ನಾನು ಇನ್‌ಸ್ಪೆಕ್ಟರ್ ಮಾತನಾಡುತ್ತಿರುವುದು,ನಿಮ್ಮ ಮೇಲೆ ಕೇಸ್ ಇದೆ-ಚಿನ್ನದ ಅಂಗಡಿ ಮಾಲೀಕರಿಗೆ ಬರುತ್ತೆ ಫ್ರಾಡ್ ಕಾಲ್…!

0

ವರದಿ: ಸಿಶೇ ಕಜೆಮಾರ್


ಪುತ್ತೂರು: ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು ಇದ್ದೇ ಇರುತ್ತಾರೆ ಎನ್ನುವಂತೆ ಯಾವ್ಯಾವ ರೀತಿಯಲ್ಲಿ ಜನರನ್ನು ಮೋಸ ಮಾಡುತ್ತಾರೆ ಎನ್ನುವುದಕ್ಕೆ ಬಹಳಷ್ಟು ನಿದರ್ಶನಗಳು ನಮ್ಮ ಕಣ್ಣ ಮುಂದೆ ಸಿಗುತ್ತವೆ. ನಾವೆಷ್ಟೇ ಜಾಣರಾಗಿದ್ದರು, ವಿದ್ಯಾವಂತರಾಗಿದ್ದರೂ ಕೆಲವೊಮ್ಮೆ ಇಂತಹ ವಂಚಕರ ಮಾತಿಗೆ ಬಲಿಯಾಗಿ ಲಕ್ಷ ಲಕ್ಷ ಹಣ ಕಳೆದುಕೊಂಡು ಬಿಡುತ್ತೇವೆ. ಕಳೆದ ಕೆಲವು ತಿಂಗಳಿನಿಂದ ಚಿನ್ನದ ಅಂಗಡಿ ಮಾಲೀಕರಿಗೆ ಕರೆಯೊಂದು ಬರುತ್ತಿದ್ದು ನಾನು ಪೊಲೀಸ್ ಇನ್ಸ್‌ಪೆಕ್ಟರ್ ಮಾತನಾಡುತ್ತಿರುವುದು ನಿಮ್ಮ ಮೇಲೆ ಕೇಸ್ ಇದೆ ಎಂದು ಹೇಳಲಾಗುತ್ತದೆ. ತೆಲುಗಿನಲ್ಲಿ ಮಾತನಾಡುವ ಈತ ಚಿನ್ನದ ಅಂಗಡಿ ಮಾಲೀಕರ ಹೆಸರು, ಅಂಗಡಿ ಹೆಸರು ಎಲ್ಲವನ್ನು ಹೇಳುವ ಮೂಲಕ ನಂಬಿಕೆ ಬರುವಂತೆ ಮಾತನಾಡುತ್ತಾನೆ.


ಪುತ್ತೂರಿನ ಹಲವರಿಗೆ ಕರೆ..!:
ನಾನು ಪೊಲೀಸ್ ಇನ್ಸ್‌ಪೆಕ್ಟರ್ ಮಾತನಾಡುತ್ತಿರುವುದು ನಿಮ್ಮ ಮೇಲೆ ಒಂದು ಕೇಸ್ ಇದೆ ಎಂದು ತೆಲುಗಿನಲ್ಲಿ ಮಾತನಾಡುವ ಈತ, ನಿಮ್ಮ ಹತ್ತಿರ ಯಾರಾದರೂ ಹಿಂದಿ ಬರುವವರು ಇದ್ದರೆ ಅವರಲ್ಲಿ ಫೋನ್ ಕೊಡಿ ವಿಷಯ ಹೇಳ್ತೇನೆ, ನೀವು ಕೇಸ್ ಕ್ಲಿಯರ್ ಮಾಡದಿದ್ದರೆ ಅರೆಸ್ಟ್ ಆಗುತ್ತೀರಿ ಎಂದು ಹೇಳಿಕೊಳ್ಳುತ್ತಾನೆ. ಪಕ್ಕಾ ನಂಬಿಕೆ ಬರುವಂತೆ ಮಾತನಾಡಿ ಹೆದರಿಸಿ ಬಿಡುವ ಈತ ಕೊನೆಗೆ ಕೇಸ್ ಮುಗಿಸಲು ಲಾಯರ್‌ಗೆ ಹಣ ಕೊಡಬೇಕಾಗುತ್ತದೆ. ಮೊದಲು ಇಷ್ಟು ಹಣ ಅಕೌಂಟ್‌ಗೆ ಹಾಕಿ ಮತ್ತೆ ಮುಂದೆ ನೋಡುವ ಎಂದು ಹೇಳುತ್ತಾನೆ. ಈ ರೀತಿಯ ಕರೆಗಳು ಕೆಲವು ಚಿನ್ನದ ಅಂಗಡಿ ಮಾಲೀಕರಿಗೆ ಬಂದಿದ್ದು ಎಲ್ಲಾ ಕರೆಗಳು ಕೂಡ ತೆಲುಗಿನಲ್ಲಿ ಮಾತನಾಡುವ ವ್ಯಕ್ತಿಗಳಿಂದ ಬಂದಿದೆ ಎನ್ನಲಾಗಿದೆ.‌


