ಉಪ್ಪಿನಂಗಡಿ: ಬಾಗಿಲಿನ ಚಿಲಕ ಮುರಿದು ಕಳ್ಳತನಕ್ಕೆಂದು ಮನೆಗೆ ನುಗ್ಗಿದ ಕಳ್ಳನೋರ್ವ ಮನೆಯವರು ಎಚ್ಚರಗೊಂಡು ಬೊಬ್ಬೆ ಹೊಡೆದಾಗ ಓಡಿ ಪರಾರಿಯಾದ ಘಟನೆ ಉಪ್ಪಿನಂಗಡಿ ಬಳಿಯ ಪೆರಿಯಡ್ಕದ ಕುಂಟಿನಿ ಎಂಬಲ್ಲಿ ಜು.13ರ ನಸುಕಿನ ಜಾವ ನಡೆದಿದೆ.
ಇಲ್ಲಿನ ರೋಹಿತ್ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಜು.3ರಂದು ರಾತ್ರಿ ಮನೆಯವರು ಊಟ ಮಾಡಿ ಮಲಗಿದ್ದರು. ಜು.13ರ ನಸುಕಿನ ಜಾವ ಸುಮಾರು 4.30ರ ಸಮಯದಲ್ಲಿ ಇವರ ಮನೆಯ ಹಿಂಬಾಗಿಲ ಚಿಲಕ ಮುರಿದು ಮನೆಯೊಳಗೆ ಪ್ರವೇಶಿಸಿ ಕೋಣೆಯಲ್ಲಿ ಕಳವು ಮಾಡಲು ಪ್ರಯತ್ನಿಸುತ್ತಿರುವಾಗ ಅಲ್ಲಿ ಮಲಗಿದ್ದ ರೋಹಿತ್ ಅವರ ತಾಯಿಗೆ ಎಚ್ಚರವಾಗಿದ್ದು, ಕಳ್ಳನನ್ನು ನೋಡಿ ಅವರು ಬೊಬ್ಬೆ ಹಾಕಿದ್ದಾರೆ. ಆಗ ರೋಹಿತ್ ಅವರು ಎದ್ದು ಬಂದಾಗ ಕಳ್ಳ ಹಿಂಬಾಗಿಲ ಮೂಲಕ ಓಡಿ ಪರಾರಿಯಾಗಿದ್ದಾನೆ. ಚಿಲಕ ಮುರಿಯಲು ಪ್ರಯತ್ನಿಸಿದ್ದ ಸ್ಕ್ರೂ ಡ್ರೆವರ್ ಆತ ಮನೆಯಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಮೂರನೇ ಘಟನೆ:
ಮನೆಯ ಹಿಂಬಾಗಿಲು ಮುರಿದು ಕಳ್ಳತನಕ್ಕೆ ಪ್ರಯತ್ನಿಸಿರುವುದು ಈ ಪರಿಸರದಲ್ಲಿ ಇದು ಮೂರನೇ ಘಟನೆಯಾಗಿದೆ. ಸುಮಾರು ಒಂದು ತಿಂಗಳ ಹಿಂದೆ ರೋಹಿತ್ ಅವರ ಮನೆಯಿಂದ ಸುಮಾರು 50 ಮೀಟರ್ ದೂರದ ಮನೆಗೆ ನಸುಕಿನ ಜಾವ ಸುಮಾರು 4 ರಿಂದ 4.30ರ ಸಮಯದಲ್ಲಿ ಕಳ್ಳನೋರ್ವ ಹಿಂಬಾಗಿಲ ಚಿಲಕ ಮುರಿದು ಒಳಗೆ ಪ್ರವೇಶಿಸಿದ್ದು, ಮನೆಯವರು ಎಚ್ಚರಗೊಂಡಾಗ ಓಡಿ ಪರಾರಿಯಾಗಿದ್ದಾನೆ. ಕಳೆದ ಮೂರು ದಿನಗಳ ಹಿಂದೆ ಕೂಡಾ ರೋಹಿತ್ ಅವರ ಮನೆಯ ಪಕ್ಕದ ಮನೆಗೂ ಹಿಂಬಾಗಿಲ ಚಿಲಕ ಮುರಿದು ಕಳ್ಳ ಒಳಗೆ ಪ್ರವೇಶಿಸಿದ್ದು, ಆಗ ಕೂಡಾ ಮನೆಯವರು ಎಚ್ಚರಗೊಂಡಾಗ ಓಡಿ ಪರಾರಿಯಾಗಿದ್ದಾನೆ. ಇದೆಲ್ಲಾ ಅದೇ ಪರಿಸರದಲ್ಲಿರುವ ಒಬ್ಬನದ್ದೇ ಕೃತ್ಯವೆಂಬ ಸಂಶಯ ವ್ಯಕ್ತವಾಗುತ್ತಿದೆ.