ಅಡ್ಡಹೊಳೆ: ಮಹಿಳೆಯ ಕತ್ತಿನಿಂದ ಚಿನ್ನದ ಸರ ಎಗರಿಸಲು ಯತ್ನಿಸಿದ ಆರೋಪಿಗಳು ಪೊಲೀಸ್ ವಶಕ್ಕೆ

0

ನೆಲ್ಯಾಡಿ: ಗ್ರಾಹಕರ ಸೋಗಿನಲ್ಲಿ ಬಂದ ಇಬ್ಬರು ಅಪರಿಚಿತರು ಅಂಗಡಿ ಮಾಲಕಿಯ ಕತ್ತಿನಿಂದ ಚಿನ್ನದ ಸರ ಎಗರಿಸಲು ಯತ್ನಿಸಿ ಪರಾರಿಯಾಗುತ್ತಿದ್ದ ವೇಳೆ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು ಪೊಲೀಸ್ ವಶವಾಗಿರುವ ಘಟನೆ ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ಜು.15ರಂದು ಸಂಜೆ ನಡೆದಿದೆ.

ಮಂಗಳೂರು ಕಡೆಯಿಂದ ಆಕ್ಟೀವ್ ಹೊಂಡಾದಲ್ಲಿ ಬಂದ ಅಪರಿಚಿತರಿಬ್ಬರು ಅಡ್ಡಹೊಳೆಯಲ್ಲಿರುವ ಪ್ರವೀಣ್ ಎಂಬವರ ಮಾಲಕತ್ವದ ಡ್ರೈ ಫ್ರುಟ್ಸ್ ಹಾಗೂ ಕೊಬ್ಬರಿ ಎಣ್ಣೆ ಮಾರಾಟದ ’ಅಡ್ಲು ಸ್ಪೈಸಸ್’ ಅಂಗಡಿಗೆ ಹೋಗಿ ಅಂಗಡಿಯಲ್ಲಿದ್ದ ಪ್ರವೀಣ್ ಅವರ ತಾಯಿ ತ್ರೇಸಿಯಮ್ಮ ಅವರಲ್ಲಿ ಸಿಗರೇಟ್, ಲೇಸ್ ಸೇರಿದಂತೆ ವಿವಿಧ ಸಾಮಾಗ್ರಿಗಳನ್ನು ಕೇಳಿ ಪಡೆದುಕೊಂಡಿದ್ದಾರೆ. ಆ ಬಳಿಕ ತ್ರೇಸಿಯಮ್ಮ ಅವರ ಗಮನ ಬೇರೆಡೆ ಸೆಳೆದು ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಎಗರಿಸಲು ಕೈ ಹಾಕಿದ್ದಾರೆ. ಈ ವೇಳೆ ತ್ರೇಸಿಯಮ್ಮ ಅವರು ಬೊಬ್ಬೆ ಹಾಕುತ್ತಿದ್ದಂತೆ ತಾವು ಬಂದ ಆಕ್ಟೀವ್ ಹೊಂಡಾದಲ್ಲಿ ರಾಷ್ಟ್ರೀಯ ಹೆದ್ದಾರಿ ಮೂಲಕ ಬೆಂಗಳೂರು ಕಡೆಗೆ ಪರಾರಿಯಾಗಿದ್ದರು. ಈ ವಿಚಾರ ತಿಳಿದು ಕಾರ್ಯಾಚರಣೆಗಿಳಿದ ಸ್ಥಳೀಯ ಸಾರ್ವಜನಿಕರು ಗುಂಡ್ಯದಲ್ಲಿ ಇಬ್ಬರನ್ನು ವಶಕ್ಕೆ ಪಡೆದುಕೊಂಡು ಪೊಲೀಸರಿಗೊಪ್ಪಿಸಿದ್ದಾರೆ. ಆರೋಪಿಗಳನ್ನು ಬೆಂಗಳೂರು ಯಶವಂತಪುರ ಮೂಲಕ ರೋಹಿತ್ ಹಾಗೂ ಅಶೋಕ್ ಎಂದು ಹೇಳಲಾಗಿದ್ದು ಇವರು ಬೆಂಗಳೂರಿನಿಂದ ಮಂಗಳೂರಿಗೆ ರೈಲಿನಲ್ಲಿ ಬಂದು ಮಂಗಳೂರಿನಿಂದ ಆಕ್ಟೀವ್ ಹೊಂಡಾವೊಂದನ್ನು ಕಳವುಗೈದು ಅದರಲ್ಲಿ ಬೆಂಗಳೂರಿಗೆ ಹೋಗುತ್ತಿದ್ದರು ಎನ್ನಲಾಗಿದೆ. ಅಲ್ಲದೇ ಇವರಲ್ಲಿ ನೂರಾರು ಬೀಗ ಕೀಗಳೂ ಇತ್ತು ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here