*ಗುರುಪೂರ್ಣಿಮೆಯಂದು ಶುಭಾರಂಭಗೊಂಡ ಈ ಸಂಸ್ಥೆಗೆ ಗುರುಹಿರಿಯರ ಆಶೀರ್ವಾದವಿದೆ-ನಳಿನ್ ಕುಮಾರ್ ಕಟೀಲ್
*ಪುತ್ತೂರಿನಲ್ಲಿ ಯಾವುದೇ ಉದ್ಯಮ ಪ್ರಾರಂಭಗೊಂಡರೂ ಅದಕ್ಕೆ ಸೂಕ್ತ ಪ್ರೋತ್ಸಾಹ ಮತ್ತು ಬೆಂಬಲ ನನ್ನ ಕಡೆಯಿಂದ ಇದೆ-ಅಶೋಕ್ ಕುಮಾರ್ ರೈ
ಪುತ್ತೂರು: ಪೆಟ್ರೋಲಿಯಂ ಉತ್ಪನ್ನಗಳ ತಯಾರಿಕಾ ಸಂಸ್ಥೆ ಒ.ಎನ್.ಜಿ.ಸಿ.ಯ ಅಂಗ ಸಂಸ್ಥೆಯಾಗಿರುವ ಎಂ.ಆರ್.ಪಿ.ಎಲ್.ನ ಹೈಕ್ಯೂ ರಿಟೇಲ್ ಔಟ್ ಲೆಟ್ ’ಮಹೇಶ್ವರ ಪೆಟ್ರೋಲಿಯಂ ಜು.21ರಂದು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪುತ್ತೂರಿನ ಬೈಪಾಸ್ ರಸ್ತೆಯ ತೆಂಕಿಲದಲ್ಲಿ ವಿವಿಧ ಗಣ್ಯರ ಸಮ್ಮುಖದಲ್ಲಿ ಶುಭಾರಂಭಗೊಂಡಿತು. ಸಭಾ ಕಾರ್ಯಕ್ರಮಕ್ಕೂ ಮೊದಲು ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಸಂಸ್ಥೆಯ ಕಚೇರಿಯನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ, ನಗರ ಸಭಾ ಸದಸ್ಯೆ ಯಶೋಧಾ ಪೂಜಾರಿ ಮತ್ತು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಪೆಟ್ರೋಲ್ ಹಾಕುವ ಯಂತ್ರಗಳ ರಿಬ್ಬನ್ ಕತ್ತರಿಸುವ ಮೂಲಕ ಸಾಂಕೇತಿಕವಾಗಿ ತೈಲ ತುಂಬುವ ಕಾರ್ಯಕ್ಕೆ ಚಾಲನೆಯನ್ನು ನೀಡಿದರು. ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಪಿ. ವಾಮನ್ ಪೈ ಅವರು ಉಚಿತ ನೈಟ್ರೋಜನ್ ಪೂರೈಕ್ ವ್ಯವಸ್ಥೆಯನ್ನು ಉದ್ಘಾಟಿಸಿದರು.
ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಮಾಜಿ ಶಾಸಕ ಸಂಜೀವ ಮಠಂದೂರು ಸಹಿತ ವೇದಿಕೆಯಲ್ಲಿದ್ದ ಅತಿಥಿ ಗಣ್ಯರು ದೀಪ ಪ್ರಜ್ವಲಿಸುವ ಮೂಲಕ ಮಹೇಶ್ವರ ಪೆಟ್ರೋಲಿಯಂ ಸಂಸ್ಥೆಯ ಕಾರ್ಯಾಚರಣೆಗೆ ಅಽಕೃತ ಚಾಲನೆಯನ್ನು ನೀಡಿದರು.
ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಆನುವಂಶಿಕ ಅರ್ಚಕರಾಗಿರುವ ಗಣೇಶ್ ಭಟ್ ಅವರು ಮಾತನಾಡಿ, ತಲಪಾಡಿಯ ದುರ್ಗಾಪರಮೇಶ್ವರಿ ದೇವರು ಈ ಸಂಸ್ಥೆಯ ಮಾಲಕರಾಗಿರುವ ಶಿವಪ್ರಸಾದ್ ಶೆಟ್ಟಿ ಅವರಿಗೆ ಕುಲದೇವರಾಗಿರುವ ಕಾರಣ ತಲಪಾಡಿ ಕ್ಷೇತ್ರಕ್ಕೂ ಪುತ್ತೂರಿಗೂ ವಿಶೇಷ ನಂಟಿದೆ. ಶಿವಪ್ರಸಾದ್ ಶೆಟ್ಟಿ ಅವರು ದೈವಭಕ್ತರಾಗಿದ್ದು ಅವರ ಸತ್ಕರ್ಮ ಮತ್ತು ದೇವರ ಮೇಲೆ ಅವರಿಟ್ಟ ಭಕ್ತಿ ಹಾಗೂ ಗುರು-ಹಿರಿಯರ ಮೇಲಿನ ಗೌರವ ಅವರನ್ನು ಇಂದು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ದೈವ-ದೇವರ ಅನುಗ್ರಹದೊಂದಿಗೆ ಈ ನೂತನ ಸಂಸ್ಥೆಯು ಉತ್ತಮ ಸೇವೆಯ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿ ಇನ್ನಷ್ಟು ಹೆಸರುವಾಸಿಯಾಗಲಿ ಎಂದು ಅವರು ಶುಭಾಶೀರ್ವಾದ ನೀಡಿದರು.
ದ.ಕ. ಲೋಕಸಭಾ ಕ್ಷೇತ್ರದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಭಗವಂತನನ್ನು ತೋರಿಸುವವ ಗುರು, ಜ್ಞಾನವನ್ನು ಕೊಡುವವ ಗುರು ಎಂಬ ಮಾತನ್ನು ನಮ್ಮ ಹಿರಿಯರು ಹೇಳಿದ್ದಾರೆ. ಅಂತಹ ಗುರುವಿನ ಪ್ರೇರಣೆ ಇರತಕ್ಕಂತಹ ವೇದವ್ಯಾಸ ಮಹರ್ಷಿಗಳ ಜನ್ಮದಿನದ ಪುಣ್ಯಸಂದರ್ಭವಾಗಿರುವ ಈ ಗುರುಪೂರ್ಣಮಿಯ ದಿನದಂದು ಈ ಪುತ್ತೂರಿನ ಪುಣ್ಯ ನೆಲದಲ್ಲಿ ಮಹೇಶ್ವರ ಪೆಟ್ರೋಲಿಯಂ ಸಂಸ್ಥೆ ಉದ್ಘಾಟನೆಗೊಂಡಿರುವುದು ಈ ಸಂಸ್ಥೆಗೆ ಗುರುಹಿರಿಯರ ಆಶೀರ್ವಾದ ಇದೆ ಎಂಬುದಕ್ಕೆ ಸ್ಪಷ್ಟ ನಿದರ್ಶನ ಎಂದು ಹೇಳಿದರು. ಈ ಸಂಸ್ಥೆಯು ಎಂ.ಆರ್.ಪಿ.ಎಲ್.ನ ಒಂದು ಅತ್ಯುನ್ನತ ಸಂಸ್ಥೆಯಾಗಿ ಬೆಳೆಯುತ್ತದೆ, ಮಾತ್ರವಲ್ಲದೇ ಶಿವಪ್ರಸಾದ್ ಶೆಟ್ಟಿ ಅವರು ಓರ್ವ ಯಶಸ್ವಿ ಪೆಟ್ರೋಲಿಯಂ ಉದ್ಯಮಿಯಾಗಿ ಬೆಳೆಯುತ್ತಾರೆ ಎಂಬ ವಿಶ್ವಾಸವನ್ನು ಕಟೀಲ್ ಅವರು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದರು. ಶಿವಪ್ರಸಾದ್ ಅವರು ಭೂವ್ಯವಹಾರದಲ್ಲಿ ಓರ್ವ ಯಶಸ್ವಿ ಉದ್ಯಮಿಯಾಗಿ ಪುತ್ತೂರಿನ ಮಟ್ಟಿಗೆ ಉತ್ತಮ ಸಾಧನೆಯನ್ನು ಮಾಡಿದ್ದಾರೆ. ಶ್ರೀಮಂತಿಕೆ ಬಂದಾಗ ಕೆಲವರಿಗೆ ಎಲ್ಲವೂ ಮರೀತದೆ, ಆದರೆ ಶಿವಪ್ರಸಾದ್ ಅವರು ತಮ್ಮಲ್ಲಿರುವ ಹೃದಯ ಶ್ರೀಮಂತಿಕೆಯಿಂದ ತಮ್ಮ ವ್ಯವಹಾರದ ಜೊತೆಗೆ ಸಾಮಾಜಿಕ ಕಾರ್ಯದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ಓರ್ವ ಧಾರ್ಮಿಕ ಮನೋಭಾವದ ವ್ಯಕ್ತಿ ಎಂಬುದಕ್ಕೆ ಉದಾಹರಣೆಯಾಗಿ, ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ಸಂದರ್ಭದಲ್ಲಿ ಒಂದು ಗುಡಿ ನಿರ್ಮಾಣದ ಸಂಪೂರ್ಣ ಜವಾಬ್ದಾರಿ ತನ್ನದು ಎಂದು ಮಾತುಕೊಟ್ಟು ಅದರಂತೆ ನಡೆದುಕೊಂಡವರು ಎಂದು ಕಟೀಲ್ ಹೇಳಿದರು. ತೈಲೋದ್ಯಮ ಕ್ಷೇತ್ರದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ದೇಶಾದ್ಯಂತ ಕ್ರಾಂತಿಕಾರಿ ಬದಲಾವಣೆಗಳಾಗಿದ್ದು ಎಂ.ಆರ್.ಪಿ.ಎಲ್, ಭಾರತ್ ಪೆಟ್ರೋಲಿಯಂ ಸಹಿತ ಎಲ್ಲಾ ಸಂಸ್ಥೆಗಳೂ ಸ್ಪರ್ಧಾತ್ಮಕ ವ್ಯವಹಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಇದು ಈ ಕ್ಷೇತ್ರದಲ್ಲಿ ಅಪರಿಮಿತ ಅವಕಾಶಕ್ಕೆ ಕಾರಣವಾಗಿದೆ ಎಂದು ಹೇಳಿದ ನಳಿನ್ ಕುಮಾರ್, ಪುತ್ತೂರು ಪರಿಸರದಲ್ಲಿ ಎಂ.ಆರ್.ಪಿ.ಎಲ್.ನ ಪ್ರಥಮ ಔಟ್ ಲೆಟ್ ಪ್ರಾರಂಭಿಸುವ ಅವಕಾಶ ಶಿವಪ್ರಸಾದ್ ಅವರಿಗೆ ಸಿಕ್ಕಿರುವುದಕ್ಕೆ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸುವುದಾಗಿ ಹಾಕಿ ಈ ಉದ್ಯಮದಲ್ಲಿ ಶಿವಪ್ರಸಾದ್ ಅವರಿಗೆ ಯಶಸ್ಸು ಲಭಿಸಲಿ ಎಂದು ಶುಭ ಹಾರೈಸಿದರು.
ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ, ವ್ಯಕ್ತಿಯೊಬ್ಬರು ಉದ್ಯಮದಲ್ಲಿ ಬೆಳೆದರೂ ಕೂಡ ಹೇಗೆ ತನ್ನ ಪಾಡಿಗೆ ತನ್ನ ವ್ಯವಹಾರವನ್ನು ನಡೆಸಿಕೊಂಡು ಸಾಮಾಜಿಕವಾಗಿಯೂ, ಧಾರ್ಮಿಕವಾಗಿಯೂ ತನ್ನನ್ನು ತೊಡಗಿಸಿಕೊಳ್ಳುತ್ತಾರೆ ಎಂಬುದಕ್ಕೆ ಶಿವಪ್ರಸಾದ್ ಅವರು ಉತ್ತಮ ಉದಾಹರಣೆಯಾಗಿದ್ದಾರೆ ಎಂದು ಹೇಳಿದರು. ಕಳೆದ ಸಲ ಮಹಾಲಿಂಗೇಶ್ವರ ದೇವರಿಗೆ ಒಂದಷ್ಟು ಜನರ ಸಹಕಾರದೊಂದಿಗೆ ಬಂಗಾರದ ಮಾಲೆಯನ್ನು ಒಪ್ಪಿಸುವಲ್ಲಿ ಮುಂದಾಳತ್ವವನ್ನು ಶಿವಪ್ರಸಾದ್ ಅವರು