‘ಎ’ ಶ್ರೇಣಿ ಗೆ ಏರಲಿದೆ ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನ

0

ನರಿಮೊಗರು: ಇಲ್ಲಿನ ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನ ತನ್ನ ಎಲ್ಲಾ ಘನತೆ, ಅರ್ಹತೆಯಿಂದ ಇಲಾಖಾ ನಿಯಮಾನುಸಾರ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ‘ಎ’ ಶ್ರೇಣಿಗೆ ಒಳಪಡಲಿದೆ. ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ನಿಯಮಾನುಸಾರ ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ವಾರ್ಷಿಕ ಆದಾಯ ರೂ.25 ಲಕ್ಷಕ್ಕಿಂತಲೂ ಅಧಿಕ ಇರುವ ಕಾರಣ ಈ ದೇವಸ್ಥಾನವನ್ನು ಇಲಾಖೆಯ ‘ಎ’ ಶ್ರೇಣಿಯ ದೇವಸ್ಥಾನವೆಂದು ಪರಿಗಣಿಸಿ ರಾಜ್ಯ ಧಾರ್ಮಿಕ ಪರಿಷತ್‌ನ ಮೂಲಕ ಸದ್ರಿ ದೇವಸ್ಥಾನಕ್ಕೆ ನೂತನ ವ್ಯವಸ್ಥಾಪನಾ ಸಮಿತಿಯನ್ನು ರಚಿಸುವ ಬಗ್ಗೆ ಕ್ರಮ ಕೈಗೊಳ್ಳಲು ಜು.22ರಂದು ದ.ಕ ಜಿಲ್ಲಾಽಕಾರಿಯವರ ಕಛೇರಿಯಲ್ಲಿ ನಡೆದ ಜಿಲ್ಲಾ ಧಾರ್ಮಿಕ ಪರಿಷತ್ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತುರವರು ತಿಳಿಸಿದ್ದಾರೆ.


ವಾರ್ಷಿಕ ಆದಾಯ ರೂ.60 ಲಕ್ಷ:
2008ರಲ್ಲಿ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶ ನಡೆದ ನಂತರ ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನವು ಶ್ರೀ ದೇವರ ಕಾರಣಿಕ, ಭಕ್ತರ ಶ್ರದ್ಧಾ ಭಕ್ತಿಯ ಸೇವೆ, ಸಹಕಾರದಿಂದ ಅಭಿವೃದ್ಧಿ ಹೊಂದುತ್ತಾ ಬಂದಿದ್ದು, ಶ್ರೀ ದೇವಳದ ವಾರ್ಷಿಕ ಆದಾಯ ಕೂಡಾ ಗಣನೀಯ ಏರಿಕೆಯಾಗುತ್ತಾ ಬಂದಿದೆ. ಅಧಿಕೃತ ಮಾಹಿತಿ ಪ್ರಕಾರ ಸದ್ರಿ ದೇವಸ್ಥಾನದ ವಾರ್ಷಿಕ ಆದಾಯ 2018, 2019, 2020ರಲ್ಲಿ ಸರಾಸರಿ ರೂ.35 ಲಕ್ಷ, 2021ರಲ್ಲಿ ರೂ.28 ಲಕ್ಷ (ಕೊರೊನಾದಿಂದಾಗಿ ಸ್ವಲ್ಪ ಇಳಿಕೆ), 2022ರಲ್ಲಿ ರೂ.49ಲಕ್ಷ, 2023ರಲ್ಲಿ ರೂ. 59 ಲಕ್ಷ ಆಗಿರುತ್ತದೆ. 2024ರಲ್ಲಿ ವಾರ್ಷಿಕ ಆದಾಯ ರೂ.60 ಲಕ್ಷಕ್ಕೂ ಅಧಿಕವಾಗುವ ನಿರೀಕ್ಷೆ ಇದೆ. ಕರ್ನಾಟಕ ರಾಜ್ಯ ಸರಕಾರದ ಅಧಿಸೂಚಿತ ಪಟ್ಟಿಯಲ್ಲಿರುವ ಹಿಂದೂ ಧಾರ್ಮಿಕ ಸಂಸ್ಥೆಗಳ ವಾರ್ಷಿಕ ಸರಾಸರಿ ಆದಾಯಗಳನ್ನು ಆಧರಿಸಿ ಇಲಾಖಾ ನಿಯಮಾವಳಿಗಳ ವಿಧಿ 3ರನ್ವಯ ಸದರಿ ಸಂಸ್ಥೆಗಳನ್ನು ವರ್ಗೀಕರಿಸಲಾಗುತ್ತದೆ. ಯಾವುದೇ ದೇವಸ್ಥಾನವು ಇಲಾಖೆಗೆ ಸಲ್ಲಿಸಿದ ಮುಂಗಡ ಪತ್ರದಲ್ಲಿ ಸತತ ಮೂರು ವರ್ಷಗಳ ಸರಾಸರಿ ಆದಾಯವು ರೂ.25ಲಕ್ಷವನ್ನು ಮೀರಿದ್ದಲ್ಲಿ ಸದರಿ ದೇವಸ್ಥಾನವನ್ನು ಪ್ರರ್ಗ ‘ಎ’ ಗೆ ಸೇರಿದ ಅಧಿಸೂಚಿತ ಸಂಸ್ಥೆಯೆಂದು ಪರಿಗಣಿಸಲಾಗುತ್ತದೆ.


ನಿಗದಿತ ಸಮಯಕ್ಕೇ ದರ್ಶನ ಪೂಜೆ:
ಪ್ರಸಕ್ತ ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ನಿತ್ಯ ಬೆಳಿಗ್ಗೆ 7.30 ಕ್ಕೆ ಬಾಗಿಲು ತೆರೆಯಲಾಗುತ್ತದೆ. ನಿತ್ಯ ಬೆಳಿಗ್ಗೆ 8.30ಕ್ಕೆ ಪೂಜೆ, ಮಧ್ಯಾಹ್ನ 11 ಗಂಟೆಗೆ ಮಹಾಪೂಜೆ ನಡೆದು ಮಧ್ಯಾಹ್ನ 1 ಗಂಟೆಗೆ ಬಾಗಿಲು ಹಾಕಲಾಗುತ್ತದೆ. ಸಂಜೆ 6 ಗಂಟೆಗೆ ಬಾಗಿಲು ತೆರೆದು ರಾತ್ರಿ 7 ಗಂಟೆಗೆ ಪೂಜೆ ನಡೆದು 8 ಗಂಟೆಗೆ ಬಾಗಿಲು ಹಾಕಲಾಗುತ್ತದೆ. ನಿತ್ಯ ಭಕ್ತರಿಗೆ ನಿಗದಿತ ಅವಧಿಯಲ್ಲಿ ದೇವರ ದರ್ಶನಕ್ಕೆ ಅವಕಾಶ ಇರುತ್ತದೆ. ನಿತ್ಯ ಮೂರು ಹೊತ್ತು ದೇವರಿಗೆ ನಿಗದಿತ ಅವಽಯಲ್ಲಿ ಪೂಜೆ ನಡೆಯುತ್ತದೆ. ಇದು ‘ಎ’ ಶ್ರೇಣಿ ದೇವಸ್ಥಾನದ ನಿಯಮವೂ ಹೌದು.


