ಪುತ್ತೂರು: ನಿರಂತರವಾಗಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು ಪಕ್ಕ ಧರೆ ಕುಸಿಯುವ ಭೀತಿಯಲ್ಲಿದ್ದು ಧರೆಯ ಮೇಲ್ಬಾಗದಲ್ಲಿರುವ ಎರಡು ಮನೆಗಳು ಅಪಾಯದ ಸ್ಥಿತಿಯಲ್ಲಿದ್ದು ಮನೆ ಮಂದಿ ಆತಂಕಗೊಂಡಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಹಮ್ಮದ್ ಅಶ್ರಫ್ ಮತ್ತು ಹಸನ್ ಫಕ್ರುದ್ಧೀನ್ ಎಂಬವರಿಗೆ ಸೇರಿದ ಎರಡು ಮನೆಗಳು ಈಗ ಅಪಾಯದ ಸ್ಥಿತಿಯಲ್ಲಿವೆ. ಮನೆಯಲ್ಲಿ ಒಟ್ಟು 10 ಮಂದಿ ಇದ್ದು ಮನೆ ಮಂದಿ ಆತಂಕದಲ್ಲಿ ದಿನ ಕಳೆಯುವಂತಾಗಿದೆ. ಈ ಎರಡೂ ಮನೆಗಳು ಧರೆಯ ಪಕ್ಕದಲ್ಲಿದ್ದು ಒಂದು ಬದಿಯಲ್ಲಿ ಧರೆ ಕುಸಿತಗೊಳ್ಳುತ್ತಿದೆ. ಮರ್ಕಝುಲ್ ಹುದಾ ಮಹಿಳಾ ಕಾಲೇಜು ಆಡಳಿತ ಮಂಡಳಿಯವರು ಧರೆ ತೆಗೆದಿರುವುದರಿಂದ ಈ ಅನಾಹುತಕ್ಕೆ ಕಾರಣವಾಗಿದೆ. ಕಳೆದ 5 ವರ್ಷಗಳಿಂದ ಈ ಸಮಸ್ಯೆ ಇದ್ದು ನಾವು ಆಡಳಿತ ಮಂಡಳಿಯವರ ಹತ್ತಿರ ಹೇಳಿಕೊಂಡು ಬಂದಿದ್ದೇವೆ. ನಮಗೆ ಸೂಕ್ತವಾದ ತಡೆಗೋಡೆ ಕಟ್ಟಿಕೊಡಬೇಕು ಎಂದು ಹಲವು ಸಲ ಕೇಳಿಕೊಂಡಿದ್ದೇವೆ ಆದರೆ ಅವರು ಇದುವರೇಗೆ ಯಾವುದೇ ರೀತಿಯ ಸ್ಪಂದನೆ ಕೊಟ್ಟಿಲ್ಲ, ಈಗ ನಮ್ಮ ಮನೆ ಬೀಳುವ ಪರಿಸ್ಥಿತಿಯಲ್ಲಿದೆ ನಾವೇನು ಮಾಡೋದು, ನಮ್ಮ ಮನೆ ಏನಾದರೂ ಜರಿದು ಬಿದ್ದು ಪ್ರಾಣ ಹಾನಿ ಸಂಭವಿಸಿದರೆ ಮರ್ಕಝುಲ್ ಹುದಾ ಕಾಲೇಜಿನ ಆಡಳಿತ ಮಂಡಳಿಯವರೇ ಸಂಪೂರ್ಣ ಹೊಣೆ ಎಂದು ಮಹಮ್ಮದ್ ಹನೀಫ್‌ರವರು ತಿಳಿಸಿದ್ದಾರೆ.