ವಹಿಸಿಕೊಂಡಿರುವುದು ಅವರಲ್ಲಿರುವ ಧಾರ್ಮಿಕ ಪ್ರeಗೆ ಸಾಕ್ಷಿ. ಶ್ರೀಮಂತಿಕೆ ಅನ್ನುವುದು ದುಡಿಮೆ ಮೂಲಕ ಬರುವಂತದ್ದು, ನಮ್ಮ ಉದ್ಯಮದ ಮೂಲಕ ಸಮಾಜದಿಂದ ಪಡೆದುಕೊಳ್ಳುವ ಸಂಪತ್ತಿನ ಒಂದು ಭಾಗವನ್ನು ಸಮಾಜಕ್ಕಾಗಿ ವಿನಿಯೋಗಿಸುವಾಗ ಅಂತಹ ಶ್ರೀಮಂತಿಕೆಗೆ ಒಂದು ಅರ್ಥವಿರುತ್ತದೆ, ಅದೇ ರೀತಿಯಲ್ಲಿ ಉದ್ಯಮಿಯಾಗಿರುವ ಶಿವಪ್ರಸಾದ್ ಅವರು ತಮ್ಮ ಉದ್ಯಮದಲ್ಲಿ ಗಳಿಸಿದ ಹಣವನ್ನು ಒಂದು ಕಡೆಯಲ್ಲಿ ಉದ್ಯಮದ ಬೆಳವಣಿಗೆಗೆ ವಿನಿಯೋಗಿಸಿದರೆ ಇನ್ನೊಂದು ಅಂಶವನ್ನು ಸಮಾಜಕ್ಕಾಗಿ ವಿನಿಯೋಗಿಸುತ್ತಿದ್ದಾರೆ ಎಂದು ಶ್ಲಾಘನೆಯ ನುಡಿಗಳನ್ನು ಆಡಿದರು. ಪೆಟ್ರೋಲ್ ಪಂಪ್ ಉದ್ಯಮದ ಯಶಸ್ಸಿನಲ್ಲಿ ಮಾಲಕರ ಪಾತ್ರದಷ್ಟೇ ಮುಖ್ಯವಾಗಿರುವುದು ಅಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಪಾತ್ರ ಎಂದು ಹೇಳಿದ ಶಾಸಕರು, ಗ್ರಾಹಕರಿಗೆ ತೃಪ್ತಿಯಾಗುವ ರೀತಿಯಲ್ಲಿ ಸೇವೆಯನ್ನು ನೀಡಿದರೆ ಈ ಉದ್ಯಮದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಎಂದು ಹೇಳಿ ನೂತನ ಸಂಸ್ಥೆಯ ಅಭಿವೃದ್ಧಿಗೆ ಶುಭವನ್ನು ಹಾರೈಸಿದರು. ಪುತ್ತೂರಿನಲ್ಲಿ ಯಾವುದೇ ಉದ್ಯಮ ಪ್ರಾರಂಭಗೊಂಡರೂ ಅದಕ್ಕೆ ಸೂಕ್ತವಾದ ಪ್ರೋತ್ಸಾಹ ಮತ್ತು ಬೆಂಬಲವನ್ನು ನೀಡುವ ಕಾರ್ಯ ನಮ್ಮ ಕಡೆಯಿಂದ ಆಗುತ್ತದೆ ಎಂಬ ಭರವಸೆಯನ್ನು ಶಾಸಕರು ಇದೇ ಸಂದರ್ಭದಲ್ಲಿ ನೀಡಿದರು.
ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾಗಿರುವ ವಾಮನ್ ಪೈ ಅವರು ಭಾರತದಲ್ಲಿ ಯಶಸ್ವಿ ತೈಲ ಸಂಸ್ಕರಣಾ ಕಂಪೆನಿಗಳಲ್ಲಿ ಒಂದಾಗಿರುವ ಎಂ.ಆರ್.ಪಿ.ಎಲ್. ನಿಂದ ಉಳಿದೆಲ್ಲಾ ತೈಲ ಪೂರೈಕೆ ಸಂಸ್ಥೆಗಳಿಗೆ ಗುಣಮಟ್ಟದ ತೈಲ ಪೂರೈಕೆಯಾಗುತ್ತಿದೆ, ಇದೀಗ ಅವರ ಸ್ವಂತ ಔಟ್ ಲೆಟ್ ಪುತ್ತೂರಿನಲ್ಲಿ ಪ್ರಾರಂಭಗೊಳ್ಳುತ್ತಿರುವುದು ಸಂತೋಷದ ವಿಚಾರ ಹಾಗಾಗಿ ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಪುತ್ತೂರಿನ ಜನತೆಗೆ ಗುಣಮಟ್ಟದ ಸೇವೆಯನ್ನು ಈ ಸಂಸ್ಥೆ ನೀಡುವಂತಾಗಲಿ ಎಂದು ಶುಭ ಹಾರೈಸಿದರು.