ಸಾನಿಧ್ಯ ವೃದ್ಧಿ, ಭಕ್ತರ ಅನುಕೂಲಕ್ಕಾಗಿ ವಿಶೇಷ ಸೇವೆಗಳು:
ಶ್ರೀ ದೇವಳದಲ್ಲಿ ಶ್ರೀ ಮೃತ್ಯುಂಜಯೇಶ್ವರ (ಶಿವ) ಪ್ರಧಾನ ದೇವರು. ಶ್ರೀ ಮಹಾಗಣಪತಿ, ಶ್ರೀ ದುರ್ಗಾಪರಮೇಶ್ವರಿ, ಶ್ರೀ ಶಾಸ್ತಾರ ದೇವರು ಪರಿವಾರ ದೇವರುಗಳು. ಶ್ರೀ ನಾಗ ದೇವರು, ವ್ಯಾಘ್ರ ಚಾಮುಂಡಿ ದೈವದ ಸಾನಿಧ್ಯವೂ ಇದೆ. ಶ್ರೀ ದೇವಳದಲ್ಲಿ ಪ್ರಸಕ್ತ ನಿತ್ಯ ಆಗಮೋಕ್ತ ರೀತಿಯಲ್ಲಿ ಪೂಜೆ ನಡೆಯುತ್ತದೆ. ಶ್ರೀ ದೇವಳದಲ್ಲಿ ಸಾನಿಧ್ಯ ವೃದ್ಧಿಗಾಗಿ ನಿತ್ಯ ರುದ್ರಾಭಿಷೇಕ, ಪಂಚಕಜ್ಜಾಯ, ಮಂಗಳಾರತಿ, ಬಿಲ್ವಾರ್ಚನೆ, ಭಸ್ಮಾರ್ಚನೆ, ಮಹಾಪೂಜೆ, ಸರ್ವಸೇವೆ, ವಿಶೇಷವಾಗಿ ಶಾಶ್ವತ ಪೂಜೆ, ಒಂದು ದಿನದ ನಿತ್ಯ ಪೂಜೆ, ಬಲಿವಾಡು, ಕರ್ಕಾಟಕ ಮಾಸದಲ್ಲಿ ದುರ್ಗಾನಮಸ್ಕಾರ ಪೂಜೆ, ನಾಗರಪಂಚಮಿ, ಗಣೇಶ ಚತುರ್ಥಿ, ನವರಾತ್ರಿ ಸಂದರ್ಭದಲ್ಲಿ ಹೂವಿನ ಪೂಜೆ, ಧನುರ್ಮಾಸದಲ್ಲಿ ಧನುಪೂಜೆ, ಪ್ರತೀ ತಿಂಗಳ ಶುಕ್ಲ ಪಂಚಮಿಯಂದು ನಾಗತಂಬಿಲ, ಪ್ರತೀ ತಿಂಗಳ ಸಂಕ್ರಮಣದಂದು ಗಣಪತಿ ಹೋಮ, ಪ್ರತೀ ತಿಂಗಳ ಶುಕ್ಲಪ್ರದೋಷದಂದು ಪ್ರದೋಷ ಪೂಜೆ, ಮಕರಸಂಕ್ರಮಣದಂದು ಗಣಪತಿ ಹೋಮ, ಶಿವರಾತ್ರಿ ಆಚರಣೆ, ವರ್ಷಾವಧಿ ಜಾತ್ರೋತ್ಸವ, ಸಾರ್ವಜನಿಕ ಮಹಾಮೃತ್ಯುಂಜಯ ಹೋಮ, ಪತ್ತನಾಜೆ ಆಚರಣೆ ನಡೆಯಲಿದೆ. ಭಕ್ತರು ಇಚ್ಚಿಸುವ ದಿನಗಳಂದು ಮೃತ್ಯುಂಜಯ ಹೋಮ, ಸಂಽಶಾಂತಿ ಹೋಮ ಸೇರಿದಂತೆ ಇತರ ಶಾಂತಿಹೋಮಗಳನ್ನು, ಶನಿಪೂಜೆ, ಶ್ರೀ ದುರ್ಗಾಸಪ್ತಶತೀ ಪಾರಾಯಣ, ಶಿವಪೂಜೆ, ಶಿವಸಹಸ್ರನಾಮ ಪಾರಾಯಣ, ದುರ್ಗಾಪೂಜೆ, ವಿಶೇಷ ಗಣಹೋಮ, ಗರಿಕೆ ಹೋಮ, ಏಕಾದಶ ರುದ್ರಾಭಿಷೇಕ, ಶತರುದ್ರಾಭಿಷೇಕ, ಮೃತ್ಯುಂಜಯ ಜಪ, ಶಿವಾಷ್ಟೋತ್ತರ, ಗಣಪತಿ ಅಷ್ಟೋತ್ತರ ಸೇವೆಗಳನ್ನು ಮಾಡಿಸಬಹುದು. ಶ್ರೀ ದೇವರ ಸಾನಿಧ್ಯ ವೃದ್ಧಿಗಾಗಿ ಭಕ್ತರ ಅನುಕೂಲಕ್ಕಾಗಿ ಶ್ರೀ ದೇವಳದ ಆದಾಯದ ದೃಷ್ಟಿಯಿಂದ ಈ ಎಲ್ಲಾ ಸೇವೆಗಳನ್ನು ನಡೆಸಲಾಗುತ್ತದೆ.


ಆಯುಕ್ತರ ನಿಯಂತ್ರಣ:
‘ಎ’ ಶ್ರೇಣಿಯ ದೇವಸ್ಥಾನಗಳಿಗೆ ರಾಜ್ಯಮಟ್ಟದಲ್ಲಿ ರಾಜ್ಯ ಧಾರ್ಮಿಕ ಪರಿಷತ್‌ನ ನಿರ್ಣಯದಂತೆ ವ್ಯವಸ್ಥಪನಾ ಸಮಿತಿಯನ್ನು ರಚಿಸಲಾಗುತ್ತದೆ. ಇಂತಹ ದೇವಸ್ಥಾನಗಳು ಹಿಂದೂ ಧಾರ್ಮಿಕ ದತ್ತಿ ಇಲಾಖಾ ಆಯುಕ್ತರ ನೇರ ನಿಯಂತ್ರಣಕ್ಕೆ ಒಳಪಡುತ್ತವೆ. ‘ಎ’ ಶ್ರೇಣಿಯ ದೇವಸ್ಥಾನಗಳಿಗೆ ಅನಿವಾರ್ಯವಾದರೆ ‘ಕಾರ್ಯನಿರ್ವಹಣಾಧಿಕಾರಿ’ ಯೊಬ್ಬರನ್ನು ನೇಮಕ ಮಾಡಬೇಕಾಗುತ್ತದೆ. ದೇವಸ್ಥಾನದ ಆಯವ್ಯಯ ಬಜೆಟ್ ಲೆಕ್ಕಪತ್ರವನ್ನು ಪ್ರತೀ ವರ್ಷ ತಪ್ಪದೇ ಇಲಾಖಾ ಆಯುಕ್ತರಿಗೆ ಸಲ್ಲಿಸಿ ಅನುಮೋದನೆ ಪಡೆದುಕೊಳ್ಳಬೇಕಾಗಿರುತ್ತದೆ.

LEAVE A REPLY

Please enter your comment!
Please enter your name here