ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 25ಯ ಶಿರಾಡಿ ಘಾಟ್ ಪ್ರದೇಶದಲ್ಲಿರುವ ಗಡಿ ದೇವಸ್ಥಾನದ ಮೇಲ್ಭಾಗದಲ್ಲಿ ಬೃಹತ್ ಗಾತ್ರದ ಬಂಡೆ ಕಲ್ಲೊಂದು ಬೆಟ್ಟದಿಂದ ಕುಸಿದು ಹೆದ್ದಾರಿಗೆ ಬಿದ್ದ ಪರಿಣಾಮ ಹೆದ್ದಾರಿಯಲ್ಲಿನ ವಾಹನ ಸಂಚಾರ ಕೆಲ ಸಮಯ ತಡೆ ಹಿಡಿಯಲ್ಪಟ್ಟ ಘಟನೆ ಜು.27ರಂದು ಸಂಭವಿಸಿದೆ.
ಶಿರಾಡಿ ಘಾಟ್ ಪ್ರದೇಶದಲ್ಲಿನ ಬೆಟ್ಟದ ಮೇಲಿದ್ದ ಬೃಹತ್ ಗಾತ್ರದ ಬಂಡೆ ಕಲ್ಲೊಂದು ಹೆದ್ದಾರಿಗೆ ಕುಸಿದು ಬಿತ್ತು. ಈ ಸಮಯದಲ್ಲಿ ಅದೃಷ್ಠಾವಶಾತ್ ಯಾವುದೇ ವಾಹನಗಳು ಬಂಡೆ ಕಲ್ಲಿಗೆ ಸಿಲುಕದೆ ಪವಾಡ ಸದೃಶ್ಯವಾಗಿ ಪಾರಾದವು. ಈ ಘಟನೆಯ ಬೆನ್ನಲ್ಲೇ ಎಚ್ಚೆತ್ತ ಪೊಲೀಸ್ ಇಲಾಖೆ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಿತ್ತು. ಈ ಮಧ್ಯೆ ಸಕಲೇಶಪುರ ಠಾಣಾ ವ್ಯಾಪ್ತಿಯ ದೋಣಿಗಲ್ ಎಂಬಲ್ಲಿಯೂ ಗುಡ್ಡ ಕುಸಿತ ಸಂಭವಿಸಿದ ಕಾರಣಕ್ಕೆ ಅಲ್ಲಿಂದಲೂ ವಾಹನ ಸಂಚಾರವನ್ನು ತಡೆ ಹಿಡಿಯಲಾಗಿತ್ತು.
ಶಿರಾಡಿ ಘಾಟ್ ಪ್ರದೇಶದಲ್ಲಿನ ಬೆಟ್ಟ ಗುಡ್ಡಗಳಲ್ಲಿ ದೊಡ್ಡ ದೊಡ್ಡ ಗಾತ್ರದ ಬಂಡೆ ಕಲ್ಲುಗಳು ಬೆಟ್ಟದ ಮೇಲ್ಮೈ ಪ್ರದೇಶದಲ್ಲಿದ್ದು, ಸತತವಾಗಿ ಸುರಿಯುವ ಮಳೆಗೆ ಬಂಡೆಕಲ್ಲುಗಳ ಕೆಳ ಭಾಗದ ಮಣ್ಣು ಮೃದುವಾದೊಡನೆ ಕುಸಿದು ಬೀಳುವ ಅಪಾಯದಲ್ಲಿವೆ. ಈ ಅಪಾಯಕಾರಿ ಸ್ಥಿತಿಯಲ್ಲಿಯೇ ಈ ಭಾಗದಲ್ಲಿ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಶನಿವಾರ ಹೆದ್ದಾರಿಯಲ್ಲಿ ಇದೇ ಕಾರಣದಿಂದ ಬಂಡೆ ಕಲ್ಲು ಬಿದ್ದಿದ್ದು, ಸೂಕ್ಷ್ಮತೆಯನ್ನು ಅರಿತ ಇಲಾಖಾಧಿಕಾರಿಗಳು ಮೊತ್ತ ಮೊದಲಾಗಿ ಸಂಚಾರವನ್ನೇ ನಿರ್ಬಂಧಿಸಿದರು.
ಬಳಿಕ ಬಂಡೆಕಲ್ಲನ್ನು ಬದಿಗೆ ಸರಿಸುವ ಕಾರ್ಯಾಚರಣೆಯನ್ನು ಕೈಗೊಂಡು, ವಾಹನಗಳನ್ನು ಏಕಮುಖ ಸಂಚಾರದಲ್ಲಿ ಪುನರಾರಂಭಿಸಿದರು. ಇನ್ನೊಂದೆಡೆ ಸಕಲೇಶ್‌ಪುರ ಠಾಣಾ ವ್ಯಾಪ್ತಿಯ ದೋಣಿಗಲ್ ಎಂಬಲ್ಲಿ ಗುಡ್ಡ ಜರಿತವುಂಟಾಗಿ ವಾಹನ ಸಂಚಾರವನ್ನು ತಡೆ ಹಿಡಿಯಲಾಯಿತ್ತಾದರೂ ಬಳಿಕ ಮಣ್ಣು ತೆರವು ಕಾರ್ಯಾಚರಣೆ ನಡೆಸಿ ವಾಹನ ಸಂಚಾರವನ್ನು ಪುನರಾರಂಭಗೊಳಿಸಲಾಯಿತು.
ಒಟ್ಟಾರೆ ಸತತ ಸುರಿಯುವ ಮಳೆ, ಹೆದ್ದಾರಿಯ ಘಾಟ್ ಪ್ರದೇಶದಲ್ಲಿ ಸಂಭವಿಸುವ ಪ್ರಾಕೃತಿಕ ಅವಘಡಗಳಿಂದ ತಪ್ಪಿಸುವ ಸಲುವಾಗಿ ಪ್ರಯಾಣಿಸುವ ವೇಳೆ ದೇವರ ಸ್ಮರಣೆ ಅನಿವಾರ್ಯವಾಗಿದೆ.