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಬೆಳೆಯುತ್ತಿರುವ ಪುತ್ತೂರಿಗೆ ಮುಕುಟಪ್ರಾಯವಾಗಿರುವಂತಹ ಒಂದು ಪೆಟ್ರೋಲ್ ಪಂಪ್ ಅನ್ನು ಉದ್ಯಮಿ ಶಿವಪ್ರಸಾದ್ ನೀಡಿದ್ದಾರೆ ಅವರನ್ನು ಎಲ್ಲರ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದರು. ಇವತ್ತಿನ ಈ ಸಭೆಯ ಮುಂಭಾಗದಲ್ಲಿ ಹಲವು ಪೆಟ್ರೋಲ್ ಪಂಪಿನ ಮಾಲಕರಿದ್ದಾರೆ, ನಮ್ಮ ನಗರದ ಶೋಭೆಯನ್ನು ಹೆಚ್ಚಿಸುವ ರೀತಿಯಲ್ಲಿ ಮಹೇಶ್ವರ ಪೆಟ್ರೋಲ್ ಪಂಪ್ ನಿರ್ಮಾಣಗೊಂಡಿದೆ ಎಂದು ಮಠಂದೂರು ಶ್ಲಾಘನೆ ವ್ಯಕ್ತಪಡಿಸಿ ಸಂಸ್ಥೆಯ ಉನ್ನತಿಗೆ ಶುಭವನ್ನು ಹಾರೈಸಿದರು.
ಕರ್ಣಾಟಕ ಬ್ಯಾಂಕ್ನ ಪ್ರಧಾನ ವ್ಯವಸ್ಥಾಪಕ ಶ್ರೀಹರಿ ಪಿ. ಅವರು ಮಾತನಾಡಿ, ನೂತನ ಉದ್ಯಮವನ್ನು ಪುತ್ತೂರಿನ ಜನತೆಗೆ ಕೊಟ್ಟ ಶಿವಪ್ರಸಾದ್ ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು. ಹೊಸ ಉದ್ಯಮವೊಂದು ಪ್ರಾರಂಭಗೊಂಡಾಗ ಒಂದಷ್ಟು ಜನರಿಗೆ ಉದ್ಯೋಗ, ಬ್ಯಾಂಕಿನವರಿಗೆ ವ್ಯವಹಾರ ಸಿಗ್ತದೆ ಒಟ್ಟಿನಲ್ಲಿ ಇದು ದೇಶದ ಆರ್ಥಿಕ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತದೆ. ಹೊಸ ಉದ್ದಿಮೆಯನ್ನ ಪ್ರಾರಂಭಿಸುವವರಿಗೆ ಹಣಕಾಸಿನ ನೆರವನ್ನು ನೀಡಲು ಬ್ಯಾಂಕ್ ಗಳೂ ಸಹ ಉತ್ತೇಜನವನ್ನು ನೀಡುತ್ತವೆ ಎಂದು ಅವರು ಹೇಳಿ ಹೊಸ ಉದ್ಯಮಕ್ಕೆ ಶುಭವನ್ನು ಹಾರೈಸಿದರು.
ಬಂಟರ ಸಂಘ ಪುತ್ತೂರು ತಾಲೂಕು ಅಧ್ಯಕ್ಷರಾಗಿರುವ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಸರಳ ಸಜ್ಜನಿಕೆಯ ವ್ಯಕ್ತಿಯಾಗಿರುವ ಶಿವಪ್ರಸಾದ್ ಶೆಟ್ಟಿ ಅವರಲ್ಲಿ ವಿಶೇಷವಾದ ಗುಣ ಮತ್ತು ಆಕರ್ಷಣೆ ಇರುವ ಕಾರಣ ಅವರು ಎಲ್ಲರಿಗೂ ಆತ್ಮೀಯರಾಗಿದ್ದಾರೆ ಇವರು ಪ್ರಾರಂಭಿಸಿರುವ ಈ ಉದ್ಯಮ ಯಶಸ್ಸನ್ನು ಕಾಣಲಿ ಎಂದು ಶುಭವನ್ನು ಹಾರೈಸಿದರು.
ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ ಅವರು ಮಾತನಾಡಿ, ಶಿವಪ್ರಸಾದ್ ಶೆಟ್ಟಿ ಸಹೋದರರು ಅವರ ತಂದೆ ಪ್ರಾರಂಭಿಸಿದ್ದ ಉದ್ಯಮವನ್ನು ಇಂದು ಬೃಹದಾಕಾರವಾಗಿ ಬೆಳೆಸಿದ್ದಾರೆ. ಪೆಟ್ರೋಲ್ ಪಂಪ್ ಗಳೇ ವಿರಳವಾಗಿದ್ದ ಆ ಕಾಲದಲ್ಲಿ ವಾಮನ್ ಪೈ ಮೊದಲಾದವರನ್ನು ಸೇರಿಸಿಕೊಂಡು ನಾನೊಂದು ಪೆಟ್ರೋಲ್ ಪಂಪ್ ಮಾಡಿದೆ, ಆ ಕಾಲದಲ್ಲಿ 4 ರಿಂದ 5 ಸಾವಿರ ಲೀಟರ್ ಪೆಟ್ರೋಲ್ ಮಾರಾಟವಾಗ್ತಿತ್ತು, ಆದರೆ ಇವತ್ತು ದರ್ಬೆಯಿಂದ ಸುಬ್ರಹ್ಮಣ್ಯದವರೆಗೆ 12 ಪೆಟ್ರೋಲ್ ಪಂಪ್ ಗಳಿವೆ ವ್ಯಾವಹಾರಿಕ ಜಗತ್ತಿನಲ್ಲಿ ಇದೆಲ್ಲಾ ಸಾಮಾನ್ಯವಾಗಿದ್ದು ಹೊಸ ಉದ್ಯಮಗಳು ಪ್ರಾರಂಭಗೊಂಡಾಗ ನಾವೆಲ್ಲಾ ಪ್ರೋತ್ಸಾಹಿಸುವುದು ಮುಖ್ಯ ಎಂದು ಹೇಳಿ ನೂತನ ಉದ್ಯಮಕ್ಕೆ ಶುಭವನ್ನು ಹಾರೈಸಿದರು.
ಎಂ.ಆರ್.ಪಿ.ಎಲ್ ನ ಮಾರ್ಕೆಟಿಂಗ್ ವಿಭಾಗದ ಚೀ- ರೀಜನಲ್ ಮ್ಯಾನೇಜರ್ ಸ್ವಾಮಿ ಪ್ರಸಾದ್, ಮಂಗಳೂರು ಬ್ರೈಟ್ ವೇ ಇಂಡಿಯಾ ಕನ್ಸಲ್ಟೆನ್ಸಿಯ ನಿರ್ದೇಶಕ ಮನಮೋಹನ್ ರೈ ಚೆಲ್ಯಡ್ಕ, ನಗರಸಭಾ ಸದಸ್ಯೆ ಯಶೋಧಾ ಪೂಜಾರಿ, ಮುಖಂಡ ಇಬ್ರಾಹಿಂ ಗೋಳಿಕಟ್ಟೆ ಸಾಂದರ್ಭಿಕವಾಗಿ ಮಾತನಾಡಿ ನೂತನ ಸಂಸ್ಥೆಯ ಯಶಸ್ಸಿಗೆ ಶುಭವನ್ನು ಹಾರೈಸಿದರು.
ಎವಿಜಿ ಇಂಗ್ಲಿಷ್ ಮೀಡಿಯಂ ಶಾಲೆಯ ಪ್ರಾಂಶುಪಾಲೆ ಶೋಭಾ ರೈ ಅವರ ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮ ಪ್ರಾರಂಭಗೊಂಡಿತು. ಮಹೇಶ್ವರ ಪೆಟ್ರೋಲಿಯಂ ಸಂಸ್ಥೆಯ ಮಾಲಕರಾಗಿರುವ ಶಿವಪ್ರಸಾದ್ ಶೆಟ್ಟಿ ಕಿನಾರ ಅವರು ಅತಿಥಿ ಗಣ್ಯರನ್ನು ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಸ್ವಾಗತಿಸಿದರು.
