ಶಿರಾಡಿ ಘಾಟ್‌ನಲ್ಲಿ ಬೆಳಗ್ಗೆಯಿಂದ ಸಂಜೆ 6ರ ತನಕ ವಾಹನ ಸಂಚಾರಕ್ಕೆ ಅವಕಾಶ

0

ಸುಬ್ರಹ್ಮಣ್ಯ  : ಕರಾವಳಿ, ಮಲೆನಾಡು ಭಾಗದಲ್ಲಿ ವಿಪರೀತ ಮಳೆ, ಭೂಕುಸಿತ ಸಂಭವಿಸಿದ ಹಿನ್ನೆಲೆ ಬೆಂಗಳೂರಿನಿಂದ ಕರಾವಳಿ ಭಾಗಗಳಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿ ರಸ್ತೆಯಲ್ಲಿ ದಿನಪೂರ್ತಿ ವಾಹನ ಸಂಚಾರ ನಿಷೇಧಿಸಿ ಹೊರಡಿಸಿದ್ದ ಆದೇಶವನ್ನು ಶುಕ್ರವಾರ ಹಾಸನ ಜಿಲ್ಲಾಡಳಿತ ವಾಪಸ್‌ ಪಡೆದು, ನಿರ್ಬಂಧಿತ ನಿಯಮಗಳಡಿ ವಾಹನ ಸಂಚಾರಕ್ಕೆ ಅವಕಾಶ ನೀಡಿ ಹೊಸ ಆದೇಶ ಹೊರಡಿಸಿದೆ.

ಶಿರಾಡಿ ಘಾಟಿಯಲ್ಲಿ ಶನಿವಾರ(ಜು.20)ದಿಂದ ಬೆಳಗ್ಗೆ 6ರಿಂದ ಸಂಜೆ 6ರ ತನಕ ಶಿರಾಡಿ ಹೆದ್ದಾರಿ ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು  ಸಕಲೇಶಪುರ ಉಪವಿಭಾಗಾಧಿಕಾರಿ ಶೃತಿ ತಿಳಿಸಿದ್ದಾರೆ. ರಾತ್ರಿ  ಅವಧಿಯಲ್ಲಿ ವಾಹನ ಸಂಚಾರಕ್ಕೆ ನಿಷೇಧಿಸಿದೆ. ಗುರುವಾರ ಬೆಳಿಗ್ಗೆ ದೊಡ್ಡತಪ್ಲು ಬಳಿ ಗುಡ್ಡ ಕುಸಿತ ಸಂಭವಿಸಿ, ತಾತ್ಕಾಲಿಕ ತಡೆ ಹೇರಲಾಗಿತ್ತು.

ಹೆಚ್ಚುವರಿ ರೈಲು ಸಂಚಾರ
ಶಿರಾಡಿ ಘಾಟಿಯಲ್ಲಿ ವಾಹನ ಸಂಚಾರಕ್ಕೆ ತಡೆ ನೀಡಿದ್ದರಿಂದ  ಬಸ್‌ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಸಂಕಷ್ಟ ಅನುಭವಿಸಬೇಕಾಗಿದೆ.ದಕ್ಷಿಣ ಕನ್ನಡ ಸಂಸದ  ಕ್ಯಾ.ಬ್ರಿಜೇಶ್‌ ಚೌಟ ಮನವಿ ಮೇರೆಗೆ  ಹೆಚ್ಚುವರಿ ರೈಲು ಸಂಚಾರಕ್ಕೆ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ. 

ಭಾರಿ ವಾಹನ ದಟ್ಟಣೆ; ಪ್ರಯಾಣಿಕರ ಪರದಾಟ: 
ಗುರುವಾರ  ರಾತ್ರಿಯಿಂದ ವಾಹನ ಸಂಚಾರ ನಿರ್ಬಂಧ ಹಿನ್ನೆಲೆಯಲ್ಲಿ ರಸ್ತೆ ಮಧ್ಯೆಯೇ ನೂರಾರು ವಾಹನಗಳು ನಿಂತಿದ್ದು, ನಡು ರಸ್ತೆಯಲ್ಲಿಯೇ ದೊಡ್ಡ ದೊಡ್ಡ ಟ್ರಕ್ ಹಾಗೂ ಲಾರಿಗಳ ಚಾಲಕರು ಪರದಾಡುವಂತಾಗಿದೆ. ಶಿರಾಡಿ ಘಾಟ್‌ ಸಂಪರ್ಕಿಸುವ ಗುಂಡ್ಯಾ ಬಳಿ ಭಾರಿ ವಾಹನಗಳು ನಿಂತು ಸಂಚಾರಕ್ಕೆ ಅಡ್ಡಿಯಾಗಿದೆ. ಊಟ, ತಿಂಡಿ, ಕುಡಿಯುವ ನೀರು, ಶೌಚಾಲಯ ಇಲ್ಲದೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. 

ಇನ್ನು ಸರತಿ ಸಾಲಿನಲ್ಲಿ ಸಾವಿರಾರು ವಾಹನಗಳು ನಿಂತಿದ್ದು, ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್ ಹಾಗೂ ಕೊಡಗು ಜಿಲ್ಲೆಯ ಸಂಪಾಜೆ ಮಾರ್ಗದಲ್ಲೂ ಸಂಚಾರಕ್ಕೆ ಸಮಸ್ಯೆಯಾಗಿದೆ.

LEAVE A REPLY

Please enter your comment!
Please enter your name here