ಭಾರೀ ಮಳೆ: ದಿನದ 24 ಗಂಟೆಯೂ ಅಧಿಕಾರಿಗಳು ಅಲರ್ಟ್ ಆಗಿರಬೇಕು: ಶಾಸಕ ಅಶೋಕ್ ರೈ ಸೂಚನೆ

0

ಪುತ್ತೂರು: ಪುತ್ತೂರು ಸೇರಿದಂತೆ ದ ಕ ಜಿಲ್ಲೆಯಾಧ್ಯಂತ ಕುಂಭದ್ರೋಣ ಮಳೆಯಾಗುತ್ತಿದ್ದು ಯಾವ ಸಮಯದಲ್ಲಿ ಬೇಕಾದರೂ ಯಾವುದೇ ಅನಾಹುತ ನಡೆಯಬಹುದು ಈ ಕಾರಣಕ್ಕೆ ಸಂಬಂಧಿಸಿದ ಅಧಿಕಾರಿಗಳು 24 ಗಂಟೆಯೂ ಅಲರ್ಟ್ ಆಗಿರಬೇಕು ಎಂದು ಪುತ್ತೂರು ಶಾಸಕ ಅಶೋಕ್ ರೈ ಸೂಚನೆಯನ್ನು ನೀಡಿದ್ದಾರೆ.
ಕಳೆದ ಎರಡು ದಿನಗಳಿಂದ ಎಡೆಬಿಡದೆ ಮಳೆಯಾಗುತ್ತಿದೆ. ಅನೇಕ ಕಡೆಗಳಲ್ಲಿ ಧರೆ ಕುಸಿತವಾಗಿದೆ, ಮನೆಗಳು ಜಖಂಗೊಂಡಿದೆ, ನೀರು ನುಗ್ಗಿ ಕೃಷಿ ತೋಟಕ್ಕೆ ಹಾನಿಯಾಗಿದೆ. ಕೆಲವು ಕಡೆಗಳಲ್ಲಿ‌ ಮನೆಯ ಮೇಲೆ ಧರೆ ಮತ್ತು ಮರಗಳು ಬಿದ್ದಿದೆ. ಭಾರೀ ಮಳೆಯ ಕಾರಣ ನದಿಗಳು ಉಕ್ಕಿ ಹರಿಯುತ್ತಿದೆ ಯಾವುದೇ ಸಂದರ್ಭದಲ್ಲಿ ಏನೇ ಘಟನೆ ನಡೆದರೂ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು. ಮನೆಗಳಿಗೆ ಹಾನಿಯಾದರೆ ಅವರಿಗೆ ಬದಲಿ ವ್ಯವಸ್ಥೆಯನ್ನು ಕಲ್ಪಿಸಬೇಕು, ಅವರಿಗೆ ಊಟೋಪಚಾರದ ವ್ಯವಸ್ಥೆಯನ್ನೂ ಮಾಡಬೇಕು. ಪೃಕೃತಿ ವಿಕೋಪ ನಡೆದರೆ ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕರು ಸೂಚನೆ ನೀಡಿದ್ದಾರೆ.

ಗೊತ್ತಾದ ತಕ್ಷಣ ತೆರಳಬೇಕು
ಗಾಳಿ ಮಳೆಗೆ ,ಧರೆ ಕುಸಿತವಾದರೆ ಮನೆಗೆ ಹಾನಿಯಾದರೆ ಗೊತ್ತಾದ ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಡಬೇಕು. ತುರ್ತಾಗಿ ಅಲ್ಲಿ ಏನೆಲ್ಲಾ ವ್ಯವಸ್ಥೆ ಮಾಡಬೇಕೋ ಅದೆಲ್ಲವನ್ನೂ ಮಾಡಬೇಕು. ತಾಲೂಕು ಆಡಳಿತ, ತಹಶಿಲ್ದಾರ್ ,ಸಹಾಯಕ‌ ಕಮಿಷನರ್ ಗೆ ಈ ವಿಚಾರದಲ್ಲಿ ಪೂರ್ಣ ಜವಾಬ್ದಾರಿಯನ್ನು ನೀಡಲಾಗಿದೆ. ಗ್ರಾಮಾಂತರದಲ್ಲಿ ಗ್ರಾಮ ಆಡಳಿತಾಧಿಕಾರಿ, ಪಿಡಿಒ ಗಳು ಕಾರ್ಯಪೃವೃತ್ತರಾಗಿರಬೇಕು. ಯಾವುದೇ ಸಂದರ್ಭದಲ್ಲೂ ಜನರ ಜೊತೆ ಸಂಯಮದಿಂದ ವರ್ತಿಸಬೇಕು ಎಂದು‌ ಶಾಸಕರು ಸೂಚನೆ ನೀಡಿದ್ದಾರೆ.

