ಅಂಬೇಡ್ಕರ್ ರಚನೆಯ ಸಂವಿಧಾನ ಸರ್ವಶ್ರೇಷ್ಠ ಗ್ರಂಥ: ಜನಾರ್ದನ್ ಬಿ.
ಪುತ್ತೂರು: ಬಾಬಾ ಸಾಹೇಬ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಸರ್ವ ಶ್ರೇಷ್ಠ, ಎಲ್ಲಾ ಕಾನೂನುಗಳಿಗೆ ಮಾತೃ ಸ್ವರೂಪಿಯಾದ ಸಂವಿಧಾನದ ಆಶಯ ಮತ್ತು ಒಳಾರ್ಥವನ್ನು ಅರ್ಥೈಸಿಕೊಂಡು ಈ ನೆಲದ ಕಾನೂನುಗಳನ್ನು ಅರಿತು ಗೌರವಿಸುವ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿ ಯಾಗಬೇಕು ಎಂದು ಮಂಗಳೂರಿನ ಆರನೇ ಜೆಎಂಎಫ್‌ಸಿ ನ್ಯಾಯಾಲಯದ ಸಹಾಯಕ ಸರಕಾರಿ ಅಭಿಯೋಜಕ ಜನಾರ್ದನ್ ಅಭಿಪ್ರಾಯ ಪಟ್ಟರು.
ಅವರು ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ವಿಟ್ಲ ಇವರ ವತಿಯಿಂದ ವಿಟ್ಲ ಪೊಲೀಸ್ ಠಾಣೆ ಆವರಣದಲ್ಲಿ ಜು.21 ರಂದು ನಡೆದ ಜನ ಸಂಪರ್ಕ ಸಭೆ ಹಾಗೂ ಕಾನೂನು ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಹಕ್ಕು ಗಳನ್ನೂ ಅನುಭವಿಸುವ ಮೂಲಕ ತಮ್ಮ ಮೂಲಭೂತ ಕರ್ತವ್ಯಗಳನ್ನ ಮಾಡಿದಾಗ ಉತ್ತಮ ಸಮಾಜ ನಿರ್ಮಾಣಕ್ಕೆ ನಾಂದಿಯಾಗುತ್ತದೆ ಈ ನಿಟ್ಟಿನಲ್ಲಿ ಸಮಾಜ ಮುಖಿ ಕಾರ್ಯಗಳ ಮೂಲಕ ದಲಿತ್ ಸೇವಾ ಸಮಿತಿ ನಡೆಸುತ್ತಿರುವ ಮಾಹಿತಿ ಕಾರ್ಯಕ್ರಮ ಶ್ಲಾಘನೀಯ ಎಂದು ಹೇಳಿದರು. ಜಿಲ್ಲಾ ದಲಿತ್ ಸೇವಾ ಸಮಿತಿಯ ಸ್ಥಾಪಕ ಅಧ್ಯಕ್ಷ ಸೇಸಪ್ಪ ಬೇದ್ರಕಾಡ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ಬಿ ಕೆ, ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ, ಎ ಎಸ್ ಐ ರತ್ನಾಕರ್, ದಲಿತ್ ಸೇವಾ ಸಮಿತಿ ಕಾರ್ಯಾಧ್ಯಕ್ಷ ಚಂದ್ರಶೇಖರ್ ಯು , ವಿಮಲ ಸೀಗೆಬಲ್ಲೆ, ದಲಿತ ಮುಖಂಡ ಸತೀಶ್ ಅರ್ಲ ಸೇರಿದಂತೆ ದಲಿತ್ ಸೇವಾ ಸಮಿತಿ ಯ ಪದಾಧಿಕಾರಿಗಳು ಉಪಸ್ಥಿರಿದ್ದರು. ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿ ಜನಾರ್ದನ್ ಅವರ ಕಾನೂನು ಸೇವೆಯನ್ನು ಪರಿಗಣಿಸಿ ಸನ್ಮಾನಿಸಿ ಗೌರವಿಸಲಾಯಿತು.