ಸ್ಥಳಕ್ಕೆ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ, ಸದಸ್ಯರಾದ ಲತೀಫ್, ವಿನೋದ್ ಶೆಟ್ಟಿ ಮುಡಾಲ, ಗ್ರಾಮ ಆಡಳಿತ ಅಧಿಕಾರಿ ಸುಮಂತ್, ಮರ್ಕಝುಲ್ ಹುದಾ ಮಹಿಳಾ ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಅಬ್ದುಲ್ ರಹೀಮಾನ್ ಹಾಜಿ ಅರಿಯಡ್ಕ ಸೇರಿದಂತೆ ಹಲವು ಮಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಾಕೃತಿಕ ವಿಕೋಪಗಳನ್ನು ತಡೆಯುವುದು ಜನರಿಂದ ಸಾಧ್ಯವಿಲ್ಲದ ಕೆಲಸವಾಗಿದೆ. ನಮ್ಮ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಹಾಸ್ಟೇಲ್‌ನ ಎದುರು ಭಾಗದಲ್ಲಿರುವ ಮನೆಗಳ ಬಗ್ಗೆ ನಮಗೆ ಕಾಳಜಿ ಇದೆ. ಧರೆ ಕುಸಿತವನ್ನು ತಪ್ಪಿಸಬೇಕಾದರೆ ಸುಮಾರು 9 ಮೀಟರ್ ತನಕ ತಡೆಗೋಡೆ ನಿರ್ಮಿಸಬೇಕಾಗುತ್ತದೆ. ಈ ಬಗ್ಗೆ ಕೆಆರ್‌ಡಿಎಲ್‌ನವರು ಎಸ್ಟಿಮೇಟ್ ಪ್ರಕಾರ ರೂ. 1 ಕೋಟಿಗೂ ಅಧಿಕ ಖರ್ಚಾಗಲಿದೆ. ಆದ್ದರಿಂದ ಸರಕಾರದ ಮಟ್ಟದಿಂದಲೂ ಅನುದಾನದ ಅವಶ್ಯಕತೆ ಇದೆ. ಈ ಬಗ್ಗೆ ನಾವು ಸರಕಾರಕ್ಕೂ ಮನವಿ ಮಾಡಲಿದ್ದೇವೆ. ಮನೆಗೆ ಯಾವುದೇ ತೊಂದರೆ ಆಗದಂತೆ ಮುಂದಿನ ಮಾರ್ಚ್‌ನೊಳಗೆ ತಡೆಗೋಡೆ ನಿರ್ಮಿಸಿಕೊಡುತ್ತೇವೆ ಎಂದು ಮರ್ಕಝುಲ್ ಹುದಾ ಮಹಿಳಾ ಕಾಲೇಜ್‌ನ ಆಡಳಿತ ಮಂಡಳಿ ಅಧ್ಯಕ್ಷ ಅಬ್ದುಲ್ ರಹೀಮಾನ್ ಹಾಜಿ ಅರಿಯಡ್ಕ ತಿಳಿಸಿದ್ದಾರೆ.
ಸರಕಾರದ ಅನುದಾನದ ಅಗತ್ಯವಿದೆ
ಕುಂಬ್ರದ ಮರ್ಕಝುಲ್ ಮಹಿಳಾ ಕಾಲೇಜು ಒಂದು ವಿದ್ಯಾಸಂಸ್ಥೆಯಾಗಿದ್ದು ತಡೆಗೋಡೆ ನಿರ್ಮಾಣದ ವಿಷಯದಲ್ಲಿ ಅನುದಾನದ ಕೊರತೆ ಇದೆ. ಆದ್ದರಿಂದ ಸರಕಾರ ಈ ಬಗ್ಗೆ ಗಮನಹರಿಸಿ ವಿದ್ಯಾಸಂಸ್ಥೆಗೆ ಅನುದಾನದ ನೆರವು ನೀಡಬೇಕಾಗಿದೆ. ಈಗಾಗಲೇ ಹಲವು ಸಲ ಸರಕಾರದ ಮಟ್ಟದಲ್ಲಿ ಅನುದಾನ ಕೇಳಿಕೊಂಡಿದ್ದರೂ ಇದುವರೇಗೆ ಯಾವುದೇ ಸ್ಪಂದನೆ ದೊರೆತಿಲ್ಲ ಎನ್ನಲಾಗಿದೆ. ಜನಪ್ರತಿನಿಧಿಗಳು ಈ ಬಗ್ಗೆ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.