ಉಪ್ಪಿನಂಗಡಿ: ಕಾರ್ಗಿಲ್ ವಿಜಯ್ ದಿನದ 25ನೇ ವಾರ್ಷಿಕೋತ್ಸವದ ಅಂಗವಾಗಿ ಇಲ್ಲಿನ ಇಂದ್ರಪ್ರಸ್ಥ ವಿದ್ಯಾಸಂಸ್ಥೆಯಲ್ಲಿ ಜು.26ರಂದು ಯೋಧ ನಮನ ಕಾರ್ಯಕ್ರಮ ನಡೆಯಿತು.
ವಿದ್ಯಾರ್ಥಿಗಳು ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿ ಗೌರವ ಸಲ್ಲಿಸಿದರು. ಹತ್ತನೇ ತರಗತಿಯ ಜಿಯಾನ್ ಮರಿಯಾ ಸಿಕ್ವೇರಾ ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಯೋಧರ ಕುರಿತು ಮಾತನಾಡಿದರು. ಒಂದು ನಿಮಿಷದ ಮೌನ ಪ್ರಾರ್ಥನೆಯೊಂದಿಗೆ ಮಡಿದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಬಳಿಕ ನಡೆದ ಕಾರ್ಯಕ್ರಮದಲ್ಲಿ ಸಾಮರಸ್ಯಟೋಳಿಯ ಅಧ್ಯಕ್ಷ ಪರ್ಕಳದ ಸುರೇಶ್ ದಿಕ್ಸೂಚಿ ಭಾಷಣ ಮಾಡಿ, ಈ ದೇಶದ ಪ್ರಜೆಗಳಾದ ನಾವೆಲ್ಲರೂ ದೇಶಭಕ್ತರಾಗಬೇಕು. ಸ್ವಾರ್ಥ ತುಂಬಿದ ಸಮಾಜದಲ್ಲಿ ದೇಶಭಕ್ತಿಯ ಗಂಗೆ ಉಕ್ಕಿ ಹರಿಯಬೇಕು. ದೇಶಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಯೋಧರು ನಮಗೆ ಸ್ಪೂರ್ತಿಯಾಗಬೇಕು ಎಂದರು.
ಭಾರತದ ಸೇನೆಯಲ್ಲಿ ಎಲ್.ಒ.ಸಿ ಯಾಗಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿದ, ಸಂಸ್ಥೆಯ ಪಾಲಕರೂ ಆದ ಚಿತ್ತರಂಜನ್‌ದಾಸ್ ಶೆಟ್ಟಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾಸಿಸಲಾಯಿತು. ಸಂಸ್ಥೆಯ ಸಂಚಾಲಕ ಸುಬ್ರಹ್ಮಣ್ಯ ಭಟ್ ಮಾತನಾಡಿ, ವಿದ್ಯಾರ್ಥಿಗಳು ಅಧ್ಯಯನ ಪ್ರವೃತ್ತಿಯನ್ನುರೂಡಿಸಿಕೊಂಡು, ದೇಶಭಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ – ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾರ್ಗಿಲ್ ಯುದ್ಧದ ಸಾಕ್ಷ್ಯ ಚಿತ್ರವನ್ನು ವಿದ್ಯಾರ್ಥಿಗಳಿಗೆ ತೋರಿಸಲಾಯಿತು.
ವಿದ್ಯಾಲಯದ ಮುಖ್ಯ ಶಿಕ್ಷಕಿ ವೀಣಾ ಆರ್. ಪ್ರಸಾದ್ ಸ್ವಾಗತಿಸಿದರು. ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಚ್.ಕೆ. ಪ್ರಕಾಶ್ ವಂದಿಸಿದರು. ಉಪನ್ಯಾಸಕಿ ತೇಜಸ್ವಿನಿ ಹಾಗೂ ಸಹ ಶಿಕ್ಷಕಿ ಆಶಿತಾ ಕಾರ್ಯಕ್ರಮವನ್ನು ನಿರೂಪಿಸಿದರು.