ಕುಂಬ್ರ ಅಪಾಯಕಾರಿ ಮನೆ ಬದಲಿ ವಾಸ್ತವ್ಯಕ್ಕೆ ಸೂಚನೆ
ಪಡ್ಡಾಯೂರಿನಲ್ಲಿ ಮಣ್ಣು ತೆರವಿಗೆ ಅಧಿಕಾರಿಗೆ ಸೂಚನೆ
ಹನುಮಾಜೆ ಗುಡ್ಡ ಜರಿದ ಪ್ರದೇಶದಲ್ಲಿ ಇನ್ನಷ್ಟು ಅಪಾಯ
ಹಟ್ಟಿಗೆ ಮಣ್ನು ಜರಿದು ದನಗಳ ಸಾವು; ಸೂಕ್ತ ಪರಿಹಾರಕ್ಕೆ ಸೂಚನೆ
ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಗೊಳಗಾದ ಹಲವು ಕಡೆಗಳಲ್ಲಿ ಶಾಕರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಕೆಲವೊಂದು ಕಡೆಗಳಿಂದ ನೇರ ಅಧಿಕಾರಿಗಳಿಗೆ ಕರೆ ಮಾಡಿ ಪರಿಹಾರ ಸೂಚನೆ ನೀಡಿದರೆ, ಒಳಮೊಗ್ರು ಗ್ರಾಮದ ಕೊಯಿಲತ್ತಡ್ಕದಲ್ಲಿ ಅಪಾಯಕಾರಿ ಮನೆಯಲ್ಲಿರುವ ಕುಟುಂಬಕ್ಕೆ ಸ್ಥಳೀಯ ಅಂಗನವಾಡಿಯಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡುವಂತೆ ಸೂಚನೆಯನ್ನು ನೀಡಿದರು ಮತ್ತು ಮಣ್ಣು ಜರಿದು ಹಟ್ಟಿಯಲ್ಲಿದ್ದ ದನಗಳ ಸಾವನ್ನಪ್ಪಿದ ಬೆಳ್ಳಿಪ್ಪಾಡಿ ಗ್ರಾಮದ ಇಬ್ಬರು ಹೈನುಗಾರರಿಗೆ ಸೂಕ್ತ ಪರಿಹಾರ ನೀಡುವಲ್ಲಿ ಅಧಿಕಾರಿಗಳ ಜೊತೆ ಶಾಸಕರು ಮಾತುಕತೆ ನಡೆಸಿದರು.
ಕುಂಬ್ರದಲ್ಲಿ 12 ಮನೆಗಳು ಅಪಾಯದಲ್ಲಿ
ಒಳಮೊಗ್ರು ಗ್ರಾಮದ ಕೊಯಿಲತ್ತಡ್ಕದ ಜನತಾ ಕಾಲನಿಯಲ್ಲಿ 12 ಮನೆಗಳು ಅಪಾಯದ ಸ್ಥಿತಿಯಲ್ಲಿದ್ದು ಅಲ್ಲಿಗೆ ಶಾಸಕರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. 12 ಮನೆಗಳ ಪೈಕಿ ಬಹುತೇಕ ಮನೆಗಳು ಅಪಾಯದ ಸ್ಥಿತಿಯಲ್ಲಿದ್ದು ಈ ಪೈಕಿ ಜುಬೈದಾ ಎಂಬವರ ಮನೆ ತೀರಾ ಅಪಾಯದಲ್ಲಿದ್ದು ಇಲ್ಲಿ ವಾಸವಿರುವವರನ್ನು ಪಕ್ಕದ ಅಂಗನವಾಡಿಯಲ್ಲಿ ವಾಸ್ತವ್ಯ ಮಾಡುವಂತೆ ಶಾಸಕರು ಸೂಚನೆ ನೀಡಿದರು. ಮನೆಗಳ ಸುತ್ತ ನೀರು ಹೋಗಲು ವ್ಯವಸ್ಥೆ ಸರಿ ಇಲ್ಲದೇ ಇದ್ದು ವ್ಯವಸ್ಥೆ ಮಾಡುವಂತೆ ಗ್ರಾಪಂ ಗೆ ಸೂಚನೆ ನೀಡಿದರು. ಗ್ರಾಪಂ ಉಪಾಧ್ಯಕ್ಷರಾದ ಅಶ್ರಫ್ ಉಜಿರೋಡಿ ಮತ್ತು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಪೂಜಾರಿ ಬೊಳ್ಳಾಡಿ, ಗ್ರಾಪಂ ಸದಸ್ಯರಾದ ವಿನೋದ್ ಶೆಟ್ಟಿ ಮುಡಾಲ ಮತ್ತಿತರರು ಉಪಸ್ಥಿತರಿದ್ದರು. ಪಕ್ಕದ ಮಾಧವ ಮಡಿವಾಳ ಎಂಬವರ ಮನೆಯ ಮೇಲೆ ಧರೆ ಕುಸಿದು ಬಿದ್ದಿದ್ದು ಶಾಸಕರು ಅಲ್ಲಿಗೆ ತೆರಳಿ ವೀಕ್ಷಣೆ ಮಾಡಿದರು. ಬಳಿಕ ಕುಂಬ್ರ ಮರ್ಕಝ್ ಮಹಿಳಾ ಕಾಲೇಜಿನ ಆಟದ ಮೈದನದಲ್ಲಿ ಧರೆ ಕುಸಿದು ಅಶ್ರಫ್ ಮತ್ತು ಅವರ ಸಹೋದರಿ ಮನೆ ಅಪಾಯದಲ್ಲಿದ್ದು ಇಲ್ಲಿಗೆ ಶಾಸಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪಡ್ಡಾಯೂರಿನಲ್ಲಿ ಧರೆ ಕುಸಿದು ಕೃಷಿ ನಾಶ
ನಗರದ ಪಡ್ಡಾಯೂರಿನಲ್ಲಿ ಧರೆ ಕುಸಿದು ಹೊಳೆಯ ಮೇಲೆ ಬಿದ್ದಿದ್ದು ಹೊಳೆ ನೀರು ಅಡಿಕೆ ತೋಟಕ್ಕೆ ನುಗ್ಗಿದ ಪರಿಣಾಮ ಕೃಷಿ ತೋಟ ನೀರಿನಿಂದ ಆವೃತವಾಗಿದೆ. ಕಳೆದ ಎರಡು ದಿನಗಳಿಂದ ತೋಟದಲ್ಲಿ ಭಾರೀ ಪ್ರಮಾಣದಲ್ಲಿ ನೀರು ತುಂಬಿರುವ ಕಾರಣ ಅಡಿಕೆ ಮರಗಳು ನೆಲಕ್ಕೆ ಉರುಳಿದೆ ಇದರಿಂದ ತೋಟದ ಮಾಲಕರಿಗೆ ಲಕ್ಷಾಂತರ ರೂ ನಷ್ಟವಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ವೀಕ್ಷಣೆ ಮಾಡಿ ನಗರಸಭಾ ಅಧಿಕಾರಿಗಳಿಗೆ ಸ್ಥಳಕ್ಕೆ ಭೇಟಿ ನೀಡಿ ಹೊಳೆಗೆ ಬಿದ್ದಿರುವ ಮಣ್ಣನ್ನು ತೆರವು ಮಾಡುವಲ್ಲಿ ಕ್ರಮಕೈಗೊಳ್ಳುವಂತೆ ಸೂಚನೆಯನ್ನು ನೀಡಿದರು.ಪಡ್ಡಾಯೂರು ನೀರ‍್ತಾಡಿ ಭರತ್ ಕುಮಾರ್ ಅರಿಗ, ವಸಂತ ಭಂಡಾರಿ, ಸುರೇಂದ್ರ ಭಂಡಾರಿ, ವಿನೋದ್ ಸಫಲ್ಯ, ದೇವದಾಸ್ ಬಂಗೇರ, ವಿನೋದ್ ಗೌಡ ಪಟ್ಟೆ, ವಿಶ್ವನಾಥ ಗೌಡ ಪಟ್ಟೆ, ದಾಮೋದರ ಗೌಡ ಪಟ್ಟೆ, ರಮಣಿ ಗಾನಿಗರವರ ತೋಟಗಳಿಗೆ ಹಾನಿಯಾಗಿದೆ. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಪಂಜಿಗುಡ್ಡೆ ಈಶ್ವರಭಟ್, ಲೋಕೇಶ್ ಪಡ್ಡಾಯೂರು ಮೊದಲಾದವರು ಉಪಸ್ತಿತರಿದ್ದರು.
