ಜಿಲ್ಲಾಧಿಕಾರಿ ಆದೇಶದ ಮೇರೆಗೆ ನಡೆದ ಕಡಬ ಪ.ಪಂ. ಮೀನು ಮಾರಾಟ ಹಕ್ಕು ಏಲಂ

0

ಕಡಬ: ತೀವ್ರ ಕುತೂಹಲ ಕೆರಳಿಸಿದ್ದ ಕಡಬ ಪಟ್ಟಣ ಪಂಚಾಯತ್ ಮೀನು ಮಾರಾಟದ ಹಕ್ಕನ್ನು ಜು.20ರಂದು ಏಲಂ ಮಾಡಲಾಗಿದ್ದು ತೀವ್ರ ಪೈಪೋಟಿಯಲ್ಲಿ ಮೂರು ಸ್ಟಾಲ್ ಗಳು ಬರೋಬ್ಬರಿ 24 ಲಕ್ಷಕ್ಕೆ ಏಲಂ ಆಗಿದೆ.


1 ನಂಬರಿನ ಸ್ಟಾಲ್ ಫಯಾಜ್ ಕಡಬ 7.50ಲಕ್ಷ, 2 ನಂಬರಿನ ಸ್ಟಾಲ್ ಜಾಕೀರ್ ಹುಸೈನ್ 10 ಲಕ್ಷಕ್ಕೆ, 3 ನಂಬರಿನ ಸ್ಟಾಲ್ ರಿಯಾಜ್ ಮಂಗಳೂರು 6.5 ಲಕ್ಷಕ್ಕೆ ಏಲಂ ಆಗಿದೆ.
ಕನಿಷ್ಠ ಬಿಡ್ಡುಗಳು 2.20 ಲಕ್ಷಕ್ಕೆ ಇದ್ದು ತೀವ್ರ ಪೈಪೋಟಿಯಿಂದ ಗರಿಷ್ಠ ಮೊತ್ತಕ್ಕೆ ಏಲಂ ಆಗಿದೆ. ಏಲಂ ಪ್ರಕ್ರಿಯೆಯಲ್ಲಿ ಸುಮಾರು 48 ಮಂದಿ ಪಾಲ್ಗೋಂಡಿರುವುದು ಕೂಡ ವಿಶೇಷವಾಗಿತ್ತು.

2 ವರ್ಷಗಳಿಂದ ಏಲಂ ಆಗಿಲ್ಲ:ನಿಯಮ ಉಲ್ಲಂಘನೆ ಆರೋಪ
ಕಳೆದ 2 ವರ್ಷಗಳಿಂದ ಮೀನು ಮಾರಾಟದ ಹಕ್ಕನ್ನು ಏಲಂ ಮಾಡಿರಲಿಲ್ಲ, ಬದಲಾಗಿ ಪಟ್ಟಣ ಪಂಚಾಯತ್ ಈ ಹಿಂದೆ ಮೀನು ಮಾರಾಟ ಮಾಡುತ್ತಿದ್ದ ವ್ಯಕ್ತಿಗೆ ಶೇಖಡವಾರು ಹಣ ಹೆಚ್ಚು ಮಾಡಿ ಅವರಿಗೆ ಮುಂದುವರಿಸಿತ್ತು. ಈ ವಿಚಾರವನ್ನು ಆಕ್ಷೇಪಿಸಿ ಮಂಗಳೂರು ಹರೇಕಳ ನಿವಾಸಿ ಜಾಕೀರ್ ಹುಸೈನ್, ರಶೀದ್ ಹಳೆಸ್ಟೇಷನ್, ಮಂಗಳೂರು ಕೊಣಾಜೆಯ ಅಮೀರ್.ಪಿ.ಯವರು ಜಿಲ್ಲಾಧಿಕಾರಿಯವರಿಗೆ ಕಡಬ ಪಟ್ಟಣ ಪಂಚಾಯತ್ ವಿರುದ್ದ ದೂರು ನೀಡಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿಯವರು ನಿಯಾಮನುಸಾರ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಡಬ ಪಟ್ಟಣ ಪಂಚಾಯತ್ ಜು.20ರಂದು ಏಲಂಗೆ ದಿನ ನಿಗದಿ ಮಾಡಿ ಪ್ರಕಟಣೆ ನೀಡಿತ್ತು.

