ರಾಮಕುಂಜ: ಒಕ್ಕಲಿಗ ಗೌಡ ಸೇವಾ ಸಂಘದಿಂದ ಆಟಿಡೊಂಜಿ ದಿನ, ಸ್ವ-ಸಹಾಯ ಸಂಘಗಳ ವಾರ್ಷಿಕೋತ್ಸವ, ಅಭಿನಂದನಾ ಕಾರ್ಯಕ್ರಮ

0

ರಾಮಕುಂಜ: ಒಕ್ಕಲಿಗ ಗೌಡ ಸೇವಾ ಸಂಘ ಆಲಂಕಾರು ವಲಯ, ಒಕ್ಕಲಿಗ ಗೌಡ ಸೇವಾ ಸಂಘ ರಾಮಕುಂಜ ಮತ್ತು ಒಕ್ಕಲಿಗ ಸ್ವ-ಸಹಾಯ ಸಂಘಗಳ ಒಕ್ಕೂಟ ರಾಮಕುಂಜ ಇದರ ಆಶ್ರಯದಲ್ಲಿ ಆಟಿಡೊಂಜಿ ದಿನದ ಮಹತ್ವ, ಸ್ವಸಹಾಯ ಸಂಘಗಳ ವಾರ್ಷಿಕೋತ್ಸವ ಮತ್ತು ಅಭಿನಂದನಾ ಕಾರ್ಯಕ್ರಮ ಜು.28ರಂದು ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಆಲಂಕಾರು ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಮಹಿಳಾ ಸಮಿತಿ ಅಧ್ಯಕ್ಷೆ ಗೀತಾ ಮರಂಕಾಡಿ ಅವರು ಮಾತನಾಡಿ, ತುಳುನಾಡಿನ ಆಚರಣೆಗಳ ಹಿಂದೆ ವೈಜ್ಞಾನಿಕ ಕಾರಣಗಳಿವೆ. ಅದನ್ನು ಮಕ್ಕಳಿಗೆ ತಿಳಿಸಿ ಉತ್ತೇಜನ ಕೊಡುವ ಕೆಲಸ ಆಗಬೇಕೆಂದು ಹೇಳಿದರು. ಉಪನ್ಯಾಸ ನೀಡಿದ ಆಲಂಕಾರು ವಲಯ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಪ್ರದೀಪ್ ಬಾಕಿಲ ಅವರು, ಇಂತಹ ಕಾರ್ಯಕ್ರಮಗಳ ಮೂಲಕ ತುಳುನಾಡಿನ ಪರಂಪರೆಯನ್ನು ತಿಳಿಸುವ ಕೆಲಸ ಆಗುತ್ತಿದೆ. ಯುವ ಜನತೆ ದುಶ್ಚಟ, ಜೂಜಾಟಗಳಿಂದ ದೂರವಿದ್ದು ಇಂತಹ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು. ಆಚರಣೆ ಅರ್ಥಪೂರ್ಣವಾಗಿರಬೇಕು. ಜನ ಇದರಲ್ಲಿ ತೊಡಗಿಕೊಂಡಾಗ ಸಂಘಟನೆಯೂ ಬೆಳೆಯುತ್ತದೆ. ಮಕ್ಕಳನ್ನೂ ತೊಡಗಿಸಿಕೊಳ್ಳಬೇಕೆಂದು ಹೇಳಿದರು.


