಂಜ ಭಾಗಕ್ಕೆ ವಿದ್ಯುತ್ ಕಡಿತ ಮಾಡಬೇಕಾಗುತ್ತದೆ. ಪರ್ಪುಂಜ ಮತ್ತು ಚೆಲ್ಯಡ್ಕದಲ್ಲಿ ಬ್ರೇಕರ್ ಇದ್ದು ಇಲ್ಲಿ ಆಫ್ ಮಾಡಿ ಈ ಭಾಗಕ್ಕೆ ವಿದ್ಯುತ್ ಕೊಡಬಹುದಲ್ವಾ ಎಂದು ಶ್ಯಾಮ್‌ಸುಂದರ ರೈ ಕೊಪ್ಪಳ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜೆಇ ರವೀಂದ್ರರವರು, ತಕ್ಷಣಕ್ಕೆ ಬ್ರೇಕರ್ ಆಫರ್ ಮಾಡಲು ಸಾಧ್ಯವಾಗುತ್ತಿಲ್ಲ ಸಮಸ್ಯೆ ಆಗುತ್ತದೆ ಎಂದು ತಿಳಿಸಿದರು.
ಸದ್ಯಕ್ಕೆ ಏನು ಪರಿಹಾರ..?
ಕುಂಬ್ರ, ಪರ್ಪುಂಜ ಭಾಗಕ್ಕೆ ಪಾಣಾಜೆ ಫೀಡರ್‌ನಿಂದ ವಿದ್ಯುತ್ ಸರಬರಾಜು ಆಗುತ್ತಿದೆ. ಪಾಣಾಜೆ ಫೀಡರ್‌ನಿಂದ ಪುತ್ತೂರು 2, ಬೆಟ್ಟಂಪಾಡಿ ಭಾಗಕ್ಕೆ ವಿದ್ಯುತ್ ಸರಬರಾಜು ಆಗುತ್ತಿದೆ. ಸದ್ಯಕ್ಕೆ ಪರ್ಪುಂಜ ಭಾಗಕ್ಕೆ ಇರ್ದೆ ಫೀಡರ್‌ನಿಂದ ಲಿಂಕ್ ಲೈನ್ ಮಾಡಿ ಕೊಡುತ್ತೇವೆ ಹಾಗೇ ಕುಂಬ್ರಕ್ಕೆ ಟೌನ್ ಫೀಡರ್‌ನ ಕಾಮಗಾರಿ ನಡೆಯುತ್ತಿದೆ ಎಂದು ಸಹಾಯಕ ಇಂಜಿನಿಯರ್ ಗುರುದೇವಿ ಹಾಗೂ ಜೆಇ ರವೀಂದ್ರರವರು ಭರವಸೆ ನೀಡಿದರು.
ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯರವರ ನೇತೃತ್ವದಲ್ಲಿ ಹೋದ ನಿಯೋಗದಲ್ಲಿ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳ, ಪ್ರಧಾನ ಕಾರ್ಯದರ್ಶಿ ಭವ್ಯ ರೈ, ಮಾಜಿ ಅಧ್ಯಕ್ಷರುಗಳಾದ ಮೆಲ್ವಿನ್ ಮೊಂತೆರೋ, ನಾರಾಯಣ ಪೂಜಾರಿ ಕುರಿಕ್ಕಾರ, ದಿವಾಕರ ಶೆಟ್ಟಿ, ಸದಸ್ಯರುಗಳಾದ ನಿಹಾಲ್ ಶೆಟ್ಟಿ, ಸಂತೋಷ್ ಕುಮಾರ್ ಆಚಾರ್ಯ, ಅಜಿತ್ ಕುಮಾರ್ ರೈ ಉಪಸ್ಥಿತರಿದ್ದರು.
ತಿಂಗಳಿಗೆ ರೂ. 50ಸಾವಿರ ವಿದ್ಯುತ್ ಬಿಲ್…!
ಡೀಸೆಲ್‌ಗೆ 60 ಸಾವಿರ ರೂ. ಬೇಕು…?
ಪರ್ಪುಂಜದಲ್ಲಿರುವ ಚಾವಡಿ ಬಾರ್ ಆಂಡ್ ರೆಸ್ಟೋರೆಂಟ್‌ನ ನಿಹಾಲ್ ಶೆಟ್ಟಿಯವರು ಮಾತನಾಡಿ, ವಿದ್ಯುತ್ ಸಮಸ್ಯೆಯಿಂದ ನಮಗೆ ಬಹಳಷ್ಟು ತೊಂದರೆಯಾಗಿದೆ. ನಾವು ತಿಂಗಳಿಗೆ ರೂ.50 ಸಾವಿರದಷ್ಟು ವಿದ್ಯುತ್ ಬಿಲ್ ಪಾವತಿ ಮಾಡುತ್ತೇವೆ. ಆದರೆ ಸುಮಾರು 60 ಸಾವಿರ ರೂಪಾಯಿ ಡೀಸೆಲ್‌ಗೆ ಖರ್ಚಾಗುತ್ತದೆ. ತಿಂಗಳಿಗೆ 1 ಲಕ್ಷದ 10 ಸಾವಿರ ರೂಪಾಯಿ ಖರ್ಚು ಆಗುತ್ತದೆ. ಹೀಗೆ ಆದರೆ ನಾವು ವ್ಯಾಪಾರ ಹೇಗೆ ಮಾಡುವುದು. ಬಂದ ಲಾಭವೆಲ್ಲಾ ಡೀಸೆಲ್ ಮತ್ತು ವಿದ್ಯುತ್ ಬಿಲ್‌ಗೆ ಹೋದರೆ ವ್ಯಾಪಾರ ಮಾಡಲು ಸಾಧ್ಯವೇ? ನಿರಂತರ ವಿದ್ಯುತ್ ಕೈ ಕೊಟ್ಟರೆ ನಾವು ಹೇಗೆ ವ್ಯಾಪಾರ ಮಾಡುವುದು ಎಂದು ನಿಹಾಲ್ ಪ್ರಶ್ನಿಸಿದರು.