- ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್‌ನ ದೊಡ್ಡತಪ್ಪಲು ಎಂಬಲ್ಲಿ ಗುಡ್ಡ ಕುಸಿದು ಚಲಿಸುತ್ತಿದ್ದ ಒಮ್ನಿ ಮೇಲೆ ಬಿದ್ದ ಪರಿಣಾಮ ಒಮ್ನಿ ಜಖಂಗೊಂಡು ಇಬ್ಬರು ಪ್ರಾಣಾಪಯದಿಂದ ಪಾರಾದ ಘಟನೆ ಜು.18ರಂದು ನಸುಕಿನ ಜಾವ ನಡೆದಿದೆ.
- ಒಮ್ನಿ ಚಾಲಕ ಬೇಲೂರು ತಾಲೂಕಿನ ಬಿಕ್ಕೊಡು ಮೂಲದ ಶರತ್ ಹಾಗೂ ಅಖಿಲೇಶ್ ಎಂಬವರು ಗಾಯಗೊಂಡು ಪ್ರಾಣಾಪಯದಿಂದ ಪಾರಾಗಿದ್ದಾರೆ. ಇವರು ಮಂಗಳೂರು ಕಡೆಯಿಂದ ಸಕಲೇಶಪುರ ಮಾರ್ಗವಾಗಿ ಹಿಂತಿರುಗಿ ಬರುವ ಸಂದರ್ಭ ನಸುಕಿನ ಜಾವ 2.30ಕ್ಕೆ ಸಕಲೇಶಪುರ ಸಮೀಪ ಶಿರಾಡಿ ಘಾಟ್‌ನ ದೊಡ್ಡತಪ್ಪಲು ಎಂಬಲ್ಲಿಗೆ ತಲುಪುತ್ತಿದ್ದಂತೆ ಗುಡ್ಡ ಕುಸಿದು ಒಮ್ನಿ ಮೇಲೆಯೇ ಬಿದ್ದಿದೆ. ಪರಿಣಾಮ ಒಮ್ನಿ ಕಾರು ಮಣ್ಣಿನಡಿಯಲ್ಲಿ ಹೂತುಹೋಗಿದೆ. ಈ ಸಂದರ್ಭದಲ್ಲಿ ಅಲ್ಲೇ ಇದ್ದ ಹೆದ್ದಾರಿ ಕಾಮಗಾರಿ ಗುತ್ತಿಗೆದಾರ ಕಂಪನಿಯ ಬಿಹಾರ ಮೂಲದ ಕಾರ್ಮಿಕರು ಅಖಿಲೇಶ್, ಶರತ್ ಅವರನ್ನು ವಾಹನದಿಂದ ಹೊರ ತೆಗೆದು ಪ್ರಾಣ ಉಳಿಸಿದ್ದಾರೆ. ಅಖಿಲೇಶ್ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು ಶರತ್ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
- ಭೂ ಕುಸಿತದಿಂದ ಶಿರಾಡಿ ಘಾಟ್‌ನಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಹೆದ್ದಾರಿಯ ಎರಡೂ ಬದಿಯಲ್ಲೂ 5 ಕಿ.ಮೀ.ದೂರದ ತನಕ ವಾಹನಗಳು ಸಾಲುಗಟ್ಟಿ ನಿಂತಿದ್ದು ಟ್ರಾಫಿಕ್ ಜಾಮ್ ಸಹ ಉಂಟಾಗಿತ್ತು. ಬದಲಿ ರಸ್ತೆ ಮೂಲಕ ವಾಹನ ಸಂಚಾರಕ್ಕೆ ಪೊಲೀಸರು ಅವಕಾಶ ಮಾಡಿಕೊಟ್ಟಿದ್ದಾರೆ.