ಅತಿಥಿಯಾಗಿದ್ದ ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು ಅವರು ಮಾತನಾಡಿ, ಕಡಬದ ಹೊಸಮಠದಲ್ಲಿ 15 ಕೋಟಿ ರೂ.ವೆಚ್ಚದಲ್ಲಿ ಒಕ್ಕಲಿಗ ಸಮುದಾಯ ಭವನ ನಿರ್ಮಾಣವಾಗಲಿದೆ. ಇದಕ್ಕೆ ಕಡಬ ತಾಲೂಕಿನ 42 ಗ್ರಾಮಗಳ ಸಮಾಜ ಬಾಂಧವರೂ ಸಹಕಾರ ನೀಡಬೇಕು. ಈ ನಿಟ್ಟಿನಲ್ಲಿ ಪ್ರತಿ ಗ್ರಾಮದಲ್ಲೂ ಮಹಾ ಅಭಿಯಾನ ನಡೆಸಲಾಗುತ್ತಿದೆ ಎಂದರು. ಮುಂದಿನ ದಿನಗಳಲ್ಲಿ ಇಲ್ಲಿ ನಾಯಕತ್ವ ಶಿಬಿರ, ಕಡಿಮೆ ದರದಲ್ಲಿ ಔಷಧಿ ವಿತರಣೆಗಾಗಿ ಮೆಡಿಕಲ್, ಕೃಷಿಕರಿಗೆ ಸೇವೆ ಸೇರಿದಂತೆ ವಿವಿಧ ಚಟುವಟಿಕೆ ನಡೆಸಲು ನಿರ್ಧಾರ ಮಾಡಲಾಗಿದೆ. ಈ ಮೂಲಕ ಸಮಾಜದಿಂದ ಪಡೆದುಕೊಂಡಿರುವುದನ್ನು ಸಮಾಜಕ್ಕೆ ಕೊಡುವ ಉದ್ದೇಶವಿರಿಸಿಕೊಳ್ಳಲಾಗಿದೆ ಎಂದು ಹೇಳಿದರು. ಇನ್ನೋರ್ವ ಅತಿಥಿ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್‌ನ ಅಧ್ಯಕ್ಷ ಡಿ.ವಿ.ಮನೋಹರ ಅವರು ಮಾತನಾಡಿ, ಎಲ್ಲಾ ಚಟುವಟಿಕೆಗಳಲ್ಲೂ ಒಕ್ಕಲಿಗ ಸ್ವಸಹಾಯ ಸಂಘದ ಸದಸ್ಯರು ಪಾಲ್ಗೊಳ್ಳಬೇಕೆಂದು ಹೇಳಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಆಲಂಕಾರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಶಿವಣ್ಣ ಗೌಡ ಕಕ್ವೆ ಅವರು ಮಾತನಾಡಿ, ರಾಮಕುಂಜ ಗ್ರಾಮ ಸಮಿತಿ ಚಟುವಟಿಕೆಯಿಂದ ಕೂಡಿದ ಸಮಿತಿಯಾಗಿದೆ. ವಲಯದಲ್ಲಿ ನಡೆಯುವ ಕಾರ್ಯಕ್ರಮದಲ್ಲೂ ಇಲ್ಲಿನ ಗೌಡ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಹೇಳಿದರು.


ಒಕ್ಕಲಿಗ ಗೌಡ ಸೇವಾ ಸಂಘ ರಾಮಕುಂಜ ಇದರ ಗೌರವಾಧ್ಯಕ್ಷ ಗುಮ್ಮಣ್ಣ ಗೌಡ ಪಿ.ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಿಳಾ ಘಟಕದ ಅಧ್ಯಕ್ಷೆ ಸುಶೀಲ ವಳೆಂಜ ತಾಂಬೂಲ ನೀಡಿ ಹಾಗೂ ಯುವ ಘಟಕದ ಅಧ್ಯಕ್ಷ ಬಾಲಕೃಷ್ಣ ಗೌಡ ಪಟ್ಟೆ ಸಂಪ್ಯಾಡಿ ಶಾಲು ಹಾಕಿ ಅತಿಥಿಗಳನ್ನು ಗೌರವಿಸಿದರು. ಸಹಭೋಜನದ ಪ್ರಾಯೋಜಕರಾದ ಬಾಲಕೃಷ್ಣ ಗೌಡ-ರುಕ್ಮಿಣಿ ಕತ್ಲಡ್ಕ ಕೊಂಡ್ಯಾಡಿ, ಸನ್ಮಾನದ ಪ್ರಾಯೋಜಕರಾದ ಜಯಂತಿ ನಾಗೇಶ್ ಗೌಡ ತಾವೂರು, ಬಹುಮಾನದ ಪ್ರಾಯೋಜಕರಾದ ಆನಂದ ಗೌಡ ಇರ್ಕಿ, ಆಮಂತ್ರಣ ಪತ್ರಿಕೆ ಪ್ರಾಯೋಜಕರಾದ ಉಪ್ಪಿನಂಗಡಿ ಸುರಕ್ಷಾ ಕಂಪ್ಯೂಟರ‍್ಸ್‌ನ ಲೋಕಯ್ಯ ಸಂಪ್ಯಾಡಿ, ಗೋಳಿತ್ತಡಿ ಸಾಯಿ ಮೋಟಾರ‍್ಸ್‌ನ ಶ್ರೀನಿವಾಸ ಕೆ. ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನ ಪ್ರೇರಕಿ ಲಲಿತಾ ವರದಿ ವಾಚಿಸಿದರು. ಒಕ್ಕಲಿಗ ಗೌಡ ಸೇವಾ ಸಂಘ ರಾಮಕುಂಜ ಇದರ ಅಧ್ಯಕ್ಷ ಪದ್ಮಪ್ಪ ಗೌಡ ಕೆ.,ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹರೀಶ್ ಬಾರಿಂಜ ವಂದಿಸಿದರು. ರಾಮಕುಂಜ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಹರೀಶ್ ಬರಮೇಲು ಕಾರ್ಯಕ್ರಮ ನಿರೂಪಿಸಿದರು. ಒಕ್ಕಲಿಗ ಗೌಡ ಸೇವಾ ಸಂಘ ರಾಮಕುಂಜ ಇದರ ಕಾರ್ಯದರ್ಶಿ ಹರೀಶ್ ಎಸ್.ಕಾಜರುಕ್ಕು, ಯುವ ಘಟಕದ ಕಾರ್ಯದರ್ಶಿ ಸೀತಾರಾಮ ಗೌಡ ಅರ್ಬಿ, ಮಹಿಳಾ ಘಟಕದ ಕಾರ್ಯದರ್ಶಿ ಶ್ವೇತಾ ಬದೆಂಜ, ಒಕ್ಕಲಿಗ ಸ್ವಸಹಾಯ ಸಂಘಗಳ ರಾಮಕುಂಜ ಒಕ್ಕೂಟದ ಅಧ್ಯಕ್ಷ ಪೂವಪ್ಪ ಗೌಡ ಕೊಂಡ್ಯಾಡಿ, ಕಾರ್ಯದರ್ಶಿ ಪರಮೇಶ್ವರ ಗೌಡ ಸಂಪ್ಯಾಡಿ, ಒಕ್ಕಲಿಗ ಗೌಡ ಸೇವಾ ಸಂಘದ ಆಲಂಕಾರು ವಲಯ ಕಾರ್ಯದರ್ಶಿ ಕವಿತಾ ಇರ್ಕಿ ಹಾಗೂ ಪದಾಧಿಕಾರಿಗಳು, ಸದಸ್ಯರು ಸಹಕರಿಸಿದರು. ಮಧ್ಯಾಹ್ನ ಸಹಭೋಜನ ನಡೆಯಿತು.