ಸಂಸ್ಥೆಯ ಮಾಲಕರಾಗಿರುವ ಸತೀಶ್ ಶೆಟ್ಟಿ ಕಿನಾರ, ಶಿವಪ್ರಸಾದ್ ಶೆಟ್ಟಿ ಕಿನಾರ, ಅವರ ಪತ್ನಿ ಸುಜಾತಾ ಶಿವಪ್ರಸಾದ್, ಪುತ್ರ ಶರತ್ ಕುಮಾರ್ ಶೆಟ್ಟಿ ಮತ್ತು ಸಂಸ್ಥೆಯ ಉದ್ಯೋಗಿಗಳು ವಿವಿಧ ಕಾರ್ಯಗಳಲ್ಲಿ ಸಹಕರಿಸಿದರು.
ಮಹೇಶ್ವರ ಪೆಟ್ರೋಲಿಯಂ ಸಂಸ್ಥೆಯ ನಿರ್ಮಾಣ ಕಾರ್ಯದಲ್ಲಿ ಸಹಕರಿಸಿದವರನ್ನು ಇದೇ ಸಂದರ್ಭದಲ್ಲಿ ಸಂಸ್ಥೆಯ ಪರವಾಗಿ ಗೌರವಿಸಿ ಅಭಿನಂದಿಸಲಾಯಿತು. ರಾಕೇಶ್ ರೈ ಕೆಡೆಂಜಿ ನಿರೂಪಣೆಯಲ್ಲಿ ಮೂಡಿಬಂದ ಈ ಕಾರ್ಯಕ್ರಮದಲ್ಲಿ ಉದ್ಯಮಿ ಪ್ರಕಾಶ್ ಶೆಟ್ಟಿ ಅವರು ಧನ್ಯವಾದ ಸಮರ್ಪಿಸಿದರು.
’ನಾವು ಬಾಲ್ಯ ಸ್ನೇಹಿತರು.. ನನ್ನನ್ನು ಅವರು
ಹೆಚ್ಚು ಓದ್ಲಿಕ್ಕೆ ಬಿಡ್ಲಿಲ್ಲ..!’ – ಕಟೀಲ್ ಹಾಸ್ಯ ಚಟಾಕಿ
ನನ್ನ ಹಾಗೂ ಶಿವಪ್ರಸಾದ್ ಅವರದ್ದು ಬಹಳ ವರ್ಷಗಳ ಸಂಬಂಧ. ಶಾಲೆಯಲ್ಲಿ ನಾವು ಒಟ್ಟಿಗೆ ಇದ್ದೆವು, ಆವಾಗ ನನ್ನನ್ನು ಹೆಚ್ಚು ಓದ್ಲಿಕ್ಕೆ ಬಿಡ್ಲಿಲ್ಲ.. ಹಾಗಾಗಿ ಅವ ಸ್ವಲ್ಪ ಮುಂದೆ ಹೋದ..! ಎಂದು ನಳಿನ್ ಕುಮಾರ್ ಅವರು ಇದೇ ಸಂದರ್ಭದಲ್ಲಿ ಹಾಸ್ಯ ಚಟಾಕಿ ಹಾರಿಸಿದರು. ಆದರೆ ನಮ್ಮಿಬ್ಬರ ನಡುವಿನ ಬಾಂಧವ್ಯ ಆವತ್ತಿನಿಂದ ಇವತ್ತಿನವರೆಗೂ ಒಂದೇ ರೀತಿಯಲ್ಲಿ ಉಳಿದುಕೊಂಡಿದೆ ಎಂದು ತಮ್ಮ ಬಾಲ್ಯದ ಗೆಳೆಯನ ಬಗ್ಗೆ ಕಟೀಲ್ ಮೆಚ್ಚುಗೆಯ ನುಡಿಗಳನ್ನು ಆಡಿದರು.
ಪೆಟ್ರೋಲ್ ಪಂಪ್ ವ್ಯವಹಾರದಲ್ಲಿ
ಲಾಭ-ನಷ್ಟದ ಲೆಕ್ಕ ಹೇಳಿದ ಅಶೊಕ್ ರೈ!
