ಪುಣ್ಚಪ್ಪಾಡಿ ಶಾಲೆಗೆ ಎಮ್ಆರ್ ಪಿಎಲ್ ನಿಂದ ಶೌಚಾಲಯ ಕೊಡುಗೆ

0

ಸವಣೂರು: ಪುಣ್ಚಪ್ಪಾಡಿ ಗ್ರಾಮದ ಪುಣ್ಚಪ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಎಮ್ಆರ್ ಪಿಎಲ್ ವತಿಯಿಂದ ಕೊಡುಗೆಯಾಗಿ ನಿರ್ಮಿಸಿದ ಶೌಚಾಲಯವನ್ನು ಶಾಲೆಗೆ ಹಸ್ತಂತರಿಸಲಾಯಿತು.

ಹಸ್ತಾಂತರ ಕಾರ್ಯಕ್ರಮದ ಉದ್ಘಾಟನೆಯನ್ನು ಎಮ್ಆರ್ ಪಿಎಲ್ ಸಂಸ್ಥೆಯ ಸಿಎಸ್ಆರ್ ಯೋಜನೆಯ ಅಸಿಸ್ಟೆಂಟ್ ಮ್ಯಾನೇಜರ್ ಹರೀಶ್‌ ರಾವ್ ಹಾಗೂ ಸವಣೂರು ಗ್ರಾಮ ಪಂಚಾಯತ್‌ ಅಧ್ಯಕ್ಷೆ ಸುಂದರಿ ಬಿ ಎಸ್ ನೆರವೇರಿಸಿದರು. ಬಳಿಕ ಮಾತನಾಡಿದ ಹರೀಶ್ ರಾವ್ ರವರು ಎಮ್ಆರ್ಪಿಎಲ್ ಸಂಸ್ಥೆಯು ಪ್ರತಿ ವರ್ಷ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಹಲವು ಕೊಡುಗೆಗಳನ್ನು ನೀಡುತ್ತಾ ಬಂದಿದ್ದು ಸರ್ಕಾರಿ ಶಾಲೆಗಳಲ್ಲಿ ಸುಸಜ್ಜಿತ ಶೌಚಾಲಯದ ನಿರ್ಮಾಣ ಮೊದಲ ಆದ್ಯತೆಯಾಗಿದೆ. ಸ್ವಚ್ಛತೆಯ ಜಾಗೃತಿಯನ್ನು ಮಕ್ಕಳು, ಪೋಷಕರು, ಸಮಾಜವು ಒಟ್ಟಾಗಿ ನಿರ್ವಹಿಸಬೇಕು. ಸಂಸ್ಥೆಯ ಕೊಡುಗೆಯನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಿ ಹಾಗೂ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನಾವೆಲ್ಲರೂ ಕೈ ಜೋಡಿಸೋಣ ಎಂದರು.

ಸವಣೂರು ಗ್ರಾಮ ಪಂಚಾಯತ್‌ ಅಧ್ಯಕ್ಷೆ ಸುಂದರಿ ಬಿ.ಎಸ್ ಮಾತನಾಡಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡುತ್ತಿರುವ ಎಮ್ಆರ್ಪಿಎಲ್ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಹಾಗೂ ಪುಣ್ಚಪ್ಪಾಡಿ ಶಾಲೆಯ ಅಭಿವೃದ್ಧಿಗೆ ದುಡಿಯುತ್ತಿರುವ ಶಾಲೆಯ ಎಸ್ಡಿಎಮ್.ಸಿ ಹಿರಿಯ ವಿದ್ಯಾರ್ಥಿಗಳು, ಊರ ವಿದ್ಯಾಭಿಮಾನಿಗಳಿಗೆ ಅಭಿನಂದನೆ ತಿಳಿಸಿದರು.

ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪಿ.ಡಿ. ಕೃಷ್ಣ ಕುಮಾರ್ ರೈ ಮಾತನಾಡಿ ಶಾಲೆಗೆ ಕೊಡುಗೆ ಎಮ್ಆರ್ ಪಿಎಲ್ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿ ನಮ್ಮ ಪುಣ್ಚಪ್ಪಾಡಿ ಶಾಲೆಯು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದು ಎಲ್ಲರೂ ಕೈ ಜೋಡಿಸಿ ಹಳ್ಳಿ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಸವಣೂರು ಗ್ರಾಮ ಪಂಚಾಯತ್‌ ಉಪಾಧ್ಯಕ್ಷರಾದ ಜಯಶ್ರೀ, ಸದಸ್ಯರಾದ ಶೀನಪ್ಪ ಶೆಟ್ಟಿ ನೆಕ್ರಾಜೆ, ಗಿರಿಶಂಕರ ಸುಲಾಯ, ಯಶೋಧ, ಬಾಬು ಜರಿನಾರು, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರಾಧಾಕೃಷ್ಣ ದೇವಸ್ಯ, ಉಪಾಧ್ಯಕ್ಷೆ ಸರಿತಾ, ಇಂಜಿನಿಯರ್ ಸುಕೇಶ್ ರೈ , ಅಭಿಷೇಕ್, ಎಸ್.ಡಿ.ಎಮ್.ಸಿ. ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶಾಲಾ ಮುಖ್ಯಗುರು ರಶ್ಮಿತಾ ನರಿಮೊಗರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪದವೀಧರ ಶಿಕ್ಷಕಿ ಶೋಭಾ ಕೆ. ಸ್ವಾಗತಿಸಿ, ಚಂದ್ರಿಕಾ ಎಸ್ ವಂದಿಸಿದರು. ತೃಪ್ತಿ ಹಾಗೂ ಸವಿತಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here