ಅಭಿನಂದನೆ/ ಗೌರವಾರ್ಪಣೆ:
ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ರಾಮಕುಂಜ ಬರಮೇಲು ನಿವಾಸಿ ಶೀನಪ್ಪ ಗೌಡ-ಸುಮಿತ್ರ ದಂಪತಿಯ ಪುತ್ರಿ ಸಿಂಚನ ಹಾಗೂ ರಾಮಕುಂಜ ಗಾಂದಾರಿಮಜಲು ನಿವಾಸಿ ಆನಂದ ಗೌಡ-ಚಂದ್ರಾವತಿ ದಂಪತಿಯ ಪುತ್ರಿ ಹರ್ಷಿತ ಅವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು. ನಿವೃತ್ತ ಎಎಸ್‌ಐ, ರಾಮಕುಂಜ ಗ್ರಾಮದ ಬರಮೇಲು ನಿವಾಸಿ ಗಿರಿಯಪ್ಪ ಗೌಡ, ನಾಟಿವೈದ್ಯೆ ಜಾನಕಿ ಪೂವಪ್ಪ ಗೌಡ ಅಲೆಕ್ಕ ಅವರಿಗೆ ಗೌರವಾರ್ಪಣೆ ಮಾಡಲಾಯಿತು. ಶ್ರೀ ಮುಖ್ಯಪ್ರಾಣ ಒಕ್ಕಲಿಗ ಸ್ವಸಹಾಯ ಸಂಘ ಇರ್ಕಿ ತಂಡವನ್ನು ಅತ್ಯುತ್ತಮ ಸ್ವ ಸಹಾಯ ಸಂಘವೆಂದು ಗುರುತಿಸಿ ಸಂಘದ ಸದಸ್ಯರನ್ನು ಗೌರವಿಸಲಾಯಿತು.

ಆಟೋಟ ಸ್ಪರ್ಧೆ:
ರಾಮಕುಂಜ ಗ್ರಾಮದ ಸಮಾಜ ಬಾಂಧವರಿಗೆ ವಿವಿಧ ಆಟೋಟ ಸ್ಪರ್ಧೆಗಳು ಬೆಳಗ್ಗಿನಿಂದ ಸಂಜೆ ತನಕ ನಡೆಯಿತು. ಆಟಿ ತಿಂಗಳಲ್ಲಿ ತಯಾರಿಸುವ ಖಾದ್ಯಗಳ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here