ಒಂದು ಪೆಟ್ರೋಲ್ ಪಂಪ್ ಗೆ ತುಂಬಾ ಗಾಡಿಗಳು ಬರ್ತಾ ಇವೆ ಅಂದ್ರೆ ಅದ್ರಲ್ಲಿ ಲಾಭ ಇದೆ ಅಂತ ಅಲ್ಲ! ನನ್ನ ಬಳಿ 3 ಪೆಟ್ರೋಲ್ ಬಂಕ್ ಇದೆ 3 ಗ್ಯಾಸ್ ಏಜೆನ್ಸಿ ಇದೆ ತಿಂಗಳಿಗೆ 1 ಲಕ್ಷ ರೂಪಾಯಿ ಲಾಭ ತೆಗೆಯೋದು ಕಷ್ಟ, ಯಾಕಂದ್ರೆ ಈ ವ್ಯವಹಾರದಲ್ಲಿ ಲಾಭಾಂಶ ತುಂಬಾ ಕಡಿಮೆ. 4 ಸಾವಿರ ಲೀಟರ್ ಮಾರಾಟವಾದ್ರೆ ಅರ್ಧ ಗಾಳಿಗೆ ಹೋದದ್ರಲ್ಲಿ ಸರಿಯಾಗ್ತದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಕುತೂಹಲಕಾರಿ ಮಾಹಿತಿಯನ್ನು ಸಭೆಯ ಮುಂದೆ ಬಿಚ್ಚಿಟ್ಟರು.
ತೈಲೋದ್ಯಮ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯ ಮಾಹಿತಿ ನೀಡಿದ ಕಟೀಲ್..
ನಾನು ಮತ್ತು ಶಿಪ್ರಸಾದ್ ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಪುತ್ತೂರಿನಲ್ಲಿ ಬಿಟ್ಟರೆ ಸುಬ್ರಹ್ಮಣ್ಯದಲ್ಲಿ ಮಾತ್ರ ಪೆಟ್ರೋಲ್ ಪಂಪ್ ಇತ್ತು. ಆದರೆ ಇವತ್ತು ಪುತ್ತೂರಿನಿಂದ ಸುಬ್ರಹ್ಮಣ್ಯಕ್ಕೆ ಸವಣೂರು ರಸ್ತೆಯಲ್ಲಿ ಹೋದ್ರೆ 9 ಪೆಟ್ರೋಲ್ ಬಂಕ್ ಇದೆ, ಬೆಳ್ಳಾರೆ ರಸ್ತೆಯಲ್ಲಿ ಹೋದ್ರೆ 7 ಪೆಟ್ರೋಲ್ ಬಂಕ್ಗಳು ಇವೆ, ಇದರರ್ಥ ಮಾರುಕಟ್ಟೆ ಬದಲಾಗಿದ್ದು ಜನರ ಅಗತ್ಯಗಳಿಗೆ ಸ್ಪಂದಿಸುವ ಕೆಲಸಕಾರ್ಯಗಳು ನಡೆಯುತ್ತಿವೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
’ನನಗೂ ಈ ಜಾಗದ ಮೇಲೆ ಕಣ್ಣಿತ್ತು..!’
ಮಹೇಶ್ವರ ಪೆಟ್ರೋಲ್ ಬಂಕ್ ಸ್ಥಾಪನೆಗೊಂಡಿರುವ ಈ ಸ್ಥಳದ ಪಕ್ಕದಲ್ಲಿರುವ ಜಾಗ ನನ್ನದಾಗಿದ್ದು, ನಾನೂ ಈ ಜಾಗದ ಮೇಲೆ ಕಣ್ಣು ನೆಟ್ಟಿದ್ದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹಾಸ್ಯ ಧಾಟಿಯಲ್ಲಿ ಹೇಳಿದರು. ಶಿವಪ್ರಸಾದ್ ಶೆಟ್ಟಿ ಅವರು ಸೈಲೆಂಟ್ ಆಗಿ ತಮ್ಮ ವ್ಯವಹಾರವನ್ನು ನಡೆಸಿಕೊಂಡು ಬರುತ್ತಿದ್ದು, ಮೈಸೂರಿನಿಂದ ಹಿಡಿದು ಇಲ್ಲಿಯವರಗೂ ಅವರ ಭೂ ವ್ಯವಹಾರ ವಿಸ್ತರಣೆಗೊಂಡಿದೆ ಎಂದೂ ಶಾಸಕರು ಇದೇ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.