1.50ಲಕ್ಷ ಬಿಡ್ಡಿನ ವಾರದ ಸಂತೆ ಏಲಂ ಪ್ರಕ್ರಿಯೆಯಲ್ಲಿ ಭಾಗವಹಿಸದೆ ತಟಸ್ಥ!
ಕಡಬದಲ್ಲಿ ನಡೆಯುವ ವಾರದ ಸಂತೆಯ ವರಿ ವಸೂಲಿ ಹಕ್ಕಿನ ಏಲಂಗೆ 1.50ಲಕ್ಷ ಬಿಡ್ಡು ಪಂಚಾಯತ್ ನಿಗದಿ ಪಡಿಸಿದ್ದು ಇದಕ್ಕೆ ಸುಮಾರು 40 ಜನ ಇ.ಎಂ.ಡಿ. ಪಾವತಿಸಿ ಏಲಂ ಗೆ ಭಾಗವಹಿಸಿದ್ದರು, ಆದರೆ ಏಲಂ ಪ್ರಕ್ರಿಯೆ ಪ್ರಾರಂಭವಾದ ಕೂಡಲೇ ಆಗ್ರಹಿಸಿದ ಏಲಂದಾರರು 1.50 ಲಕ್ಷ ಬಿಡ್ ಇಟ್ಟರೆ ನಮಗೆ ನಷ್ಟವಾಗುತ್ತದೆ ಅದನ್ನು ಕಡಿಮೆ ಮಾಡುವಂತೆ ಆಗ್ರಹಿಸಿದರು. ಆದರೆ ನಿಯಮದಂತೆ ಈಗಲೇ ಕಡಿಮೆ ಮಾಡಲು ಸಾಧ್ಯವಿಲ್ಲದ ಕಾರಣ ಅಧಿಕಾರಿಗಳು ಸಾಧ್ಯವಿಲ್ಲ ಎಂದು ಹೇಳಿದರು. ಆದರೆ ಯಾರು ಏಲಂನಲ್ಲಿ ಭಾಗವಹಿಸದೆ ಪಂಚಾಯತ್ ಬಳಿಯೇ ವರಿ ವಸೂಲಿ ಹಕ್ಕಿ ಇಟ್ಟುಕೊಳ್ಳಲಾಯಿತು.

ಸಂತೆ ಮಾರುಕಟ್ಟೆ ಸರಿಯಾಗಿಲ್ಲ, ರಸ್ತೆ ಬದಿಯಲ್ಲಿ ನಡೆಯುವ ವಾರದ ಸಂತೆ
ಏಲಂ ಪ್ರಕ್ರಿಯೆಯಲ್ಲಿ ಭಾಗವಹಿಸಿದವರು ಮಾತನಾಡಿ, ಸಂತೆ ಏಲಂ ಮಾಡುತ್ತಿರಿ ಸಂತೆ ನಡೆಯುವುದು ರಾಜ್ಯ ಹೆದ್ದಾರಿಯಲ್ಲಿ ನಾವು ಪಂಚಾಯತ್ ಗೆ ತೆರಿಗೆ ಕಟ್ಟಿ ವ್ಯಾಪಾರ ಮಾಡುತ್ತೇವೆ, ನಮ್ಮ ಅಂಗಡಿಗಳ ಎದುರು ಸಂತೆ ವ್ಯಾಪಾರ ನಡೆಯುತ್ತದೆ, ಸರಿಯಾದ ಸಂತೆ ಮಾರುಕಟ್ಟೆಯೂ ಇಲ್ಲ, ಮೊದಲು ಅದನ್ನು ಸರಿ ಮಾಡಿ ಎಂದು ಆಗ್ರಹಿಸಿದರು.
ಏಲಂ ಪ್ರಕ್ರಿಯೆಯಲ್ಲಿ ಪಂಚಾಯತ್ ಆಡಳಿತಾಧಿಕಾರಿ ಕಡಬ ತಹಸೀಲ್ದಾರ್ ಪ್ರಭಾಕರ ಖಜೂರೆ, ಪಂಚಾಯತ್ ಮುಖ್ಯಾಧಿಕಾರಿ ಲೀಲಾವತಿ, ಹಾಗೂ ಪಟ್ಟಣ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here