ಯಮಾರಿದರೆ ಹಣ ಗುಳುಂ…!:
ನಮ್ಮನ್ನು ನಂಬಿಕೆ ಬರುವಂತೆ ಮಾತಿನಲ್ಲೇ ಹೆದರಿಸಿ ಬಿಡುವ ಈ ರೀತಿಯ ವಂಚಕರು ನಮ್ಮ ಅಂಗಡಿ ಹೆಸರು, ವಿಳಾಸ ಎಲ್ಲವನ್ನು ತಿಳಿದುಕೊಂಡೇ ಕರೆ ಮಾಡುತ್ತಾರೆ. ಇವರು ಹೇಳುವ ಕೇಸ್‌ಗಳು ಕೂಡ ಬಹಳ ವಿಚಿತ್ರವಾಗಿದ್ದು ನಾವು ಬೇಗನೆ ನಂಬಿ ಬಿಡುತ್ತೇವೆ. ನಾವೇನಾದರೂ ಹೆದರಿಬಿಟ್ಟರೆ ನಮ್ಮನ್ನು ಬಲು ಬೇಗನೇ ಮೋಸ ಮಾಡಿಬಿಡುತ್ತಾರೆ. ಅವರು ಹೇಳುವ ಅಕೌಂಟ್‌ಗೆ ಒಮ್ಮೆ ಹಣ ಹಾಕಿದರೆ ಮತ್ತೆ ನಮ್ಮಿಂದ ಹಣ ಪೀಕಿಸುತ್ತಲೇ ಇರುತ್ತಾರೆ.

ಇಂತಹ ಯಾವುದೇ ಕರೆಗಳನ್ನು ನಂಬಬೇಡಿ
ನಿಮ್ಮ ಮೇಲೆ ಕೇಸ್ ಇದೆ, ಅರ್ಧ ಬೆಲೆಗೆ ಕೆ.ಜಿ ಚಿನ್ನ ಕೊಡ್ತೇವೆ ಎಂಬಿತ್ಯಾದಿ ನಮ್ಮನ್ನು ಮೋಸ ಮಾಡುವ ಇಂತಹ ಕರೆಗಳನ್ನು ಯಾವತ್ತೂ ನಂಬಬೇಡಿ. ಇಂತಹ ವಂಚಕರ ಕರೆಗಳಿಗೆ ಉತ್ತರಿಸುವ ಗೋಜಿಗೆ ಹೋಗಬೇಡಿ ಮತ್ತು ಇಂತಹ ಕರೆಗಳಿಗೆ ಭಯಗೊಳ್ಳಬೇಡಿ. ನಮ್ಮನ್ನು ಹೆದರಿಸುವ ಮೋಸ ಮಾಡುವ ಇಂತಹ ವಂಚಕರ ಬಗ್ಗೆ ಜಾಗೃತರಾಗಿರಿ.

LEAVE A REPLY

Please enter your comment!
Please enter your name here