ಅಗತ್ಯ ಬಿದ್ದರೆ ಗಂಜಿ ಕೇಂದ್ರ ತೆರೆಯಿರಿ
ಅಗತ್ಯ ಬಿದ್ದಲ್ಲಿ ಗಂಜಿ ಕೇಂದ್ರವನ್ನು ತೆರೆಯಬೇಕು.‌ಮನೆ ಕಳೆದುಕೊಂಡ ಅಥವಾ ಮನೆ ಅಪಾಯದಲ್ಲಿದೆ ಎಂದು ಸ್ಥಳಾಂತರಗೊಂಡವರು ಹಸಿವಿನಿಂದ ಇರುವಂತಾಗಬಾರದು. ಸಣ್ಣ‌ ಮಕ್ಕಳಿದ್ದರೆ ಅವರಿಗೆ ಬೇಕಾದ ಆಹಾರ ಮತ್ತು ಗಂಜಿ ವ್ಯವಸ್ಥೆಯನ್ನು ಮಾಡಬೇಕು ಎಂದು ಸೂಚಿಸಿದ್ದಾರೆ.

ಅಪಾಯದ‌ ಮುನ್ಸೂಚನೆ ಬಂದರೆ ಅಧಿಕಾರಿಗಳಿಗೆ ತಿಳಿಸಿ
ಧರೆ ಕುಸಿತವಾಗುವ ,ನೀರು‌ ಮನೆಯೊಳಗೆ ನುಗ್ಗುವ ಬಗ್ಗೆ ಮುನ್ಸೂಚನೆ ಇದ್ದರೆ ತಕ್ಷಣ ಅಧಿಕಾರಿಗಳಿಗೆ ಅಥವಾ ಸ್ಥಳೀಯ‌ ಮುಖಂಡರಿಗೂ ಮಾಹಿತಿ ನೀಡಬೇಕು ಎಂದು ಸಾರ್ವಜನಿಕರಲ್ಲಿ‌ ಶಾಸಕರು‌ ಮನವಿ‌ ಮಾಡಿದ್ದಾರೆ.

ವಿದ್ಯುತ್ ವ್ಯತ್ಯಯ ಆಗದಂತೆ ನೋಡಿಕೊಳ್ಳಿ
ಮಳೆಗೆ ವಿದ್ಯುತ್ ಕಂಬ ತುಂಡಾದರೆ ಆದಷ್ಟು‌ ಬೇಗ ಅದನ್ನು ದುರಸ್ಥಿ‌ ಮಾಡುವ ಕಾರ್ಯವನ್ನು‌ ಮೆಸ್ಕಾಂ ಇಲಾಖೆ ಮಾಡಬೇಕು. ಇದಕ್ಕೆ ಬೇಕಾಗಿ ಹೆಚ್ಚುವರಿ ಸಿಬಂದಿಗಳು ಬೇಕಾದಲ್ಲಿ ತಕ್ಷಣ ಅದರ ವ್ಯವಸ್ಥೆಯನ್ನು‌ ಮಾಡಬೇಕು. ಅವರು‌ ಬರಲಿ ಇವರು ಬರಲಿ ಎಂದು ಯಾರನ್ನೂ ಕಾಯುವುದು ಬೇಡ. ಕ್ಷೇತ್ರದ ಒಬ್ಬನೇ ಒಬ್ಬ ವ್ಯಕ್ತಿಗೂ ಮಳೆಯ‌ ಆವಾಂತರದಿಂದ ನೋವು ಉಂಟಾಗಬಾರದು ಎಂದು ಶಾಸಕರು ಖಡಕ್ ಸೂಚನೆಯನ್ನು ನೀಡಿದ್ದಾರೆ.

ಎಚ್ಚರ ವಹಿಸಿ
ಸಾರ್ವಜನಿಕರು‌ ಗಾಳಿ ಮಳೆ ಬರುವ ವೇಳೆ ಎಚ್ಚರದಿಂದ ಇರಬೇಕು. ಮಕ್ಕಳನ್ನು ಹೊಳೆ ,ನದಿ‌ ಬದಿಗೆ ತೆರಳದಂತೆ ಎಚ್ಚರ ವಹಿಸಿ. ಧರೆಯ ಭಾಗದಲ್ಲಿ ನಿಲ್ಲದಂತೆ ನೋಡಿಕೊಳ್ಳಿ ಎಂದು‌ ಸಾರ್ವಜನಿಕರಿಗೆ ಶಾಸಕರು‌ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here