ಪಡ್ನೂರು ಅಂಡೆಪುಣಿಯಲ್ಲಿ ರಸ್ತೆ ಬಂದ್
ಪಡ್ನೂರು ಗ್ರಾಮದ ಅಂಡೆಪುಣಿ ಸಮೀಪ ಸೇಡಿಯಾಪು ಗೆ ತೆರಳುವ ರಸ್ತೆಯ ಮೆಲೆ ಭಾರೀ ಪ್ರಮಾಣದಲ್ಲಿ ಗುಡ್ಡ ಜರಿದು ಬಿದ್ದಿದ್ದು ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಆಗಿದೆ.ಆ. 2 ರಂದು ಮಣ್ಣು ಕುಸಿತವಾಗಿದೆ, ಆ.3 ರಂದು ರಾತ್ರಿ ಮತ್ತೆ ಮಣ್ಣು ಕುಸಿತವಾಗಿದ್ದು ಬಾರೀ ಗಾತ್ರದ ಬಂಡೆಗಳು ರಸ್ತೆ ಮೇಲೆ ಬಿದ್ದಿದೆ. ರಸ್ತೆ ಕೆಳಗಡೆ ಇರುವ ಮನೆ ಮಂದಿಯನ್ನು ಸ್ಥಳಾಂತರ ಮಾಡುವಂತೆ ಶಾಸಕರು ಸೂಚನೆ ನೀಡಿದರು. ರಸ್ತೆ ಮೇಲೆ ಬಿದ್ದಿರುವ ಮಣ್ಣು ತೆರವು ಮಾಡಲು ಸದ್ಯಕ್ಕೆ ಕಷ್ಟಕರವಾಗಿದ್ದು ಮಳೆ ಕಡಿಮೆಯಾದ ಬಳಿಕ ಮಣ್ಣು ತೆರವು ತೆರವು ಮಾಡುವಂತೆ ಶಾಸಕರು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು, ಇದೇ ಗುಡ್ಡದಲ್ಲಿ ಇನ್ನಷ್ಟು ಮಣ್ಣು ಜರಿಯುವ ಸಾಧ್ಯತೆ ಇರುವುದರಿಂದ ರಸ್ತೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡುವಂತೆಯೂ ಶಾಸಕರು ಸೂಚನೆಯನ್ನು ನೀಡಿದರು.
ಹಟ್ಟಿಗೆ ಗುಡ್ಡ ಕುಸಿದು ದನಗಳ ಸಾವು: ಸೂಕ್ತ ಪರಿಹಾರ ನೀಡುವಂತೆ ಸೂಚನೆ
ಹಟ್ಟಿಗೆ ಗುಡ್ಡ ಕುಸಿದು ಬಿದ್ದು ಬೆಳ್ಳಿಪ್ಪಾಡಿ ಗ್ರಾಮದ ಕೊರಿಯ ವಿಶ್ವನಾಥ ಪೂಜಾರಿಯವರ ಒಂದು ದನ ಮತ್ತು ಕರು ಹಾಗೂ ಬೆಳ್ಳಿಪ್ಪಾಡಿ ಗ್ರಾಮದ ಅಂದ್ರಗೇರು ನಿವಾಸಿ ಗಂಗಯ್ಯ ಗೌಡ ಅವರ ಐದು ದನಗಳು ಸಾವನ್ನಪ್ಪಿದ್ದು ಎರಡೂ ಕಡೆಗೆ ಶಾಸಕರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ತಿಳಿಸಿದರು. ಹಟ್ಟಿಗೆ ಮಣ್ಣು ಜರಿದು ದನಗಳು ಮೃತಪಟ್ಟ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನು ತಕ್ಷಣ ನೀಡುವಂತೆ ಶಾಸಕರು ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು. ಅಂದ್ರಗೇರಿ ಗಂಗಯ್ಯ ಗೌಡರ ಮನೆಯ ಮೇಲೂ ಮಣ್ಣು ಕುಸಿದಿದ್ದು ಎಚ್ಚರದಿಂದ ಇರುವಂತೆ ಶಾಸಕರು ಸೂಚನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್, ಕಾಂಗ್ರೆಸ್ ಮುಖಂಡರಾದ ಈಶ್ವರಭಟ್ ಪಂಜಿಗುಡ್ಡೆ, ಲೋಕೇಶ್ ಪಡ್ಡಾಯೂರು, ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೆಬಲ್ ಟ್ರಸ್ಟ್ ಕಾರ್ಯಾಧ್ಯಕ್ಷರಾದ ಸುದೇಶ್ ಶೆಟ್ಟಿ , ಪುತ್ತೂರು ಮೆಸ್ಕಾಂ ಸಲಹಾ ಸಮಿತಿ ಸದಸ್ಯರಾದ ಚಂದ್ರ ಕಲ್ಲಗುಡ್ಡೆ ,ಪುಡಾ ಸದಸ್ಯರಾದ ನಿಹಾಲ್ ಪಿ ಶೆಟ್ಟಿ , ಮೆಸ್ಕಾಂ ಸಲಹಾ ಸಮಿತಿ ಸದಸ್ಯರಾದ ರಾಕೇಶ್ ರೈ ಕುದ್ಕಾಡಿ ಮೊದಲಾದವರು ಉಪಸ್ಥಿತರಿದ್ದರು.
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಕುಂಭದ್ರೋನ ಮಳೆಯಿಂದಾಗಿ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಅನೇಕ ಅನಾಹುತಗಳು ಸಂಭವಿಸಿದೆ. ಮಳೆಗೆ ಗುಡ್ಡ ಜರಿದು ಮನೆಗೆ, ಹಟ್ಟಿ, ರಸ್ತೆಗೆ ಹಾನಿಯಾಗಿದೆ. ಮಳೆಯಿಂದಾಗಿ ಕೃಷಿ ಭೂಮಿ ಹಾಗೂ ತೋಟಗಳಿಗೆ ಅಪಾರ ಹಾನಿಯಾಗಿದೆ. ಹೆಚ್ಚು ಅಪಾಯ ಉಂಟಾಗಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೆನೆ. ಅಪಾಯಕಾರಿ ಮನೆಗಳಿಂದ ಕುಟುಂಬವನ್ನು ಶಿಫ್ಟ್ ಮಾಡುವಂತೆ ಸೂಚನೆಯನ್ನು ನೀಡಿದ್ದೇನೆ. ಹೆಚ್ಚಿನ ಕಡೆಗಳಲ್ಲಿ ಗುಡ್ಡ ಕುಸಿದು ಹಾನಿಯಾಗಿದೆ. ಧರೆ ಜರಿದು ಹಾನಿಯಾದರೆ ಅದಕ್ಕೆ ಇದುವರೆಗೆ ಸರಕಾರದಿಂದ ಪರಿಹಾರ ನೀಡಿಲ್ಲ. ಇವುಗಳಿಗೆ ಪರಿಹಾರ ನೀಡುವಂತೆ ಸರಕಾರವನ್ನು ಆಗ್ರಹಿಸಿದ್ದೇನೆ. ಹಾನಿಗೊಂಡ ಮನೆಗಳಿಗೆ ತಕ್ಷಣ ಪರಿಹಾರ ನೀಡುವಂತೆಯೂ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದೇನೆ. ಮುಂದಿನ ವಾರ ಪುತ್ತೂರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿದ್ದೇನೆ, ಸಿ ಎಂ ರಿಂದ ಸಕಾರಾತ್ಮಕ ಸ್ಪಂದನೆ ದೊರಕಿದೆ. ಸಿ ಎಂ ಬಂದಾಗ ಇಲ್ಲಿನ ಒಟ್ಟು ಸಮಸ್ಯೆ ಯನ್ನು ಅವರ ಮುಂದಿಡುತ್ತೇನೆ.
ಅಶೋಕ್ ರೈ , ಶಾಸಕರು ಪುತ್ತೂರು